
ಮುಂಬೈ: ವಂಚನೆ ಪ್ರಕರಣವೊಂದರಲ್ಲಿ ಸಂಕಷ್ಟ ಎದುರಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ವಿದೇಶಕ್ಕೆ ತೆರಳುವುದಕ್ಕೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ನಟಿ ಶಿಲ್ಪಾ ಶೆಟ್ಟಿಗೆ ಶ್ರೀಲಂಕಾದ ಕೊಲಂಬೋಗೆ ತೆರಳಬೇಕಿತ್ತು. ಆದರೆ ಈ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನಿರಾಕರಿಸಿದ್ದು, ಈ ವಿಷಯವನ್ನು ವಿಚಾರಣೆ ಮಾಡುವ ಮೊದಲು ವಂಚನೆ ಪ್ರಕರಣದಲ್ಲಿ ಆಕೆ 60 ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ (EOW) ಹೊರಡಿಸಿದ ಲುಕ್ ಔಟ್ ಸುತ್ತೋಲೆ (LOC) ಜಾರಿಯಲ್ಲಿದೆ ಎಂಬುದನ್ನು ನ್ಯಾಯಾಲಯ ಇದೇ ವೇಳೆ ಗಮನಿಸಿತ್ತು. ಈ ಕಾರಣದಿಂದಾಗಿ, ನ್ಯಾಯಾಲಯ ಅಥವಾ ತನಿಖಾ ಸಂಸ್ಥೆಯ ಅನುಮತಿಯಿಲ್ಲದೆ ಅವರು ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಅಕ್ಟೋಬರ್ 25 ರಿಂದ 29 ರವರೆಗೆ ಕೊಲಂಬೊದಲ್ಲಿ ನಡೆಯಲಿರುವ ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಬೇಕಾಗಿತ್ತು ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಾಲಯ ಆಹ್ವಾನ ಪತ್ರಿಕೆ ಕೇಳಿದಾಗ, ಶಿಲ್ಪಾ ಪರ ವಕೀಲರು, ದೂರವಾಣಿ ಮೂಲಕ ಮಾತ್ರ ಅವರು ಮಾತನಾಡಿದ್ದಾರೆ. ಶಿಲ್ಪಾ ಶೆಟ್ಟಿಗೆ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದ ನಂತರವೇ ಔಪಚಾರಿಕ ಆಹ್ವಾನವನ್ನು ಸ್ವೀಕರಿಸಲಿದ್ದೇವೆ ಎಂದು ಹೇಳಿದರು.
ಅನುಮತಿಗೂ ಮೊದಲು 60 ಕೋಟಿ ಪಾವತಿಸಿ ಎಂದ ಬಾಂಬೆ ಹೈಕೋರ್ಟ್!
ಆದರೆ ನ್ಯಾಯಾಲಯ ಮಾತ್ರ ಶಿಲ್ಪಾ ಶೆಟ್ಟಿಯ ವಿದೇಶ ಪ್ರಯಾಣಕ್ಕೆ ವಿನಂತಿಯನ್ನು ತಿರಸ್ಕರಿಸಿತು. ಅಲ್ಲದೇ ಪ್ರಯಾಣಕ್ಕೆ ಅನುಮತಿ ಪಡೆಯುವ ಮೊದಲು ವಂಚನೆ ಆರೋಪಕ್ಕಾಗಿ ದಂಪತಿಗಳು ಮೊದಲು 60 ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂದು ಹೇಳಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 14 ಕ್ಕೆ ನಿಗದಿಪಡಿಸಲಾಗಿದೆ. ಬಾಂಬೆ ಹೈಕೋರ್ಟ್ ಈ ಹೇಳಿಕೆಗಳನ್ನು ಮೌಖಿಕವಾಗಿ ನೀಡಿದೆ.
ಕಳೆದ ವಾರವೂ ಸಹ, ಬಾಂಬೆ ಹೈಕೋರ್ಟ್ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಇವೆ ಎಂದು ಉಲ್ಲೇಖಿಸಿ ಅವರ ಕುಟುಂಬ ಪ್ರವಾಸಕ್ಕೆ ಅನುಮತಿ ನಿರಾಕರಿಸಿತು. ಇವರ ಕುಟುಂಬ ಥೈಲ್ಯಾಂಡ್‌ನ ಫುಕೆಟ್‌ಗೆ ಹೋಗುವುದಕ್ಕೆ ಪ್ಲಾನ್ ಮಾಡಿದ್ದರು. ಇದರ ಜೊತೆಗೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಹೊರಡಿಸಿದ ಲುಕ್ ಔಟ್ ಸುತ್ತೋಲೆ ಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿತು.
ಶಿಲ್ಪಾ ದಂಪತಿ ವಿರುದ್ಧ ಉದ್ಯಮಿ ದೀಪಕ್ ಕೊಠಾರಿಯಿಂದ ವಂಚನೆ ಆರೋಪ
ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಉದ್ಯಮಿ ದೀಪಕ್ ಕೊಠಾರಿ ವಂಚನೆ ಆರೋಪ ಹೊರಿಸಿದ್ದಾರೆ. ಈ ದಂಪತಿ ತಮ್ಮ ಈಗ ಕಾರ್ಯನಿರ್ವಹಿಸದ ಕಂಪನಿಯಲ್ಲಿ 60 ಕೋಟಿ ರೂ. ಹೂಡಿಕೆ ಮಾಡುವಂತೆ ಉದ್ಯಮಿ ಕೊಠಾರಿಯ ಮನವೊಲಿಸಿದರು ಆದರೆ ಹಣವನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡರು ಎಂದು ಆರೋಪಿಸಿದ್ದಾರೆ.. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ವಿಚಾರಣೆಗಾಗಿ ಆರ್ಥಿಕ ಅಪರಾಧಗಳ ವಿಭಾಗ ಮುಂದೆ ಹಾಜರಾಗಿದ್ದಾರೆ. ಈ ಪ್ರಕರಣವು ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ನಟ ಅಕ್ಷಯ್ ಕುಮಾರ್ ಅವರು ಪ್ರಾರಂಭಿಸಿದ ಭಾರತದ ಮೊದಲ ಸೆಲೆಬ್ರಿಟಿ ಆಧಾರಿತ ಶಾಪಿಂಗ್ ಚಾನೆಲ್ ಆಗಿ ಪ್ರಚಾರಗೊಂಡ, ಈಗ ಕಾರ್ಯನಿರ್ವಹಿಸದ ಟೆಲಿಶಾಪಿಂಗ್ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ್ದಾಗಿದೆ.
ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ ಆರು ಬಲಿ: ದೀಪಾವಳಿಗೂ ಮುನ್ನ ಬಾಳಿಗೆ ಕತ್ತಲು ತಂದ ಪಟಾಕಿ ದುರಂತ
ಇದನ್ನೂ ಓದಿ: ನದಿಯಲ್ಲಿ ಸ್ನಾನ ಮಾಡ್ತಿದ್ದ ಮಹಿಳೆಯನ್ನು ಎಳೆದೊಯ್ದ ಮೊಸಳೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.