
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷೆಯ ‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಪಕ್ಕಾ ಆ್ಯಕ್ಷನ್‌ನಿಂದ ಕೂಡಿದ ಈ ಚಿತ್ರದ ಟ್ರೇಲರ್ ಇದಾಗಿದೆ. ತಮಿಳು ನಟ ಯೋಗಿಬಾಬು, ಮಲಯಾಳಂನ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್‌ನಲ್ಲಿ ಎಲ್ಲ ಪಾತ್ರಗಳ ಝಲಕ್ ತೋರಿಸಲಾಗಿದೆ. ಇನ್ನೂ ಟ್ರೇಲರ್‌ನಲ್ಲಿ ಮಕ್ಕಳ ಅಪಹರಣದ ದೃಶ್ಯಗಳು ಬಂದಿದ್ದು, ಕತೆಯ ಗುಟ್ಟು ಕೂಡ ಬಿಟ್ಟು ಕೊಡಲಾಗಿದೆ. ಶೇಖರ್ ಚಂದ್ರ ಕ್ಯಾಮೆರಾ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.
ವಿಜಯ್ ಕಾರ್ತಿಕೇಯ ನಿರ್ದೇಶಿಸಿರುವ ಈ ಚಿತ್ರವನ್ನು ಸತ್ಯಜ್ಯೋತಿ ಫಿಲಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಲಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವೀರೇಶ್, ಮೈಸೂರಿನ ಗಾಯತ್ರಿ, ದಾವಣಗೆರೆಯ ತ್ರಿಶೂಲ್, ಶಿವಮೊಗ್ಗದ ಮಲ್ಲಿಕಾರ್ಜುನ್, ಚಾಮರಾಜನಗರದ ಸಿದ್ಧಾರ್ಥ್ ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ಟ್ರೇಲರ್ ಪ್ರದರ್ಶನ ಆಯೋಜಿಸಲಾಗಿತ್ತು. ಇಷ್ಟು ಅದ್ದೂರಿಯಾಗಿ ನಡೆದ ಟ್ರೇಲರ್ ಬಿಡುಗಡೆ ನಂತರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ಸುದೀಪ್ ಹೇಳಿದ ಮಾತುಗಳು ಇಲ್ಲಿವೆ.
1. ಈ ಚಿತ್ರಕ್ಕೆ ನಾನು 166 ಕಾಲ್‌ಶೀಟ್ ಕೊಟ್ಟಿದ್ದು, 80 ರಿಂದ 90 ಸ್ಥಳಗಳಲ್ಲಿ 107 ದಿನ ಚಿತ್ರೀಕರಣ ಮಾಡಿದ್ದೇವೆ. ಸುಮಾರು 18 ರಿಂದ 20 ಸೆಟ್ಗಳನ್ನು ಹಾಕಿದ್ದೇವೆ. ಈ ಚಿತ್ರ ಆರಂಭವಾದಗಿನಿಂದಲೂ ಕೊನೆವರೆಗೂ ವಿವಿಧ ವಿಭಾಗಗಳಲ್ಲಿ ಸುಮಾರು ಒಂದು ಲಕ್ಷ ಜಲ ಕೆಲಸ ಮಾಡಿದ್ದಾರೆ. ಹೀಗಾಗಿ ಬೇಗ ಶೂಟಿಂಗ್ ಮುಗಿಸಿದ್ದೇವೆ ಎನ್ನುವ ಕಾರಣಕ್ಕೆ ಚಿಕ್ಕ ಸಿನಿಮಾ ಅಲ್ಲ.
2. ಈ ಚಿತ್ರಕ್ಕಾಗಿ ನಾವು ಎಲ್ಲವನ್ನು ದೊಡ್ಡ ಪ್ರಮಾಣದಲ್ಲೇ ಮಾಡಿದ್ದೇವೆ. ಆದರೆ, ನಿದ್ದೆ ಮಾತ್ರ ಕಡಿಮೆ ಮಾಡಿದ್ದೇವೆ. ವಿಶ್ರಾಂತಿ ಕೂಡ ಕಡಿಮೆ ಮಾಡಿದ್ದೇವೆ. ಕೆಲವೊಮ್ಮೆ ಬೆಳಗಿನ ಜಾವ ಮೂರು ಗಂಟೆ ವರೆಗೂ ಚಿತ್ರೀಕರಣ ಮಾಡಿದ್ದೇವೆ. ನಾನು ಮೂರು ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಸೆಟ್‌ನಿಂದ ಹೊರಡುವಾಗ ಮತ್ತೊಂದು ಬ್ಯಾಚ್ ಬರುತ್ತಿತ್ತು. ಹೀಗೆ ನಿರಂತರವಾಗಿ ಕೆಲಸ ಮಾಡಿದ್ದಕ್ಕೆ ಶೂಟಿಂಗ್ ಬೇಗ ಮುಗಿದಿದೆ.
3. ನಿಜ ಹೇಳಬೇಕು ಎಂದರೆ ಈ ಚಿತ್ರಕ್ಕೆ ಇಬ್ಬರು ನಿಜವಾದ ನಾಯಕರು. ಒಬ್ಬರು ಕ್ಯಾಮೆರಾಮ್ಯಾನ್ ಶೇಖರ್ ಚಂದ್ರ, ಮತ್ತೊಬ್ಬರು ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ. ಈ ಇಬ್ಬರೂ ಕೂಡ ತುಂಬಾ ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದಾರೆ.
4. ನನಗೆ ಕೆಲಸ ಮಾಡುವುದು ಇಷ್ಟ. ಕೆಲಸ ಮಾಡಿ ದಣಿಯುವುದು ಮತ್ತಷ್ಟು ಇಷ್ಟ. ನನಗೆ ನಿಜವಾಗಲೂ ಸಂತೋಷ ಮತ್ತು ತೃಪ್ತಿ ಸಿಗುವುದು ಕೆಲಸದಲ್ಲಿ ಮತ್ತು ನನ್ನ ನಿರ್ಮಾಪಕರ ಮುಖದಲ್ಲಿ ಕಾಣುವ ಖುಷಿಯಲ್ಲಿ. ನನ್ನ ಸಿನಿಮಾಗಳಿಂದ ನನ್ನ ನಿರ್ಮಾಪಕರ ಜೇಬು ತುಂಬಿದರೆ ಅದೇ ನನಗೆ ನಿಜವಾದ ಖುಷಿ’ ಎಂದಿದ್ದಾರೆ.
5. ನಮ್ಮ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.