ಶಾರುಖ್ ಪುತ್ರ ಆರ್ಯನ್ ಖಾನ್, ವೆಬ್ ಸೀರಿಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ವೆಬ್ಸೀರಿಸ್ಗೆ ಸಂಬಂಧಿಸಿದಂತೆ ಅಪ್ಪ ಶಾರುಖ್ ಖಾನ್ ನಟನೆ ಹಾಗೂ 120 ಕೋಟಿ ರೂ. ಆಫರ್ ರಿಜೆಕ್ಟ್ ಮಾಡಿದ್ದಾರಂತೆ. ಏನಿದು ವಿಷಯ?
ಡ್ರಗ್ಸ್ ಕೇಸ್ನಲ್ಲಿ ಸಿಲುಕಿ ಈಗ ನಿರಾಳರಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) 'ಸ್ಟಾರ್‌ಡಮ್' ಎಂಬ ಹೆಸರಿನ ವೆಬ್ ಸರಣಿಯೊಂದಿಗೆ ನಿರ್ದೇಶಕರಾಗಿ ಸಿನಿ ರಂಗಕ್ಕೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಶಾರುಖ್ ಖಾನ್ ಇದಾಗಲೇ ಬಾಲಿವುಡ್ ಆಳುತ್ತಿದ್ದು, 57ನೇ ವಯಸ್ಸಿನಲ್ಲಿಯೂ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಅವರನ್ನು ಹಾಕಿಕೊಂಡು ಕೆಲಸ ಮಾಡಲು ಇನ್ನಷ್ಟು ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಪಠಾಣ್ನ ಭರ್ಜರಿ ಯಶಸ್ಸಿನ ಬಳಿಕ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತದೆ ಎಂದೇ ಭಾವಿಸಲಾಗುತ್ತಿರುವ ಜವಾನ್ ಚಿತ್ರದ ಬಳಿಕ ಇನ್ನಷ್ಟು ಆಫರ್ಗಳು ಶಾರುಖ್ಗೆ ಬರುತ್ತಿವೆ. ಸ್ಟಾರ್ ಕಿಡ್ಗಳು ಎಂದರೆ ಅವರ ಅದೃಷ್ಟವೇ ಬೇರೆ. ಅವರಿಗೆ ಅನಾಯಾಸವಾಗಿ ಚಿತ್ರರಂಗದಲ್ಲಿ ಪ್ರವೇಶ ಸಿಕ್ಕಿಬಿಡುತ್ತದೆ. ಆದರೆ ಆರ್ಯನ್ ವಿಷಯದಲ್ಲಿ ಹಾಗಲ್ಲ. ತಂದೆ ಶಾರುಖ್ ಖಾನ್ ಇಷ್ಟು ದೊಡ್ಡ ನಟನಾಗಿದ್ದರೂ ಪುತ್ರ ಆರ್ಯನ್ ಖಾನ್, ನಟನೆಯತ್ತ ಹೋಗದೇ ಬಾಲಿವುಡ್ಗೆ ನಿರ್ದೇಶಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಇದರ ವಿಷಯ ಸಾಕಷ್ಟು ಸುದ್ದಿ ಮಾಡುತ್ತಿರುವ ನಡುವೆಯೇ ಕುತೂಹಲ ಎನ್ನುವ ಅಂಶಗಳು ಬೆಳಕಿಗೆ ಬಂದಿವೆ. ಅದೇನೆಂದರೆ ಈ ವೆಬ್ ಸರಣಿಯಲ್ಲಿ ಶಾರುಖ್ ಖಾನ್ ಅವರು ಚಿತ್ರದಲ್ಲಿ ಅತಿಥಿ ಪಾತ್ರವನ್ನು ಮಾಡಲು ತಯಾರಿದ್ದರೂ ಆರ್ಯನ್ ಇದನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಹೌದು. ಈ ವೆಬ್ ಸೀರಿಸ್ನಲ್ಲಿ (Web Series) ಅಪ್ಪ ಶಾರುಖ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ತಯಾರಿದ್ದರು. ಆದರೆ ಆರ್ಯನ್ ಖಾನ್ ಅದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಶಾರುಖ್ ಖಾನ್ ನಟಿಸಿದರೆ ಅದು ಎಂಥದ್ದೇ ವೆಬ್ಸೀರಿಸ್ ಆಗಿದ್ದರೂ ಸದ್ಯದ ಸ್ಥಿತಿಯಲ್ಲಿ ಸಕತ್ ಹಿಟ್ ಆಗಿಯೇ ಆಗುತ್ತದೆ. ಇಂಥ ಸಂದರ್ಭದಲ್ಲಿಯೂ ಅಪ್ಪ ಶಾರುಖ್ ಖಾನ್ ಅವರನ್ನೇ ಆರ್ಯನ್ ತಿರಸ್ಕರಿಸಿದ್ದಾರೆ. ಇದರ ಹಿಂದೆ ಕಾರಣವೂ ಇದೆ. ಅದೇನೆಂದರೆ, ತಮ್ಮ ವೆಬ್ಸೀರಿಸ್ ಸಕತ್ ಹಿಟ್ ಆದರೆ ಅದು ತಂದೆಯಿಂದಲೇ ಹಿಟ್ ಆಯಿತು ಎನಿಸಿಕೊಳ್ಳುತ್ತದೆಯೇ ವಿನಾ ತಮ್ಮ ಪಾತ್ರ ಗೌಣವಾಗಿ ಬಿಡುತ್ತದೆ ಎನ್ನುವುದು ಆರ್ಯನ್ ಅವರ ಅಭಿಪ್ರಾಯ ಎಂದು ಹೇಳಲಾಗುತ್ತಿದೆ.
ನಾನು ಕೆಟ್ಟವನೋ, ಒಳ್ಳೆಯವನೊ? ಉತ್ತರ ಹೇಳಲು 30 ದಿನ ಗಡುವು ನೀಡಿದ ಶಾರುಖ್ ಖಾನ್!
ಅದೇ ಇನ್ನೊಂದೆಡೆ, ಈ ವೆಬ್ ಸಿರೀಸ್ Stardum ಸ್ಟ್ರೀಮಿಂಗ್ ರೈಟ್ಸ್ಗಾಗಿ ಟಾಪ್ ಒಟಿಟಿ ಫ್ಲಾಟ್ಫಾರ್ಮ್ ಒಂದು ಆರ್ಯನ್ಗೆ ಸುಮಾರು 120 ಕೋಟಿ ಆಫರ್ ಮಾಡಿತ್ತು, ಅದನ್ನು ಕೂಡ ಆರ್ಯನ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಆರ್ಯನ್ ಖಾನ್‌ಗೆ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಿಂದ ರೂ 120 ಕೋಟಿ ಆಫರ್ ಮಾಡಲಾಗಿತ್ತು. ಆದರೆ ಅವರು ಆಫರ್ ಅನ್ನು ತಿರುಗಿಸಿದ್ದಾರೆ. ಖಾನ್ ಕುಟುಂಬದ ಹತ್ತಿರದ ಮೂಲವೊಂದರ ಪ್ರಕಾರ, 'ಸೀಸನ್ 1 ಪೂರ್ಣಗೊಳ್ಳುವ ಮೊದಲೇ ಚಲನಚಿತ್ರ ನಿರ್ಮಾಪಕರು ಸೀಸನ್ 3. 4 ಮತ್ತು 5 ಕ್ಕೆ ಸೈನ್ ಅಪ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭರ್ಜರಿ ಆಫರ್ ನೀಡಲಾಗಿದೆ. ಆದರೆ ಆರ್ಯನ್ ಖಾನ್, ಪೋಸ್ಟ್-ಪ್ರೊಡಕ್ಷನ್ ಎಡಿಟಿಂಗ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿಯುವವರೆಗೂ ಯಾವುದೇ ಖರೀದಿದಾರರಿಗೆ ಮಾರಾಟ ಮಾಡುವುದಿಲ್ಲ ಎನ್ನುತ್ತಿದ್ದಾರೆ.
ಆರ್ಯನ್ ನಟನೆ ಬಿಟ್ಟು ನಿರ್ದೇಶನ ಆಯ್ಕೆ ಮಾಡಿದಾಗಿನಿಂದಲೂ ಮಗನ ಪ್ರತಿ ವೆಬ್ಸಿರೀಸ್ನ ಭಾಗವಾಗಲು ಬಯಸುವುದಾಗಿ ಶಾರುಖ್ ಹೇಳಿದ್ದರು. ಆದರೆ ಕರಿಯರ್ ಆರಂಭದಲ್ಲಿಯೇ ಹೀಗೆ ಮಾಡಲು ಆರ್ಯನ್ ಒಪ್ಪುತ್ತಿಲ್ಲ ಎನ್ನಲಾಗಿದೆ. ಇವೆಲ್ಲವೂ ಮೂಲಗಳು ಹೇಳಿರುವ ವಿಷಯವೇ ಹೊರತು, ಇದನ್ನು ಶಾರುಖ್ ಖಾನ್ ಅಥವಾ ಆರ್ಯನ್ ಖಾನ್ ಸ್ಪಷ್ಟಪಡಿಸಿಲ್ಲ. ಈ ವೆಬ್ ಸಿರೀಸ್ನಲ್ಲಿ 6 ಎಪಿಸೋಡ್ ಇರುತ್ತವೆ ಎಂದಷ್ಟೇ ವರದಿಯಾಘಿದೆ. ಇದನ್ನು ಶಾರುಖ್ ಖಾನ್ ಹಾಗೂ ಗೌರಿ ಖಾನ್ ನಿರ್ಮಿಸುತ್ತಿದ್ದಾರೆ.
ಅಬ್ಬಬ್ಬಾ! ಶಾರುಖ್ ಕಾಫಿಮಗ್ ಇಷ್ಟು ದುಬಾರಿ? ಇದ್ರಲ್ಲಿ ಏನೇನಿದೆ ನೋಡಿ...