ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾಗೆ ಮಹಾರಾಷ್ಟ್ರ ಸೈಬರ್ ಕ್ರೈಮ್ ವಿಂಗ್ ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಮುಂಬೈ: ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾಗೆ ಮಹಾರಾಷ್ಟ್ರ ಸೈಬರ್ ಕ್ರೈಮ್ ವಿಂಗ್ ಸಮನ್ಸ್ ಜಾರಿ ಮಾಡಿದ್ದು, ಏಪ್ರಿಲ್ 29 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮಹದೇವ ಬೆಟ್ಟಿಂಗ್ ಆಪ್‌ನ ಸೋದರ ಸಂಸ್ಥೆಯ ಆಪ್ ಫೇರ್‌ಪ್ಲೇ ಆಪ್‌ನಲ್ಲಿ ಅಕ್ರಮವಾಗಿ ಸ್ಟ್ರೀಮಿಂಗ್ ಮಾಡಿದ ಆರೋಪ ನಟಿ ತಮನ್ನಾ ಮೇಲಿದೆ. 2023ರ ಐಪಿಎಲ್ ಸಂದರ್ಭದಲ್ಲಿ ತಮನ್ನಾ ಫೇರ್‌ಪ್ಲೇ ಆಪ್‌ನಲ್ಲಿ ಅಕ್ರಮವಾಗಿ ಸ್ಟ್ರೀಮಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸೈಬರ್ ಕ್ರೈಮ್ ವಿಂಗ್ ನಿಂದ ನಟಿ ತಮನ್ನಾಗೆ ಸಮನ್ಸ್ ಜಾರಿಯಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಫೇರ್‌ಪ್ಲೇ ಬೆಟ್ಟಿಂಗ್ ಆ್ಯಪ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪಂದ್ಯಗಳ ವೀಕ್ಷಣೆಯನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಸೈಬರ್ ಸೆಲ್ ನಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಪ್ರಸಾರಕರ ದೂರಿನ ಪ್ರಕಾರ ಕೆಲವು ಐಪಿಎಲ್ ಪಂದ್ಯಗಳನ್ನು ಆ್ಯಪ್‌ನಲ್ಲಿ ಅಕ್ರಮವಾಗಿ ಸ್ಟ್ರೀಮ್ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಗಾಯಕ ಬಾದ್‌ಶಾ ಹಾಗೂ ಮತ್ತು ನಟರಾದ ಸಂಜಯ್ ದತ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರ ಮ್ಯಾನೇಜರ್‌ಗಳ ಹೇಳಿಕೆಗಳನ್ನು ದಾಖಲಿಸಿದೆ. ಫೇರ್‌ಪ್ಲೇ ಬೆಟ್ಟಿಂಗ್ ಆಪ್ ಬೆಟ್ಟಿಂಗ್ ವೇದಿಕೆಯಾಗಿದ್ದು, ಅದು ವಿವಿಧ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಟ್ಟುವಂತೆ ಪ್ರೇರೆಪಿಸುತ್ತದೆ. ಆಪ್‌ನ ವೆಬ್‌ಸೈಟ್ ಪ್ರಕಾರ, ಫೇರ್‌ಪ್ಲೇಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಟ್ಟುವವರ ಮೆಚ್ಚಿನ ಕ್ರೀಡೆಯಾಗಿದ್ದು, ನಂತರದ ಸ್ಥಾನದಲ್ಲಿ ಫೂಟ್‌ಬಾಲ್ ಹಾಗೂ ಟೆನ್ನಿಸ್ ಇದೆ.
ದುಬೈನಲ್ಲಿ ಮಹದೇವ್ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್ ಬಂಧನ
ಕಳೆದ ವರ್ಷ ಮಹದೇವ ಬೆಟ್ಟಿಂಗ್ ಆಪ್ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಇದರ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಇಡಿ ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆಸಿತ್ತು.
ಈ ಮಹದೇವ ಬೆಟ್ಟಿಂಗ್ ಆಪ್ ಹಗರಣ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ದಿನಕ್ಕೆ ಈ ಆಪ್ 200 ಕೋಟಿ ಲಾಭ ಗಳಿಸುತ್ತಿದೆ ಎಂಬ ಸುದ್ದಿಯ ಜೊತೆಗೆ ಮಹಾದೇವ್ ಆಪ್ ಹಗರಣದ ಹಿಂದೆ ರಾಜಕೀಯ ವ್ಯಕ್ತಿಗಳು ಕೂಡ ಸೇರಿದ್ದಾರೆ ಎಂಬ ವಿಚಾರ ಛತ್ತೀಸ್‌ಗಢದ ವಿಧಾನಸಭಾ ಚುನಾವಣೆ ವೇಳೆ ಸಂಚಲನ ಸೃಷ್ಟಿಸಿತ್ತು. ಇದಾದ ನಂತರ ಕಳೆದ ವರ್ಷದ ಡಿಸೆಂಬರ್‌ನಲ್ಲಿ ದುಬೈನಲ್ಲಿ ಮಹದೇವ ಬೆಟ್ಟಿಂಗ್ ಆಪ್ ಪ್ರವರ್ತಕ ರವಿ ಉಪ್ಪಲ್‌ನನ್ನು ಬಂಧಿಸಲಾಗಿತ್ತು.