
ಜುಮ್ಮಾ ಚುಮ್ಮಾ ಹಾಡಿನ ಮೋಡಿ!
ಬಾಲಿವುಡ್‌ನ ಶಹನ್ ಷಾ ಅಮಿತಾಭ್ ಬಚ್ಚನ್ (Amitabh Bachchan) ಅಂದ್ರೆ ಯಾರಿಗ್ ತಾನೇ ಗೊತ್ತಿಲ್ಲ? ಅವರ ಸಿನಿಮಾಗಳು, ಸಂಭಾಷಣೆಗಳು, ಸ್ಟೈಲ್, ಆಕ್ಷನ್–ಎಲ್ಲವೂ ಸೂಪರ್ ಹಿಟ್. ಆದರೆ, ಒಂದು ಕಾಲದಲ್ಲಿ ಬಿಗ್ ಬಿ ಕೂಡ ಒಂದು ಹಾಡಿನ ಸ್ಟೆಪ್ ಬಗ್ಗೆ ಆತಂಕ ಪಟ್ಟಿದ್ರು ಅಂದ್ರೆ ನಂಬ್ತೀರಾ? ಹೌದು, 'ಹಮ್' ಚಿತ್ರದ ಬ್ಲಾಕ್‌ಬಸ್ಟರ್ ಹಾಡು 'ಜುಮ್ಮಾ ಚುಮ್ಮಾ ದೇ ದೇ' ಸ್ಟೆಪ್ ಬಗ್ಗೆ ಸ್ವತಃ ಅಮಿತಾಭ್ ಅವರೇ "ಇದು ವಲ್ಗರ್ ಆಗಿ ಕಾಣುತ್ತಾ?" ಅಂತ ಚಿಂತಿಸಿದ್ರಂತೆ! ಈ ರೋಚಕ ಕಥೆಯನ್ನ ಬಿಚ್ಚಿಟ್ಟವರು ಆ ಹಾಡಿಗೆ ಕೊರಿಯೋಗ್ರಫಿ ಮಾಡಿದ ಚಿನ್ನಿ ಪ್ರಕಾಶ್!
ಆ ಹಾಡು ಹುಟ್ಟಿದ್ದು ಹೇಗೆ?
1989-90ರ ಆ ದಿನಗಳನ್ನ ನೆನಪಿಸಿಕೊಂಡ ಚಿನ್ನಿ, "ಒಂದು ದಿನ ಅಮಿತಾಭ್ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಕೂತಿದ್ವಿ. ಆ ಕಾಲದಲ್ಲಿ ಬಿಗ್ ಬಿ ಮತ್ತು ಮನ್ಮೋಹನ್ ದೇಸಾಯಿ ಅವರಿಬ್ಬರಿಗಷ್ಟೇ ವ್ಯಾನಿಟಿ ವ್ಯಾನ್ ಇತ್ತು. ಅಮಿತಾಭ್ ಹೈಟೆಕ್ ಸ್ಪೀಕರ್‌ಗಳನ್ನ ಇಟ್ಟುಕೊಂಡಿದ್ದರು. ಅವರು ನನ್ನನ್ನ ಕೂರಿಸಿ 'ಜುಮ್ಮಾ ಚುಮ್ಮಾ' ಹಾಡನ್ನ ಕೇಳಿಸಿದ್ರು" ಅಂತ ಹೇಳಿದ್ದಾರೆ. ಅಂದಿನಿಂದಲೇ ಆ ಹಾಡಿನ ಜಾದೂ ಶುರುವಾಯ್ತು!
ಹಾಡು ಕೇಳಿದ ನಂತರ, ಡಾನ್ಸ್ ಸ್ಟೆಪ್‌ಗಳನ್ನ ಪ್ಲಾನ್ ಮಾಡಲಾಯ್ತು. ಆದರೆ, ಒಂದು ದಿನ ಮಧ್ಯರಾತ್ರಿ 12 ಗಂಟೆಗೆ ಚಿನ್ನಿ ಪ್ರಕಾಶ್‌ಗೆ ಅವರ ಅಸಿಸ್ಟೆಂಟ್‌ಗಳಿಂದ ಕಾಲ್ ಬಂತು. "ನಾವು ಅಮಿತಾಭ್ ಬಚ್ಚನ್ ಮುಂದೆ ಈ ಡಾನ್ಸ್ ಸ್ಟೆಪ್‌ಗಳನ್ನ ತೋರಿಸೋಕೆ ಆಗಲ್ಲ, ನಮಗೆ ಭಯ ಆಗ್ತಿದೆ. ನೀವೇ ಹೋಗಿ ತೋರಿಸಿ" ಅಂತ ಅವರು ಕೈ ಚೆಲ್ಲಿದ್ರಂತೆ! ಅಂದ್ರೆ ಬಿಗ್ ಬಿ ಎದುರು ಡಾನ್ಸ್ ತೋರಿಸೋಕೆ ಅವರಿಗೂ ಒಂಥರಾ ಅಳುಕು ಇತ್ತು ಅನ್ನೋದು ಇದರಿಂದ ಗೊತ್ತಾಗುತ್ತೆ.
ಬಿಗ್ ಬಿ ಗೆ ಅನುಮಾನ, ಚಿನ್ನಿ ಪ್ರಕಾಶ್ ಗೆಲ್ಲಿಸಿದ್ರು!
ಅಸಿಸ್ಟೆಂಟ್‌ಗಳು ಹಿಂದೇಟು ಹಾಕಿದಾಗ, ಚಿನ್ನಿ ಪ್ರಕಾಶ್ ತಾವೇ ಮುಂದೆ ನಿಂತು, ತಮ್ಮ ಡಾನ್ಸರ್‌ಗಳ ಜೊತೆ ಸೇರಿ ಇಡೀ ಹಾಡಿಗೆ ಅಮಿತಾಬ್ ಎದುರು ಡಾನ್ಸ್ ಮಾಡಿದ್ರಂತೆ. ಇದನ್ನ ನೋಡಿದ ಬಿಗ್ ಬಿ ಗೆ ಸ್ವಲ್ಪ ಅನುಮಾನ ಬಂತು. "ನನಗೆ ಈ ಸ್ಟೆಪ್‌ಗಳನ್ನ ಕಲಿಯೋಕೆ ಮೂರು ತಿಂಗಳು ಬೇಕು, ಶೂಟಿಂಗ್ ಮುಂದೂಡಿ" ಅಂತ ನಿರ್ದೇಶಕರಿಗೆ ಹೇಳಿದ್ರಂತೆ!
ಅದಕ್ಕೆ ಕಾರಣ ಇತ್ತು. ಚಿನ್ನಿ ಹೇಳ್ತಾರೆ, "ಡಾನ್ಸ್ ಸ್ಟೆಪ್ ಮಾಡ್ತಿದ್ದಾಗ ಅಮಿತಾಭ್ ನನ್ನ ಕಡೆ ನೋಡಿ, 'ನೀವು 5 ಅಡಿ ಇದ್ದೀರಾ, ನಿಮಗೆ ಈ ಸ್ಟೆಪ್ ಚೆನ್ನಾಗಿ ಕಾಣುತ್ತೆ. ಆದರೆ ನಾನು 6 ಅಡಿಗಿಂತ ಹೆಚ್ಚು ಎತ್ತರ ಇದ್ದೀನಿ, ನನಗೆ ಇದು ಅಷ್ಟಾಗಿ ಚೆನ್ನಾಗಿ ಕಾಣಲ್ಲ. ವಲ್ಗರ್ ಆಗಿ ಕಾಣಬಹುದು' ಅಂತ ಹೇಳಿದ್ರು." ಆಗ ಚಿನ್ನಿ ಪ್ರಕಾಶ್, "ದಯವಿಟ್ಟು ಈ ಸ್ಟೆಪ್ ಮಾಡಿ" ಅಂತ ಬಿಗ್ ಬಿ ಅವರನ್ನ ಮನವೊಲಿಸಿದ್ರಂತೆ. ಇವತ್ತು ಆ ಹಾಡಿನ ಸಿಗ್ನೇಚರ್ ಸ್ಟೆಪ್ ಇಡೀ ಭಾರತದಲ್ಲೇ ಫೇಮಸ್ ಅಂದ್ರೆ ಅದಕ್ಕೆ ಚಿನ್ನಿ ಪ್ರಕಾಶ್ ಅವರ ಹಠ ಕಾರಣ!
ಕೊನೆಗೆ ಹಾಡಿನ ಶೂಟಿಂಗ್ ಮುಗಿದು ಸ್ಕ್ರೀನಿಂಗ್ ನಡೆಯಿತು. ಜಯಾ ಬಚ್ಚನ್ ಅವರು ಚಿಕ್ಕ ಅಭಿಷೇಕ್ ಬಚ್ಚನ್ ಜೊತೆ ಹಾಡನ್ನ ನೋಡಲು ಬಂದಿದ್ರಂತೆ. ಚಿನ್ನಿ ಪ್ರಕಾಶ್ ಆ ಕ್ಷಣವನ್ನ ನೆನಪಿಸಿಕೊಳ್ಳುತ್ತಾ, "ಎಲ್ಲರೂ ಅಲ್ಲಿ ಸೇರಿದ್ದರು. ಸುಮಾರು ಆರು ನಿಮಿಷದ ಆ ಹಾಡು ಪೂರ್ತಿ ಸ್ಕ್ರೀನಿಂಗ್ ಆದಾಗ ಪಿನ್ ಡ್ರಾಪ್ ಸೈಲೆನ್ಸ್ ಇತ್ತು. ಯಾರೂ ಸೌಂಡ್ ಮಾಡ್ತಿರಲಿಲ್ಲ. ಹಾಡು ಮುಗಿದ ತಕ್ಷಣ, ಥಿಯೇಟರ್ ಇಡೀ ಜೋರಾದ ಚಪ್ಪಾಳೆ ಮತ್ತು ಕಿರುಚಾಟದಿಂದ ತುಂಬಿ ಹೋಯ್ತು!" ಅಂತ ಹೇಳಿದ್ದಾರೆ.
ಇದೇ ವೇಳೆ, ಜಯಾ ಬಚ್ಚನ್ ಅವರು ಚಿನ್ನಿ ಪ್ರಕಾಶ್ ಬಳಿ ಬಂದು, "ಇದು ಸೂಪರ್ ಆಗಿ ಕಾಣುತ್ತಿದೆ!" ಅಂತ ಮೆಚ್ಚುಗೆ ಸೂಚಿಸಿದ್ರಂತೆ. ಅಮಿತಾಭ್ ಬಚ್ಚನ್ ಅವರ ಸಿನಿ ಇತಿಹಾಸದಲ್ಲೇ ಇಂತಹ ಹಾಡು ಶೂಟ್ ಆಗಿರಲಿಲ್ಲ ಅಂತಲೂ ಅವರು ಹೇಳಿದ್ರು.
ಹೀಗೆ, ಒಂದು ಡಾನ್ಸ್ ಸ್ಟೆಪ್ ಬಗ್ಗೆ ಬಿಗ್ ಬಿ ಗೆ ಇದ್ದ ಚಿಂತೆ, ಚಿನ್ನಿ ಪ್ರಕಾಶ್ ಅವರ ಪರಿಶ್ರಮ, ಮತ್ತು ಜಯಾ ಬಚ್ಚನ್ ಅವರ ಮೆಚ್ಚುಗೆಯಿಂದ 'ಜುಮ್ಮಾ ಚುಮ್ಮಾ' ಹಾಡು ಇವತ್ತಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಂದಹಾಗೆ, ಈ ಹಾಡಿನಲ್ಲಿ ಅಮಿತಾಭ್ ಬಚ್ಚನ್ ಅವರ ಡಾನ್ಸ್ ಸ್ಟೆಪ್ ಹೇಗಿತ್ತು? ನೋಡಿ.. ಕಾಮೆಂಟ್ ಮಾಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.