ಆ 'XYZ' ವ್ಯಕ್ತಿ ಯಾರೆಂದೇ ಗೊತ್ತಿಲ್ಲ.. ನಾನು ಯಾರನ್ನೂ ಮದುವೆಯಾಗಿಲ್ಲ; ನಟಿ ಮೆಹ್ರೀನ್ ಪೀರ್ಜಾದಾ ಕೆಂಡಾಮಂಡಲ!

Published : Dec 17, 2025, 11:12 AM IST
Mahreen Pirzada

ಸಾರಾಂಶ

2016ರಲ್ಲಿ ನಾನಿ ನಟನೆಯ 'ಕೃಷ್ಣ ಗಾದಿ ವೀರ ಪ್ರೇಮ ಗಾದ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೆಹ್ರೀನ್, 'ಎಫ್2', 'ಎಫ್3', 'ರಾಜಾ ದಿ ಗ್ರೇಟ್', 'ಕವಚಂ' ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ಹಿಂದಿ ಚಿತ್ರಗಳಲ್ಲೂ ನಟಿಸಿದ್ದು, ಇದೀಗ ತಮಿಳಿನ 'ಇಂದ್ರ' ಮೂಲಕ ಕಂಬ್ಯಾಕ್ ಮಾಡಿದ್ದಾರೆ.

ಆ 'XYZ' ವ್ಯಕ್ತಿ ಯಾರೆಂದೇ ನನಗೆ ಗೊತ್ತಿಲ್ಲ!"

ಚಿತ್ರರಂಗದಲ್ಲಿ ಗಾಸಿಪ್‌ಗಳು ಸಾಮಾನ್ಯ. ಅದರಲ್ಲೂ ಹೀರೋಯಿನ್‌ಗಳ ಮದುವೆ ವಿಚಾರ ಬಂದರೆ ಸಾಕು, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುದ್ದಿಗಳು ರೆಕ್ಕೆಪುಕ್ಕ ಪಡೆದು ಹಾರಾಡುತ್ತವೆ. ಇದೀಗ ಟಾಲಿವುಡ್ ಮತ್ತು ಕಾಲಿವುಡ್‌ನ ಜನಪ್ರಿಯ ನಟಿ, 'ಎಫ್2' ಖ್ಯಾತಿಯ ಮೆಹ್ರೀನ್ ಪೀರ್ಜಾದಾ (Mehreen Pirzada) ಸರದಿ. ಕಳೆದ ಕೆಲವು ದಿನಗಳಿಂದ "ಮೆಹ್ರೀನ್ ಪೀರ್ಜಾದಾ ಗುಟ್ಟಾಗಿ ಮದುವೆಯಾಗಿದ್ದಾರೆ" ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ, ಈ ವದಂತಿಗಳಿಗೆ ಈಗ ಸ್ವತಃ ನಟಿಯೇ ಬ್ರೇಕ್ ಹಾಕಿದ್ದಾರೆ. ಅಷ್ಟೇ ಅಲ್ಲ, ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಷರಶಃ ಕೆಂಡಾಮಂಡಲವಾಗಿದ್ದಾರೆ!

 

"ನಾನು ಮದುವೆಯಾಗಿಲ್ಲ, ಅದು ಹಸಿ ಸುಳ್ಳು"

ಹೈದರಾಬಾದ್‌ನಲ್ಲಿ ಮೆಹ್ರೀನ್ ಅವರು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾ ಪೇಜ್‌ಗಳು ವರದಿ ಮಾಡಿದ್ದವು. ಇದನ್ನು ಕಂಡು ರೋಸಿ ಹೋಗಿರುವ ನಟಿ, "ನಾನು ಯಾರಿಗೂ ಮದುವೆಯಾಗಿಲ್ಲ" ಎಂದು ನೇರವಾಗಿಯೇ ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಅವರು ಈ ಮೂಲಕ ಅಂತ್ಯ ಹಾಡಿದ್ದಾರೆ. ಯಾವುದೇ ದೃಢೀಕರಣವಿಲ್ಲದೆ ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದು ಬೇಜವಾಬ್ದಾರಿತನ ಎಂದು ಅವರು ಕಿಡಿಕಾರಿದ್ದಾರೆ.

ವಿಕಿಪೀಡಿಯಾ ಹ್ಯಾಕ್, ನಕಲಿ ವರ!

ಮೆಹ್ರೀನ್ ಅವರ ಕೋಪಕ್ಕೆ ಮುಖ್ಯ ಕಾರಣ ಅವರ ಬಗ್ಗೆ ಬರೆಯಲಾದ ಒಂದು ಲೇಖನ ಮತ್ತು ವಿಕಿಪೀಡಿಯಾದಲ್ಲಾದ ಬದಲಾವಣೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಅವರು, "ಇತ್ತೀಚಿನ ದಿನಗಳಲ್ಲಿ ಯಾವುದೇ ಪರಿಶೀಲನೆ ಇಲ್ಲದೆ ತಪ್ಪು ಮಾಹಿತಿ ಹರಡುವುದು ವಿಚಿತ್ರವೆನಿಸುತ್ತಿದೆ. ಕೆಲವೊಂದು ಮೂರ್ಖತನದ 'ಪೇಯ್ಡ್ ಆರ್ಟಿಕಲ್‌'ಗಳಿಂದ (Paid Articles) ಪತ್ರಿಕೋದ್ಯಮದ ಮೌಲ್ಯವೇ ಕುಸಿಯುತ್ತಿದೆ.

ನಾನು ಕಳೆದ 2 ವರ್ಷಗಳಿಂದ ಸುಮ್ಮನಿದ್ದೆ, ಆದರೆ ನಿರಂತರ ಕಿರುಕುಳದಿಂದಾಗಿ ಇಂದು ಮಾತನಾಡಲೇಬೇಕಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, "ಆ ಮಾಧ್ಯಮವು, ನನಗೆ ಪರಿಚಯವೇ ಇಲ್ಲದ, ನಾನು ಯಾವತ್ತೂ ಮಾತನಾಡಿಸದ ಯಾವುದೋ 'XYZ' ವ್ಯಕ್ತಿಯೊಂದಿಗೆ ನನಗೆ ಮದುವೆಯಾಗಿದೆ ಎಂದು ವರದಿ ಮಾಡಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಯಾರೋ ಕೀಳು ಮನಸ್ಥಿತಿಯ ವ್ಯಕ್ತಿ ನನ್ನ ವಿಕಿಪೀಡಿಯಾ (Wikipedia) ಪೇಜ್ ಹ್ಯಾಕ್ ಮಾಡಿ, ತನ್ನ 2 ನಿಮಿಷದ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾನೆ," ಎಂದು ಮೆಹ್ರೀನ್ ಗುಡುಗಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಖಡಕ್ ವಾರ್ನಿಂಗ್

ತಮ್ಮ ಮದುವೆಯ ಬಗ್ಗೆ ಸುಳ್ಳು ವರದಿ ಮಾಡಿದ ಪತ್ರಕರ್ತರ ಹೆಸರನ್ನೇ ಉಲ್ಲೇಖಿಸಿ ಮೆಹ್ರೀನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ದಯವಿಟ್ಟು ಸುಳ್ಳು ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ. ನಿಮ್ಮನ್ನು ನೀವು ಪತ್ರಕರ್ತರು ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಿ, ಏಕೆಂದರೆ ನೀವು ಅದಕ್ಕೆ ಅರ್ಹರಲ್ಲ," ಎಂದು ಖಾರವಾಗಿಯೇ ನುಡಿದಿದ್ದಾರೆ.

"ಮದುವೆಯಾದರೆ ಜಗತ್ತಿಗೆ ನಾನೇ ಹೇಳ್ತೀನಿ!"

ಅಭಿಮಾನಿಗಳಿಗೆ ಮತ್ತು ಮಾಧ್ಯಮಗಳಿಗೆ ಭರವಸೆ ನೀಡಿರುವ ಮೆಹ್ರೀನ್, "ನಾನು ಸದ್ಯಕ್ಕೆ ಸಿಂಗಲ್. ಆದರೆ, ನಾನು ಮದುವೆಯಾಗಲು ನಿರ್ಧರಿಸಿದಾಗ, ನಂಬಿ... ಆ ವಿಷಯವನ್ನು ಇಡೀ ಪ್ರಪಂಚಕ್ಕೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ಇಂತಹ ವದಂತಿಗಳನ್ನು ನಂಬಬೇಡಿ," ಎಂದು ಮನವಿ ಮಾಡಿದ್ದಾರೆ.

ಸಿನಿಮಾ ರಂಗದಲ್ಲಿ ಮೆಹ್ರೀನ್ ಕಂಬ್ಯಾಕ್

2016ರಲ್ಲಿ ನಾನಿ ಅಭಿನಯದ 'ಕೃಷ್ಣ ಗಾದಿ ವೀರ ಪ್ರೇಮ ಗಾದ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೆಹ್ರೀನ್, 'ಎಫ್2', 'ಎಫ್3', 'ರಾಜಾ ದಿ ಗ್ರೇಟ್', 'ಕವಚಂ' ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತಮಿಳು ಮತ್ತು ಹಿಂದಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಇದೀಗ ತಮಿಳಿನ 'ಇಂದ್ರ' (Indra) ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ 2023ರಲ್ಲಿ ಸೆಟ್ಟೇರಿತ್ತು ಮತ್ತು 2025ರ ಆಗಸ್ಟ್‌ನಲ್ಲಿ ಬಿಡುಗಡೆಯಾಗಿದೆ. ಸದ್ಯಕ್ಕೆ ಮೆಹ್ರೀನ್ ಗಮನವೆಲ್ಲಾ ತಮ್ಮ ವೃತ್ತಿಜೀವನದ ಮೇಲಿದೆಯೇ ಹೊರತು ಮದುವೆಯ ಮೇಲಲ್ಲ ಎಂಬುದು ಸ್ಪಷ್ಟ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಜನರದ್ದು ಎಮ್ಮೆಯ ಚರ್ಮ'.. ಅಂದು ಹೇಳಿದ್ದ ಅಕ್ಷಯ್ ಖನ್ನಾ ಮಾತೀಗ ವೈರಲ್.. ಈಗ ನೆಟ್ಟಿಗರು ಹೇಳ್ತಿರೋದೇನು?
ಅಬ್ಬಾ.. ಇತಿಹಾಸ ಸೃಷ್ಟಿಸಿದ 'ಧುರಂಧರ'ನ ದರ್ಬಾರ್; ಹಿಂದಿ ಚಿತ್ರರಂಗದಲ್ಲೇ ಸಾರ್ವಕಾಲಿಕ ದಾಖಲೆ!