ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಕಾರು ಇಳಿದು ನಡೆಯುವಂತೆ ಮಾಡಿದ ಬೆಂಗಳೂರು ಟ್ರಾಫಿಕ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತವರು ನೆಲ ಬೆಂಗಳೂರಿನಲ್ಲಿ ನಡೆದ ಪಂಜಾಬಿ ಸಿಂಗರ್ ದಿಲ್ಜಿತ್ ದೋಸಂಜ್ ಅವರ ಸಂಗೀತಾ ರಸಮಂಜರಿಯಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಗೊತ್ತೆ ಇದೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಮಗುವಾದ ನಂತರ ಇದೇ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪರಿಣಾಮ ಅಭಿಮಾನಿಗಳು ಕೂಡ ದೀಪಿಕಾ ನೋಡಿ ಸಂಭ್ರಮಪಟ್ಟಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಬಂದಿದ್ದ ದೀಪಿಕಾ ಪಡುಕೋಣೆ ಬೆಂಗಳೂರು ಟ್ರಾಫಿಕ್ ಕಾರಣದಿಂದ ಬೆಂಗಳೂರಿನ ರಸ್ತೆಯಲ್ಲಿ ಅನಿವಾರ್ಯವಾಗಿ ನಡೆದು ಹೋಗಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದಾಗಿ ವರದಿ ಆಗಿದ್ದು, ಅದರ ವೀಡಿಯೋಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಗಳು ದುವಾ ಪಡುಕೋಣೆ ಸಿಂಗ್ ಜನಿಸಿದ ನಂತರ ದೀಪಿಕಾ ಪಡುಕೋಣೆ ಸಂಪೂರ್ಣವಾಗಿ ಮಗಳ ಆರೈಕೆಯಲ್ಲಿ ತೊಡಗಿದ್ದು, ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಆದರೆ ಇದೆಲ್ಲವುಗಳಿಂದ ತುಸು ಬಿಡುವು ಪಡೆದ ದೀಪಿಕಾ ಬೆಂಗಳೂರಿನಲ್ಲಿ ನಡೆದ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್ ಅವರ 'ದಿಲ್ ಲುಮಿನಿಟಿ' ಶೋಗೆ ಆಗಮಿಸಿದ್ದರು. ಈ ಶೋದಲ್ಲಿ ದಿಲ್ಜಿತ್ ದೋಸಾಂಜ್ ಅವರು ದೀಪಿಕಾ ಅವರನ್ನು ಸ್ಟೇಜ್‌ಗೆ ಕರೆದು ಗೌರವಿಸಿದ್ದರು. ಇದರ ಫೋಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೀಪಿಕಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ ಇದಾದ ನಂತರ ದೀಪಿಕಾ ಪಡುಕೋಣೆಯವರಿಗೂ ಬೆಂಗಳೂರಿನ ಎಂದಿನ ವಿಪರೀತವಾದ ಟ್ರಾಫಿಕ್ ಬಿಸಿ ತಟ್ಟಿದೆ.
ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಬರಬೇಕಾದರೆ ವಿಪರೀತವಾದ ಟ್ರಾಫಿಕ್‌ನ ಕಾರಣಕ್ಕೆ ನಟಿ ದೀಪಿಕಾ ಕಾರಿನಿಂದ ಇಳಿದು ನಡೆದುಕೊಂಡೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಈ ವೀಡಿಯೋವನ್ನು ನಟಿ ದೀಪಿಕಾ ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೀಪಿಕಾ ನಡೆದು ಬರುತ್ತಿರುವ ವೀಡಿಯೋವನ್ನು ನಂತರ ಸೋಶಿಯಲ್ ಮೀಡಿಯಾದಲ್ಲಿ ಪಪಾರಾಜಿಗಳು ಕೂಡ ಶೇರ್ ಮಾಡಿಕೊಂಡಿದ್ದು, ಈ ವೀಡಿಯೋದಲ್ಲಿ ದೀಪಿಕಾ ಅವರನ್ನು ಬಹುಕಾಲದ ನಂತರ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಹಲವು ಕಾಮೆಂಟ್ ಮಾಡಿದ್ದಾರೆ.
ಈ ಕನ್ಸರ್ಟ್‌ಗಾಗಿ ನಟಿ ಬಿಳಿ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವ ಡೆನಿಮ್ ಜೀನ್ಸ್ ಧರಿಸಿದ್ದರು. ತಮ್ಮ ಕನ್ಸರ್ಟ್‌ಗೆ ಬಂದ ದೀಪೀಕಾರನ್ನು ದಿಲ್ಜಿತ್ ದೋಸಾಂಜ್ ಸ್ಟೇಜ್‌ಗೆ ಕರೆದಿದ್ದು, ದೀಪಿಕಾರನ್ನ ಸ್ಟೇಜ್‌ನಲ್ಲಿ ನೋಡಿದ ಅಭಿಮಾನಿಗಳು ಹುಚ್ಚೆದ್ದು ಬೊಬ್ಬೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಇನ್ನು ನಟಿ ದೀಪಿಕಾ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ 2018ರಲ್ಲಿ ನಟ ರಣ್ವೀರ್ ಸಿಂಗ್ ಅವರನ್ನು ಮದುವೆಯಾದ ದೀಪಿಕಾ ಪಡುಕೋಣೆ ಸೆಪ್ಟೆಂಬರ್ 8 ರಂದು ಮಗಳು ದುವಾ ಪಡುಕೋಣೆಗೆ ಜನ್ಮ ನೀಡಿದ್ದರು.