
ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್ ಎಸ್ ರಾಜಮೌಳಿ(Rajamouli) ಸದ್ಯ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಇಡೀ ವಿಶ್ವವೇ ಕಾರದಿಂದ ಕಾಯುತ್ತಿರುವ ಆರ್ ಆರ್ ಆರ್(RRR) ಸಿನಿಮಾ ಇದೇ ವಾರ ಮಾರ್ಚ್ 25ರಂದು ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾತಂಡ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದೆ. ದೇಶದ ವಿವಿಧ ಭಾಗಗಳಲ್ಲಿ ಸಿನಿಮಾತಂಡ ಪ್ರಚಾರ ಕಾರ್ಯ ನಡೆಸುತ್ತಿದೆ. ದಕ್ಷಿಣ ಭಾರತದ ಮತ್ತು ಉತ್ತರ ಭಾರತ ಎರಡು ಕಡೆಯಲ್ಲೂ ಅಬ್ಬರದ ಪ್ರಮೋಷನ್ ಮಾಡುತ್ತಿರುವ ಸಿನಿಮಾತಂಡ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನದಲ್ಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್ ಮತ್ತು ಪೋಸ್ಟರ್ ಗಳು ಅಭಿಮಾನಿಗಳ ನಿದ್ದೆಗೆಡಿಸಿದ್ದು, ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಕಾತರರಾಗಿದ್ದಾರೆ. ಆರ್ ಆರ್ ಆರ್ ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ರಾಜಮೌಳಿ ಅವರ ಮುಂದಿನ ಸಿನಿಮಾ ವಿಚಾರ ಚರ್ಚೆಯಾಗುತ್ತಿದೆ. ಮಂದಿನ ಸಿನಿಮಾ ಹೇಗಿರಲಿದೆ, ಮತ್ತೆ ಮಲ್ಟಿ ಸ್ಟಾರರ್ ಸಿನಿಮಾ ಮಾಡುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ಈ ಕುತೂಹಲ ಮತ್ತು ಗೊಂದಲಕ್ಕೆ ಸ್ವತಃ ರಾದಮೌಳಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿಗಷ್ಟೆ RRR ಸಿನಿಮಾತಂಡ ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪ್ರಿ ರಿಲೀಸ್ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಆಗ ರಾಜಮೌಳಿ ಮುಂದಿನ ಸಿನಿಮಾ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ಸಿನಿಮಾವೂ ಮಲ್ಟಿ ಸ್ಟಾರರ್ ಸಿನಿಮಾ ಆಗಿರುತ್ತಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜಮೌಳಿ ಮುಂದಿನ ಸಿನಿಮಾ ಸೋಲೊ ಹೀರೋ ಸಿನಿಮಾ ಆಗಿರುತ್ತೆ. ಮತ್ತೆ ಮಲ್ಟಿ ಸ್ಟಾರರ್ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.
RRR Movie: ಪ್ರೀ-ರಿಲೀಸ್ ಈವೆಂಟ್‌ಗೂ ಮುನ್ನ ನಿರ್ದೇಶಕರು ಹಾಗೂ ನಟರ ನಡುವೆ ನಡೆದಿದ್ದೇನು ಗೊತ್ತಾ?
ಅಂದಹಾಗೆ ರಾಜಮೌಳಿ ಮುಂದಿನ ಸಿನಿಮಾದಲ್ಲಿ ಮಹೇಶ್ ಬಾಬು(Mahesh Babu) ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಮಹೇಶ್ ಬಾಬು ಜೊತೆ ಬೇರೆ ಬೇರೆ ಸ್ಟಾರ್ ನಟರ ಹೆಸರು ಕೇಳಿಬರುತ್ತಿತ್ತು. ಹಾಗಾಗಿ ಮಹೇಶ್ ಬಾಬು ಅಭಿಮಾನಿಗಳು ಗೊಂದಲದ್ದಲ್ಲಿದ್ದರು. ಇದೀಗ ಸೋಲೋ ಹೀರೋ ಸಿನಿಮಾ ಆಗಿರಲಿದೆ ಎಂದು ಹೇಳುವ ಮೂಲಕ ಕುತೂಹಲ, ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ.
ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾದ ಬಳಿಕ ರಾಜಮೌಳಿ ಹೊಸ ಸಿನಿಮಾದ ಕೆಲಸ ಗೈಗೆತ್ತಿಕೊಳ್ಳಲಿದ್ದಾರೆ. ಮುಂದಿನ ಸಿನಿಮಾದ ಬಗ್ಗೆ ರಾಜಮೌಳಿ ಇನ್ನು ಅಧಿಕೃತವಾಗಿ ಎಲ್ಲೂ ಬಹಿರಂಗ ಪಡಿಸಿಲ್ಲ. ಆದರೆ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದು ಖಚಿತ ಎನ್ನುವ ಮಾಹಿತಿ ತಿಳಿದುಬಂದಿದೆ. ಸದ್ಯ ಆರ್ ಆರ್ ಆರ್ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ರಾಜಮೌಳಿ ಈಗಲೇ ಮುಂದಿನ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದ್ರೆ ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗೆ ಸಮಸ್ಯೆಯಾಗಲಿದೆ ಎನ್ನುವ ಕಾರಣಕ್ಕೆ ಮುಂದಿನ ಸಿನಿಮಾದ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ.
RRR Event: ಅದ್ಧೂರಿಯಾಗಿ ನಡೆಯಿತು 'ಆರ್‌ಆರ್‌ಆರ್' ಪ್ರೀ-ರಿಲೀಸ್ ಈವೆಂಟ್!
ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಇಬ್ಬರು ಸ್ಟಾರ್ ನಟರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟಿ ಅಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತೀಯ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು, ಮೊದಲ ದಕ್ಷಿಣದ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ಶ್ರೀಯಾ ಶರಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾರಿ ಕುತೂಹಲ ಮತ್ತು ನಿರೀಕ್ಷೆ ಮೂಡಿಸಿರುವ ಈ ಸಿನಿಮಾವನ್ನು ಅಭಿಮಾನಿಗಳು ಮಾರ್ಚ್ 25ರಂದು ನೋಡಿ ಕಣ್ತುಂಬಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.