ಮಾಧುರಿ ದೀಕ್ಷಿತ್ ಮತ್ತು ಕುಟುಂಬದವರು ದೇವಸ್ಥಾನಕ್ಕೆ ಬರುವ ಸಮಯದಲ್ಲಿ ಪಾಪರಾಜಿಗಳು ಸುತ್ತುವರೆದು ನಟಿಯನ್ನು ಸುಸ್ತು ಮಾಡಿಸಿದ ವಿಡಿಯೋ ವೈರಲ್ ಆಗಿದೆ.
ಸೆಲೆಬ್ರಿಟಿಗಳು ಅಂದ್ರೆ ಹಾಗೆನೇ. ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಅವರ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಅದರಲ್ಲಿಯೂ ನಟ-ನಟಿಯರಾದರಂತೂ ಮುಗಿದೇ ಹೋಯ್ತು. ಅವರನ್ನೇ ದೇವರು ಎಂದು ನಂಬುವ ಅದೆಷ್ಟೋ ಮಂದಿ ಒಮ್ಮೆ ತಮ್ಮ ನೆಚ್ಚಿನ ತಾರೆಯ ಮುಖ ನೋಡಬೇಕು ಎಂದುಕೊಂಡು ಮುಗಿ ಬೀಳುವುದು ಇದೆ. ಸದಾ ಇವರ ಮೇಲೆ ಕ್ಯಾಮೆರಾ ಕಣ್ಣು ನೆಟ್ಟೇ ಇರುತ್ತದೆ. ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದರೂ ಹಲವು ಸಲ ಅದನ್ನು ನುಂಗಿಕೊಂಡು ನಗುಮುಖದಿಂದ ಇರುವ ಕರ್ಮ ಈ ಸೆಲೆಬ್ರಿಟಿಗಳದ್ದು, ಇಲ್ಲದಿದ್ದರೆ ಅದನ್ನೇ ರಾಷ್ಟ್ರೀಯ ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿ ಅತಿರೇಕದ ವರ್ತನೆ ಎಂದುಬಿಡುತ್ತವೆ. ಇದೀಗ ಇಂಥದ್ದೇ ಸ್ಥಿತಿಯನ್ನು ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೆನೆ ಅವರದ್ದಾಗಿದೆ.
ಹೊಸ ವರ್ಷದ ದಿನ ದಂಪತಿ ಮಕ್ಕಳು ಹಾಗೂ ಅತ್ತೆ ಜೊತೆಗೆ ಶ್ರೀಸಿದ್ಧಿವಿನಾಯಕ ದೇಗುಲಕ್ಕೆ ಬಂದಿದ್ದಾರೆ. ಅಲ್ಲಿ ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿಬಿಟ್ಟಿದ್ದಾರೆ. ಅವರ ಜೊತೆಗೆ ಬಂದಿದ್ದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಗೂ ಇದನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಒಂದೆಡೆ ಪಾಪರಾಜಿಗಳ ಕ್ಯಾಮೆರಾ ಕಣ್ಣಾದರೆ ಇನ್ನೊಂದೆಡೆ ಅವರ ಮುಂದೆ ಮೈಕ್ ಹಿಡಿದು ಪ್ರಶ್ನೆ ಕೇಳಲಾಗಿದೆ. ಇದರಿಂದ ಅತ್ತ ಸಿಟ್ಟನ್ನೂ ತೋರಿಸಿಕೊಳ್ಳಲಾಗದೇ, ಇತ್ತ ನಗಲೂ ಆಗದೇ ಫಜೀತಿ ಪಟ್ಟಿದ್ದಾರೆ ನಟಿ ಮಾಧುರಿ. ಅಲ್ಲಿಂದ ದೇವರ ದರ್ಶನ ಮಾಡಿಸಿಕೊಂಡು ವಾಪಸಾಗುವಷ್ಟರಲ್ಲಿ ಈ ಕುಟುಂಬಕ್ಕೆ ಸುಸ್ತೋ ಸುಸ್ತಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.
ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್ ಜೋಹರ್
ಅಂದಹಾಗೆ, ಮಾಧುರಿ ಅವರ ಮರಾಠಿ ಸಿನಿಮಾ ಪಂಚಕ್ ಜನವರಿ 5 ರಂದು ಬಿಡುಗಡೆಯಾಗಲಿದೆ. ಇದರ ಹಿನ್ನೆಲೆಯಲ್ಲಿ ಹಾಗೂ ಹೊಸ ವರ್ಷದ ಅಂಗವಾಗಿ ಸಿದ್ಧಿವಿನಾಯಕ ದೇಗುಲಕ್ಕೆ ಕುಟುಂಬ ಸಹಿತ ಭೇಟಿ ಕೊಟ್ಟಿದ್ದರು. ಸಾಮಾನ್ಯವಾಗಿ ಹಲವು ಸೆಲೆಬ್ರಿಟಿಗಳು ಈ ದೇಗುಲಕ್ಕೆ ಭೇಟಿ ಕೊಡುತ್ತಾರೆ. ಎಲ್ಲರನ್ನು ತಳ್ಳಿಕೊಂಡು ನಿಟ್ಟುಸಿರು ಬಿಟ್ಟು ದೇಗುಲದ ಒಳಗೆ ಹೋಗಿ ಕೊನೆಗೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ಮೊದಲ ಬಾರಿಗೆ ಅತ್ತೆ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ನೆನೆ ಮಕ್ಕಳಾದ ಆರಿನ್ ನೆನೆ ಮತ್ತು ರಿಯಾನ್ ನೆನೆ ಸಿದ್ಧಿವಿನಾಯಕನ ದರ್ಶನ ಪಡೆದು ಪೂಜೆ ಸಲ್ಲಿಸಿ ಹೋದರು.
ಇದರ ವಿಡಿಯೋ ವೈರಲ್ ಆಗಿದೆ. ಸೆಲೆಬ್ರಿಟಿಗಳು ಅಂದ್ರೆ ಸುಮ್ಮನೇನಾ ಎಂದು ಹಲವರು ಪ್ರಶ್ನಿಸಿದ್ದಾರೆ. ಅವರಿಗೂ ವೈಯಕ್ತಿಕ ಲೈಫ್ ಇರುತ್ತದೆ, ಅಭಿಮಾನಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಮಾಧುರಿ ಪಟ್ಟ ಫಜೀತಿ ನೋಡಿ ಹಲವರು ಅಯ್ಯೋ ಅಂದಿದ್ದರೆ, ನಟಿಯಾದ ಮೇಲೆ, ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದ ಮೇಲೆ ಇದನ್ನೆಲ್ಲಾ ಅನುಭವಿಸಲೇಬೇಕು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ಆಮೀರ್ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್ ಆಗತ್ತೆ ಕೇಳಿದ ನೆಟ್ಟಿಗರು