ಬಿಹಾರ (ನ.16): ಬಿಹಾರದ ಲಖಿಸರಾಯ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 333 ರಲ್ಲಿ ಮಂಗಳವಾರ ಬೆಳಗ್ಗೆ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಕನಿಷ್ಠ 5 ಸದಸ್ಯರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ವಾಹನವು ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿ ಒಪಿ ಸಿಂಗ್ ಅವರ ಸಹೋದರಿ ಗೀತಾ ದೇವಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕುಟುಂಬ ಸದಸ್ಯರು ಪಾಟ್ನಾದಿಂದ ಹಿಂತಿರುಗುತ್ತಿದ್ದರು. OP ಸಿಂಗ್ ಅವರು ಸುಶಾಂತ್ ಸಿಂಗ್ ರಜಪೂತ್ ಅವರ ಸೋದರ ಮಾವ ಆಗಿದ್ದು ಅವರು ಜೂನ್ 14, 2020 ರಂದು ಅನುಮಾನಾಸ್ಪದ ರೀತಿಯಲ್ಲಿ ನಿಧನರಾದರು.
ಸುಶಾಂತ್ ಪರ ವಾದಿಸಿದ್ದ ಲಾಯರ್‌ನಿಂದ ಆರ್ಯನ್‌ಗೆ ಸಪೋರ್ಟ್
ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾದ ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್ ಬಳಿ ಸಂಭವಿಸಿದ ಅಪಘಾತವನ್ನು ದೃಢಪಡಿಸಿದ ಲಖಿಸರಾಯ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸುಶೀಲ್ ಕುಮಾರ್, ಟ್ರಕ್ ಮತ್ತು ಸುಮೋ ಎಸ್‌ಯುವಿ ನಡುವೆ ಭಾರಿ ಡಿಕ್ಕಿ ಸಂಭವಿಸಿದ್ದು, ಹತ್ತು ಜನರು ಪಾಟ್ನಾದಿಂದ ಹಿಂತಿರುಗುತ್ತಿದ್ದರು. ಸುಮೋ ಚಾಲಕ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಾಳುಗಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಾಯಗೊಂಡಿರುವ ಬಲ್ಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದ್ದು, ಉಳಿದ ಇಬ್ಬರಾದ ಬಾಲ್ಮಿಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಮೃತರನ್ನು ಲಾಲ್ಜಿತ್ ಸಿಂಗ್ (ಒಪಿ ಸಿಂಗ್ ಅವರ ಸೋದರ ಮಾವ), ಅವರ ಇಬ್ಬರು ಮಕ್ಕಳಾದ ಅಮಿತ್ ಶೇಖರ್ ಅಲಿಯಾಸ್ ನೇಮಾನಿ ಸಿಂಗ್ ಮತ್ತು ರಾಮಚಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಉಳಿದವರನ್ನು ಬೇಬಿದೇವಿ, ಅನಿತಾದೇವಿ ಮತ್ತು ಚಾಲಕ ಪ್ರೀತಂ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಕುಟುಂಬದೊಂದಿಗೆ ಸಂಬಂಧ ಇನ್ನೂ ಖಚಿತವಾಗಿಲ್ಲ.
ಜಮುಯಿ ಜಿಲ್ಲೆಯ ಭಂಡಾರ್ ಗ್ರಾಮದಲ್ಲಿ ಕುಟುಂಬವು ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಅವರ ವಾಹನವು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.