
ಕಾಫಿ ಎಂಬ ಪೇಯ ದಕ್ಷಿಣ ಭಾರತೀಯರಿಗೆ ಕೇವಲ ಪೇಯವಲ್ಲ. ಅದು ಭಾವನೆ. ಫಿಲ್ಟರ್ ಕಾಫಿ, ಇನ್‌ಸ್ಟ್ಯಾಂಟ್ ಕಾಫಿ ಸೇರಿದಂತೆ ಕಾಫಿಯ ಘಮ, ರುಚಿಯನ್ನು ಬಲ್ಲವನೇ ಬಲ್ಲ. ಬೆಳಗ್ಗೆ ಎದ್ದ ಕೂಡಲೇ, ಅಥವಾ ಸಂಜೆಯ ಹೊತ್ತು ಮನೆಯಲ್ಲೇ ಕಾಫಿ ಮಾಡಿಕೊಂಡು ಕುಡಿವ ಸುಖವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವೇ ಸರಿ. ಆದರೆ, ಇತ್ತೀಚಿನ ದಿನಗಳಲ್ಲಿ ಬ್ಲ್ಯಾಕ್ ಕಾಫಿಯ ಜನಪ್ರಿಯತೆ ವಿಶ್ವದಾದ್ಯಂತ ಹೆಚ್ಚುತ್ತಿದೆ. ಹಾಲು, ಸಕ್ಕರೆ ಹಾಕದೆ, ಕಾಫಿ ಕುಡಿಯುವ ಈ ಟ್ರೆಂಡನ್ನು ಬಹಳಷ್ಟು ಜನರು ಪಾಲಿಸಲು ಆರಂಭಿಸಿದ್ದಾರೆ. ರೆಸ್ಟೋರೆಂಟುಗಳಲ್ಲಿ, ಪ್ರಸಿದ್ಧ ಕೆಫೆಗಳಲ್ಲಿ ಇಂದು ಬ್ಲ್ಯಾಕ್ ಕಾಫಿ ಬಹಳ ಸಹಜವಾಗಿಯೇ ಸಿಗ್ತಾ ಇದೆ ಕೂಡಾ. ಇದರ ಲಾಭಗಳು ಹಾಗೂ ಪ್ರಯೋಜನಗಳನ್ನು ಅರಿತು ಕೆಲವರು, ಬೇರೆ ಪೇಯಗಳನ್ನು ಬಿಟ್ಟು ಬ್ಲ್ಯಾಕ್ ಕಾಫಿಯೆಡೆ ವಾಲಿದರೆ, ಇನ್ನೂ ಕೆಲವರು ಟ್ರೆಂಡಿನ ಪ್ರವಾಹದಲ್ಲಿ ಸಾಗುವ ನಿರ್ಧಾರವನ್ನೂ ಮಾಡಿದವರಿದ್ದಾರೆ. ಬಾಲಿವುಡ್ ಜಾಹ್ನವಿ ಕಪೂರ್ ಅಂಥವರಲ್ಲಿ ಒಬ್ಬಳು. ಬನ್ನಿ, ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ತಾನು ಪಡೆಯುವ ಪ್ರಯೋಜನಗಳೇನು ಎಂಬುದನ್ನು ಆಕೆ ಪಟ್ಟಿ ಮಾಡಿದಾಳೆ, ನೋಡೋಣ.
1) ಕಾಫಿಯಲ್ಲಿ ಕೆಫೀನ್ ಇರುವುದು ಎಲ್ಲರಿಗೂ ತಿಳಿದೇ ಇದೆ. ಈ ಕಾರಣದಿಂದ ಬ್ಲ್ಯಾಕ್ ಕಾಫಿ ಒಂದು ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಕೆಲಸ ಮಾಡಲು ಶಕ್ತಿ, ಫೋಕಸ್, ಚುರುಕಾದ ಮಿದುಳು ಇತ್ಯಾದಿ ಇದರಿಂದ ಸಾಧ್ಯವಿದೆ. ಅತಿಯಾಗಿ ಕುಡಿಯದೆ, ಹಿತಮಿತವಾಗಿ ಕುಡಿಯುವುದರಿಂದ ಈ ಲಾಭವನ್ನು ಪಡೆಯಬಹುದು.
2) ಮಧುಮೇಹಿಗಳಿಗೆ ಕಾಫಿಯಿಂದ ಶುಭಸುದ್ದಿಯಿದೆ. ಹೌದು. ಕಾಫಿ ಕುಡಿಯುವುದರಿಂದ ಇನ್ಸುಲಿನ್‌ಗೆ ಪ್ರಚೋದನೆ ಸಿಕ್ಕುವುದರಿಂದ ಟೈಪ್ ೨ ಮಧುಮೇಹ ಬರದಂತೆ ತಡೆಯುತ್ತದೆ ಕೂಡಾ. ಆದರೆ ಸಿಹಿ ಸೇರಿಸದೆ, ಹಾಲು ಹಾಕದೆ ಕುಡಿಯುವ ಬ್ಲ್ಯಾಕ್ ಕಾಫಿಯಿಂದ ಈ ಪ್ರಯೋಜನ ಹೆಚ್ಚು.
3) ನಿಮಗೆ ಪಿತ್ತಕೋಶ ಅಥವಾ ಲಿವರ್ ಸಮಸ್ಯೆಯಿದೆಯೇ? ಫ್ಯಾಟಿ ಲಿವರ್ ಮತ್ತಿತರ ತೊಂದರೆ ಇದೆಯೇ? ಹಾಗಿದ್ದರೆ ಬ್ಲ್ಯಾಕ್ ಕಾಫಿ ನಿಮಗೆ ಒಳ್ಳೆಯದು. ಲಿವರ್‌ನ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ. ಆದರೆ, ಹಿತಮಿತವಾದ ಸೇವನೆ ಬಹಳ ಮುಖ್ಯ, ನೆನಪಿಡಿ.
4) ಕಾಫಿಯಲ್ಲಿರುವ ಕೆಫೀನ್ ನಿಮ್ಮ ಮೂಡನ್ನು ಸರಿ ಮಾಡುವ ಶಕ್ತಿಯನ್ನೂ ಹೊಂದಿದೆ. ಇದರಿಂದ ಖಿನ್ನತೆಯ ಸಮಸ್ಯೆಗೂ ಇದರಲ್ಲಿ ಉತ್ತರವಿದೆ. ಬೇಸರ ಬಂದ ಮೂಡನ್ನು ಒಡನೆಯೇ ಉಲ್ಲಾಸ ಹೊಂದುವಂತೆ ಮಾಡುವ ತಾಕತ್ತು ಬ್ಲ್ಯಾಕ್ ಕಾಫಿಗಿದೆ.
5) ಕೆಫೀನ್ ನಮ್ಮ ದೈಹಿಕ ಕೆಲಸಗಳನ್ನೂ ಅಭಿವೃದ್ಧಿಪಡಿಸುತ್ತದೆ. ಹೆಚ್ಚು ಕೆಲಸ ಮಾಡುವ ಮಂದಿ ನೀವಾಗಿದ್ದರೆ, ದೈಹಿಕ ಶ್ರಮ ಹಾಕಿ ಮಾಡುವ ಕೆಲಸ ನಿಮ್ಮದಾಗಿದ್ದರೆ, ಒಂದು ಕಾಫಿ ನಿಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಾಗುವಂತೆ, ನಿಮ್ಮನ್ನು ಚುರುಕಾಗಿಸಬಲ್ಲದು.
6) ಪಾರ್ಕಿನ್‌ಸನ್ ಖಾಯಿಲೆಯಂತಹ ಸಮಸ್ಯೆಗಳನ್ನೂ ಕೆಫೀನ್ ಕಡಿಮೆ ಮಾಡುತ್ತದೆ. ಅಥವಾ ಬರದಂತೆ ಕಾಪಾಡುತ್ತದೆ. ಕೆಫೀನ್‌ನಲ್ಲಿ ನರಮಂಡಲವನ್ನು ರಕ್ಷಿಸುವ ಗುಣವಿದ್ದು, ನರಮಂಡಲಕ್ಕೆ ಸಂಬಂಧಿಸಿದ ಮಾನಸಿಕ ಹಾಗೂ ಇತರ ಸಮಸ್ಯೆಗಳನ್ನೂ ಇದು ಬರದಂತೆ ಅಥವಾ ರಿಸ್ಕನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಅಲ್ಜೀಮರ್‌ನಂತಹ ಸಮಸ್ಯೆಗಳನ್ನೂ ಒಂದು ಮಟ್ಟಿಗೆ ಬರದಂತೆ ಕಾಪಾಡುವ ಗುಣ ಇದಕ್ಕಿದೆ.
ರಾತ್ರಿ ವರ್ಕೌಟ್ ಮಾಡೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
7) ಕೆಲವೊಮ್ಮೆ ತೂಕ ಇಳಿಕೆಗೂ ಇದು ಸಹಾಯ ಮಾಡುತ್ತದೆ. ನೇರವಾಗಿ ಅಲ್ಲದಿದ್ದರೂ, ತೂಕವನ್ನು ಕಡಿಮೆಗೊಳಿಸುವ, ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸುವ ಸಹಾಯವನ್ನೂ ಇದು ಮಾಡುತ್ತದೆ.
8) ಬ್ಲ್ಯಾಕ್ ಕಾಫಿ ಕುಡಿದರೆ ನೀರು ಕುಡಿಯುವ ಅಭ್ಯಾಸ ಹೆಚ್ಚುತ್ತದೆ. ನೀರು ಬೇಕೆನಿಸುವ ಗುಣ ಇದಕ್ಕಿದೆ. ಹೀಗಾಗಿ, ಹೆಚ್ಚು ನೀರು ಕುಡಿಯುವ, ಆ ಮೂಲಕ ಹೈಡ್ರೇಟೆಡ್ ಆಗಿರಲು ಇದು ಪರೋಕ್ಷವಾಗಿಯೂ ಸಹಾಯ ಮಾಡುತ್ತದೆ.
ಮಹಿಳೆಯರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆ ಏರಿಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.