
ಗ್ಲೋಬಲ್ ಬ್ರ್ಯಾಂಡ್
ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಂದ್ರೆ ಈಗ ಕೇವಲ ನಟನಲ್ಲ, ಅದೊಂದು ಗ್ಲೋಬಲ್ ಬ್ರ್ಯಾಂಡ್. ಇತ್ತೀಚೆಗಷ್ಟೇ ತೆರೆಕಂಡ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಲಿಲ್ಲ. ಸಿನಿಮಾ ಸೋತಿದ್ದರೂ ಪ್ರಭಾಸ್ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಅವರ ಕೈಯಲ್ಲಿರುವ ಸಾಲು ಸಾಲು ಬೃಹತ್ ಸಿನಿಮಾಗಳು. ಪ್ರಸ್ತುತ ಪ್ರಭಾಸ್ 'ಫೌಜಿ', ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಮೋಸ್ಟ್ ಅವೈಟೆಡ್ ಸಿನಿಮಾ 'ಸ್ಪಿರಿಟ್', ನಾಗ್ ಅಶ್ವಿನ್ ಅವರ 'ಕಲ್ಕಿ 2' ಮತ್ತು ಪ್ರಶಾಂತ್ ನೀಲ್ ಅವರ 'ಸಲಾರ್ 2' ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳು ಈ ಸಿನಿಮಾಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಆದರೆ ಈ ಮಧ್ಯೆ ಪ್ರಭಾಸ್ ಅಭಿಮಾನಿಗಳಿಗೆ ಒಂದು ಬೇಸರದ ಸುದ್ದಿ ಕೇಳಿಬಂದಿದೆ. 'ಹನು ಮ್ಯಾನ್' ಎಂಬ ಬ್ಲಾಕ್ ಬಸ್ಟರ್ ಸಿನಿಮಾ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ನಿರ್ದೇಶಕ ಪ್ರಶಾಂತ್ ವರ್ಮ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಒಂದು ಅದ್ಭುತ ಪೌರಾಣಿಕ ಹಿನ್ನೆಲೆಯ ಸೂಪರ್ ಹೀರೋ ಸಿನಿಮಾ ಸೆಟ್ಟೇರಬೇಕಿತ್ತು. ಈ ಚಿತ್ರಕ್ಕೆ 'ಬಕ' ಎಂದು ಹೆಸರಿಡಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಬಕಾಸುರನ ಛಾಯೆ ಇರುವ ವಿಭಿನ್ನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಈ ಸಿನಿಮಾ ಅಧಿಕೃತವಾಗಿ ಸ್ಥಗಿತಗೊಂಡಿದೆ ಎಂಬ ಗುಸುಗುಸು ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಈ ಸಿನಿಮಾ ನಿಂತು ಹೋಗಲು ಪರೋಕ್ಷವಾಗಿ ಕನ್ನಡದ 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಕಾರಣ ಎನ್ನಲಾಗುತ್ತಿದೆ. ಅದು ಹೇಗೆ ಅಂದುಕೊಂಡಿದ್ದೀರಾ? ಪ್ರಶಾಂತ್ ವರ್ಮ ಅವರು ಪ್ರಸ್ತುತ ರಿಷಬ್ ಶೆಟ್ಟಿ ಅವರೊಂದಿಗೆ 'ಜೈ ಹನುಮಾನ್' ಸಿನಿಮಾವನ್ನು ಪ್ರಾರಂಭಿಸುತ್ತಿದ್ದಾರೆ. 'ಹನು-ಮಾನ್' ಚಿತ್ರದ ಯಶಸ್ಸಿನ ನಂತರ ಈ ಸಿನಿಮಾದ ಮೇಲೆ ಪ್ರಶಾಂತ್ ವರ್ಮ ಅವರಿಗೆ ಜವಾಬ್ದಾರಿ ಹೆಚ್ಚಾಗಿದೆ. 'ಜೈ ಹನುಮಾನ್' ಚಿತ್ರಕ್ಕೆ ರಿಷಬ್ ಶೆಟ್ಟಿ ಆಯ್ಕೆಯಾದ ಮೇಲೆ, ಪ್ರಶಾಂತ್ ಅವರು ಸಂಪೂರ್ಣವಾಗಿ ಈ ಪ್ರಾಜೆಕ್ಟ್ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಪ್ರಭಾಸ್ ಅವರ 'ಬಕ' ಸಿನಿಮಾವನ್ನು ಸದ್ಯಕ್ಕೆ ಕೈಬಿಟ್ಟಿದ್ದಾರೆ ಅಥವಾ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, 'ಬಕ' ಚಿತ್ರದ ಟೆಸ್ಟ್ ಶೂಟ್ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ಪ್ರಭಾಸ್ ಅವರ ಲುಕ್ ಮತ್ತು ಒಟ್ಟಾರೆ ತಾಂತ್ರಿಕ ಅಂಶಗಳು ಪ್ರಭಾಸ್ ಅವರಿಗೆ ಅತೃಪ್ತಿ ತಂದಿವೆಯಂತೆ. ಸಿನಿಮಾದ 'ಲುಕ್ ಅಂಡ್ ಫೀಲ್' ಸರಿಯಾಗಿ ಮೂಡಿಬಾರದ ಕಾರಣ ಪ್ರಭಾಸ್ ಈ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಶಾಂತ್ ವರ್ಮ ಅವರಿಗೆ ಇದು ದೊಡ್ಡ ಹಿನ್ನಡೆಯೆಂದೇ ಹೇಳಬಹುದು. ಏಕೆಂದರೆ ಈ ಹಿಂದೆ ರಣವೀರ್ ಸಿಂಗ್ ಅವರೊಂದಿಗೆ ಮಾಡಬೇಕಿದ್ದ 'ರಾಕ್ಷಸ' ಚಿತ್ರವು ಸೃಜನಶೀಲ ಭಿನ್ನಾಭಿಪ್ರಾಯಗಳಿಂದಾಗಿ ರದ್ದಾಗಿತ್ತು. ಅಲ್ಲದೆ ನಂದಮೂರಿ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ಅವರ ಪದಾರ್ಪಣೆ ಚಿತ್ರದ ಬಗ್ಗೆಯೂ ಸಾಕಷ್ಟು ಗೊಂದಲಗಳು ಏರ್ಪಟ್ಟಿವೆ.
ಒಟ್ಟಿನಲ್ಲಿ, ಬೃಹತ್ ಬಜೆಟ್ ಹಾಗೂ ಹೈ ವೋಲ್ಟೇಜ್ ಕಥೆಯ ಮೂಲಕ ಪ್ರಭಾಸ್ ಅವರನ್ನು ಹೊಸ ಅವತಾರದಲ್ಲಿ ನೋಡಬೇಕೆಂಬ ಅಭಿಮಾನಿಗಳ ಆಸೆ ಸದ್ಯಕ್ಕೆ ನಿರಾಸೆಯಾದಂತಿದೆ. ಆದರೆ ರಿಷಬ್ ಶೆಟ್ಟಿ ಮತ್ತು ಪ್ರಶಾಂತ್ ವರ್ಮ ಕಾಂಬಿನೇಷನ್‌ನ 'ಜೈ ಹನುಮಾನ್' ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.