13ನೇ ವಯಸ್ಸಲ್ಲಿ ಕ್ರಿಕೆಟ್ ಕಲಿಯಲು ಹೋದಾಗ ವ್ಯಕ್ತಿಯೊಬ್ಬ ನಡೆಸಿದ ಲೈಂಗಿಕ ದೌರ್ಜನ್ಯದ ಕರಾಳ ಘಟನೆ ಹೇಳಿದ್ದಾರೆ ಖ್ಯಾತ ಕಿರುತೆರೆ ನಟ ಸಾನಂದ್ ವರ್ಮಾ.
ಲೈಂಗಿಕ ಕಿರುಕುಳ ಎಂದಾಕ್ಷಣ ಒಂದು ಕ್ಷಣ ಎಲ್ಲರ ಮನದಲ್ಲಿಯೂ ಇದು ಹೆಣ್ಣುಮಕ್ಕಳ ಮೇಲೆ ನಡೆಯುವುದು ಎಂದೇ ಎನಿಸುತ್ತದೆ. ಆದರೆ ಅಸಲಿಗೆ ಅದೆಷ್ಟೋ ಪುರುಷರೂ ಈ ಕಿರುಕುಳಕ್ಕೆ ಒಳಗಾಗಿದ್ದು ಇದೆ. ಆದರೆ ವಿಚಿತ್ರ ಎಂದರೆ, ಈ ಪೈಕಿ ಬಹುತೇಕ ಪುರುಷರು ಅಥವಾ ಗಂಡು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಪುರುಷರಿಂದಲೇ ಎನ್ನುವುದು! ಈ ಪೈಕಿ ಕೆಲವರು ತಮಗಾಗಿರುವ ಈ ಭಯಾನಕ ಘಟನೆಗಳನ್ನು ಹೇಳಿಕೊಂಡರೆ ಎಷ್ಟೋ ಮಂದಿ ಸುಮ್ಮನಿದ್ದುಬಿಡುತ್ತಾರೆ. ಇನ್ನು ಹೆಣ್ಣುಮಕ್ಕಳಂತೂ ನಾಚಿಕೆ, ಮರ್ಯಾದೆಗಳಿಗೆ ಅಂಜಿ ಈ ವಿಷಯವನ್ನು ಬಾಯಿ ಬಿಡುವುದೇ ಇಲ್ಲ.
ಇದೀಗ ಇಂಥದ್ದೇ ಕರಾಳ ಅನುಭವವನ್ನು ತೆರೆದಿಟ್ಟಿದ್ದಾರೆ ಖ್ಯಾತ ಕಿರುತೆರೆ ಕಲಾವಿದ ಸನಂದ್ ವರ್ಮಾ. ಹಿಂದಿಯ ಭಾಭಿ ಜಿ ಘರ್ ಪರ್ ಹೈ ಚಿತ್ರದಲ್ಲಿ ಅನೋಖೆ ಲಾಲ್ ಸಕ್ಸೇನಾ ಪಾತ್ರದಲ್ಲಿ ಮನೆ ಮಾತಾಗಿರುವ ಸಾನಂದ್ ಅವರು, ತಮ್ಮ 13 ನೇ ವಯಸ್ಸಿನಲ್ಲಿ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವ ಕರಾಳ ಘಟನೆಯನ್ನು ವಿವರಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವರ್ಮಾ ಅವರು ತಮ್ಮ ಬಾಲ್ಯದಲ್ಲಿ ನಡೆದ ಘಟನೆಯ ಕುರಿತು ಹೇಳಿದ್ದಾರೆ. ಆಟವಾಡಲು ಹೋದ ಸಮಯದಲ್ಲಿ ಒಬ್ಬ ವ್ಯಕ್ತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಅದು ಭಯಾನಕ ಘಟನೆ ಎಂದಿದ್ದಾರೆ. ಇಂದಿಗೂ ಆ ನೋವು ಅಸಹನೀಯ ಎಂದು ಘಟನೆಯನ್ನು ವಿವರಿಸಿದ್ದಾರೆ.
ಮಹಾನಟಿ ಆಡಿಷನ್ ಹೇಗಿತ್ತು? ನಟ ರಮೇಶ್ರ ನಟನೆಯ ಪಾಠ, ಭುವನ್ ಗೌಡ ಕ್ಯಾಮೆರಾ ನೋಟ ಹೀಗಿತ್ತು...
ಈ ಬಗ್ಗೆ ವಿವರಿಸಿರುವ ಸಾನಂದ್ ಅವರು, ನನಗೆ ಬಾಲ್ಯದಲ್ಲಿ ಕ್ರಿಕೆಟ್ ಹುಚ್ಚು. ನಾನು 13 ವರ್ಷದವನಾಗಿದ್ದಾಗ, ನಾನು ಕ್ರಿಕೆಟಿಗನಾಗಬೇಕೆಂದು ತೀವ್ರವಾಗಿ ಬಯಸಿದ್ದೆ. ನಾನು ಬಿಹಾರದ ಪಟ್ನಾದಲ್ಲಿರುವ ಕ್ರಿಕೆಟ್ ತರಬೇತಿ ಅಕಾಡೆಮಿಗೆ ಹೋಗಿದ್ದೆ. ಅಲ್ಲಿ ಒಬ್ಬ ದೊಡ್ಡ ವ್ಯಕ್ತಿ ನನ್ನನ್ನು ಲೈಂಗಿಕವಾಗಿ ಶೋಷಿಸಲು ಪ್ರಯತ್ನಿಸಿದ. ಆಗ ನನಗೆ ಏನು ಆಗುತ್ತಿದೆ ಎಂದೇ ತಿಳಿಯಲಿಲ್ಲ. ನಾನು ತುಂಬಾ ಹೆದರಿಬಿಟ್ಟೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿಬಂದೆ. ಮತ್ತೆಂದೂ ಅಲ್ಲಿಗೆ ಹೋಗಲಿಲ್ಲ. ನನ್ನ ಕ್ರಿಕೆಟ್ ಕನಸನ್ನೂ ನುಚ್ಚುನೂರು ಮಾಡಿದೆ. ಅಂದಿನಿಂದಲೂ ಕ್ರಿಕೆಟ್ ಎಂದರೇನೇ ನನಗೆ ಭಯವಾಗುತ್ತದೆ. ಅದರಿಂದ ದೂರವೇ ಉಳಿದಿದ್ದೇನೆ ಎಂದು ಟೈಮ್ಸ್ ನೌಗೆ ನೀಡಿರುವ ಸಂದರ್ಶನದಲ್ಲಿ ನಟ ತಿಳಿಸಿದ್ದಾರೆ.
ಇದೇ ವೇಳೆ ಬಣ್ಣದ ಲೋಕದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಕುರಿತೂ ಮಾತನಾಡಿರುವ ನಟ, ಇಂದು ಇಂದಿಗೂ ಅಸ್ತಿತ್ವದಲ್ಲಿ ಇದೆ. ಅದೃಷ್ಟವಶಾತ್, ಈ ರೀತಿಯ ಏನೂ ನನಗೆ ಸಂಭವಿಸಿಲ್ಲ. ಈ ರೀತಿಯ ವರ್ತನೆ ನನ್ನ ಜೊತೆ ಆಗಲಿಲ್ಲ. ಆದರೆ ನನ್ನ ಸಹೊದ್ಯೋಗಿಗಳ ಪೈಕಿ ಕೆಲವರಿಗೆ ಈ ರೀತಿ ಕೆಟ್ಟ ಅನುಭವ ಆಗಿದ್ದಿದೆ. ನನ್ನ ಬಳಿಯೇ ಕೆಲವರು ನೋವಿನ ಕರಾಳ ಘಟನೆಗಳನ್ನು ಹೇಳಿಕೊಂಡದ್ದೂ ಇದೆ ಎಂದಿದ್ದಾರೆ. ಅಂದಹಾಗೆ ಸನಂದ್ ವರ್ಮಾ ಅವರು ಸಿಐಡಿ, ಲಪಟಗಂಜ್ ಮತ್ತು ಗುಪ್ ಚುಪ್ ಮುಂತಾದ ಸೀರಿಯಲ್ಗಳಲ್ಲಿ ಮಿಂಚಿದ್ದಾರೆ. ಇದಲ್ಲದೆ, ವರ್ಮಾ ರೈಡ್, ಮರ್ದಾನಿ, ಬಾಬ್ಲಿ ಬೌನ್ಸರ್, ಚಿಚೋರ್ ಮತ್ತು ಮಿಷನ್ ರಾಣಿಗಂಜ್ ಚಿತ್ರಗಳ ಭಾಗವಾಗಿದ್ದಾರೆ.
ಸೂಪರ್‌ಸ್ಟಾರ್ ಅಜಿತ್ ಕುಮಾರ್ ಶೂಟಿಂಗ್ ವೇಳೆ ಭೀಕರ ಅಪಘಾತ: ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್