ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಬೆಂಗಳೂರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರು (ಡಿ.26): ರಜನಿಕಾಂತ್ ಸಿನಿಮಾಕ್ಕೆ ಸಂಬಂಧಿಸಿದಂತೆ 6.2 ಕೋಟಿ ರೂ. ಸಾಲವನ್ನು ಪಡೆದು ಹಣ ಹಿಂದುರಿಗಿಸದೇ ವಂಚನೆ ಮಾಡಿದ ಆರೋಪದ ಕೇಸ್‌ನಲ್ಲಿ ಲತಾ ರಜನಿಕಾಂತ್ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಲತಾ ರಜನಿಕಾಂತ್ ಅವರು ಬೆಂಗಳೂರು ಎಸಿಎಂಎಂ ಗೆ ಆಗಮಿಸಿದರು. ಈ ಪ್ರಕರಣ ವಿಚಾರಣೆ ಮಾಡಿದ ನ್ಯಾಯಾಲಯದ ಜಾಮೀನು ಮಂಜೂರು ಮಾಡಿದೆ.
ಕೊಚಾಡಿಯನ್ ಚಿತ್ರದ ವಿತರಕರಿಗೆ ನಕಲಿ ದಾಖಲೆ ನೀಡಿದ ಆರೋಪದಲ್ಲಿ ಲತಾ ರಜನಿಕಾಂತ್ ಅವರು ಮೇಲೆ ಆ್ಯಡ್ ಬ್ಯೂರೋ ಏಜನ್ಸಿಯಿಂದ ವಂಚನೆ ಕೇಸ್ ದಾಖಲಿಸಲಾಗಿತ್ತು. ಅಬಿರ್ ಚಂದ್ ನವಾಹರ್ ಎಂಬುವವರು ದೂರು ಸಲ್ಲಿಸಿದ್ದರು. ಲತಾ ರಜನಿಕಾಂತ್ ಅವರು ಕೊಚಾಡಿಯನ್ ಚಿತ್ರಕ್ಕೆ (Kochadaiyaan Movie) 6.2 ಕೋಟಿ ಸಾಲ ಪಡೆದಿದ್ದರು. ಆದರೆ, ಪಡೆದ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ವಂಚನೆ ಆರೋಪ ಮಾಡಲಾಗಿತ್ತು. ಇನ್ನು ಲತಾ ಅವರು ನಕಲಿ ಲೆಟರ್ ಹೆಡ್ ನೀಡಿದ್ದಾರೆಂಬ ಆರೋಪ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದ ಖುದ್ದು ಹಾಜರಾತಿಗೆ ಸೂಚನೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಬೆಂಗಳೂರು ನ್ಯಾಯಾಲಯಕ್ಕೆ ಮುಖಮುಚ್ಚಿಕೊಂಡು ಬಂದು ಖುದ್ದು ಹಾಜರಾಗಿದ್ದ ಲತಾ ರಜನಿಕಾಂತ್ ಅವರಿಗೆ ಜಾಮೀನು ಮಂಜೂರು ಆಗಿದೆ.
ರೈತರ ಹಾಲು ಖರೀದಿ ದರ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ!
ಜ.6ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ: ಇನ್ನು ಜಾಮೀನಿಗಾಗಿ ಇಬ್ಬರ ಶ್ಯೂರಿಟಿ, ಇಬ್ಬರ ವೈಯಕ್ತಿಕ ಬಾಂಡ್, 25 ಸಾವಿರ ರೂ. ನಗದು ಹಾಗೂ 1 ಲಕ್ಷ ರೂ. ಬಾಂಡ್ ನೀಡಿ ಜಾಮೀನು ಪಡೆದುಕೊಂಡು ಹೋಗಲು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಆನಂದ್ ಕರಿಯಮ್ಮನವರ್ ಅವರು ಆದೇಶ ಹೊರಡಿಸಿದ್ದಾರೆ. ಇನ್ನು ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಬಾರದು. ಮುಂದಿನ ದಿನಾಂಕಗಳಲ್ಲಿ ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕು ಎಂದು ಜ.6ಕ್ಕೆ ವಿಚಾರಣೆಯನ್ನು ಮುಂದೂಡಿದರು.
ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ: ಅರ್ಹತೆ, ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ ನೋಡಿ..
ಇನ್ನು ಸಿನಿಮಾ ನಿರ್ಮಾಣದ ಕುರಿತಂತೆ ಹಣ ವಂಚನೆ ಪ್ರಕರಣದಲ್ಲಿ ಹಲಸೂರು ಗೇಟ್ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ, ಲತಾ ರಜನಿಕಾಂತ್ ಅವರು ತಮ್ಮ ಮೇಲಿನ ಆರೋಪದಿಂದ ಮುಕ್ತಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಕಡ್ಡಾಯ ಹಾಜರಾತಿ ಇರಬೇಕು ಎಂದು ನ್ಯಾಯಾಲಯ ನೋಟಿಸ್ ನೀಡಿತ್ತು. ಹೀಗಾಗಿ, ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾದ ಲತಾ ರಜನಿಕಾಂತ್ ಜಾಮೀನು ಪಡೆದಿದ್ದಾರೆ. ಇನ್ನು ಜಾಮೀನು ಮಂಜೂರಾಗುತ್ತಿದ್ದಂತೆಯೇ ಬೆಂಗಳೂರಿನಿಂದ ಚೆನ್ನೈನತ್ತ ಹೊರಟಿದ್ದಾರೆ.