ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ರನ್ನು ಹತ್ಯೆ ಮಾಡಲು 2021ರಲ್ಲಿ ದೊಡ್ಡ ಮಟ್ಟದ ಯತ್ನ ನಡೆದಿತ್ತು. ಆದರೆ, ಕೆಲವೊಂದು ಕಾರಣಗಳಿಂದಾಗಿ ಇದು ವಿಫಲವಾಗಿತ್ತು ಎಂದು ಪ್ರಸ್ತುತ ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೇಳಿದ್ದಾನೆ.
ನವದೆಹಲಿ (ಜೂನ್ 6): ಸಿಧು ಮೂಸೆವಾಲಾ (sidhu moose wala) ಹತ್ಯೆ ಪ್ರಕರಣದಲ್ಲಿ (Murder Case) ಜೈಲು ಪಾಲಾಗಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು (Lawrence Bishnoi) ಸ್ಥಳೀಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಬಂಧನವಾದ ದಿನದಂದಲೂ ಸಲ್ಮಾನ್ ಖಾನ್ ರನ್ನು ಕೊಲೆ ಮಾಡುವ ಇರಾದೆ ಆತನಿಗಿತ್ತು ಎನ್ನುವುದು ಬಹಿರಂಗವಾಗಿತ್ತು. ಮಂಗಳವಾರ ನಡೆದ ವಿಚಾರಣೆಯ ವೇಳೆ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ರನ್ನು (Salman Khan) ಹತ್ಯೆ ಮಾಡಲು ಒಂದು ವಿಫಲ ಯತ್ನವನ್ನೂ ನಡೆಸಲಾಗಿತ್ತು ಎಂದಿದ್ದಾನೆ.
ಸಲ್ಮಾನ್ ಖಾನ್ ಕೊಲೆ ಬೆದರಿಕೆ ಕರೆ ಪಡೆಯುವುದು ವಿಶೇಷವೇನಲ್ಲ. ಆದರೆ, ಲಾರೆನ್ಸ್ ಬಿಷ್ಣೋಯಿ ಬಂಧನದ ಬಳಿಕ ಸಲ್ಮಾನ್ ಖಾನ್ ಗೆ ಬಂದಿರುವ ಬೆದರಿಕೆ ಕರೆಗಳು ನಿಜವಾದವು ಎನ್ನುವ ಮಾಹಿತಿ ಗೊತ್ತಾಗಿದೆ. ಇದರ ಬೆನ್ನಲ್ಲಿಯೇ ಮುಂಬೈ ಪೊಲೀಸ್ (Mumbai Police) ಸಲ್ಮಾನ್ ಖಾನ್ ಹಾಗೂ ಅವರ ಮನೆಗೆ ಸೂಕ್ತ ಭದ್ರತೆ ನೀಡಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಈ ಹಿಂದೆ ಜೈಲಿನಲ್ಲಿದ್ದಾಗಲೇ ಸಲ್ಮಾನ್ ಖಾನ್ ರನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಇದು ಕೊನೆಯಲ್ಲಿ ವಿಫಲವಾಗಿತ್ತು.
2021ರಲ್ಲಿ ಭದ್ರತಾ ಏಜೆನ್ಸಿಗಳ ವಿಚಾರಣೆ ವೇಳೆ ಸಲ್ಮಾನ್ ಹತ್ಯೆಗೆ ಸಂಚು ರೂಪಿಸಿದ್ದಾಗಿ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಒಪ್ಪಿಕೊಂಡಿದ್ದರು. ಸಲ್ಮಾನ್ ಖಾನ್ ಅವರನ್ನು ಕೊಲ್ಲುವಂತೆ ರಾಜಸ್ಥಾನದ ದರೋಡೆಕೋರ ಸಂಪತ್ ನೆಹ್ರಾ (Sampat Nehra) ಅವರನ್ನು ಕೇಳಿಕೊಂಡಿದ್ದನ್ನು ಲಾರೆನ್ಸ್ ಬಹಿರಂಗಪಡಿಸಿದ್ದರು. ಇದಾದ ಬಳಿಕ ಮುಂಬೈಗೆ ತೆರಳಿದ್ದ ಸಂಪತ್ ನೆಹ್ರಾ, ಸಲ್ಮಾನ್ ಖಾನ್ ಅವರ ಮನೆಯ ಸುತ್ತ ಮುತ್ತ ತಿರುಗಾಡಿ ಸೂಕ್ತ ಸ್ಥಳದ ಹುಡುಕಾಟವನ್ನೂ ಮಾಡಿದ್ದರು.
ವಿಚಾರಣೆಯ ವೇಳೆ ಮಾತನಾಡಿದ್ದ ಲಾರೆನ್ಸ್ ಬಿಷ್ಣೋಯಿ, ಸಂಪತ್ ನೆಹ್ರಾ ಬಳಿ ಆ ವೇಳೆ ಕೇವಲ ಪಿಸ್ತೂಲ್ ಮಾತ್ರವೇ ಇತ್ತು. ಬಹಳ ದೂರದಿಂದಲೇ ಗುರಿ ಇಡುವುದು ಇದರಿಂದ ಸಾಧ್ಯವಾಗುತ್ತಿರಲಿಲ್ಲ. ದೂರದ ಕಾರಣದಿಂದಾಗಿ ಸಲ್ಮಾನ್ ಖಾನ್ ಅವರ ಕೊಲೆ ಮಾಡುವ ಪ್ರಯತ್ನ ವಿಫಲವಾಗುವ ಬಗ್ಗೆ ಲಾರೆನ್ಸ್ ಗೆ ತಿಳಿದಿತ್ತು. ಈ ಹಂತದಲ್ಲಿ ತಮ್ಮ ಗ್ರಾಮದ ದಿನೇಶ್ ಎನ್ನುವ ವ್ಯಕ್ತಿಯಿಂದ ಆರ್ ಕೆ ಸ್ಪ್ರಿಂಗ್ ರೈಫಲ್ ಅನ್ನು ಸಂಪತ್ ನೆಹ್ರಾ ಪಡೆದುಕೊಂಡಿದ್ದರು. ಇದನ್ನು ಅನಿಲ್ ಪಾಂಡ್ಯ ಎನ್ನುವ ವ್ಯಕ್ತಿಯಿಂದ ಬಿಷ್ಣೋಯಿ 4 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಆದರೆ, ದಿನೇಶ್ ಅವರ ಬಳಿಕ ಈ ರೈಫಲ್ ಇದ್ದಾಗಲೇ ಪೊಲೀಸರಿಂದ ಬಂಧಿತರಾಗಿದ್ದರು. ಕೊನೆಗೆ ಸಂಪತ್ ನೆಹ್ರಾ ಕೂಡ ಬಂಧನಕ್ಕೆ ಒಳಪಟ್ಟಿದ್ದರಿಂದ ಪ್ಲ್ಯಾನ್ ವಿಫಲವಾಗಿತ್ತು.
ವಾಸ್ತವವಾಗಿ, ಕೃಷ್ಣಮೃಗ ಬೇಟೆ ಪ್ರಕರಣದ ಕಾರಣ ಲಾರೆನ್ಸ್ ಬಿಷ್ಣೋಯ್ ಅವರು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಗ್ಯಾಂಗ್ ಸ್ಟಾರ್ ಲಾರೆನ್ಸ್, ಬಿಷ್ಣೋಯ್ ಸಮಾಜದವರು. ಬಿಷ್ಣೋಯ್ ಸಮಾಜದ ವ್ಯಕ್ತಿಗಳು ಕೃಷ್ಣಮೃಗವನ್ನು ದೇವರಂತೆ ಪೂಜೆ ಮಾಡುತ್ತಾರೆ. ಆದ್ದರಿಂದ, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರನ್ನು ಆರೋಪಿಯನ್ನಾಗಿ ಮಾಡಿದಾಗ, ಲಾರೆನ್ಸ್ ತುಂಬಾ ಕೋಪಗೊಂಡಿದ್ದರು. ಲಾರೆನ್ಸ್ ಬಿಷ್ಣೋಯ್ ಗ್ರೂಪ್ ಕೂಡ ಸಲ್ಮಾನ್ ಖಾನ್ ಹತ್ಯೆಗೆ ಯೋಜನೆ ರೂಪಿಸಿತ್ತು. ರೆಡಿ ಚಿತ್ರದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಮೇಲೆ ದಾಳಿ ನಡೆಸಲು ಲಾರೆನ್ಸ್ ಪ್ಲಾನ್ ಮಾಡಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ.
ದೆಹಲಿಯ ತಿಹಾರ್ ಜೈಲಿನಲ್ಲಿ ಲಾರೆನ್ಸ್ ರನ್ನು ಬಂಧಿಸಿದ್ದಾಗ ವ್ಯಾಟ್ಸ್ ಆಪ್ ಮೂಲಕ ಗ್ಯಾಂಗ್ ತಮ್ಮ ಕಾರ್ಯಾಚರಣೆಗಳು ನಡೆಸುತ್ತಿತ್ತು. ತನ್ನ ಯೋಜನೆಯಲ್ಲಿ ಯಶಸ್ವಿಯಾದರೆ ಫೇಸ್ ಬುಕ್ ಮೂಲಕ ಅದರ ಮಾಹಿತಿ ನೀಡುವುದು ಈ ಗ್ಯಾಂಗ್ ನ ವಾಡಿಕೆ. ಇಂದು ಇಡೀ ದೇಶಾದ್ಯಂತ ಈ ಗ್ಯಾಂಗ್ ನ ಬೇರುಗಳಿವೆ. ಅಂದಾಜು 700ಕ್ಕೂ ಅಧಿಕ ಶಾರ್ಪ್ ಶೂಟರ್ಸ್, ಗ್ಯಾಂಗ್ ಸ್ಟಾರ್ಸ್ ಈ ಟೀಮ್ ನಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಇಬ್ಬರೂ ಸಮನ್ವಯದಲ್ಲಿ ಕೆಲಸ ಮಾಡುತ್ತಾರೆ.
ಸಲ್ಮಾನ್ ಮನೆಗೆ ಬಂತು ಬೆದರಿಕೆ ಪತ್ರ: ಭಾನುವಾರ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಬಳಿಯೇ ಬೆದರಿಕೆ ಪತ್ರ ಬಂದಿದೆ. ಶೀಘ್ರದಲ್ಲಿಯೇ ಸಲ್ಮಾನ್ ಖಾನ್ ಸ್ಥಿತಿ ಸಿಧು ಮೂಸೆವಾಲಾ ಅವರಂತಾಗುತ್ತದೆ ಎಂದು ಬರೆಯಲಾಗಿತ್ತು. ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಮುಂಜಾನೆಯ ವಾಕ್ ಮಾಡಿದ ಬಳಿಕ ನಿವಾಸದ ಬಳಿ ಕುಳಿತುಕೊಳ್ಳುವ ಚೇರ್ ನಲ್ಲಿ ಈ ಪತ್ರ ಪತ್ತೆಯಾಗಿತ್ತು. ಇದನ್ನು ಸಲೀಂ ಖಾನ್ ಅವರ ಗಾರ್ಡ್ ಮೊದಲು ಓದಿದ್ದರು ಎಂದು ಹೇಳಲಾಗಿದೆ.