
ಮುಂಬೈ: 2000ನೇ ಇಸವಿಯಲ್ಲಿ ತೆರೆಕಂಡ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅಭಿನಯದ ಸೂಪರ್ ಹಿಟ್ ಚಿತ್ರ ‘ಜೋಶ್’ ನಲ್ಲಿ ಖಳನಾಯಕನಾಗಿ ಮಿಂಚಿದ್ದ ನಟ ಶರದ್ ಕಪೂರ್, ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ಅತ್ಯಂತ ಕಠಿಣ ಹಂತವನ್ನು ದಾಟಿಕೊಂಡು ಇದೀಗ ಮತ್ತೆ ಬೆಳ್ಳಿತೆರೆಗೆ ಮರಳಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಮುಂಬೈನ ತಮ್ಮ ನಿವಾಸದಲ್ಲಿ ಅವರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಕಳವಳ ಮೂಡಿಸಿದ್ದವು. ಇದೀಗ ಬಾಲಿವುಡ್ನ ದಿಗ್ಗಜರ ಬೆಂಬಲದೊಂದಿಗೆ ಶರದ್ ಕಪೂರ್ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶರದ್ ಕಪೂರ್, ಖ್ಯಾತ ನಿರ್ದೇಶಕ ಅಹ್ಮದ್ ಖಾನ್ ಅವರ ಮುಂಬರುವ ಚಿತ್ರದ ಮೂಲಕ ತಾವು ಮತ್ತೆ ನಟನೆಗೆ ಮರಳುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಈ ಚಿತ್ರದಲ್ಲಿಯೂ ಅವರು ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಇನ್ನೂ ಎರಡು-ಮೂರು ಹೊಸ ಪ್ರಾಜೆಕ್ಟ್ಗಳಿಗೆ ಸಹಿ ಹಾಕಿರುವುದಾಗಿ ತಿಳಿಸಿರುವ ಅವರು, ಸದ್ಯ ಅವು ಆರಂಭಿಕ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.
ಚಿತ್ರರಂಗದಲ್ಲಿ ನನಗೆ ಅವಕಾಶಗಳು ಸಿಗದೆ ದೂರ ಉಳಿದಿರಲಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ನನ್ನಲ್ಲಿ ನಟನೆಯ ಆಸಕ್ತಿ ಮತ್ತು ಉತ್ಸಾಹ ಕಡಿಮೆಯಾಗಿತ್ತು. ನಾನು ಖಿನ್ನತೆಗೆ ಒಳಗಾಗಿದ್ದೆ ಎಂಬ ವದಂತಿಗಳು ಸುಳ್ಳು. ಈಗ ನನ್ನ ಜೀವನದ ಈ ಘಟ್ಟವನ್ನು ಹೊಸ ತಿರುವು ಎಂದು ಭಾವಿಸಿ ಮತ್ತೆ ಕೆಲಸಕ್ಕೆ ಮರಳುತ್ತಿದ್ದೇನೆ ಎಂದು ಶರದ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತಮ್ಮ ಹೆಸರಿನಲ್ಲಿ ಯಾರೂ ದೇಣಿಗೆ ಸಂಗ್ರಹಿಸಬಾರದು, ತಮಗೆ ಬೇಕಿರುವುದು ಕೆಲಸವೇ ಹೊರತು ಅನುಕಂಪವಲ್ಲ ಎಂದು ಅವರು ಮನವಿ ಮಾಡಿದ್ದಾರೆ.
ಮುಂಬೈ ನಿವಾಸದಲ್ಲಿ ಶರದ್ ಕಪೂರ್ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಮತ್ತು ತಮ್ಮ ನಾಲ್ಕು ಸಾಕು ನಾಯಿಗಳ ಜೊತೆಗಿದ್ದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಬಾಲಿವುಡ್ ತಾರೆಯರು ಅವರ ನೆರವಿಗೆ ಧಾವಿಸಿದ್ದಾರೆ:
ಶಾರುಖ್ ಖಾನ್ ಭರವಸೆ: ‘ಜೋಶ್’ ಚಿತ್ರದ ಸಹನಟ ಶಾರುಖ್ ಖಾನ್ ಸ್ವತಃ ಶರದ್ ಅವರಿಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಿನಗೆ ಏನು ಸರಿ ಅನಿಸುತ್ತದೋ ಅದನ್ನು ಮಾಡು, ನಿನಗೆ ಸಹಾಯ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಶಾರುಖ್ ಭರವಸೆ ನೀಡಿದ್ದಾಗಿ ಶರದ್ ಸ್ಮರಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಅವರನ್ನೂ ಭೇಟಿಯಾಗುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಸೋನು ಸೂದ್ ಸಹಾಯಹಸ್ತ: ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಕೂಡ ಕರೆ ಮಾಡಿ ಯಾವುದೇ ಅಗತ್ಯವಿದ್ದರೂ ಸಂಪರ್ಕಿಸುವಂತೆ ತಿಳಿಸಿದ್ದು, ನಟನಿಗೆ ಆರ್ಥಿಕ ನೆರವು ನೀಡಿರುವುದಾಗಿ ಅಖಿಲ ಭಾರತೀಯ ಸಿನಿಮಾ ಕಾರ್ಮಿಕರ ಸಂಘ ತಿಳಿಸಿದೆ. ಇನ್ನೊಂದೆಡೆ, ನಟ ಸೋನು ಸೂದ್ ಅವರು ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದಲ್ಲದೆ, ಕರ್ಜತ್ನಲ್ಲಿ ಗಾಯಗೊಂಡಿದ್ದ ಶರದ್ ಅವರಿಗೆ ತಜ್ಞ ವೈದ್ಯರು ಮತ್ತು ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ.
ಈ ನಡುವೆ, ಶರದ್ ಕಪೂರ್ ಅವರ ಸ್ನೇಹಿತೆಯಾಗಿರುವ ಹೇಮಾ ಚೌಧರಿ ಎಂಬುವವರು ಪಾಡ್ಕ್ಯಾಸ್ಟ್ ಒಂದರಲ್ಲಿ ಆಘಾತಕಾರಿ ಆರೋಪ ಮಾಡಿದ್ದರು. "ಶರದ್ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಅವರ ಕುಟುಂಬದ ಮೂರ್ನಾಲ್ಕು ಜನರು ಅವರ ಸಾವಿಗಾಗಿ ಕಾಯುತ್ತಿದ್ದರು ಮತ್ತು ಅವರ ಸಹೋದರ ಸರಿಯಾಗಿ ಸ್ಪಂದಿಸಲಿಲ್ಲ" ಎಂದು ಅವರು ದೂರಿದ್ದರು. ಇದಕ್ಕೂ ಮುನ್ನ 2 ವರ್ಷದಿಂದ ಹಾಸಿಗೆ ಹಿಡಿದಿದ್ದ ಅವನನ್ನು ನಾನು ಬದುಕಿಸಿದ್ದೆ ಎಂದು ಹೇಳಿದ್ದರು. ಆ ಬಳಿಕವೇ ನಟನಿಗೆ ಇಂತಹ ದುಸ್ಥಿತಿ ಬಂದಿದೆ ಎಂಬುದು ಪ್ರಂಪಂಚಕ್ಕೆ ಗೊತ್ತಾಗಿತ್ತು. ಆದರೆ, ಈ ಆರೋಪಗಳನ್ನು ಶರದ್ ಕಪೂರ್ ನಿರಾಕರಿಸಿದ್ದಾರೆ. ತಮ್ಮ ಸಹೋದರರು ಮತ್ತು ಕುಟುಂಬ ಸದಸ್ಯರಿಗೆ ತಮ್ಮ ಪರಿಸ್ಥಿತಿಯ ಅರಿವಿತ್ತು ಹಾಗೂ ಅವರೆಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳುವ ಮೂಲಕ ಕುಟುಂಬದ ಮೇಲಿನ ಆರೋಪಗಳಿಗೆ ತೆರೆ ಎಳೆದಿದ್ದಾರೆ.
1990 ಮತ್ತು 2000ರ ದಶಕದಲ್ಲಿ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಶರದ್ ಕಪೂರ್, ‘ಜೋಶ್’ ಚಿತ್ರದ ಪ್ರಕಾಶ್ ಪಾತ್ರದ ಮೂಲಕ ಮನೆಮಾತಾಗಿದ್ದರು. ‘ದಸ್ತಕ್’, ‘ತಮನ್ನಾ’, ‘ಖೌಫ್’, ‘ಲಕ್ಷ್ಯ’, ‘ಎಲ್ಒಸಿ ಕಾರ್ಗಿಲ್’, ‘ವಾಂಟೆಡ್’ ಮತ್ತು ‘ಜೈ ಹೋ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಅವರು, 2019ರಲ್ಲಿ ಬಿಡುಗಡೆಯಾದ ‘ಕ್ಯಾಬರೆ’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.