
ನಟ ಶಿವರಾಜ್‌ಕುಮಾರ್ ಅವರು ಮೊದಲ ಬಾರಿಗೆ ನೇರವಾಗಿ ತೆಲುಗಿನಲ್ಲಿ ನಾಯಕನಾಗಿ ನಟಿಸುತ್ತಿರುವ ‘ಗುಮ್ಮಡಿ ನರಸಯ್ಯ’ ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನಡೆದಿದೆ. ಸಾವಿರಾರು ಮಂದಿ ಅಭಿಮಾನಿಗಳು ಶಿವಣ್ಣ ಅವರಿಗೆ ಕ್ರೈನ್‌ನಲ್ಲಿ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿರುವುದು, ಚಿತ್ರದ ಮುಹೂರ್ತಕ್ಕೂ ಮುನ್ನ ಗುಮ್ಮಡಿ ನರಸಯ್ಯ ಅವರ ಮನೆಗೆ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿ ಭೇಟಿ ಮಾಡಿ ಚಿತ್ರದ ಮೂಹರ್ತಕ್ಕೆ ಅಹ್ವಾನಿಸಿದ್ದು, ರಾಜಕಾರಣಿ ಗೆಟಪ್‌ನಲ್ಲಿ ಶಿವಣ್ಣ ಅವರನ್ನು ಮೆರವಣಿಗೆ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನೂ ಶಿವರಾಜ್‌ಕುಮಾರ್ ಅವರ ಮಾತುಗಳು ಕೂಡ ಟಾಲಿವುಡ್ ಗಮನ ಸೆಳೆಯುತ್ತಿವೆ.
ಅದ್ದೂರಿಯಾಗಿ ನಡೆದ ಮುಹೂರ್ತ ಸಮಾರಂಭದಲ್ಲಿ ರಾಜಕಾರಣಿ ಗೆಟಪ್‌ನಲ್ಲೇ ವೇದಿಕೆ ಮೇಲೆ ಬಂದ ಶಿವಣ್ಣ, ‘ಜನರ ಸೇವೆ ಮಾಡುತ್ತಿರುವ ರಿಯಲ್ ಲೀಡರ್ ಆಗಿರುವ ಗುಮ್ಮಡಿ ನರಸಯ್ಯ ಅವರ ಜೀವನ ಚರಿತ್ರೆಯ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ. ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಸಲ್ಲಿಸಿದ್ದಾರೆ. ಅವರು ಯಾವಾಗಲೂ ‘ನಿಮಗಾಗಿ ಬದುಕಬೇಡಿ, ಇತರರಿಗಾಗಿ ಬದುಕಿ’ ಎಂದು ಹೇಳುತ್ತಿದ್ದರು.
ನಾನು ಇತ್ತೀಚೆಗೆ ಗುಮ್ಮಡಿ ನರಸಯ್ಯ ಅವರ ಮನೆಗೆ ಭೇಟಿ ನೀಡಿದಾಗ, ನನ್ನ ತಂದೆಯ ಬಳಿಗೆ ಹಿಂತಿರುಗಿದಂತೆ ಭಾಸವಾಯಿತು. ನಾನು ಈ ಚಿತ್ರಕ್ಕಾಗಿ ತೆಲುಗು ಕಲಿಯುತ್ತಿದ್ದು, ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಕೂಡ ಮಾಡುತ್ತೇನೆ. ಈ ಚಿತ್ರವು ಎಲ್ಲಾ ರಾಜಕೀಯ ನಾಯಕರಿಗೆ ಸ್ಫೂರ್ತಿಯಾಗಲಿದೆ’ ಎಂದರು. ಗುಮ್ಮಡಿ ನರಸಯ್ಯ ಮಾತನಾಡಿ, ‘ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಆ ಬದಲಾವಣೆ ನಮ್ಮೊಳಗೇ ಆರಂಭವಾಗಬೇಕು. ನಾವು ಒಬ್ಬರನ್ನೊಬ್ಬರು ಮೋಸಗೊಳಿಸುವುದನ್ನು ಕೊನೆಗಾಣಿಸಬೇಕು. ಅದು ನನ್ನ ಏಕೈಕ ಆಸೆ. ನಾನು ಮಹಾನ್ ನಾಯಕನಲ್ಲ. ನಾನು ಎಲ್ಲರಂತೆ ಸಾಮಾನ್ಯ ವ್ಯಕ್ತಿ.
ನನ್ನನ್ನು ವೈಭವೀಕರಿಸುವ ಬದಲು, ನನ್ನ ನಂಬಿಕೆ ಮತ್ತು ಆಲೋಚನೆಗಳನ್ನು ಈ ಚಿತ್ರವು ತಿಳಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಪಾತ್ರವನ್ನು ಶಿವರಾಜ್ ಕುಮಾರ್ ಅವರು ಮಾಡುತ್ತಿರುವುದು ಸಂತೋಷ ಆಗಿದೆ. ಈ ಸಿನಿಮಾ ವ್ಯವಸ್ಥೆಯಲ್ಲಿ ಬದಲಾವಣೆ ತರಲಿ ಎಂದು ಆಶಿಸುತ್ತೇನೆ’ ಎಂದರು. ಪರಮೇಶ್ವರ್ ಹಿವ್ರಾಳೆ ನಿರ್ದೇಶನ, ಎನ್. ಸುರೇಶ್ ರೆಡ್ಡಿ ನಿರ್ಮಾಣದ ಚಿತ್ರವಿದು. ಗೀತಾ ಶಿವರಾಜ್‌ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡಿದರು, ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.