
ಜ್ಯೂನಿಯರ್ ಎನ್.ಟಿ.ಆರ್-ಪ್ರಶಾಂತ್ ನೀಲ್ ಜೋಡಿಯ ಸಿನಿಮಾದ ಅಪ್ಡೇಟ್ ಗಾಗಿ ಕಾಯ್ತಾ ಇದ್ದ ಫ್ಯಾನ್ಸ್ಗೆ ಬಿಗ್ ಗಿಫ್ಟ್ ಸಿಕ್ಕಿದೆ. ಜ್ಯೂ.ಎನ್.ಟಿಆರ್ ಬರ್ತ್ಡೇಗೆ ಟೀಸರ್ಗೆ ಬರುತ್ತೆ ಅಂತ ಕಾಯ್ತಾ ಇದ್ದ ಫ್ಯಾನ್ಸ್ಗೆ , ಬರೊಬ್ಬರಿ 4.29 ನಿಮಿಷಗಳ ಗ್ಲಿಂಪ್ಸ್ ತೋರಿಸಿ ಥ್ರಿಲ್ ಕೊಟ್ಟಿದ್ದಾರೆ ನೀಲ್. 'ಡ್ರ್ಯಾಗನ್' ಅನ್ನೋ ಟೈಟಲ್ ರಿವೀಲ್ ಮಾಡೋದ್ರ ಜೊತೆಗೆ ಡ್ರ್ಯಾಗನ್ ದುನಿಯಾದಲ್ಲಿರೋ ಬೇಟೆಗಾರರೆಲ್ಲಾ ಯಾರು.. ಮತ್ತು ರಣಬೇಟೆಗಾರ ಯಾರು ಅನ್ನೋದನ್ನ ಕೂಡ ತೋರಿಸಲಾಗಿದೆ.
ಯೆಸ್ ಸ್ಯಾಂಡಲ್‌ವುಡ್ ಇತಿಹಾಸವನ್ನೇ ಬದಲಾಯಿಸಿದ ಕಲ್ಪನಾ ಚತುರ, ಉಗ್ರಂ, ಕೆಜಿಎಫ್, ಸಲಾರ್ ಖ್ಯಾತಿಯ ಪ್ರಶಾಂತ್ ನೀಲ್ (Prashanth Neel) ಈಗ ಟಾಲಿವುಡ್‌ನ ‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್.ಟಿ.ಆರ್ (Junior NTR) ಜೊತೆ ಕೈಜೋಡಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾ ಅನೌನ್ಸ್ ಆದಾಗಿನಿಂದಲೂ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಇತ್ತು. ಈಗ ಜೂನಿಯರ್ ಎನ್.ಟಿ.ಆರ್ ಬರ್ತ್‌ಡೇ ಗೆ ಬಿಡುಗಡೆಯಾಗಿರೋ ಬರೋಬ್ಬರಿ 4 ನಿಮಿಷ 29 ಸೆಕೆಂಡ್ಗಳ ಸುದೀರ್ಘ ‘ಗ್ಲಿಂಪ್ಸ್’ ಇಡೀ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ!
ಹೌದು, ಈ ಚಿತ್ರಕ್ಕೆ 'ಡ್ರ್ಯಾಗನ್' ಅಂತ ಟೈಟಲ್ ಫಿಕ್ಸ್ ಮಾಡಲಾಗಿದ್ದು, ಇದು ಪ್ರಶಾಂತ್ ನೀಲ್ ಎಂದಿನ ಸಿಗ್ನೇಚರ್ ‘ಡಾರ್ಕ್ ವರ್ಲ್ಡ್’ ಅನ್ನೇ ನೆನಪಿಸ್ತಾ ಇದೆ. ಕನ್ನಡತಿ ರುಕ್ಮಿಣಿ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗೋ ಗ್ಲಿಂಪ್ಲ್ ಮೂಲಕ ಸಿನಿಮಾದಲ್ಲಿ ಏನೆಲ್ಲಾ ಇರಲಿದೆ ಅನ್ನೋ ರಿವೀಲ್ ಮಾಡಲಾಗಿದೆ.
ಹೌದು ಈ ಗ್ಲಿಂಪ್ಸ್ನಲ್ಲಿ ಸಿನಿಮಾದ ಕಥೆ ಏನು ಅನ್ನೋದನ್ನೇ ಪ್ರಶಾಂತ್ ನೀಲ್ ರಿವೀಲ್ ಮಾಡಿಬಿಟ್ಟಿದ್ದಾರೆ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಇತಿಹಾಸದ ಹಿನ್ನೆಲೆಯೊಂದಿಗೆ ಗ್ಲಿಂಪ್ಸ್ ಆರಂಭವಾಗುತ್ತೆ. ಹತ್ತಿ, ಉಕ್ಕು ಮತ್ತು ಮಸಾಲೆ ಪದಾರ್ಥಗಳನ್ನ ಹುಡುಕುತ್ತಾ ಬಂದ ವಿದೇಶಿಯರನ್ನ ಭಾರತದಲ್ಲಿ 250 ವರ್ಷಗಳ ಕಾಲ ಸುದೀರ್ಘವಾಗಿ ಉಳಿಯುವಂತೆ ಮಾಡಿದ್ದು ಆ ಒಂದು ಅಪರೂಪದ ಗಿಡ ಅಂತ ವಿವರಿಸಲಾಗುತ್ತೆ.
ಜಗತ್ತಿನ ಅತ್ಯಂತ ಅಮಲು ಪದಾರ್ಥವಾದ ಹೆರಾಯಿನ್ ತಯಾರಿಸಲು ಆ ಗಿಡದ ಅಫೀಮು ಸಹಾಯ ಮಾಡುತ್ತೆ. ಬ್ರಿಟಿಷರು ಹೋದ ನಂತರ ಈ ಕರಾಳ ವ್ಯಾಪಾರ ಅಫ್ಗನ್ ಟ್ರೇಡಿಂಗ್ ಕಂಪನಿ ಮತ್ತು ಗೋಲ್ಡನ್ ಟ್ರೇಡಿಂಗ್ ಕಂಪನಿ ಅಂತ ಎರಡು ಭಾಗವಾಗಿ ದೊಡ್ಡ ಯುದ್ಧಕ್ಕೆ ಕಾರಣವಾಗುತ್ತೆ.
ಈ ಚಿತ್ರದ ಇಡೀ ಕಥೆ 1967ರ ಕಾಲಘಟ್ಟದಲ್ಲಿ ಸಾಗಲಿದ್ದು, ಕೆಜಿಎಫ್ ಮಾದರಿಯಲ್ಲಿಯೇ ಇಲ್ಲೂ ಕೂಡ ಕ್ರೂರ ವಿಲನ್‌ಗಳ ಸಾಮ್ರಾಜ್ಯವನ್ನ ಸೃಷ್ಟಿಸಲಾಗಿದೆ. ಚಿತ್ರದಲ್ಲಿರೋ ವಿಲನ್ಸ್ ಯಾರು ಅನ್ನೋದನ್ನ ರಿವೀಲ್ ಮಾಡಲಾಗಿದೆ. ಕಾಂತಾರ ಬೆಡಗಿ ರುಕ್ಮಿಣಿ ವಂಸತ್ ಮತ್ತು ಬಾಲಿವುಡ್ ಸ್ಟಾರ್ ಅನೀಲ್ ಕಪೂರ್ ಪಾತ್ರಗಳನ್ನೂ ರಿವೀಲ್ ಮಾಡಲಾಗಿದೆ.
ವಿಲನ್‌ಗಳ ಸಾಮ್ರಾಜ್ಯಕ್ಕೆ ಸುಲ್ತಾನ್... ಮ್ಯಾನ್ ಆಫ್ ಮಾಸಸ್..!
ಹೌದು ಗ್ಲಿಂಪ್ಸ್ ಕೊನೆಗೆ ಮ್ಯಾನ್ ಆಫ್ ಮಾಸಸ್ ಎನ್.ಟಿ.ಆರ್ ಲುಕ್ ರಿವೀಲ್ ಮಾಡಿದ್ದು, ಫ್ಯಾನ್ಸ್ನ ಹುಚ್ಚೆಬ್ಬಿಸುವಂತೆ ಕಾಣಿಸಿಕೊಂಡಿದ್ದಾರೆ ಎನ್.ಟಿ.ಆರ್. ಈ ಪಾತ್ರಕ್ಕಾಗಿ ಸತತ ವರ್ಕೌಟ್ ಮಾಡಿ ಫಿಟ್ ಆಗಿರೋ ತಾರಕ್ ಅಕ್ಷರಶಃ ಡ್ಯ್ರಾಗನ್ ನಂತೆಯೇ ಕಾಣ್ತಾರೆ.
ಪ್ರಶಾಂತ್ ನೆಚ್ಚಿನ ತಂತ್ರಜ್ಞರಾದ ಭುವನ್ ಗೌಡ ಸಿನಿಮಾಟೋಗ್ರಫಿ ಮತ್ತು ರವಿ ಬಸ್ರೂರು ಮ್ಯೂಸಿಕ್ ಈ ಸಿನಿಮಾಗಿದೆ. ಸದ್ಯ 5 ಭಾಷೆಗಳಲ್ಲಿ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಫ್ಯಾನ್ಸ್ ಇದು ಬಾಕ್ಸಾಫೀಸ್ನಲ್ಲಿ ಸುನಾಮಿ ಎಬ್ಬಿಸೋದು ಫಿಕ್ಸ್ ಅಂತಿದ್ದಾರೆ.
ಪ್ರಶಾಂತ್ ನೀಲ್ ಮತ್ತೊಮ್ಮೆ ಭಾರತೀಯ ಚಿತ್ರರಂಗ ಬೆರಗಾಗುವಂತಹ ಒಂದು ಕರಾಳ ಅಫೀಮು ಲೋಕವನ್ನ ಸೃಷ್ಟಿ ಮಾಡಿದ್ದಾರೆ. ಜೂನಿಯರ್ ಎನ್.ಟಿ.ಆರ್ ರಗಡ್ ಲುಕ್, 1967ರ ಕಾಲಘಟ್ಟದ ಕಥೆ, ಕ್ರೂರ ವಿಲನ್‌ಗಳ ಅಟ್ಟಹಾಸ ಹಾಗೂ ನಮ್ಮ ರುಕ್ಮಿಣಿ ವಸಂತ್ ಪ್ರೆಸೆನ್ಸ್... ಇವೆಲ್ಲವೂ ‘ಡ್ರ್ಯಾಗನ್’ ಚಿತ್ರದ ಮೇಲಿನ ನಿರೀಕ್ಷೆಯನ್ನ ದುಪ್ಪಟ್ಟು ಮಾಡಿವೆ. 2027ರ ಜೂನ್‌ನಲ್ಲಿ ಬರಲಿರೋ ಈ ಬಿಗ್ ಬಜೆಟ್ ಆಕ್ಷನ್ ಧಮಾಕಾವನ್ನ ನೋಡೋದಕ್ಕೆ ಈಗಿನಿಂದಲೇ ಫ್ಯಾನ್ಸ್ ಸಜ್ಜಾಗಿ ನಿಂತಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ…
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.