Lata Mangeshkar Kannada Songs: ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡುವಂತೆ ಆಗಿದ್ದು ಹೇಗೆ?

By Suvarna NewsFirst Published Feb 6, 2022, 12:09 PM IST
Highlights

ಇಂದು ಮುಂಜಾನೆ ತೀರಿಕೊಂಡ ಗಾಯನ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ಕನ್ನಡದಲ್ಲೂ ಎರಡು ಹಾಡು ಹಾಡಿದ್ದಾರೆ. ಈ ಹಾಡುಗಳ ಹಿಂದಿನ ಕತೆ ಇಲ್ಲಿದೆ ಕೇಳಿ.
 

ಎಲ್ಲರ ತಿಳಿವಳಿಕೆ ಪ್ರಕಾರ ಕನ್ನಡದಲ್ಲಿ ಲತಾ ಮಂಗೇಶ್ಕರ್ (Lata Mangeshkar) ಹಾಡಿರುವುದು ಒಂದು ಹಾಡಲ್ಲ. ಎರಡು ಹಾಡು. ಎರಡನ್ನೂ ಅವರು 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಫಿಲಂನಲ್ಲಿ (Krantiveera Sangolli Rayanna) ಹಾಡಿದ್ದಾರೆ. ಇದು ಬಂದದ್ದು 1962ರಲ್ಲಿ. ಲತಾ ಮಂಗೇಶ್ಕರ್ ಅವರು ತಮ್ಮ ಗಾಯನ ಯಾನ ಆರಂಭಿಸಿದ್ದು 1945ರಲ್ಲಿ, ತಮ್ಮ 16ನೇ ವಯಸ್ಸಿನಲ್ಲಿ, 'ಬಡೀ ಮಾ' ಹಿಂದಿ ಚಿತ್ರದ ಮೂಲಕ. ಅದಕ್ಕೂ ಮುನ್ನ ಅವರು ಮರಾಠಿ ರಂಗಭೂಮಿಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದರು. ಕೆಲವು ಹಿಂದಿ ಚಿತ್ರಗಳಲ್ಲೂ ಬಾಲನಟಿಯಾಗಿ ಅಭಿನಯಿಸಿ ಗುರುತಿಸಿಕೊಂಡಿದ್ದರು.

1966ರಲ್ಲಿ ಕೊಲ್ಹಾಪುರದ ಅನಂತ ಹಿರೇಗೌಡರ್ ಎಂಬವರು ಕನ್ನಡದಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಲನಚಿತ್ರ (Film) ನಿರ್ಮಾಣಕ್ಕೆ ಮುಂದಾದರು. ಅವರು ಮಹಾರಾಷ್ಟ್ರದ ರಂಗಭೂಮಿ ಹಾಗೂ ಚಲನಚಿತ್ರಗಳಿಂದ ತುಂಬ ಪ್ರಭಾವಿತರಾಗಿದ್ದರು. ಆಗಿನ್ನೂ ಕನ್ನಡ ಚಿತ್ರರಂಗ ಹಿಂದಿಯಷ್ಟು ಮುಂದುವರಿದಿರಲಿಲ್ಲ. ಮರಾಠಿಯ 'ಛತ್ರಪತಿ ಶಿವಾಜಿ' ಮುಂತಾದ ಫಿಲಂಗಳನ್ನು ನೋಡಿದ್ದ ಹಿರೇಗೌಡರ್, ಕನ್ನಡದಲ್ಲೂ ಅಂಥ ದೇಶಭಕ್ತಿ ಉಕ್ಕುವ, ಸ್ವಾತಂತ್ರ್ಯ ಹೋರಾಟಗಾರರ ಕತೆಯಿರುವ ಫಿಲಂ ತೆಗೆಯಬೇಕು ಎಂದು ಮುಂದೆ ಬಂದರು. ಹಾಗೆ ಬಂದದ್ದು ಸಂಗೊಳ್ಳಿ ರಾಯಣ್ಣ ಫಿಲಂನ ಯೋಚನೆ.

Latest Videos

ಆರಂಭದಲ್ಲಿ ನೆಲೆ ಕಾಣಲು ಹೆಣಗಿದ್ದ ಲತಾ, ಸ್ವರ ಸಾಮ್ರಾಜ್ಞೆಯಾಗಿ ಮಿಂಚಿದ್ದು ಹೇಗೆ?

ಹಿರೇಗೌಡರ ಅವರು ಹಣ ಹಾಕಿದರು. ಚಿತ್ರವನ್ನು ಬಿ.ಟಿ.ಅಥಣಿ ಅವರು ನಿರ್ದೇಶಿಸುವುದು ಎಂದಾಯಿತು. ಅಥಣಿ ಅವರು ಹಿಂದಿ- ಮರಾಠಿ ಚಿತ್ರರಂಗದಲ್ಲಿ ತುಂಬಾ ಪರಿಚಯ ಹಾಗೂ ಪ್ರಭಾವ ಇದ್ದವರಾಗಿದ್ದರು. ಹೀಗಾಗಿ ಅವರು ಮರಾಠಿ ಮತ್ತು ಹಿಂದಿಯ ನಟರನ್ನು, ತಂತ್ರಜ್ಞರನ್ನು, ಗಾಯಕರನ್ನು ಕನ್ನಡಕ್ಕೆ ಕರೆದುಕೊಂಡು ಬಂದರು. ಹಾಗೆ ಬಂದವರಲ್ಲಿ ಮಂಗೇಶ್ಕರ್ ಫ್ಯಾಮಿಲಿ ಕೂಡ ಒಂದು.

 

ವಿಶೇಷ ಎಂದರೆ, ಇದೊಂದೇ ಕನ್ನಡ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿರುವುದಾದರೂ, ಲತಾ ಅವರ ಇಬ್ಬರು ಸಹೋದರಿಯರೂ ಈ ಫಿಲಂನಲ್ಲಿ ಹಾಡಿದ್ದಾರೆ! ಅಂದರೆ ಲತಾ ಮಂಗೇಶ್ಕರ್, ಉಷಾ ಮಂಗೇಶ್ಕರ್ ಹಾಗೂ ಆಶಾ ಬೋಂಸ್ಲೆ- ಮೂವರೂ ಈ ಫಿಲಂನಲ್ಲಿ ಹಾಡಿದ್ದಾರೆ! ಇದೊಂದು ವಿಶಿಷ್ಟ ದಾಖಲೆಯೇ ಸರಿ. ಮರಾಠಿ ಅಥವಾ ಹಿಂದಿಯಲ್ಲೂ ಈ ಮೂವರೂ ಒಟ್ಟಿಗೆ ಹಾಡಿದ್ದಾರೋ ಇಲ್ಲವೋ ತಿಳಿಯದು- ಕನ್ನಡಕ್ಕಂತೂ ಇದು ಕಿರೀಟಪ್ರಾಯವಾದ ವಿಚಾರವೇ ಹೌದು. ಮತ್ತೊಂದು ವಿಚಾರ ಎಂದರೆ, ಆಶಾ ಹಾಗೂ ಉಷಾ ಇಬ್ಬರೂ ತಮ್ಮ ಚಿತ್ರಗೀತೆ ಹಾಡುಗಾರಿಕೆ ಆರಂಭಿಸಿದ್ದು ಕನ್ನಡದಿಂದಲೇ!

Lata Mangeshkar Faced Rejection: ತೆಳು ಧ್ವನಿ ಎಂದು ಲತಾರನ್ನು ರಿಜೆಕ್ಟ್‌ ಮಾಡಿದ್ದರು ಈ ವ್ಯಕ್ತಿ

ಲತಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ದಲ್ಲಿ ಹಾಡಿದ್ದು ಎರಡು ಹಾಡುಗಳು. ಒಂದು 'ಬೆಳ್ಳನ ಬೆಳಗಾಯಿತು' ಹಾಗೂ "ಎಲ್ಲಾರ ಇರತೀರೋ/ ಎಂದಾರ ಬರತೀರೋ'. ಉಷಾ ಮಂಗೇಶ್ಕರ್ 'ಯಾರಿವಾ ನನ್ನ ಮನ ಮರುಳಾಗಿಸಿದವ' ಎಂಬ ಹಾಡನ್ನೂ, ಆಶಾ ಅವರು 'ಯಾಕೋ ಏನೋ ಸೆರಗಾ ನಿಲ್ಲವಲ್ದು' ಎಂಬ ಹಾಡನ್ನೂ ಹಾಡಿದರು. ಈ ಹಾಡನ್ನೆಲ್ಲ ಬರೆದವರು ಭುಜೇಂದ್ರ ಮಹಿಷವಾಡಿ ಎಂಬ ಕನ್ನಡದ ಕವಿ, ನಿವೃತ್ತ ಪ್ರಾಧ್ಯಾಪಕರು. ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದವರು ಲಕ್ಷ್ಮಣ ಬೆರಳೇಕರ್ ಎಂಬವರು. ಈ ಸಿನಿಮಾದ ಹೆಚ್ಚಿನ ಕ್ರಿಯೇಟಿವ್ ಮಂದಿಯೆಲ್ಲ ಮರಾಠಿ- ಹಿಂದಿ ಚಿತ್ರರಂಗದ ಹಿನ್ನೆಲೆಯಿಂದ ಬಂದಿದ್ದರು ಎಂಬುದನ್ನು ನೆನಪಿಡಬೇಕು. ಇದು ಕನ್ನಡ ಚಿತ್ರರಂಗದಲ್ಲಿ ಒಂದು ವಿಭಿನ್ನವಾದ ಇತಿಹಾಸವನ್ನು ಸೃಷ್ಟಿಸಿತು. ಮುಂದೆ ಇದೊಂದು ಇತಿಹಾಸ ಸೃಷ್ಟಿ ಮಾಡುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಫಿಲಂ ತಯಾರಿಸಿದವರಿಗಾದರೂ ಇದು ಗೊತ್ತಿದ್ದಿರಲಿಕ್ಕಿಲ್ಲ. ಆದರೆ ಇಂದಿಗೂ 'ಬೆಳ್ಳನ ಬೆಳಗಾಯಿತು' ಹಾಡು ಅತ್ಯಂತ ಮೆಲೊಡಿ, ಅತಿ ಮಧುರವಾದ ಗಾನ ಎಂದೇ ಪ್ರಸಿದ್ಧವಾಗಿದೆ.

 

ಇದರ ಬಳಿಕ ಲತಾ ಮಂಗೇಶ್ಕರ್ ಅವರನ್ನು ಕನ್ನಡಕ್ಕೆ ತರುವ ಪ್ರಯತ್ನ ಸಫಲವಾಗಲಿಲ್ಲ. ಕನ್ನಡದ ದೊಡ್ಡ ನಿರ್ದೇಶಕರು, ನಿರ್ಮಾಪಕರು ಅವರ ಬಳಿಗೆ ಹೋದದ್ದುಂಟು. ಆದರೆ ಲತಾ ಸದಾ ಬ್ಯುಸಿಯಾಗಿರುತ್ತಿದ್ದರು. ಅವರ ಕಾಲ್‌ಶೀಟ್‌ಗಳು ಸದಾ ಬುಕ್ ಆಗಿರುತ್ತಿದ್ದವು. ಹೀಗಾಗಿ ಕನ್ನಡಕ್ಕೆ ಡೇಟ್ ಕೊಡಲು ಅವರಿಂದ ಸಾಧ್ಯವಾಗಲೇ ಇಲ್ಲ.

 

click me!