
ತ್ರಿಶಾ ಬಗ್ಗೆ ಕಾಮೆಂಟ್ ಮಾಡಿದ್ದ ಪಾರ್ಥಿಬನ್ ಈಗ ವಿಜಯ್ ಮುಂದೆ ಪ್ರತ್ಯಕ್ಷ! 'ದಳಪತಿ'ಗೆ ಸಿಕ್ಕ ಆ 'ರಾಜ' ಉಡುಗೊರೆಯ ಹಿಂದಿರೋ ಮರ್ಮವೇನು?
ದಳಪತಿ ವಿಜಯ್ ಸಿನಿಮಾ ರಿಲೀಸ್ ಆಗಲಿ ಅಥವಾ ಬಿಡಲಿ, ಅವರ ಸುತ್ತಲ ಸುದ್ದಿಗಳು ಮಾತ್ರ ಯಾವತ್ತೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ 'ಹಾಟ್ ಟಾಪಿಕ್'. ಇತ್ತೀಚೆಗೆ ತ್ರಿಶಾ ಕೃಷ್ಣನ್ (Trisha Krishnan) ಜೊತೆ ಅವರು ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿತ್ತು. ಒಂದೇ ಕಾರಿನಲ್ಲಿ ಬಂದು, ಮ್ಯಾಚಿಂಗ್ ಬಟ್ಟೆ ತೊಟ್ಟು ಕ್ಯಾಮರಾಗಳಿಗೆ ಪೋಸ್ ನೀಡಿದ್ದ ಈ ಜೋಡಿಯ ಬಗ್ಗೆ ತಮಿಳು ಚಿತ್ರರಂಗದಲ್ಲಿ ಬಗೆಬಗೆಯ ಚರ್ಚೆಗಳು ಶುರುವಾಗಿದ್ದವು. ಇದರ ಬೆನ್ನಲ್ಲೇ 'ಪೊನ್ನಿಯಿನ್ ಸೆಲ್ವನ್' ಖ್ಯಾತಿಯ ನಟ-ನಿರ್ದೇಶಕ ಆರ್. ಪಾರ್ಥಿಬನ್ ಅವರು ತ್ರಿಶಾ ಬಗ್ಗೆ ಮಾಡಿದ ಒಂದು ಕಾಮೆಂಟ್ ದೊಡ್ಡ ವಿವಾದಕ್ಕೆ ಕಿಡಿ ಹಚ್ಚಿತ್ತು.
ಕಾರ್ಯಕ್ರಮವೊಂದರಲ್ಲಿ ತ್ರಿಶಾ ಮತ್ತು ವಿಜಯ್ (Thalapathy Vijay) ಜೊತೆಯಾಗಿ ಕಾಣಿಸಿಕೊಂಡಿದ್ದ ಫೋಟೋಗೆ ಪ್ರತಿಕ್ರಿಯಿಸಿದ್ದ ಪಾರ್ಥಿಬನ್, ತ್ರಿಶಾ ಅವರ 'ಪೊನ್ನಿಯಿನ್ ಸೆಲ್ವನ್' ಪಾತ್ರವನ್ನು ಎಳೆದು ತಂದಿದ್ದರು. "ಈ ಕುಂದವೈ (ತ್ರಿಶಾ ಪಾತ್ರ) ಕೆಲವು ದಿನಗಳ ಕಾಲ ಮನೆಯಲ್ಲೇ ಇರಲಿ, ಅದು ಒಳ್ಳೆಯದು. ಅವಳನ್ನು ಹೊರಗೆ ಬರಲು ಬಿಡಬೇಡಿ" ಎಂದು ಲೇವಡಿ ಮಾಡಿದ್ದರು. ಈ ಹೇಳಿಕೆ ತ್ರಿಶಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ತ್ರಿಶಾ ಕೂಡ ಸುಮ್ಮನಿರಲಿಲ್ಲ; "ಮೈಕ್ ಸಿಕ್ಕಿದ ತಕ್ಷಣ ಕಾಮೆಂಟ್ ಮಾಡುವುದು ಬುದ್ಧಿವಂತಿಕೆಯಲ್ಲ, ಅದು ಮೂರ್ಖತನವನ್ನು ಎತ್ತಿ ತೋರಿಸುತ್ತದೆ" ಎಂದು ಖಾರವಾಗಿಯೇ ಪಾರ್ಥಿಬನ್ ಅವರಿಗೆ ತಿರುಗೇಟು ನೀಡಿದ್ದರು.
ಈಗ ದಳಪತಿ ಮುಂದೆ ಶರಣಾದರೇ ಪಾರ್ಥಿಬನ್?
ಈ ಜಗಳ ತಣ್ಣಗಾಗುವ ಮುನ್ನವೇ ಈಗ ಪಾರ್ಥಿಬನ್ ನೇರವಾಗಿ ದಳಪತಿ ವಿಜಯ್ ಅವರನ್ನೇ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ! ಅಷ್ಟೇ ಅಲ್ಲ, ವಿಜಯ್ ಅವರಿಗೆ ಒಂದು ಅದ್ಭುತವಾದ 'ಕಿಂಗ್ ಸೈಜ್' ಗಿಫ್ಟ್ ನೀಡಿದ್ದಾರೆ. ಅದು ವಿಜಯ್ ಅವರನ್ನು ಒಬ್ಬ ಪರಾಕ್ರಮಿ ರಾಜನಂತೆ ಚಿತ್ರಿಸಿರುವ ದೊಡ್ಡ ವರ್ಣಚಿತ್ರ. ಸಿಂಹಾಸನದ ಮೇಲೆ ವಿಜಯ್ ಗಂಭೀರವಾಗಿ ಕುಳಿತಿರುವ ಈ ಪೇಂಟಿಂಗ್ ಈಗ ಸಿನಿವಲಯದಲ್ಲಿ ಸಂಚಲನ ಮೂಡಿಸಿದೆ. ಪೇಂಟಿಂಗ್ ಜೊತೆಗೆ ಪಾರ್ಥಿಬನ್ ಒಂದು ವಿಶೇಷವಾದ ಪತ್ರವನ್ನೂ ಬರೆದಿದ್ದಾರೆ.
"ಶಾಂತಿಯುತ ಮತ್ತು ಕ್ರಮಬದ್ಧ ಆಡಳಿತವನ್ನು ತರಲು, ಮಹಾನ್ ವಿದ್ವಾಂಸ ವಿಜಯ್ ಸಿಂಹಾಸನವನ್ನು ಏರುತ್ತಾರೆ" ಎಂಬ ಅರ್ಥದ ಸಾಲುಗಳು ವಿಜಯ್ ಅವರ ರಾಜಕೀಯ ಎಂಟ್ರಿಗೆ ಪಾರ್ಥಿಬನ್ ಬೆಂಬಲ ಸೂಚಿಸಿದಂತಿದೆ.
ಈ ಎಲ್ಲಾ ನಾಟಕಗಳು ನಡೆಯುತ್ತಿರುವುದು ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿ ಹರಿದಾಡುತ್ತಿರುವ ಸಮಯದಲ್ಲೇ ಎನ್ನುವುದು ಗಮನಾರ್ಹ. ಸಂಗೀತಾ ಅವರು ವಿಚ್ಛೇದನದ ಅರ್ಜಿಯಲ್ಲಿ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಒಟ್ಟಾಗಿ ಕಾಣಿಸಿಕೊಂಡಿದ್ದು ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಕಲ್ಪತಿ ಸುರೇಶ್ ಅವರ ಮಗನ ಮದುವೆಗೆ ಇವರಿಬ್ಬರು ಒಂದೇ ಕಾರಿನಲ್ಲಿ ಬಂದಿದ್ದನ್ನು ಕಂಡು ಪಾರ್ಥಿಬನ್ ಟೀಕಿಸಿದ್ದರು. ಆದರೆ ಈಗ ವಿಜಯ್ ಅವರನ್ನೇ ಹೊಗಳಿ, ಪೇಂಟಿಂಗ್ ನೀಡಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಒಟ್ಟಿನಲ್ಲಿ, ಪಾರ್ಥಿಬನ್ ಅವರ ಈ ಹಠಾತ್ ಪಲ್ಟಿಯ ಹಿಂದೆ ಏನಿದೆ? ತ್ರಿಶಾ ಜೊತೆಗಿನ ಕಿರಿಕ್ ಮರೆತು ವಿಜಯ್‌ಗೆ ಹತ್ತಿರವಾಗಲು ಅವರು ಪ್ರಯತ್ನಿಸುತ್ತಿದ್ದಾರಾ? ಅಥವಾ ವಿಜಯ್ ಅವರ ರಾಜಕೀಯ ಶಕ್ತಿಯನ್ನು ಕಂಡು ಅವರು ಈ ರೀತಿ ಗೌರವ ಸಲ್ಲಿಸುತ್ತಿದ್ದಾರಾ? ಏನೇ ಇರಲಿ, ದಳಪತಿ ವಿಜಯ್‌ಗೆ ಪಾರ್ಥಿಬನ್ ನೀಡಿದ ಆ 'ರಾಜ' ಗಿಫ್ಟ್ ಮಾತ್ರ ಸದ್ಯಕ್ಕೆ ಕಾಲಿವುಡ್‌ನ ಅತಿ ದೊಡ್ಡ ಗಾಸಿಪ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.