'ಪೆದ್ದಿ' ವಿವಾದ: ಜಾನ್ವಿ ಕಪೂರ್‌ ಪರ ನಿಂತು, ಚಿತ್ರರಂಗ ಮುಟ್ಟಿ ನೋಡಿಕೊಳ್ಳುವಂತೆ ಪೋಸ್ಟ್ ಮಾಡಿದ ನವ ನಟಿ!

Published : Jun 08, 2026, 12:03 PM IST
Dimple Hayathi Janhvi Kapoor

ಸಾರಾಂಶ

ಒಂದೆಡೆ ವಿವಾದಗಳು ನಡೆಯುತ್ತಿದ್ದರೂ, 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜೂನ್ 4 ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ ಜಾಗತಿಕವಾಗಿ 200 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಜಾನ್ವಿ ಕಪೂರ್ ಈ ವಿವಾದದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

'ಪೆದ್ದಿ' ವಿವಾದ: ಜಾನ್ವಿ ಕಪೂರ್ ಬೆನ್ನಿಗೆ ನಿಂತ ಡಿಂಪಲ್ ಹಯಾತಿ!

ಹೈದರಾಬಾದ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಅಭಿನಯದ ಬಹುನಿರೀಕ್ಷಿತ ಚಿತ್ರ 'ಪೆದ್ದಿ' (Peddi) ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ಚಿತ್ರದ ಯಶಸ್ಸಿನ ನಡುವೆಯೇ ಒಂದು ದೊಡ್ಡ ವಿವಾದಾತ್ಮಕ ಕಿಡಿ ಹೊತ್ತಿಕೊಂಡಿದೆ. ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಚಿತ್ರೀಕರಿಸಿದ ರೀತಿ ಮತ್ತು ಕೆಲವು ದೃಶ್ಯಗಳು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿವೆ. ಈ ವಿಚಾರವಾಗಿ ಈಗ ತೆಲುಗು ಚಿತ್ರರಂಗದ ಖ್ಯಾತ ನಟಿ ಡಿಂಪಲ್ ಹಯಾತಿ (Dimple Hayathi) ಜಾನ್ವಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಏನಿದು 'ಪೆದ್ದಿ' ವಿವಾದ?

'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರವನ್ನು ಕೇವಲ ಗ್ಲಾಮರ್‌ಗೆ ಸೀಮಿತಗೊಳಿಸಲಾಗಿದೆ ಮತ್ತು ಕ್ಯಾಮೆರಾ ಆಂಗಲ್‌ಗಳು ಮಹಿಳೆಯರನ್ನು ವಸ್ತುವಿನಂತೆ (Objectification) ಚಿತ್ರೀಕರಣ ಮಾಡಿದಂತೆ ಇವೆ ಎಂಬ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ರಾಮ್ ಚರಣ್ ಮತ್ತು ಜಾನ್ವಿ ನಡುವಿನ ಕೆಲವು ಪ್ರಣಯ ದೃಶ್ಯಗಳು ಹಾಗೂ ಸಂಭಾಷಣೆಗಳು ಸ್ತ್ರೀ ವಿರೋಧಿಯಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ಎಲ್ಲ ಟೀಕೆಗಳ ನೇರ ಗುರಿ ಜಾನ್ವಿ ಕಪೂರ್ ಅವರೇ ಆಗಿದ್ದರು.

ಜಾನ್ವಿ ಪರ ನಿಂತ ಡಿಂಪಲ್ ಹಯಾತಿ:

ತನ್ನ ಸಹೋದ್ಯೋಗಿ ಜಾನ್ವಿ ಕಪೂರ್ ವಿರುದ್ಧ ಕೇಳಿಬರುತ್ತಿರುವ ಟೀಕೆಗಳನ್ನು ಗಮನಿಸಿದ ಡಿಂಪಲ್ ಹಯಾತಿ, ಭಾನುವಾರ ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. "ಇಂದು ನಟಿಯರ ಪಾತ್ರಗಳನ್ನು ಬರೆಯುವ ರೀತಿ ಮತ್ತು ಅಂತಹ ಪಾತ್ರಗಳನ್ನು ಮಾಡಿದ ನಟಿಯರನ್ನೇ ದೂಷಿಸುವ ಪ್ರವೃತ್ತಿಯ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದು ನನಗೆ ಸಂತೋಷ ತಂದಿದೆ. ದಯವಿಟ್ಟು ನಟಿಯರನ್ನು ದೂಷಿಸಬೇಡಿ; ಬದಲಿಗೆ ಈ ವ್ಯವಸ್ಥೆ (System) ಮತ್ತು ಚಿತ್ರನಿರ್ಮಾಪಕರನ್ನು ದೂಷಿಸಿ. ನಟಿಯರು ಇಂತಹ ಪಾತ್ರಗಳನ್ನು ಮಾಡಿದರೆ ಮಾತ್ರ ಸಿನಿಮಾ ಓಡುತ್ತದೆ ಎಂದು ಅವರು ನಂಬಿದ್ದಾರೆ," ಎಂದು ಡಿಂಪಲ್ ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ನಾವು ಕಲಾವಿದರು, ನಮಗೆ ಸಿಗುವ ಅವಕಾಶಗಳಲ್ಲಿಯೇ ಉತ್ತಮವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ದೊಡ್ಡ ಸಿನಿಮಾಗಳಲ್ಲಿ ನಟಿಸಿ, ಹೆಚ್ಚಿನ ಜನರನ್ನು ತಲುಪಬೇಕೆಂಬ ಆಸೆ ನಮಗಿರುತ್ತದೆ. ಆದರೆ ದುರದೃಷ್ಟವಶಾತ್, ನಟಿಯರನ್ನು ಅವರು ಮಾಡುವ ಪಾತ್ರಗಳ ಆಧಾರದ ಮೇಲೆ ಸ್ಟೀರಿಯೋಟೈಪ್ ಮಾಡಲಾಗುತ್ತದೆ. ನಟಿಯರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಇಲ್ಲಿ ಅವಕಾಶವೇ ಸಿಗುತ್ತಿಲ್ಲ. ಹೀರೋ ಕೇಂದ್ರಿತ ಸಿನಿಮಾಗಳಲ್ಲಿ ಅವರಿಗೆ ಬೇಕಾದಂತೆ ಬಿಂಬಿಸುವ ಸ್ವಾತಂತ್ರ್ಯವಿರುತ್ತದೆ. ಸಿನಿಮಾದ ಒಳಗೆ ಏನು ನಡೆಯುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ, ಅದು ಒಬ್ಬ ವ್ಯಕ್ತಿಯ ನಿಯಂತ್ರಣದಲ್ಲಿ ಇರುವುದಿಲ್ಲ. ನಮಗೆ ಉತ್ತಮ ಚಿತ್ರಕಥೆ ಮತ್ತು ಗೌರವಯುತ ಚಿತ್ರೀಕರಣದ ಅನುಭವ ಬೇಕು ಎಂಬುದು ಎಲ್ಲರ ಆಶಯ," ಎಂದು ನೋವು ತೋಡಿಕೊಂಡಿದ್ದಾರೆ.

ನಿರ್ದೇಶಕ ಬುಚ್ಚಿ ಬಾಬು ಸನಾ ಕ್ಷಮೆಯಾಚನೆ:

ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಚಿತ್ರದ ನಿರ್ದೇಶಕ ಬುಚ್ಚಿ ಬಾಬು ಸನಾ, ಪ್ರೇಕ್ಷಕರ ಕ್ಷಮೆ ಕೇಳಿದ್ದಾರೆ. "ಪೆದ್ದಿ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ನಮಗೆ ಪ್ರತಿಕ್ರಿಯೆಗಳು ಬಂದಿವೆ. ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ಯಾರನ್ನೂ ಅವಮಾನಿಸುವ ಉದ್ದೇಶ ನಮಗಿರಲಿಲ್ಲ. ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ಬಂದಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ವಿವಾದಿತ ದೃಶ್ಯಗಳನ್ನು ಎಡಿಟ್ ಮಾಡಲು ನಾವು ನಿರ್ಧರಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ 'ಪೆದ್ದಿ' ಅಬ್ಬರ:

ಒಂದೆಡೆ ವಿವಾದಗಳು ನಡೆಯುತ್ತಿದ್ದರೂ, 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಜೂನ್ 4 ರಂದು ಬಿಡುಗಡೆಯಾದ ಈ ಚಿತ್ರ ಈಗಾಗಲೇ ಜಾಗತಿಕವಾಗಿ 200 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ. ಜಾನ್ವಿ ಕಪೂರ್ ಈ ವಿವಾದದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಡಿಂಪಲ್ ಹಯಾತಿ ಅವರ ಈ ಹೇಳಿಕೆ ಈಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೈಲಿನಿಂದ ಕಾಲು ಹೊರಗಿಟ್ಟರೆ ಪಕ್ಕದ ಟ್ರೈನ್ ತಾಗುತ್ತಾ? 'ಪೆದ್ದಿ' ಸಿನಿಮಾದಲ್ಲಿ ತೋರಿಸಿದ್ದು ನಿಜವೇ?
'ಜಾನ್ವಿ ಕಪೂರ್' ಬಿಟ್ಟು, ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿದ ನಿತ್ಯಾ ಮೆನನ್! ಬಾಲಿವುಡ್‌ಗೆ ಕೆನ್ನೆಗೆ ಬಾರಿಸಿದ ನಟಿ