
ಬಿಡುಗಡೆಯಾದಾಗಿನಿಂದಲೂ 'ಹನುಮಾನ್ ಅಂಶ' ಸಿನಿಮಾ ಸಾಕಷ್ಟು ಸುದ್ದಿಯಲ್ಲಿದೆ. ಆರಂಭದಲ್ಲಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದ್ದ ಸಿನಿಮಾ, ಇದೀಗ ಒಟಿಟಿ ಬಿಡುಗಡೆ ವಿಚಾರವಾಗಿಯೂ ಚರ್ಚೆಯಲ್ಲಿದೆ. ಆದರೆ, ಇದರ ನಡುವೆ ಚಿತ್ರದ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರದ ಪಿಆರ್, ಮಾರ್ಕೆಟಿಂಗ್ ಹಾಗೂ ಪಾಲುದಾರಿಕೆಗೆ ಸಂಬಂಧಿಸಿದ ವಿಚಾರಗಳನ್ನು ನಿರ್ವಹಿಸುವ ಅಧಿಕಾರ ನಿರ್ದೇಶಕ ವಿಶಾಲ್ ಚತುರ್ವೇದಿ ಮತ್ತು ನಮ್ರತಾ ಸಿಂಗ್ ಅವರಿಗೆ ಮಾತ್ರ ಇದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಹೇಳಿಕೆಯ ಬೆನ್ನಲ್ಲೇ ಉಳಿದ ನಿರ್ಮಾಪಕರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲ ಊಹಾಪೋಹಗಳಿಗೆ ನಿರ್ಮಾಪಕಿ ರಾಗಿಣಿ ಸೋನಾ ಸ್ಪಷ್ಟನೆ ನೀಡಿದ್ದಾರೆ.
ಹನುಮಾನ್ ಅಂಶ ಸಿನಿಮಾವನ್ನು ಅನುಪ್ರಿಯಾ ನಾಗರ್, ವಿಶಾಲ್ ಚತುರ್ವೇದಿ, ರಾಗಿಣಿ ಸೋನಾ ಮತ್ತು ನಮ್ರತಾ ಸಿಂಗ್ ಜಂಟಿಯಾಗಿ ನಿರ್ಮಿಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ 57ನೇ ಆವೃತ್ತಿಯ ಐಎಫ್ಎಫ್ಐ (IFFI) ಚಿತ್ರೋತ್ಸವದ ವೇಳೆ ಸ್ಕ್ರೀನ್ ಜೊತೆ ಮಾತನಾಡಿದ ರಾಗಿಣಿ, ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನಾವು ಈ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಬಂದು ಮಾತನಾಡುವುದಿಲ್ಲ. ಏಕೆಂದರೆ ನಿರ್ಮಾಪಕರು ಜನರ ಚರ್ಚೆಗಾಗಿ ವಿವಾದಗಳನ್ನು ಸೃಷ್ಟಿಸುವುದಿಲ್ಲ. ಕೆಲವೊಮ್ಮೆ ಕೆಲವರು ಕೆಲವು ತಪ್ಪುಗಳನ್ನು ಮಾಡಬಹುದು. ಆದರೆ ನಾವೆಲ್ಲರೂ ಒಟ್ಟಾಗಿದ್ದೇವೆ. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದೇವೆ, ಕಾರ್ಯಕ್ರಮಗಳಿಗೂ ಒಟ್ಟಿಗೆ ಹಾಜರಾಗುತ್ತಿದ್ದೇವೆ. ನಾವೆಲ್ಲರೂ ಒಂದಾಗಿದ್ದೇವೆ ಎಂಬುದಕ್ಕೆ ಇವೇ ಸಾಕ್ಷಿ ಎಂದಿದ್ದಾರೆ.
ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯಗಳು ಚಿತ್ರದ ಮುಂದಿನ ಭಾಗಗಳ ನಿರ್ಮಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನೂ ರಾಗಿಣಿ ಸ್ಪಷ್ಟಪಡಿಸಿದ್ದಾರೆ. ಮೊದಲ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲೇ ಎರಡನೇ ಭಾಗವನ್ನು ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ನೀಮ್ ಕರೋಲಿ ಬಾಬಾ ಅವರ ಜೀವನದ ಕಥೆಗಳು ಮತ್ತು ಘಟನೆಗಳು ಸಾಕಷ್ಟಿವೆ. ಅವುಗಳನ್ನು ಒಂದೇ ಸಿನಿಮಾದಲ್ಲಿ ಹೇಳುವುದು ಅಸಾಧ್ಯ. ಕನಿಷ್ಠ ಮೂರು ಭಾಗಗಳನ್ನು ನಿರ್ಮಿಸುವ ಬಗ್ಗೆ ನಾವು ಯೋಚಿಸಿದ್ದೆವು. ಮೊದಲ ಸಿನಿಮಾ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯಿತು. ಹೀಗಾಗಿ ಎರಡನೇ ಭಾಗದ ಬಗ್ಗೆ ಗಮನಹರಿಸಲು ಇನ್ನೂ ಸಾಧ್ಯವಾಗಿಲ್ಲ ಎಂದಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ
ವಿಶಾಲ್ ಚತುರ್ವೇದಿ ನಿರ್ದೇಶನದ ಹನುಮಾನ್ ಅಂಶ ಬಿಡುಗಡೆಯಾದ ಮೂರು ವಾರಗಳ ನಂತ್ರ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರಮಂದಿರಗಳಲ್ಲಿ ದಾಖಲೆಯ ಮಟ್ಟದ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್ನಲ್ಲಿ ಸುಮಾರು 453 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇಂದು ಅಂದ್ರೆ ನವೆಂಬರ್ 27 ರಂದು ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸೋನಿ ಲಿವ್ (Sony LIV) ವೇದಿಕೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.