
2025ರ ಮೆಟ್ ಗಾಲಾ ಭಾರತೀಯ ಫ್ಯಾಷನ್ ಪ್ರಿಯರಿಗೆ ಖುಷಿ ತಂದಿತು. ಬಾಲಿವುಡ್ ನಟ ಶಾರುಖ್ ಖಾನ್ ಇದೇ ಮೊದಲ ಬಾರಿ ಮೆಟ್ ಗಾಲಾ ರೆಡ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದು, ಮೊದಲ ಭಾರತೀಯ ನಟ ಎನಿಸಿಕೊಂಡರು. "ಬಾಲಿವುಡ್ ಕಿಂಗ್" ಎಂಬ ಹೆಸರಿನಿಂದ ಖ್ಯಾತರಾದ ಶಾರುಖ್, ಈ ಬಾರಿ ಡಿಸೈನರ್ ಸಬ್ಯಸಾಚಿ ಮುಖರ್ಜಿ ಅವರ ವಿಶಿಷ್ಟ ಉಡುಪಿನಲ್ಲಿ ಮೆಟ್ ಗಾಲಾದ ಥೀಮ್ "Superfine: Tailoring Black Style" ಅನ್ನು ಪ್ರತಿಬಿಂಬಿಸಿದರು.
ಅವರು ಧರಿಸಿದ್ದ ಉಡುಪಿನಲ್ಲಿ ಟ್ಯಾಸ್ಮೇನಿಯನ್ ಉಣ್ಣೆಯಿಂದ ಮಾಡಿದ ಉದ್ದದ ಕೋಟ್, ಜಪಾನೀಸ್ ಹಾರ್ನ್ ಬಟನ್‌ಗಳು ಮತ್ತು ಅಮೂಲ್ಯ ರತ್ನಗಳಿಂದ ಮಾಡಲಾದ "ಬೆಂಗಾಲ್ ಟೈಗರ್" ಶೈಲಿಯ ಕೈಕಂಬಿ (ಕೇನ್) ಸೇರಿತ್ತು. ಜೊತೆಗೆ "ಕೆ" ಆಭರಣದ ಹಾರವನ್ನೂ ಧರಿಸಿದ್ದರು. ಇದು ಶಾರುಖ್ ಅವರ 'ಕಿಂಗ್' ಸ್ಥಾನಕ್ಕೆ ಗೌರವದ ಚಿಹ್ನೆಯಂತೆ ಕಾಣಿಸಿತು. ಮೆಟ್ ಗಾಲಾದ ಬ್ಲೂ ಕಾರ್ಪೆಟ್‌ನಲ್ಲಿ ಶಾರುಖ್ ಅವರ ನಡಿಗೆ ಎಲ್ಲರ ದೃಷ್ಟಿ ಸೆಳೆದಿದ್ದು, ಅವರು ಮೊದಲ ಬಾರಿಗೆ ಈ ಬೃಹತ್ ಫ್ಯಾಷನ್ ಉತ್ಸವದಲ್ಲಿ ಭಾಗವಹಿಸಿದ ಭಾರತೀಯ ಪುರುಷ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
ಶಾರುಖ್ ಖಾನ್ ಗೆ ಯಾರು ನೀವು ಎಂದ ಪತ್ರಕರ್ತ!
ಆದರೆ ಈ ವೇಳೆಯ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡಿ, ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದೆ ಜೊತೆಗೆ ಕೆಲವರು ಬೇಸರವೂ ಹೊರ ಹಾಕಿದ್ದಾರೆ. ಶಾರುಖ್ ಅವರು ರೆಡ್ ಕಾರ್ಪೆಟ್‌ನಲ್ಲಿ ನಡೆದು ಬರುತ್ತಿರುವಾಗ, ಪತ್ರಕರ್ತರೊಬ್ಬರು ಯಾರು ನೀವು ಎಂದು ಪ್ರಶ್ನಿಸಿದ್ದು, ಇದಕ್ಕೆ ಕೂಲ್ ಆಗಿಯೇ ಉತ್ತರಿಸಿರುವ ಶಾರುಖ್, "ಹಾಯ್, ನಾನು ಶಾರುಖ್" ಎಂದು ಪರಿಚಯಿಸಿಕೊಳ್ಳುತ್ತಿದ್ದಾರೆ. ಈ ದೃಶ್ಯ ಕೆಲ ಅಭಿಮಾನರಿಗೆ ನಿಜಕ್ಕೂ ಆಘಾತ ತರಿಸಿತು. ಏಕೆಂದರೆ, ಶಾರುಖ್ ಖಾನ್‌ನನ್ನು ಯಾರು ಎನ್ನುವಷ್ಟು ಪರಿಚಯವಿಲ್ಲದವನೇ!? ಎಂದು ಪ್ರಶ್ನಸಿದ್ದಾರೆ. ಆದರೆ ಶಾರುಖ್ ಅವರ ಸರಳತೆ ಪ್ರಭಾವಶಾಲಿ ಪರಿಚಯ ಹೇಳಿಕೊಂಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಹೃದಯಗಳನ್ನು ಗೆದ್ದಿದೆ.
ಆದರೆ ಈ ಸಂಭಾಷಣೆಯ ಬಳಿಕ ಅವರು ತಮ್ಮ ವಿನ್ಯಾಸಕ ಸಬ್ಯಸಾಚಿ ಮತ್ತು ಉಡುಪಿನ ಹಿಂದಿರುವ ಕಲಾತ್ಮಕತೆ ಬಗ್ಗೆ ಹೆಮ್ಮೆಯಿಂದ ಹೇಳಿದರು. ವೋಗ್ ವರದಿಗಾರರು ಶಾರುಖ್ ಅವರನ್ನು ಸಂದರ್ಶಿಸಿದಾಗ, ಮೆಟ್ ಗಾಲಾದಲ್ಲಿ ಮೊದಲ ಭಾರತೀಯ ಪುರುಷ ನಟನಾಗಿ ಭಾಗವಹಿಸಿದ ಅನುಭವ ಹೇಗಿತ್ತು ಎಂದು ಕೇಳಿದರು. ಶಾರುಖ್ ಇದಕ್ಕೆ ತಕ್ಷಣ ಸ್ಪಷ್ಟವಾಗಿ ಪ್ರತಿಕ್ರಿಯಿಸಿದರು.
"ನನಗೆ ಇತಿಹಾಸದ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ ನಾನು ನಿಜವಾಗಿಯೂ ಆತಂಕದಿಂದ ಕೂಡಿದ್ದೆ. ಜೊತೆಗೆ ಉತ್ಸುಕನಾಗಿದ್ದೆ. ಆದರೆ ಇದು ಖುಷಿಯ ಕ್ಷಣ. ಸಬ್ಯಸಾಚಿ ಇಲ್ಲಿದ್ದರೆ ನಾನೂ ಇಲ್ಲಿರಬಹುದೆ?" ಎಂದು ಅವರು ನಗುತ್ತಾ ಹೇಳಿದರು. ಪಕ್ಕದಲ್ಲಿದ್ದ ವಿನ್ಯಾಸಕ ಸಬ್ಯಸಾಚಿಯನ್ನು ಅವರು ಗೌರವದಿಂದ ಪರಿಚಯಿಸಿದರು. ಇಂತಹ ದೊಡ್ಡ ವೇದಿಕೆಯಲ್ಲಿ ಭಾಗವಹಿಸುತ್ತಿರುವುದು ನಾಚಿಕೆಯನ್ನುಂಟು ಮಾಡಿತ್ತು, ಆದರೆ ಇವರು ಒತ್ತಾಯ ಮಾಡಿದರು. ಉಡುಪು ಆರಾಮದಾಯಕವಾಗಿದ್ದು ಆತ್ಮವಿಶ್ವಾಸ ಹೆಚ್ಚಿಸಿತು ಎಂದು ಹೇಳಿದರು. ಸಬ್ಯಸಾಚಿಯನ್ನು ಅವರು ಒಬ್ಬ ಶ್ರೇಷ್ಠ ವಿನ್ಯಾಸಕ ಎಂದು ಹೊಗಳಿದರು. ಜೊತೆಗೆ ಕಪ್ಪು ಹಾಗೂ ಬಿಳಿ ಬಣ್ಣಗಳನ್ನೇ ಹೆಚ್ಚು ಇಷ್ಟಪಡುತ್ತೇನೆ ಎಂದೂ ಅಭಿಪ್ರಾಯ ಹಂಚಿಕೊಂಡರು.
ಸಬ್ಯಸಾಚಿ ಇನ್‌ಸ್ಟಾಗ್ರಾಂನಲ್ಲಿ ಶಾರುಖ್ ಬಗ್ಗೆ ಹೀಗೆ ಬರೆದಿದ್ದಾರೆ:
"ಶಾರುಖ್ ಖಾನ್ ಜಗತ್ತಿನ ಶ್ರೇಷ್ಠ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರು. ಅವರ ಈ ಶೈಲಿಯ ಲುಕ್ ಒಂದು ಜಾಗತಿಕ ವೇದಿಕೆಯಲ್ಲಿ ಭಾರತೀಯ ಫ್ಯಾಷನ್‍ನ ಅದ್ಭುತತೆಯನ್ನು ತೋರಿಸುತ್ತಿದೆ."
ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲ ಅಭಿಮಾನಿಗಳು ಶಾರುಖ್ ಅವರ ಲುಕ್ ಬಗ್ಗೆ ನಿರಾಶೆ ವ್ಯಕ್ತಪಡಿಸಿದರು. ಅವರ ಅಭಿಪ್ರಾಯದಲ್ಲಿ, ಉಡುಪು ಹೆಚ್ಚು ಸರಳವಾಗಿ ಕಾಣಿಸಿದ್ದು, ಹೆಚ್ಚು ವಿಶಿಷ್ಟವಾಗಿರಲಿಲ್ಲ. ಕೆಲವರು "SRK" ಎಂದು ಹಾರವನ್ನೂ ಅವಶ್ಯಕವಿಲ್ಲ ಎಂದು ಅಭಿಪ್ರಾಯಪಟ್ಟರು. ಇದರ ಜೊತೆಗೆ "ಶಾರುಕ್ ಯಾರೆಂದು ಎಲ್ಲರಿಗೂ ತಿಳಿದಿದೆ" ಎಂದು ಪತ್ರಕರ್ತನ ಪ್ರಶ್ನೆಗೆ ತೀಕ್ಷ್ಣ ಟೀಕೆಗಳು ಕೇಳಿಬಂದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.