ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಣ್ಣ ಸಣ್ಣ ವಿಷಯಗಳು ಎಷ್ಟೊಂದು ದೊಡ್ಡದಾಗಿ ಕೆಲಸ ಮಾಡುತ್ತವೆ ಎಂಬುದನ್ನು ನಟ ಮಾಧವನ್ ವಿವರಿಸಿದ್ದಾರೆ. ಇವರ ಮಾತುಗಳನ್ನು ಕೇಳಿದವರೆಲ್ಲ ಅಹುದಹುದೆನ್ನುತ್ತಿದ್ದಾರೆ.
ಯಶಸ್ವಿಯಾಗೋ ಆಸೆ ಯಾರಿಗಿರಲ್ಲ ಹೇಳಿ? ನೀವು ಕೋಟಿಗಟ್ಟಲೆ ಸಂಪಾದಿಸಿದರೂ ನಿಮ್ಮ ನಡತೆ ಸರಿ ಇಲ್ಲವೆಂದರೆ, ಡ್ರೆಸ್ಸಿಂಗ್ ಸೆನ್ಸ್ ಸರಿ ಇಲ್ಲದಿದ್ದರೆ ಜನರ ಗಮನ ನಿಮ್ಮ ಯಶಸ್ಸಿಗಿಂತ ಹೆಚ್ಚಾಗಿ ಇಂಥವುಗಳ ಕಡೆಗೇ ಹೋಗುತ್ತದೆ. ಅದೇ ನೀವು ಉತ್ತಮ ನಡತೆ ಹೊಂದಿದ್ದರೆ, ಮ್ಯಾನರ್ಸ್‌ನ ಬೇಸಿಕ್ ತಿಳಿದಿದ್ದರೆ ಗೌರವಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಯಶಸ್ಸಿನ ಮಂತ್ರ ಕೂಡಾ ಇದೇ ಆಗಿದೆ ಅಂತಾರೆ ನಟ ಮಾಧವನ್.
ಭಾಷಣವೊಂದರಲ್ಲಿ ನಟ ಮಾಧವನ್ ನೀವು ಯಶಸ್ಸನ್ನು ಪಡೆಯಲು ಮೊದಲು ಕಲಿಯಬೇಕಾಗಿರುವುದು ಏನು ಎಂಬುದನ್ನು ಬಹಳ ಮನದಟ್ಟಾಗುವಂತೆ ಹೇಳಿದ್ದಾರೆ.
undefined
'ಯಾರಿಗಾದರೂ ಕೈ ಕುಲುಕುವುದು ಹೇಗೆ, ಗಂಡಾಗಿದ್ದು ಹೆಣ್ಣಿಗೆ ಶೇಕ್ ಹ್ಯಾಂಡ್ ಮಾಡುವುದು ಹೇಗೆ, ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವುದು ಹೇಗೆ, ನಿಮ್ಮನ್ನು ನೀವು ಹೇಗೆ ಪರಿಚಯ ಮಾಡಿಕೊಳ್ತೀರಿ, ಫೋನ್‌ನಲ್ಲಿ ಹೇಗೆ ಮಾತನಾಡ್ತೀರಿ, ಡೈನಿಂಗ್ ಟೇಬಲ್ ಎಟಿಕ್ವೇಟ್ಸ್ ಏನು, ಸರಿಯಾಗಿ ಡ್ರೆಸ್ ಮಾಡಿಕೊಳ್ಳುವುದು ಹೇಗೆ, ನಮ್ಮ ದೇಹ ದುರ್ಗಂಧ ಬರುತ್ತಿದೆಯೇ ಎಂಬ ಬಗ್ಗೆ ಗಮನ ಇಟ್ಟುಕೊಳ್ಳುವುದು, ಮಾತಾಡುವಾಗ ಎಂಜಲು ಹಾರಿಸದಂತೆ ನೋಡಿಕೊಳ್ಳುವುದು ಇವೆಲ್ಲ ಯಶಸ್ಸಿಗೆ ಮೂಲ ಅಗತ್ಯವಾಗಿದೆ' ಎಂದಿದ್ದಾರೆ ಮ್ಯಾಡಿ.
ನಿಜಕ್ಕೂ ಇವೆಲ್ಲ ಸರಳವಾದರೂ, ಸಾಕಷ್ಟು ಜನರಿಗೆ ತಿಳಿಯದೆ ಇರುವುದೇ ಆಗಿದೆ.
ಎಲ್ಲರಿಗಿಂತ ಉತ್ತಮವಾಗಲು..
ಮುಂದುವರಿದು ಹೇಳ್ತಾರೆ, 'ಕೆಲವರು ಅಂದುಕೊಳ್ಳಬಹುದು. ನನಗಿವೆಲ್ಲ ಬೇಕಾಗಿಲ್ಲ ಎಂದು. ನಾನು ಅಪ್ಪನ ಬಿಸ್ನೆಸ್ ಮಾಡಿಕೊಂಡು ಹೋಗ್ತೀನಿ- ಇಂಥದ್ದನ್ನೆಲ್ಲ ಯೋಚಿಸ್ತಾ ಕೂರೋಕ್ ಆಗಲ್ಲ ಅಂದುಕೊಳ್ಳಬಹುದು. ಆದರೆ, ಇವೆಲ್ಲ ಬದುಕಿನಲ್ಲಿ, ವೃತ್ತಿಯಲ್ಲಿ ತೀರಾ ಅಗತ್ಯ ಮ್ಯಾನರ್ಸ್‌ಗಳು. ಇವನ್ನು ಹೇಗೆ ಮಾಡುವುದು ಎಂದೇ ಗೊತ್ತಿಲ್ಲದಿದ್ದರೆ ಸಾಮಾನ್ಯ ಬದುಕಿಗೆ ಸಮಾಧಾನಪಟ್ಟುಕೊಳ್ಳಬೇಕಾಗುತ್ತದೆ. ಎಲ್ಲರಿಗಿಂತ ಉತ್ತಮವಾಗಿ ಕಾಣಿಸಿಕೊಳ್ಳಬೇಕೆಂದರೆ ಇಂಥ ಸಣ್ಣ ಸಣ್ಣ ನಡುವಳಿಕೆಗಳನ್ನು ಚೆನ್ನಾಗಿ ಅಳವಡಿಸಿಕೊಳ್ಳಬೇಕು, ಕನಿಷ್ಠ ಪಕ್ಷ ಇಷ್ಟನ್ನು ಅರಿಯಲೇಬೇಕು' ಅಂತಾರೆ ಮಾಧವನ್.
ನೀವು ಒಳ್ಳೆಯವರಾಗಿದ್ದರೂ, ಈ ಬೇಸಿಕ್ ಮ್ಯಾನರ್ಸ್ ತಿಳಿದಿಲ್ಲವಾದರೆ ಅದ್ಬುತ ಯಶಸ್ಸು ಸಾಧ್ಯವಿಲ್ಲ.
ಇದಕ್ಕೆ ಕಾಮೆಂಟ್‌ದಾರರು ಅಹುದಹುದೆನ್ನುತ್ತಿದ್ದು, 'ನಿಮ್ಮ ಕುಟುಂಬ ಎಂಥದ್ದು ಎಂಬುದನ್ನು ಈ ನಡುವಳಿಕೆಗಳೇ ತಿಳಿಸುತ್ತವೆ. ಎಟಿಕ್ವೇಟ್, ಡಿಸೆನ್ಸಿ, ಮ್ಯಾನರ್ಸ್ ಎಲ್ಲವೂ ಕುಟುಂಬದಿಂದಲೇ ಬರಬೇಕು' ಎಂದು ಇನ್ಸ್ಟಾ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
'ನಮ್ಮ ಸುತ್ತಲಿರುವವರು ನಮ್ಮ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತಾರೆ. ಗುಡ್ ಮ್ಯಾನರ್ಸ್ ಕೂಡಾ ನಮ್ಮ ಸುತ್ತಲಿರುವವರಿಂದಲೇ ಪ್ರಭಾವಿಸಲ್ಪಡುತ್ತದೆ. ಹಾಗಾಗಿ, ಉತ್ತಮರೊಂದಿಗೆ ಸ್ನೇಹ ಮಾಡಬೇಕು' ಎಂದು ಮತ್ತೊಬ್ಬರು ಹೇಳಿದ್ದಾರೆ.
'ನಿಜವಾಗಿಯೂ ಇಂದಿನ ತಲೆಮಾರಿಗೆ ಹೇಳಬೇಕಾದ ವಿಷಯ ಇದಾಗಿದೆ' ಎಂದೊಬ್ಬರು ಚಪ್ಪಾಳೆ ತಟ್ಟಿದ್ದರೆ, ಮತ್ತೊಬ್ಬರು, 'ಈ ವಿಷಯಗಳನ್ನು ಶಾಲೆ, ಕಾಲೇಜುಗಳಲ್ಲೂ ಕಲಿಸಬೇಕು' ಎಂದಿದ್ದಾರೆ.