ನಿನಗೆ ಶಾಂತಿಯ ಬದಲು ಯುದ್ಧವೇ ಬೇಕಿದ್ರೆ ಇದು ಟ್ರೇಲರ್ ಅಷ್ಟೇ.. ಎನ್ನುವ ಮೂಲಕ ಲಾರೆನ್ಸ್ ಬಿಷ್ಣೋಯಿ ನಟ ಸಲ್ಮಾನ್ ಖಾನ್ಗೆ ಕೊಟ್ಟ ಎಚ್ಚರಿಕೆ ಏನು?
“ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ ನಿನಗೆ ಅದು ಇಷ್ಟವಿಲ್ಲದೇ ಹೋದರೆ, ದಬ್ಬಾಳಿಕೆಯ ವಿರುದ್ಧದ ಏಕೈಕ ನಿರ್ಧಾರವು ಯುದ್ಧವೇ ಆಗಿದ್ದರೆ ಅದು ಹಾಗೆ ಆಗಲಿ ಸಲ್ಮಾನ್ ಖಾನ್... ನಿನಗೆ ನಾವು ಟ್ರೇಲರ್ ತೋರಿಸಿದ್ದೇವಷ್ಟೇ. ನಮ್ಮ ಸಾಮರ್ಥ್ಯ ಪರೀಕ್ಷಿಸಬೇಡ. ಇದು ನಿನಗೆ ಕೊಡ್ತಿರೋ ಮೊದಲ ಮತ್ತು ಕೊನೆಯ ಎಚ್ಚರಿಕೆ. ಇನ್ನು ಮುಂದೆ ಗೋಡೆಗಳ ಮೇಲೆ ಅಥವಾ ಯಾವುದೇ ಖಾಲಿ ಮನೆಯ ಮೇಲೆ ಗುಂಡು ಹಾರಿಸುವುದಿಲ್ಲ. ಏನು ಎಂದು ಅರ್ಥವಾಗಿರಬೇಕಲ್ಲ... ಓಂ... ಜೈ ಶ್ರೀ ರಾಮ್...
ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿರುವ ಬರಹ. ಇಂದು ಮುಂಜಾನೆ 4.55ರ ಸುಮಾರಿಗೆ ನಟ ಸಲ್ಮಾನ್ ಖಾನ್ (Salman Khan) ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗಡೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಮಧ್ಯಾಹ್ನ 11.30 ಸುಮಾರಿಗೆ ಲಾರೆನ್ಸ್ ಬಿಷ್ಣೋಯಿ ಫೇಸ್ಬುಕ್ನಲ್ಲಿ ಈ ಪೋಸ್ಟ್ ಕಾಣಿಸಿಕೊಂಡಿದೆ. ಗುಂಡಿನ ದಾಳಿಯನ್ನು ನಡೆಸಿರುವುದು ತಮ್ಮವರೇ ಎಂದು ಹೇಳಿಕೊಂಡಿರುವ ಲಾರೆನ್ಸ್, ಕೃಷ್ಣಮೃಗ ಬೇಟೆಯ ಬಗ್ಗೆ ಇದುವರೆಗೆ ಕ್ಷಮೆ ಕೋರದ ಸಲ್ಮಾನ್ ಖಾನ್ ವಿರುದ್ಧ ಹೀಗೆ ಹರಿಹಾಯ್ದಿದ್ದಾನೆ. "ಓಂ" ಮತ್ತು "ಜೈ ಶ್ರೀ ರಾಮ್" ಎಂದು ಪ್ರಾರಂಭವಾಗಿರುವ ಈ ಪೋಸ್ಟ್ನಲ್ಲಿ ನಮ್ಮ ಮನೆಯ ನಾಯಿಗಳಿಗೆ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಎಂದು ಹೆಸರು ಇಡಲಾಗಿದೆ. ಆದರೆ ನೀನು ಹಲವರ ಪಾಲಿಗೆ ದೇವರಾಗಿದ್ದಿ, ನಮಗೆ ಒಟ್ಟಿನಲ್ಲಿ ಶಾಂತಿ ಬೇಕು. ಅದಕ್ಕೆ ನೀನು ಒಪ್ಪದಿದ್ದರೆ ಮುಂದಿನ ಗುಂಡು ಮನೆಯ ಮೇಲೆ ಬೀಳುವುದಿಲ್ಲ ಎಂದಿದ್ದಾನೆ. ಈ ಪೋಸ್ಟ್ನಲ್ಲಿ "ಲಾರೆನ್ಸ್ ಬಿಷ್ಣೋಯ್ ಗುಂಪು" ಮತ್ತು ಗ್ಯಾಂಗ್ಸ್ಟರ್ಗಳಾದ ಗೋಲ್ಡಿ ಬ್ರಾರ್, ರೋಹಿತ್ ಗೋಡಾರಾ ಮತ್ತು ಕಲಾ ಜಥಾರಿ ಅವರ ಹೆಸರುಗಳು ಇವೆ.
ಸಲ್ಮಾನ್ ಬೆಂಬಲಿಗ ಗಿಪ್ಪಿ ಮನೆ ಮೇಲೂ ಗುಂಡಿನ ದಾಳಿ, ರಾಖಿಗೂ ಬೆದರಿಕೆ: ಅಷ್ಟಕ್ಕೂ ನಟನ ಮೇಲೆ ಏಕಿಷ್ಟು ಕೋಪ?
ಅಂದಹಾಗೆ, ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾನೆ. ಏಕೆಂದರೆ, ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾನೆ.
ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾನೆ. ಅಷ್ಟಕ್ಕೂ ಆತನ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್ ಖಾನ್ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ.