Milind Soman: ವರ್ಷ 60, ಆರು ದಿನಗಳ ಅಂತರದಲ್ಲಿ 2 ಐರನ್ಮ್ಯಾನ್! ವಯಸ್ಸು ಕೇವಲ ಸಂಖ್ಯೆ ಎಂದ ಮಿಲಿಂದ್ ಸೋಮನ್

Published : Sep 24, 2026, 11:12 AM IST
Milind Soman

ಸಾರಾಂಶ

Milind Soman : ಫಿಟ್ನೆಸ್ ವಿಷ್ಯದಲ್ಲಿ ನಟ ಮಿಲಿಂದ್ ಸೋಮನ್ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. 60ನೇ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ ಸುಲಭವಲ್ಲ.

60 ವರ್ಷ ಅಂದ್ರೆ ವಿಶ್ರಾಂತಿಯ ವಯಸ್ಸು ಎಂದುಕೊಳ್ಳುವವರೇ ಹೆಚ್ಚು. ನಟ ಮಿಲಿಂದ್ ಸೋಮನ್ಗೆ ಮಾತ್ರ ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ. ಫಿಟ್ನೆಸ್‌ ವಿಷ್ಯಕ್ಕೆ ಬಂದ್ರೆ ಅವರ ಫಿಟ್ನೆಸ್‌ ಗೂ, ವಯಸ್ಸಿಗೂ ಸಂಬಂಧವಿಲ್ಲ. 60ರ ಹರೆಯದಲ್ಲೂ ಅವರು ಮಾಡಿರುವ ಸಾಹಸ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಐರನ್ಮ್ಯಾನ್ ಸ್ಪರ್ಧೆ ಮುಗಿಸಿದ ಕೇವಲ ಆರು ದಿನಗಳ ಬಳಿಕ ಮತ್ತೊಂದು ಐರನ್ಮ್ಯಾನ್ ಸ್ಪರ್ಧೆಯಲ್ಲೂ ಭಾಗವಹಿಸಿ ಅದನ್ನೂ ಪೂರ್ಣಗೊಳಿಸಿದ್ದಾರೆ.

ಐರನ್‌ ಮ್ಯಾನ್‌ ಸ್ಪರ್ಧೆ ಪೂರ್ಣಗೊಳಿಸಿದ ಮಿಲಿಂದ್‌ ಸೋಮನ್

ಸೆಪ್ಟೆಂಬರ್ 13ರಂದು ಐರನ್ಮ್ಯಾನ್ ವೇಲ್ಸ್ ಸ್ಪರ್ಧೆ ಪೂರ್ಣಗೊಳಿಸಿದ್ದ ಮಿಲಿಂದ್ ಸೋಮನ್, ಸೆಪ್ಟೆಂಬರ್ 19ರಂದು ಐರನ್ಮ್ಯಾನ್ ಇಟಲಿಯಲ್ಲೂ ಕಣಕ್ಕಿಳಿದಿದ್ದಾರೆ. ಎರಡೂ ಸ್ಪರ್ಧೆಗಳಲ್ಲಿ 3.8 ಕಿ.ಮೀ ಈಜು, 180 ಕಿ.ಮೀ ಸೈಕ್ಲಿಂಗ್ ಮತ್ತು 42.2 ಕಿ.ಮೀ ಓಟದ ಕಠಿಣ ಸವಾಲನ್ನು ಎದುರಿಸಿದ್ದಾರೆ. ಇದು ಕೇವಲ ಮತ್ತೊಂದು ಓಟವನ್ನು ಪೂರ್ಣಗೊಳಿಸುವ ಪ್ರಯತ್ನವಾಗಿರಲಿಲ್ಲ. ತಮ್ಮ ದೇಹ ಇಷ್ಟೊಂದು ಕಠಿಣ ಸವಾಲಿನ ಬಳಿಕ ಎಷ್ಟು ವೇಗವಾಗಿ ಚೇತರಿಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯೋಗವಾಗಿತ್ತು ಎಂದವರು ಹೇಳಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಿಲಿಂದ್, ಮತ್ತೊಮ್ಮೆ ಮಾಡಿಬಿಟ್ಟೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆರು ದಿನಗಳ ಅಂತರದಲ್ಲಿ ಎರಡು ಐರನ್ಮ್ಯಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಚೇತರಿಕೆಯ ಬಗ್ಗೆ ಹಲವು ಹೊಸ ಪಾಠಗಳನ್ನು ಕಲಿಯಲು ಅವಕಾಶ ನೀಡಿದೆ ಎಂದು ಹೇಳಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಅನ್ನ ಮತ್ತು ರಾಜ್ಮಾ ಇರುವ ಊಟದ ತಟ್ಟೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಫಿಟ್ನೆಸ್ ಎಂದರೆ ವ್ಯಾಯಾಮ ಮಾತ್ರವಲ್ಲ

ಮಿಲಿಂದ್ ಅವರ ಈ ಪ್ರಯೋಗದ ಬಗ್ಗೆ ತಜ್ಞರು ಕೂಡ ಮಾಹಿತಿ ನೀಡಿದ್ದಾರೆ. ಫಿಟ್ನೆಸ್ ಎಂದರೆ ಎಷ್ಟು ವೇಗವಾಗಿ ಓಡುತ್ತೇವೆ, ಎಷ್ಟು ತೂಕ ಎತ್ತುತ್ತೇವೆ ಅಥವಾ ಎಷ್ಟು ಹೊತ್ತು ವ್ಯಾಯಾಮ ಮಾಡುತ್ತೇವೆ ಎಂಬುದಷ್ಟೇ ಅಲ್ಲ. ಕಠಿಣ ವ್ಯಾಯಾಮದ ನಂತರ ದೇಹ ಎಷ್ಟು ಚೆನ್ನಾಗಿ ಚೇತರಿಸಿಕೊಳ್ಳುತ್ತದೆ ಎಂಬುದೂ ಫಿಟ್ನೆಸ್ನ ಪ್ರಮುಖ ಭಾಗವಾಗಿದೆ.

ಕಠಿಣ ಎಂಡ್ಯೂರನ್ಸ್ ವ್ಯಾಯಾಮದ ಸಂದರ್ಭದಲ್ಲಿ ಸ್ನಾಯುಗಳಲ್ಲಿ ಆಯಾಸ ಉಂಟಾಗುತ್ತದೆ. ದೇಹದಲ್ಲಿನ ಗ್ಲೈಕೋಜನ್ ಪ್ರಮಾಣ ಕಡಿಮೆಯಾಗುತ್ತದೆ. ಬೆವರಿನ ಮೂಲಕ ದ್ರವ ಮತ್ತು ಎಲೆಕ್ಟ್ರೋಲೈಟ್ಗಳು ನಷ್ಟವಾಗುತ್ತವೆ. ಹೀಗಾಗಿ ವ್ಯಾಯಾಮದ ಬಳಿಕ ಸರಿಯಾದ ಆಹಾರ, ಸಾಕಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್, ದ್ರವ ಸೇವನೆ ಮತ್ತು ಉತ್ತಮ ನಿದ್ರೆ ದೇಹದ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

60ರ ವಯಸ್ಸಿನಲ್ಲಿರುವ ಪ್ರತಿಯೊಬ್ಬರೂ ಮಿಲಿಂದ್ ಅವರಂತೆ ಸತತ ಎರಡು ಐರನ್ಮ್ಯಾನ್ ಸ್ಪರ್ಧೆಗಳನ್ನು ಮಾಡಬೇಕು ಎಂದರ್ಥವಲ್ಲ. ಪ್ರತಿಯೊಬ್ಬರ ದೇಹದ ಸಾಮರ್ಥ್ಯ ಮತ್ತು ಚೇತರಿಕೆಯ ಸಮಯವೂ ವಿಭಿನ್ನವಾಗಿರುತ್ತದೆ. ವಯಸ್ಸು, ಹಿಂದಿನ ತರಬೇತಿ, ನಿದ್ರೆ, ಆಹಾರ, ಒತ್ತಡ, ಫಿಟ್ನೆಸ್ ಮಟ್ಟ ಮತ್ತು ವ್ಯಾಯಾಮದ ತೀವ್ರತೆ ಸೇರಿದಂತೆ ಹಲವು ಅಂಶಗಳು ಇದರಲ್ಲಿ ಪ್ರಮುಖವಾಗುತ್ತವೆ.

ಹಲವು ವರ್ಷಗಳಿಂದ ತರಬೇತಿ ಪಡೆದಿರುವ ಎಂಡ್ಯೂರನ್ಸ್ ಅಥ್ಲೀಟ್ ಒಬ್ಬರು ಹೆಚ್ಚಿನ ಪ್ರಮಾಣದ ತರಬೇತಿಗೆ ದೇಹವನ್ನು ಹೊಂದಿಸಿಕೊಂಡಿರಬಹುದು. ಆದರೆ ಅದೇ ಪ್ರಮಾಣದ ವ್ಯಾಯಾಮ ಹೊಸದಾಗಿ ಫಿಟ್ನೆಸ್ ಆರಂಭಿಸಿರುವವರಿಗೆ ಹೆಚ್ಚು ಆಯಾಸ ಉಂಟುಮಾಡಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಯಾದು ಲೋಹರ್ ಹೆಸರಿನ ಹಿಂದಿದೆ ಇಷ್ಟೊಂದು ಅರ್ಥ: ನಟಿಯ ಹೆಸರಿಗೂ ಪುರಾಣಕ್ಕೂ ಇದೆ ಲಿಂಕ್!
ಮಧ್ಯರಾತ್ರಿ ದಟ್ಟ ಕಾಡಲ್ಲಿ ನಾಟಿ ಕೋಳಿ ಬೇಕೆಂದ ಪ್ರಭಾಸ್: ನಟನಿಗಾಗಿ ಬೇಟೆಯಾಡಿದ್ರು ಆ ಗೆಳೆಯ?