
ಕಿಚ್ಚ ಸುದೀಪ್(Sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್( Ajay devgan) ನಡುವಿನ ರಾಷ್ಟ್ರಭಾಷಾ ಕಿಡಿ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ ಅಜಯ್ ದೇವಗನ್ ಟ್ವಿಟ್ಟರ್ ಮೂಲಕ ಕಿಡಿ ಕಾರಿದ್ದರು. ಅಜಯ್ ದೇವಗನ್ ಟ್ವೀಟ್ ಗೆ ಖಡಕ್ ಪ್ರತಿಕ್ರಿಯೆ ನೀಡಿದ ಸುದೀಪ್ ಬಳಿಕ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ್ರು. ಆದರೆ ಇಬ್ಬರು ಸ್ಟಾರ್ ನಟರ ನಡುವಿನ ರಾಷ್ಟ್ರಭಾಷಾ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಯಿತು.
ಅಜಯ್ ದೇವಗನ್ ವಿರುದ್ಧ ಕನ್ನಡಿಗರು ಮಾತ್ರವಲ್ಲದೆ ಅನೇಕ ದಕ್ಷಿಣ ಭಾರತದ ಸ್ಟಾರ್ಸ್ ಸಿಡಿದೆದ್ದರು, ಅಲ್ಲದೆ ಅಜಯ್ ದೇವಗನ್ ಅವರಿಗೆ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾ ಎಂದು ಕಿಡಿಕಾರಿದರು. ಕನ್ನಡ ಕಲಾವಿದರು, ಸ್ಟಾರ್ ಮಾತ್ರವಲ್ಲದೆ ಪರಭಾಷೆಯಿಂದಲೂ ಕಿಚ್ಚನ ಹೇಳಿಕೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಸ್ಯಾಂಡಲ್ ವುಡ್ ಕಲಾವಿದರ ಜೊತೆಗೆ ರಾಜಕಾರಣಿಗಳು ಸಹ ಸುದೀಪ್ ಪರ ನಿಂತಿದ್ದಾರೆ. ಸುದೀಪ್ ಅವರ ಮಾತಿಗೆ ಕನ್ನಡದ ನಟ ನೀನಾಸಂ ಸತೀಶ್ (Ninasam Satish), ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (siddaramaiah), ನಟಿ ಹಾಗೂ ರಾಜಕಾರಣಿ ರಮ್ಯಾ (Ramya) ಸೇರಿದಂತೆ ಹಲವರು ಸುದೀಪ್ ಮಾತಿಗೆ ದನಿಗೂಡಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಹೇಳಿದ್ದಾರೆ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಸಹ ಪ್ರತಿಕ್ರಿಯೆ ನೀಡಿ ಸುದೀಪ್ ಮಾತಿಗೆ ಬೆಂಬಲ ನೀಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರ ಜೊತೆ ಮಾತನಾಡಿದ ಸಿಎಂ, ‘ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್ ಹೇಳಿದ್ದು ಸರಿಯಿದೆ. ನಮ್ಮ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತದೆ. ಸುದೀಪ್ ಸರಿಯಾಗಿಯೇ ಹೇಳಿದ್ದಾರೆ' ಎಂದು ಹೇಳುವ ಮೂಲಕ ಕಿಚ್ಚನ ಪರ ಬ್ಯಾಟ್ ಮಾಡಿದ್ದಾರೆ. ಅಲ್ಲದೇ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, 'ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
'ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ 'ಫೂಲ್ ಔರ್ ಕಾಂಟೆ' ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು' ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ಟ್ವೀಟ್ ಮಾಡಿ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಪರ ನಿಂತಿದ್ದಾರೆ. ಡಿಕೆ ಶಿವಕುಮಾರ್, ಸುಮಲತಾ ಸೇರಿದಂತೆ ಅನೇಕರು ಸುದೀಪ್ ಮಾತಿಗೆ ದನಿಗೂಡಿಸಿದ್ದು ಅಜಯ್ ದೇವಗನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.