
ಮುಂಬೈ (ನ.11): ಬಾಲಿವುಡ್‌ನ ಹೀಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟ ಧರ್ಮೇಂದ್ರ ತಮ್ಮ 89ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾಗಿದ್ದಾರೆ ಅನ್ನೋ ಸುದ್ದಿ ಮಂಗಳವಾರ ವ್ಯಾಪಕವಾಗಿ ಹಬ್ಬಿತ್ತು. ಆದರೆ, ಅವರ ಕುಟುಂಬ ಈ ಸುದ್ದಿಯನ್ನು ನಿರಾಕರಿಸಿದೆ. ಪುತ್ರಿ ಇಶಾ ಡಿಯೋಲ್ ಹಾಗೂ ಪತ್ನಿ ಹೇಮಾ ಮಾಲಿನಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಧರ್ಮೇಂದ್ರ ನಿಧನದ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಅಸುನೀಗಿದ್ದಾರೆ ಎಂದು ವರದಿಯಾಗಿತ್ತು. ಸೋಮವಾರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣಕ್ಕೆ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆಗಲೇ ಅವರ ನಿಧನದ ಸುದ್ದಿಗಳು ಹಬ್ಬಿದ್ದವು. ಆದರೆ, ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರ ಸೋಶಿಯಲ್ ಮೀಡಿಯಾ ಟೀಮ್ ಈ ಸುದ್ದಿಯನ್ನು ತಳ್ಳಿಹಾಕಿದ್ದವು.
ಆಸ್ಪತ್ರೆಗೆ ದಾಖಲಾದ ದಿನದಿಂದ 72 ಗಂಟೆಗಳಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಧರ್ಮೇಂದ್ರ ಅವರ ಹೆಣ್ಣುಮಕ್ಕಳನ್ನು ಈಗಾಗಲೇ ವಿದೇಶದಿಂದ ಮುಂಬೈಗೆ ಕರೆಸಲಾಗಿದೆ. ನಿನ್ನೆ ರಾತ್ರಿ ಆಸ್ಪತ್ರೆಯ ಹೊರಗೆ ಸನ್ನಿ ಡಿಯೋಲ್ ತುಂಬಾ ಭಾವುಕರಾಗಿದ್ದರು, ಇನ್ನೊಂದೆಡೆ ಬಾಬಿ ಡಿಯೋಲ್ ಕೂಡ ಆಲ್ಫಾ ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಮರಳಿದ್ದಾರೆ. ಶಾರುಖ್ ಮತ್ತು ಸಲ್ಮಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೋಮವಾರ ತಡರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಆರು ದಶಕಗಳ ಕಾಲ ಬಾಲಿವುಡ್‌ಅನ್ನು ಆಳಿದ್ದ ಧರ್ಮೇಂದ್ರ, ಚಿತ್ರರಂಗದಿಂದ ಹೀ ಮ್ಯಾನ್ ಎನ್ನುವ ಹೆಸರಲ್ಲೇ ಗುರುತಿಸಿಕೊಂಡಿದ್ದಾರೆ. ಪತ್ನಿ ಹಾಗೂ ಸಂಸದೆ ಹೇಮಾ ಮಾಲಿನಿ ಹಾಗೂ ಆರು ಮಂದಿ ಮಕ್ಕಳಾದ ನಟ ಸನ್ನಿ ಡಿಯೋಲ್, ಬಾಬಿ ಡಿಯೋಲ್, ನಟಿ ಇಶಾ ಡಿಯೋಲ್, ಅಹಾನಾ ಡಿಯೋಲ್, ಅಜೀತಾ ಹಾಗೂ ವಿಜೇತಾ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿಯೇ ಇದ್ದಾರೆ.
ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ಧರ್ಮೇಂದ್ರ 1960 ರ ಚಲನಚಿತ್ರ 'ದಿಲ್ ಭಿ ತೇರಾ ಹಮ್ ಭಿ ತೇರೆ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರಿಗೆ 2012 ರಲ್ಲಿ ಭಾರತ ಸರ್ಕಾರದಿಂದ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆರು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು 'ಯಾದೋನ್ ಕಿ ಬಾರತ್', 'ಮೇರಾ ಗಾಂವ್ ಮೇರಾ ದೇಶ್', 'ನೌಕರ್ ಬಿವಿ ಕಾ', 'ಫೂಲ್ ಔರ್ ಪತ್ತರ್', 'ಬೇಗಹಬಾಯ್' ಮತ್ತು ಇತರ ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಪಂಜಾಬ್‌ನ ಲುಧಿಯಾನದ ಹಳ್ಳಿಯಲ್ಲಿ ಧರ್ಮೇಂದ್ರ ಕೇವಲ್ ಕ್ರಿಶನ್ ಡಿಯೋಲ್ ಆಗಿ ಜನಿಸಿದ ಅವರು, 1954 ರಲ್ಲಿ 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದರು, ನಂತರ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ, ಅವರು ನಟಿ ಹೇಮಾ ಮಾಲಿನಿ ಅವರನ್ನು ಪ್ರೀತಿಸಿ ಅವರನ್ನು ವಿವಾಹವಾದರು.
89 ವರ್ಷ ವಯಸ್ಸಿನಲ್ಲೂ ಧರ್ಮೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು, ಆರೋಗ್ಯಕರ ಜೀವನ ಮತ್ತು ಸಾವಯವ ಜೀವನಶೈಲಿಯನ್ನು ಉತ್ತೇಜಿಸುವ ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಅವರ ಅನೇಕ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಅವರು ಟ್ರ್ಯಾಕ್ಟರ್ ಓಡಿಸುವುದು, ತಮ್ಮ ಜಮೀನನ್ನು ನೋಡಿಕೊಳ್ಳುವುದು ಮತ್ತು ಅವರ ಅಭಿಮಾನಿಗಳಿಗೆ ಸರಳ ಜೀವನ ಪಾಠಗಳು ಮತ್ತು ಕೃಷಿ ಸಲಹೆಗಳನ್ನು ನೀಡುವುದನ್ನು ಒಳಗೊಂಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.