'ನನ್ನ ಕಣ್ಣಿಂದ ರಕ್ತ ಬರ್ತಿದೆ..' ಚಾಂದ್‌ ಮೇರಾ ದಿಲ್‌ ಸಿನಿಮಾದಲ್ಲಿ ಅನನ್ಯಾ ಪಾಂಡೆ ಭರತನಾಟ್ಯ ಫುಲ್‌ ಟ್ರೋಲ್‌

Published : May 25, 2026, 10:27 PM IST
ananya panday

ಸಾರಾಂಶ

'ಚಾಂದ್ ಮೇರಾ ದಿಲ್' ಚಿತ್ರದಲ್ಲಿ ನಟಿ ಅನನ್ಯಾ ಪಾಂಡೆ ಪ್ರದರ್ಶಿಸಿದ 'ಭರತನಾಟ್ಯ ಫ್ಯೂಷನ್' ನೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅನೇಕ ನೆಟ್ಟಿಗರು, ಭರತನಾಟ್ಯ ಕಲಾವಿದರು ಮತ್ತು ಗಣ್ಯರು ಇದು ಶಾಸ್ತ್ರೀಯ ಕಲೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ (ಮೇ.25): ಮೇ.22 ರಂದು ಬಿಡುಗಡೆಯಾಗಿರುವ ‘ಚಾಂದ್ ಮೇರಾ ದಿಲ್’ (Chand Mera Dil) ಚಿತ್ರದಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಲಕ್ಷ್‌ ಲಲ್ವಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಪ್ರೇಮಕಥೆಯ ಚಿತ್ರವು ಕಾಲೇಜು ದಿನಗಳಲ್ಲಿ ಪ್ರೀತಿಯಲ್ಲಿ ಬೀಳುವ ಯುವ ದಂಪತಿಗಳ ಸುತ್ತ ಸುತ್ತುತ್ತದೆ. ಆದರೆ ಅನಿರೀಕ್ಷಿತ ಗರ್ಭಧಾರಣೆಯು ಅವರ ಜೀವನವನ್ನು ಹೇಗೆ ತಲೆಕೆಳಗಾಗಿಸುತ್ತದೆ, ತದನಂತರ ಅವರ ನಡುವೆ ಉಂಟಾಗುವ ತಪ್ಪು ತಿಳುವಳಿಕೆಗಳು ಮತ್ತು ಜವಾಬ್ದಾರಿಗಳ ನಡುವೆ ಅವರ ಸಂಬಂಧವು ಹೇಗೆ ಏರುಪೇರಾಗುತ್ತದೆ ಎಂಬುದನ್ನು ಈ ಭಾವನಾತ್ಮಕ ಚಿತ್ರವು ಒಳಗೊಂಡಿದೆ.

ಚಿತ್ರದಲ್ಲಿನ ತೀವ್ರ ಭಾವನಾತ್ಮಕ ಕಥಾಹಂದರವನ್ನು ಅದ್ಭುತವಾಗಿ ನಿಭಾಯಿಸಿರುವ ನಟರ ನಟನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದರೂ, ನಟಿ ಅನನ್ಯಾ ಪಾಂಡೆ ಅವರು ಚಿತ್ರದಲ್ಲಿ ಪ್ರದರ್ಶಿಸಿರುವ ‘ಭರತನಾಟ್ಯ ಫ್ಯೂಷನ್’ (Bharatanatyam Fusion) ಡಾನ್ಸ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಚಿತ್ರದ ಪ್ರದರ್ಶನದಿಂದ ಆಯ್ದುಕೊಳ್ಳಲಾದ ಈ ವಿಡಿಯೋ ತುಣುಕು ಪ್ರಸ್ತುತ ವೈರಲ್ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ. ಸಿನಿಮಾದಲ್ಲಿ ಚಾಂದಿನಿ ಪಾತ್ರ ಮಾಡಿರುವ ಅನನ್ಯಾ, ಕಾಲೇಜಿನ ಓರಿಯಂಟೇಷನ್‌ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ಮಾಡಿದ್ದಾರೆ. ಇದನ್ನು ನೋಡಿ ನಾಯಕ ಆರವ್‌ ಮಂತ್ರಮುಗ್ಧನಾಗುವಂತೆ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಆದರೆ, ನಿಜ ಜೀವನದಲ್ಲಿ ಪ್ರೇಕ್ಷಕರು ಮಾತ್ರ ಆಕೆಯ ಡಾನ್ಸ್‌ ನೋಡಿ ಕೆಂಡಾಮಂಡಲರಾಗಿದ್ದಾರೆ.

ನೆಟ್ಟಿಗರ ಆಕ್ರೋಶದ ಕಾಮೆಂಟ್‌ಗಳ ಮಹಾಪೂರ

ಸಿನಿಮಾದ ಸ್ಕ್ರೀನಿಂಗ್‌ನಿಂದ ಸ್ಕ್ರೀನ್‌ಶಾಟ್ ಒಂದನ್ನು ಹಂಚಿಕೊಂಡಿರುವ ಎಕ್ಸ್ ಯೂಸರ್‌ಒಬ್ಬರು, "ಅನನ್ಯಾ ಪಾಂಡೆ ಅವರು ಭರತನಾಟ್ಯವನ್ನು ಮತ್ತಷ್ಟು ಧ್ವಂಸ ಮಾಡುವ ಮುನ್ನ ಯಾರಾದರೂ ದಯವಿಟ್ಟು ಅವರನ್ನು ತಡೆಯಿರಿ. ಹಿನ್ನೆಲೆಯಲ್ಲಿ ನಟರಾಜನ ಮೂರ್ತಿಯನ್ನು ಇಟ್ಟುಕೊಂಡು ಈ ರೀತಿ ನೃತ್ಯ ಮಾಡುವ ಧೈರ್ಯ ಹೆಂಗೆ ಬಂತೋ..." ಎಂದು ಬೇಸರ ಹೊರಹಾಕಿದ್ದಾರೆ.

ಮತ್ತೊಬ್ಬ ನೆಟ್ಟಿಗ, "ಭರತನಾಟ್ಯವು ಕ್ರಿ ಪೂ.200 ರಲ್ಲಿ ಸ್ಥಾಪನೆಯಾಯಿತು ಮತ್ತು 2026 ರಲ್ಲಿ ಅನನ್ಯಾ ಪಾಂಡೆ ಅವರಿಂದ ಕೊನೆಗೊಂಡಿತು" ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ.

ಇನ್ನೊಬ್ಬ ಯೂಸರ್‌, "ಕೊನೆಯಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದು ಆಕೆಯ ನೃತ್ಯ ಪ್ರದರ್ಶನ ಇಷ್ಟವಾಗಿ ಯೋ ಅಥವಾ ಆ ನೃತ್ಯ ಕೊನೆಗೂ ಮುಗಿಯಿತಲ್ಲ ಎಂಬ ನೆಮ್ಮದಿಯಿಂದಲೋ ಎಂಬುದನ್ನು ನಾನಿನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ" ಎಂದು ಕಾಲೆಳೆದಿದ್ದಾರೆ.

ಭರತನಾಟ್ಯ ಕಲಾವಿದರ ಅಸಮಾಧಾನ

ಪ್ರಖ್ಯಾತ ನೃತ್ಯ ಸಂಯೋಜಕಿ ಅನಿತಾ ಆರ್. ರತ್ನಂ ಅವರು ಈ ಕ್ಲಿಪ್ ವೀಕ್ಷಿಸಿದ ನಂತರ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, "ಈ ವಿಡಿಯೋ ನೋಡಿದರೆ ಶಾಸ್ತ್ರೀಯ ಕಲೆಯು ಒಂದು ಭೀಕರ ಅಪಾರ್ಥಕ್ಕೆ ಒಳಗಾಗಿ ಒತ್ತೆಯಾಳಾಗಿ ಸಿಲುಕಿದಂತೆ ಭಾಸವಾಗುತ್ತಿದೆ. ಆಕೆಯ ಕೈಗಳ ಅಸಹಜ ಚಲನೆ ಮತ್ತು ಯದ್ವಾತದ್ವಾ ಕ್ಯಾಮೆರಾ ಮೂವ್‌ಮೆಂಟ್‌ಗಳ ನಡುವೆ, ಶಾಸ್ತ್ರೀಯ ನೃತ್ಯವು ಸದ್ದಿಲ್ಲದೆ ತನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಥಿಯೇಟರ್‌ನಿಂದ ಹೊರಗೆ ಓಡಿಹೋದಂತಿದೆ" ಎಂದು ಕಟುವಾಗಿ ಟೀಕಿಸಿದ್ದಾರೆ.

"ಭರತನಾಟ್ಯವು ಕಟ್ಟುನಿಟ್ಟಾದ ತಾಂತ್ರಿಕತೆ, ನಿಯಂತ್ರಣ, ಸಂಪ್ರದಾಯ, ಜ್ಯಾಮಿತಿ, ಸಂಗೀತ ಪ್ರಜ್ಞೆ ಮತ್ತು ಭಾವನಾತ್ಮಕ ಆಳದ ಮೇಲೆ ನಿರ್ಮಾಣವಾಗಿದೆ. ಆದರೆ ಈ ವಿಡಿಯೋ ಕ್ಲಿಪ್‌ನಲ್ಲಿ ಸಣ್ಣ ಭೂಕಂಪದ ಸಮಯದಲ್ಲಿ ಚಿತ್ರೀಕರಿಸಲಾದ ವೆಡ್ಡಿಂಗ್ ಸಂಗೀತದಂತೆ ಭರತನಾಟ್ಯವನ್ನು ಪರಿಗಣಿಸಲಾಗಿದೆ. ಈ ನೃತ್ಯ ಕೆಟ್ಟದಾಗಿದೆ ಎಂಬುದು ದುರಂತವಲ್ಲ, ಕೆಲವು ಬಾರಿ ಕೆಟ್ಟದ್ದೂ ಆಕರ್ಷಕವಾಗಿರಬಹುದು. ಆದರೆ, ಶತಮಾನಗಳ ಅತ್ಯಂತ ಅತ್ಯಾಧುನಿಕತೆ, ತರಬೇತಿ, ಸಮರ್ಪಣೆ ಮತ್ತು ಭಕ್ತಿಯನ್ನು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಧ್ವಂಸಗೊಳಿಸಲಾಗಿದೆಯಲ್ಲ, ಅದು ನಿಜವಾದ ದುರಂತ' ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತಗಾರ್ತಿ ಕೃತಿಕಾ ಶಿವಸ್ವಾಮಿ ಅವರು ಪ್ರತಿಕ್ರಿಯಿಸಿ, "ಅನನ್ಯಾ ಪಾಂಡೆ ಅವರ ಈ ‘ಭರತನಾಟ್ಯ’ವು ಚಿತ್ರರಂಗಕ್ಕೆ ಶಾಸ್ತ್ರೀಯ ಕಲೆಗಳ ಬಗ್ಗೆ ಇರುವ ಅಸೂಕ್ಷ್ಮತೆಯನ್ನು ಮತ್ತು ಅವರು ಅದನ್ನು ಹೇಗೆ ಅಪಹಾಸ್ಯ ಮಾಡುತ್ತಾರೆ ಎಂಬುದನ್ನು ತೋರಿಸುತ್ತದೆ. ದುರದೃಷ್ಟವಶಾತ್ ಭಾರತದಲ್ಲಿ ಶಾಸ್ತ್ರೀಯ ಕಲೆಗಳನ್ನು ಅಪಹಾಸ್ಯ ಮಾಡುವವರ ವಿರುದ್ಧ ಮೊಕದ್ದಮೆ ಹೂಡಲು ಯಾವುದೇ ಕಠಿಣ ಕಾನೂನು ವ್ಯವಸ್ಥೆ ಇಲ್ಲ. ಇದು ಅತ್ಯಂತ ಸುಲಭವಾಗಿ ಮುಚ್ಚಿಹೋಗುವುದರಿಂದ ಯಾರು ಬೇಕಾದರೂ ಇಂತಹ ಕಸವನ್ನು ಸೃಷ್ಟಿಸಬಹುದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಹಾಗೂ ವೈದ್ಯೆ ಡಾ. ಶಮಾ ಮೊಹಮ್ಮದ್ ಅವರು ತಮ್ಮ ಆಕ್ರೋಶ ಹೊರಹಾಕಿ, "ಅನನ್ಯಾ ಪಾಂಡೆ ನನ್ನ ನೆಚ್ಚಿನ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಕೊಂದಿದ್ದಾರೆ! ನಾನು 7 ರಿಂದ 13 ವರ್ಷದವರೆಗೆ ಇದನ್ನು ಕಲಿತು ಕುವೈತ್‌ನಲ್ಲಿ ನನ್ನ ‘ಅರಂಗೇತ್ರಂ’ ಕೂಡ ಮಾಡಿದ್ದೇನೆ. ಶಾಸ್ತ್ರೀಯ ನೃತ್ಯವನ್ನು ದೀರ್ಘಕಾಲದವರೆಗೆ ಅಧ್ಯಯನ ಮಾಡಬೇಕೇ ಹೊರತು ಮಿಸ್ ಪಾಂಡೆ ಅವರಿಗಾಗಿ ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ! ದಯವಿಟ್ಟು ಭರತನಾಟ್ಯದಂತಹ ಸುಂದರ ಕಲೆಗೆ ಅವಮಾನ ಮಾಡಬೇಡಿ" ಎಂದು ಮನವಿ ಮಾಡಿದ್ದಾರೆ. ಮತ್ತೊಬ್ಬ ಯೂಸರ್‌, "ಚಿತ್ರದ ನಿರ್ಮಾಪಕ ಕರಣ್ ಜೋಹರ್ ಕೈಗಳಿಗೆ ರಕ್ತ ಅಂಟಿದೆ, ಆಕೆಯ ನೃತ್ಯ ನೋಡುತ್ತಿರುವ ನನ್ನ ಕಣ್ಣುಗಳಿಂದ ಆ ರಕ್ತ ಹರಿಯುತ್ತಿದೆ" ಎಂದು ಆಘಾತ ವ್ಯಕ್ತಪಡಿಸಿದ್ದಾರೆ.

ಸಂದರ್ಭದಿಂದ ಹೊರಗುಳಿದ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಈ ವಿಡಿಯೋ ಕೇವಲ ಕೆಲವು ಸೆಕೆಂಡುಗಳ ಕೊನೆಯ ತುಣುಕಾಗಿದೆ ಎಂಬುದು ಇಲ್ಲಿ ಗಮನಾರ್ಹ. ಸಿನಿಮಾದಲ್ಲಿ ಪ್ರಿಯಾ ಮಾಧುರಿ ಅವರ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದು, ಅದಕ್ಕೆ ಆಧುನಿಕ ಟ್ಯೂನ್‌ಗಳನ್ನು (Modern Tunes) ಸಂಯೋಜಿಸಲಾಗಿದೆ. ಇದು ಕೇವಲ ಒಂದು ‘ಫ್ಯೂಷನ್’ ನೃತ್ಯವಾಗಿದೆಯೇ ಹೊರತು ಅಪ್ಪಟ ಸಾಂಪ್ರದಾಯಿಕ ಭರತನಾಟ್ಯವಲ್ಲ. ಆದರೆ ಇಡೀ ದೃಶ್ಯದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳದ ನೆಟ್ಟಿಗರು ಕೇವಲ ಚಿಕ್ಕ ವಿಡಿಯೋ ತುಣುಕನ್ನು ಇಟ್ಟುಕೊಂಡು ನಟಿಯ ವಿರುದ್ಧ ನಿರಂತರವಾಗಿ ಕಠಿಣ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಬ್ಬಬ್ಬಾ ಲಾಟ್ರಿ ಹೊಡೆದ್ರು ರಶ್ಮಿಕಾ: ನ್ಯಾಷನಲ್ ಕ್ರಶ್ ಬಗ್ಗೆ ಹೀಗಾ ಹೇಳೋದು ಬ್ಲ್ಯಾಕ್ ಪ್ಯಾಂಥರ್ ಸ್ಟಾರ್?
Troll: ರಾಮ್ ಚರಣ್ ಎಡವಟ್ಟಿಗೆ 'ಯಶ್' ಎಳೆದುತಂದಿದ್ದು ಯಾಕೆ? 'RRR' ಸ್ಟಾರ್ ನಟನೀಗ ಫುಲ್ ರೋಸ್ಟ್!