
ಬೆಂಗಳೂರು (ಮೇ 05): ಇತ್ತೀಚೆಗೆ ಬೆಂಗಳೂರಿನ ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ್ದ ಗಾಯಕ ಸೋನು ನಿಗಮ್ ಕೊನೆಗೂ ಕನ್ನಡಿಗರ ಮುಂದೆ ಕ್ಷಮೆಯಾಚಿಸಿದ್ದಾರೆ. 'ಕ್ಷಮಿಸಿ ಕನ್ನಡಿಗರೇ, ನಿಮ್ಮ ಮೇಲಿನ ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದಿಂದ ಜೀವನ ಕಟ್ಟಿಕೊಂಡ ಹಿಂದಿ ಗಾಯಕ ಸೋನು ನಿಗಮ್ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದು ಕನ್ನಡದ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿ ಕುಚೇಷ್ಟೆ ಮೆರೆದಿದ್ದರು. ಇದರ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ ನಂತರ, ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಗೂಂಡಾಗಳು ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಈ ಮೂಲಕ ದುರ್ವರ್ತನೆ ತೋರಿಸಿದ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗದಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆದ ಸಭೆ ನಡೆಸಿ, ಅವರ ವಿರುದ್ಧ ಅಸಹಕಾರ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲಿಯೇ ಇದೀಗ ಸೋನು ನಿಗಮ್ ಕನ್ನಡಿಗರ ಮುಂದೆ ಕ್ಷಮೆ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
ಕನ್ನಡಿಗರ ಮುಂದೆ ಕ್ಷಮೆ ಕೇಳುವುದಕ್ಕೂ ಮುನ್ನ ಸ್ಪಷ್ಟೀಕರಣ ಸಂದೇಶವನ್ನು ಬರೆದುಕೊಂಡಿದ್ದ ಗಾಯಕ ಸೋನು ನಿಗಮ್ ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದರು. ನಾನು ನನ್ನ ಜೀವನದ ಅರಧ ಆಯಸ್ಸು ಕಳೆದಿದ್ದು, ಒಬ್ಬ ಸಂಗೀತಗಾರನ ಮುಂದೆ ಹಾಡು ಕೇಳುವ ಅಭಿಮಾನಿಗಳ ನಡೆ ತೀರಾ ಕೆಟ್ಟದಾಗಿತ್ತು. ಆಗ ನನ್ನ ಮನಸ್ಸಿಗೂ ನೋವಾಗೊದ್ದು, ಆ ಕ್ಷಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸನ್ನಿವೇಶ ಪಹಲ್ಗಾಮ್ ಉಗ್ರರ ಕರಿನೆರಳು ಸಂದರ್ಭವನ್ನು ಹೋಲಿಕೆ ಮಾಡಲಾಗಿತ್ತು ಎಂದು ಸ್ಪಷ್ಟನೆಯನ್ನು ನೀಡಿದರು.
ನಮಸ್ಕಾರ...
"ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು ಹಾಗೂ ಈ ರಾಜ್ಯ ಮತ್ತು ಜನರ ಮೇಲೆ ಪ್ರೀತಿ ಹೊಂದಿದ್ದೇನೆ — ಅದು ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ನಾನು ಜಗತ್ತಿನ ಎಲ್ಲಿ ಇದ್ದರೂ ಸಹ. ನಿಜ ಹೇಳಬೇಕೆಂದರೆ, ನಾನು ನನ್ನ ಕನ್ನಡ ಹಾಡುಗಳನ್ನು ಹಿಂದಿ ಸೇರಿ ಇತರ ಭಾಷೆಗಳ ಹಾಡುಗಳಿಗಿಂತಲೂ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಕ್ಷಿಯಾಗಿ ನೂರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕರ್ನಾಟಕದ ಪ್ರತಿ ಕಾರ್ಯಕ್ರಮ ಇದ್ದಾಗಲೂ ನಾನು ಒಂದು ಗಂಟೆಗಿಂತ ಹೆಚ್ಚು ಕನ್ನಡ ಹಾಡುಗಳೊಂದಿಗೆ ಸಿದ್ಧವಾಗಿರ್ತೇನೆ.
ನಾನು ಇನ್ನೂ ಬಾಲಕನಲ್ಲ. ಅವಮಾನವನ್ನು ಸಹಿಸುವ ವಯಸ್ಸಿಲ್ಲ. ನಾನು ಈಗ 51 ವರ್ಷ, ಜೀವನದ ಎರಡನೇ ಅರ್ಧದ ಹೆಜ್ಜೆ ಇಟ್ಟಿದ್ದೇನೆ. ನನ್ನ ಮಗನಷ್ಟು ಕಿರಿಯವರು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಪ್ರಯತ್ನಿಸಿದಾಗ ಅದು ನಾನು ಮನಸ್ಸಿಗೆ ಬಡಿದಿರುವುದು ಸಹಜ. ಅದು ಕೂಡಾ ನಾನು ಮೊದಲ ಹಾಡು ಹಾಡಿದ ತಕ್ಷಣವೇ. ಅವನು ಇನ್ನು ಕೆಲವರನ್ನು ಪ್ರಚೋದಿಸಿದ. ಅವರದೇ ಜನರು ಕೂಡಾ ಅವರು ಅವಮಾನವಾಗದಂತೆ ನಿಲ್ಲಿಸಬೇಕೆಂದು ಕೇಳುತ್ತಿದ್ದರು.
'ಈಗಷ್ಟೇ ಕಾರ್ಯಕ್ರಮ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮಗೆ ನಿರಾಸೆ ಉಂಟುಮಾಡಲ್ಲ, ಆದರೆ ನೀವು ನನಗೆ ಕಾರ್ಯಕ್ರಮವನ್ನು ನನ್ನ ಯೋಜನೆಯಂತೆ ಮುಂದುವರಿಸಲು ಅವಕಾಶ ನೀಡಬೇಕು.' ಅಂತ ಹೇಳಿದೆ. ಪ್ರತಿಯೊಬ್ಬ ಕಲಾವಿದನು ಹಾಡುಗಳ ಪಟ್ಟಿ ರೂಪಿಸಿಕೊಂಡಿರುವುದರಿಂದ ಸಂಗೀತಗಾರರು ಹಾಗೂ ತಾಂತ್ರಿಕರು ಎಲ್ಲರೂ ಸಮನ್ವಯದಲ್ಲಿರುತ್ತಾರೆ. ಇಲ್ಲಿ ತಪ್ಪು ಯಾರು ಮಾಡಿದರು ಎಂಬುದನ್ನು ನೀವೇ ಹೇಳಿ.
ನಾನು ದೇಶಭಕ್ತನಾಗಿದ್ದರಿಂದ, ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ಯಾರನ್ನಾದರೂ ನಾನು ತಾತ್ವಿಕವಾಗಿ ವಿರೋಧಿಸುತ್ತೇನೆ. ವಿಶೇಷವಾಗಿ ಪಹಲ್ಗಾಮ್‌ನಲ್ಲಿ ಸಂಭವಿಸಿದ ಘಟನೆಗಳನ್ನು ನೋಡಿದ ಬಳಿಕ ನಾನು ಅವರಿಗೆ ಬುದ್ಧಿವಾದ ಹೇಳಬೇಕಾಯಿತು. ವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದಕ್ಕೆ ಸಂಭ್ರಮಿಸಿದರು. ನಾನು ನಂತರ ಒಂದು ಗಂಟೆಗಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದೆ. ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲಾಗಿದೆ. ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕನ್ನಡದ ವಿವೇಕವಂತ ಜನತೆಗೆ ಬಿಟ್ಟುಬಿಡುತ್ತೇನೆ.
ನೀವು ಯಾವ ತೀರ್ಪು ನೀಡಿದರೂ ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ನಾನು ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಪೂರ್ಣ ಗೌರವ ಮತ್ತು ನಂಬಿಕೆ ಇಟ್ಟುಕೊಂಡಿದ್ದೇನೆ. ನನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನಾನು ನೀಡುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪು ಏನೇ ಆಗಿರಲಿ, ಯಾವುದೇ ದ್ವೇಷವಿಲ್ಲದೆ ಅದನ್ನು ಸದಾ ಗೌರವದಿಂದ ಜ್ಞಾಪಿಸಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.