
ಬೆಂಗಳೂರು (ಮಾ. 22): ಭಾರತೀಯ ಸೈನಿಕರಿಗೆ ತಮ್ಮ ಒಡೆತನದ 175 ಎಕರೆ ಜಮೀನು ನೀಡುತ್ತಿರುವುದಾಗಿ ಬಹುಭಾಷಾ ನಟ ಸುಮನ್ ತಿಳಿಸಿದ್ದಾರೆ. ದೇಶ ಕಾಯುವ ಯೋಧರ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
ಮೋದಿ ಭೀಷ್ಮ ಪಿತಾಮಹಾ ಇದ್ದಂಗೆ: ಚೌಕಿದಾರನಾಗಿರುವ ನಟನಿಂದ ರಾಹುಲ್ ಗೆ ತಪರಾಕಿ!
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದಾಗ ‘ಸದ್ಗುಣ ಸಂಪನ್ನ ಮಾಧವ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸುಮನ್, ನಾನು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ದೇಶಕ್ಕಾಗಿ ಏನಾದರೂ ಸೇವೆ ಮಾಡಬೇಕು ಎಂಬುದು ನನ್ನ ಕನಸಾಗಿತ್ತು.
ಹೀಗಾಗಿ ಹೈದರಾಬಾದ್‌ಗಿಂತ ಸುಮಾರು 30 ಕಿ.ಮೀ. ದೂರದಲ್ಲಿರುವ ನನ್ನ ಒಡೆತನದ 175 ಎಕರೆ ಜಮೀನನ್ನು ಭಾರತೀಯ ಸೈನಿಕರಿಗೆ ನೀಡಲಿದ್ದೇನೆ. ಇದೇ ಜಾಗದಲ್ಲಿ ನಾನು ಸ್ಟುಡಿಯೋ ಕಟ್ಟುವ ಯೋಚನೆ ಇತ್ತು. ಆದರೆ, ಅದಕ್ಕಿಂತ ಸೈನಿಕರಿಗೆ ಆ ಜಮೀನು ನೀಡಬೇಕು ಎಂದು ಯೋಚಿಸಿದೆ. ಅದು ಈಗ ಕಾರ್ಯಗತವಾಗುತ್ತಿದೆ ಎಂದರು.
ಮೋದಿ ಮನವಿಗೆ ಒಂದು ವಾರ ಬಳಿಕ ಸಲ್ಮಾನ್ ಖಾನ್ ಉತ್ತರ!
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರಿಗೆ ಜಮೀನು ನೀಡುವ ಬಗ್ಗೆ ಯೋಚಿಸಿದ್ದೆ. ಆದರೆ, ಈ ಜಾಗ ಆಗ ಕೋರ್ಟ್‌ನಲ್ಲಿತ್ತು. ಈಗ ಯಾವುದೇ ಕಾನೂನು ಸಮಸ್ಯೆ ಇಲ್ಲ. ನಾನು ನೀಡಲಿರುವ ಜಮೀನು ಹೈದರಾಬಾದ್‌ನಿಂದ 30 ಕಿ.ಮೀ. ದೂರದಲ್ಲಿದೆ. ಸೈನಿಕರೇ ನಮ್ಮ ನಿಜವಾದ ಹೀರೋಗಳು. ಸಾವಿಗೂ ಅಂಜದೆ ನಮ್ಮ ರಕ್ಷಣೆಗೆ ನಿಂತಿದ್ದಾರೆ. ಅಂಥವರಿಗೆ ನಾವು ನೆರವಾಗಿ ನಿಲ್ಲಬೇಕು. ಇದರಿಂದ ಸೈನಿಕರ ಕುಟುಂಬಗಳಿಗೆ ಧೈರ್ಯ ತುಂಬಿದಂತಾಗುತ್ತದೆ ಎಂದು ನಟ ಸುಮನ್ ಅಭಿಪ್ರಾಯಪಟ್ಟರು. ಆದರೆ, ಹೇಗೆ, ಯಾವಾಗ ಮತ್ತು ಯಾರ ಮೂಲಕ ಸೈನಿಕರಿಗೆ ಈ ಜಮೀನು ನೀಡುತ್ತಾರೆಂಬುದರ ಬಗ್ಗೆ ಮಾಹಿತಿ ನೀಡಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.