ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ ಜವಾನ್ ಚಿತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಏನಿದರ ಮರ್ಮ?
ಶಾರುಖ್ ಖಾನ್ (Shahrukh Khan) ಅವರ ಬಹು ನಿರೀಕ್ಷಿತ ಜವಾನ್ ಚಿತ್ರ ನಾಳೆ ಅಂದರೆ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಇದಾಗಲೇ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆಯಾಗಬಾರದು ಎಂದು ಶಾರುಖ್ ಅವರು, ತಿರುಪತಿಗೂ ಹೋಗಿ ಬಂದಿದ್ದಾರೆ. ಪಠಾಣ್ ಬಿಡುಗಡೆಯ ಸಂದರ್ಭದಲ್ಲಿ ಬೇಷರಂ ರಂಗ್ ಹಾಡು ಹೊತ್ತಿಸಿದ್ದ ಕಿಡಿಯಿಂದ ಬೈಕಾಟ್ ಟ್ರೆಂಡ್ ಅನುಭವಿಸಿತ್ತು ಶಾರುಖ್ ಖಾನ್ ಮತ್ತು ಅವರ ತಂಡ. ಆದರೆ ಜವಾನ್ ಚಿತ್ರದ ಸಮಯದ ವೇಳೆ ಇದ್ಯಾವುದೂ ಕಿರಿಕಿರಿ ಆಗದಂತೆ ಸರಿಯಾಗಿ ನಡೆಯಬೇಕು ಎನ್ನುವ ಕಾರಣಕ್ಕೆ ಶಾರುಖ್ ಪಂಚೆ, ಧೋತಿ ತೊಟ್ಟು ತಿರುಪತಿಗೆ ಹೋಗಿದ್ದರು ಎಂದೂ ಹೇಳಲಾಗಿತ್ತು. ಆದರೆ ಚಿತ್ರ ಬಿಡುಗಡೆಗೆ ಇನ್ನೇನು ಕ್ಷಣ ಗಣನೆ ಆರಂಭವಾದ ಬೆನ್ನಲ್ಲೇ ಬಾಯ್ಕಾಟ್ ಅಭಿಯಾನ ಶುರುವಾಗಿದೆ.
ಅಷ್ಟಕ್ಕೂ ಜವಾನ್ (Jawan) ನಿರೀಕ್ಷೆಯಲ್ಲಿದ್ದ ಜನಕ್ಕೆ ಏಕಾಏಕಿ ಏನಾಯಿತು ಎನ್ನುವುದೇ ಕುತೂಹಲ. ಇದಕ್ಕೆ ಕಾರಣ, ನಿರ್ಮಾಪಕ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ಕುರಿತು ನೀಡಿರುವ ಹೇಳಿಕೆ. ಕಳೆದ ಕೆಲವು ದಿನಗಳಿಂದ ಇವರು ನೀಡಿರುವ ಹೇಳಿಕೆ ಎಲ್ಲೆಡೆ ಸಂಚಲನ ಸೃಷ್ಟಿಸುತ್ತಿರುವುದು ಎಲ್ಲರಿಗೂ ತಿಳಿದದ್ದೇ. ಇತ್ತೀಚೆಗೆ ಚೆನ್ನೈನಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಅವರು, ಸನಾತನ ಧರ್ಮವನ್ನು ಕರೋನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು. ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಆಕ್ರೋಶಭರಿತವಾಗಿ ಹೇಳಿದ್ದೂ ಅಲ್ಲದೇ, ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಮೇಲೂ ತಾವು ತಮ್ಮ ಹೇಳಿಕೆಗೆ ಬದ್ಧ ಎಂದಿದ್ದರು. ಇದೀಗ ಶಾರುಖ್ ನಟನೆಯ ಜವಾನ್ ಚಿತ್ರಕ್ಕೆ ಈ ಹೇಳಿಕೆ ಭಾರಿ ಪರಿಣಾಮ ಬೀರಿದೆ.
'ಜವಾನ್' ಚಿತ್ರ ವೀಕ್ಷಣೆಗೆ ಬರ್ತಿದ್ದಾರೆ 36 ಗರ್ಲ್ಫ್ರೆಂಡ್ಸ್, 72 ಎಕ್ಸ್ ಲವರ್ಸ್: ಏನಿದು ವಿಷ್ಯ?
ಹೌದು. ಅಷ್ಟಕ್ಕೂ ಸ್ಟಾಲಿನ್ (Udhayanidhi Stalin) ಅವರ ಹೇಳಿಕೆಗೂ, ಜವಾನ್ ಚಿತ್ರಕ್ಕೂ ಏನಪ್ಪಾ ಸಂಬಂಧ ಎಂದರೆ, ‘ಜವಾನ್’ ಚಿತ್ರ ಹಿಂದಿಯ ಜೊತೆಗೆ ತಮಿಳು, ತೆಲುಗು ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆಯಗುತ್ತಿದೆ. ತಮಿಳುನಾಡಿನಲ್ಲಿ ಈ ಚಿತ್ರದ ಹಂಚಿಕೆ ಹಕ್ಕನ್ನು ಉದಯನಿಧಿ ಸ್ಟಾಲಿನ್ ವಹಿಸಿಕೊಂಡಿದ್ದು, ಅವರ ಒಡೆತನದ ರೆಡ್ ಜಿಯಂಟ್ ಮೂವೀಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ತಮಿಳುನಾಡಿನಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಸನಾತನ ಧರ್ಮದ ಕುರಿತು ಅವರು ಹೇಳಿಕೆ ನೀಡಿ ಕಿಡಿ ಹೊತ್ತಿಸಿದ್ದಾರೆ.
ಅವರು ‘ಜವಾನ್’ ಸಿನಿಮಾ ಹಂಚಿಕೆ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಬಾಯ್ಕಾಟ್ ಟ್ರೆಂಡ್ ಶುರುವಾಗಿದೆ. ಈ ಚಿತ್ರವನ್ನು ಯಾರೂ ನೋಡಬಾರದು, ಸನಾತನ ಧರ್ಮಿಯರಿಗೆ ನಿಜವಾದ ಸ್ವಾಭಿಮಾನವಿದ್ದರೆ ಅವರು ಇದನ್ನು ನೋಡಬಾರದು ಎಂದು ಅಭಿಯಾನ ಶುರು ಮಾಡಲಾಗಿದೆ. ಅದೇ ಇನ್ನೊಂದೆಡೆ, ಶಾರುಖ್ ಕುಟುಂಬ ಸಹಿತ ತಿರುಪತಿಗೆ ಹೋಗಿದ್ದನ್ನು ಸಹಿಸದ ಕಾರಣ, ಈ ರೀತಿ ಗಲಾಟೆ ಶುರು ಮಾಡಲಾಗಿದೆ, ಸುಖಾ ಸುಮ್ಮನೆ ವಿವಾದ ಹೊತ್ತಿಸಲಾಗಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ತೀವ್ರ ಪ್ರತಿಭಟನೆಯ ಬಳಿಕವೂ ಪಠಾಣ್ ಚಿತ್ರ ಯಶಸ್ವಿಯಾದರೂ, ಆರಂಭದಲ್ಲಿ ಅದಕ್ಕೆ ಹೊಡೆತ ಬಿದ್ದಿದ್ದಂತೂ ನಿಜ. ಇನ್ನು ಜವಾನ್ ಚಿತ್ರದ ಮೇಲೆ ಈ ಬಾಯ್ಕಾಟ್ ಟ್ರೆಂಡ್ (Boycott trend) ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎನ್ನುವುದನ್ನು ನೋಡಬೇಕಿದೆ.
ಸನಾತನ ಧರ್ಮಕ್ಕೆ ಅವಮಾನ, ಕ್ಯಾಬಿನೆಟ್ ಮಂತ್ರಿಗಳಿಗೆ ಬಿಗ್ ಟಾಸ್ಕ್ ನೀಡಿದ ಪ್ರಧಾನಿ ಮೋದಿ!