
ಬಾಕ್ಸ್ ಆಫೀಸ್ ಸುನಾಮಿ: 3000 ಕೋಟಿ ಲೂಟಿ ಮಾಡಿದ 'ಧುರಂಧರ್'; ಬಾಹುಬಲಿ, ಕೆಜಿಎಫ್ ದಾಖಲೆಗಳೆಲ್ಲ ಧೂಳೀಪಟ!
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣ. ಬಾಕ್ಸ್ ಆಫೀಸ್‌ನಲ್ಲಿ ಹೊಸ ಸುನಾಮಿ ಎದ್ದಿದೆ, ಆ ಸುನಾಮಿಯ ಹೆಸರು 'ಧುರಂಧರ್'. ನಿರ್ದೇಶಕ ಆದಿತ್ಯ ಧರ್ ಅವರ ಕಲ್ಪನೆಯಲ್ಲಿ ಮೂಡಿಬಂದ ಈ ಸಿನಿಮಾ ಫ್ರಾಂಚೈಸಿ ಈಗ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಕೇವಲ ಒಂದು ಸಿನಿಮಾ ಅಲ್ಲ, ಒಂದು ಇಡೀ ಫ್ರಾಂಚೈಸಿಯಾಗಿ 'ಧುರಂಧರ್' ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಅಳಿಸಿ ಹಾಕಿ, ಬರೋಬ್ಬರಿ 3000 ಕೋಟಿ ರೂಪಾಯಿಗಳ ಕ್ಲಬ್‌ಗೆ ಲಗ್ಗೆ ಇಟ್ಟಿದೆ!
ದಾಖಲೆಗಳ ರಾಜ 'ಧುರಂಧರ್':
ರಣವೀರ್ ಸಿಂಗ್ ಅವರ ಅಬ್ಬರದ ನಟನೆ ಮತ್ತು ಆದಿತ್ಯ ಧರ್ ಅವರ ಅದ್ಭುತ ಮೇಕಿಂಗ್‌ನಿಂದಾಗಿ 'ಧುರಂಧರ್' ಮತ್ತು 'ಧುರಂಧರ್: ದಿ ರಿವೆಂಜ್' ಚಿತ್ರಗಳು ಒಟ್ಟಾಗಿ ದೇಶದ ಅತಿ ಹೆಚ್ಚು ಗಳಿಕೆಯ ಫ್ರಾಂಚೈಸಿಯಾಗಿ ಹೊರಹೊಮ್ಮಿವೆ. ಮೊದಲು ಭಾಗ ಬಿಡುಗಡೆಯಾದಾಗ ಇದು ಯಶಸ್ವಿಯಾಗುತ್ತದೆಯೇ ಎಂದು ಹಲವರು ಮೂಗು ಮುರಿದಿದ್ದರು. ಆದರೆ, ಜಗತ್ತಿನಾದ್ಯಂತ 1307 ಕೋಟಿ ಕಲೆಕ್ಷನ್ ಮಾಡುವ ಮೂಲಕ ರಣವೀರ್ ಸಿಂಗ್ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದರೂ ಈ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ.
ಇಲ್ಲಿಯವರೆಗೆ ಭಾರತೀಯ ಸಿನಿಮಾದ ಗತ್ತು ಎಂದರೆ ಅದು 'ಬಾಹುಬಲಿ', 'ಕೆಜಿಎಫ್' ಅಥವಾ 'ಪುಷ್ಪ' ಎನ್ನಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ 2438 ಕೋಟಿ ಗಳಿಸಿತ್ತು, ಅಲ್ಲು ಅರ್ಜುನ್ ಅವರ 'ಪುಷ್ಪ' ಸರಣಿ 2221 ಕೋಟಿ ಬಾಚಿತ್ತು. ನಮ್ಮ ಹೆಮ್ಮೆಯ ಯಶ್ ಅಭಿನಯದ 'ಕೆಜಿಎಫ್' ಸರಣಿ 1453 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಆದರೆ ಈ ಎಲ್ಲಾ ದೈತ್ಯ ದಾಖಲೆಗಳನ್ನು 'ಧುರಂಧರ್' ಈಗ ಹಗುರವಾಗಿ ದಾಟಿದೆ. 3019 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಭಾರತದ ನಂಬರ್ 1 ಫ್ರಾಂಚೈಸಿ ಎಂಬ ಪಟ್ಟವನ್ನು ಅಲಂಕರಿಸಿದೆ.
ಮಾರ್ಚ್ 19 ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ಎದುರಾಳಿಗಳೇ ಇರಲಿಲ್ಲ. ರಾಕಿ ಭಾಯ್ ಯಶ್ ಅವರ 'ಟಾಕ್ಸಿಕ್' ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳು ಪೋಸ್ಟ್‌ಪೋನ್ ಆಗಿದ್ದು ಈ ಚಿತ್ರಕ್ಕೆ ವರದಾನವಾಯಿತು. ಸೌತ್ ಇಂಡಿಯನ್ ಭಾಷೆಗಳಲ್ಲಿಯೂ ಅದ್ದೂರಿಯಾಗಿ ಬಿಡುಗಡೆಯಾದ ಈ ಚಿತ್ರ ಎರಡನೇ ಭಾಗದಲ್ಲೇ 1712 ಕೋಟಿ ಲೂಟಿ ಮಾಡಿದೆ. ವಿಶೇಷವೆಂದರೆ, ಭಾರತದ ನೆಲದಲ್ಲೇ 1000 ಕೋಟಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಇತಿಹಾಸವನ್ನೂ ಇದು ನಿರ್ಮಿಸಿದೆ.
ತಾರಾಗಣದ ಬಲ:
ಬರೀ ರಣವೀರ್ ಸಿಂಗ್ ಮಾತ್ರವಲ್ಲದೆ, ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್ ಮಾಧವನ್ ಅವರಂತಹ ದಿಗ್ಗಜ ನಟರ ದಂಡೇ ಇದೆ. ಬಾಲನಟಿ ಸಾರಾ ಅರ್ಜುನ್ ಅವರ ಅಭಿನಯವೂ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಒಟ್ಟಿನಲ್ಲಿ, ಆದಿತ್ಯ ಧರ್ ಸೃಷ್ಟಿಸಿದ ಈ ಮಾಯಾಲೋಕಕ್ಕೆ ಈಗ ಇಡೀ ವಿಶ್ವವೇ ಮಾರುಹೋಗಿದೆ. 3000 ಕೋಟಿಯ ಈ ಹೊಸ ಮೈಲಿಗಲ್ಲು ಭಾರತೀಯ ಚಿತ್ರರಂಗದ ಗತ್ತನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.