'ಧುರಂಧರ್' ಎರಡೂ ಭಾಗಗಳನ್ನೂ ಒಟ್ಟಿಗೇ ನೋಡುವ ಚಾನ್ಸ್.. 9 ಗಂಟೆಗಳನ್ನು ಥಿಯೇಟರ್‌ನಲ್ಲಿ ಕಳೆಯಲು ನೀವು ರೆಡಿನಾ?

Published : Apr 01, 2026, 06:39 PM IST
Dhurandhar ad Dhurandhar 2

ಸಾರಾಂಶ

ಹಿಂದೆ 'ಬಾಹುಬಲಿ' ಸಿನಿಮಾವನ್ನು 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಸೇರಿಸಿ ರಿಲೀಸ್ ಮಾಡಲಾಗಿತ್ತು. ಈಗ ರಣವೀರ್ ಅಭಿಮಾನಿಗಳು ಕೂಡ ಅದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕಂತೂ ಹಾಂಕಾಂಗ್ ಸಿನಿಪ್ರಿಯರಿಗೆ ಈ 'ಧುರಂಧರ್ ಮ್ಯಾರಾಥಾನ್' ಮಸ್ತ್ ಮನರಂಜನೆ ನೀಡಲು ಸಜ್ಜಾಗಿದೆ. ಭಾರತದಲ್ಲೂ ಇಂಥದ್ದೊಂದು ಪ್ರದರ್ಶನ ನಡೆಯುತ್ತಾ?

ಧುರಂಧರ್ ಮ್ಯಾರಥಾನ್!

ಬೆಂಗಳೂರು: ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಅಭಿನಯದ 'ಧುರಂಧರ್ 2' ಸಿನಿಮಾ ಸದ್ಯ ಜಾಗತಿಕ ಮಟ್ಟದಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನು ಉಲ್ಟಾ-ಪಲ್ಟಾ ಮಾಡಿರುವ ಈ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸಾಮಾನ್ಯವಾಗಿ ದೀರ್ಘಾವಧಿಯ ಸಿನಿಮಾಗಳು ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತವೆ ಎನ್ನುವ ಮಾತಿದೆ. ಆದರೆ 'ಧುರಂಧರ್' ವಿಷಯದಲ್ಲಿ ಅದು ಉಲ್ಟಾ ಆಗಿದೆ! ಚಿತ್ರ ಎಷ್ಟು ಉದ್ದವಾಗಿದ್ದರೂ ಪ್ರೇಕ್ಷಕರು ಮಾತ್ರ ಸೀಟಿನ ಅಂಚಿನಲ್ಲಿ ಕುಳಿತು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಈ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಒಂದು ಸುದ್ದಿ ಸಿನಿರಸಿಕರ ನಿದ್ದೆ ಗೆಡಿಸಿದೆ.

ಏಳು ಗಂಟೆಗಳ ಮಹಾ ಮ್ಯಾರಾಥಾನ್!

ಸಿನಿಮಾ ಪ್ರೇಮಿಗಳ ದೊಡ್ಡ ಬೇಡಿಕೆಯೆಂದರೆ ಧುರಂಧರ್ (Dhurandhar) ಸಿನಿಮಾದ ಎರಡೂ ಭಾಗಗಳನ್ನು ಒಟ್ಟಿಗೆ ನೋಡಬೇಕು ಎಂಬುದು. ಈಗ ಈ ಫ್ಯಾನ್ಸ್ ಆಸೆಗೆ ಕೊನೆಗೂ ರೆಕ್ಕೆಪುಕ್ಕ ಬಂದಿದೆ. ಹೌದು, ಹಾಂಕಾಂಗ್‌ನ ವಿತರಣಾ ಸಂಸ್ಥೆ 'ಎಎ ಟೆಕ್' ಒಂದು ಅಚ್ಚರಿಯ ಸಾಹಸಕ್ಕೆ ಕೈಹಾಕಿದೆ. ಏಪ್ರಿಲ್ 12 ರಂದು ಹಾಂಕಾಂಗ್‌ನ ಪ್ರಖ್ಯಾತ 'ಪ್ರೀಮಿಯರ್ ಎಲಿಮೆಂಟ್ಸ್' ಚಿತ್ರಮಂದಿರದಲ್ಲಿ 'ಧುರಂಧರ್ ಮ್ಯಾರಾಥಾನ್' ಆಯೋಜಿಸಲಾಗಿದೆ. ಇದು ಬರೀ ಸಿನಿಮಾವಲ್ಲ, ಇದೊಂದು ಸುಮಾರು 7 ಗಂಟೆ 23 ನಿಮಿಷಗಳ ಎಪಿಕ್ ಜರ್ನಿ!

ಧುರಂಧರ್ ಭಾಗ-1 ಸುಮಾರು 3 ಗಂಟೆ 34 ನಿಮಿಷಗಳ ಅವಧಿಯನ್ನು ಹೊಂದಿದ್ದರೆ, ಅದರ ಸೀಕ್ವೆಲ್ 'ಧುರಂಧರ್: ದಿ ರಿವೆಂಜ್' 3 ಗಂಟೆ 49 ನಿಮಿಷಗಳ ದೀರ್ಘ ಅವಧಿಯನ್ನು ಹೊಂದಿದೆ. ಅಂದರೆ ಎರಡೂ ಸಿನಿಮಾಗಳನ್ನು ಒಟ್ಟಿಗೆ ಪ್ರದರ್ಶಿಸಿದರೆ ಪ್ರೇಕ್ಷಕರು ಸುಮಾರು ಏಳೂವರೆ ಗಂಟೆಗಳ ಕಾಲ ರಣವೀರ್ ಅಟ್ಟಹಾಸವನ್ನು ಬೆಳ್ಳಿತೆರೆಯ ಮೇಲೆ ಸತತವಾಗಿ ನೋಡಬಹುದು. ವಿರಾಮಗಳು ಸೇರಿದರೆ ಒಟ್ಟು 9 ಗಂಟೆಗಳ ಕಾಲ ಥಿಯೇಟರ್ ಒಳಗೆ ಕಾಲ ಕಳೆಯಬೇಕಾಗುತ್ತದೆ. ರಣವೀರ್ ಸಿಂಗ್ ಅವರ ಪಾತ್ರ 'ಜಸ್ಕಿರತ್ ಸಿಂಗ್ ರಂಗಿ'ಯಿಂದ 'ಹಮ್ಜಾ ಅಲಿ ಮಜಾರಿ'ಯಾಗಿ ಬದಲಾಗುವ ರೋಚಕ ರೂಪಾಂತರವನ್ನು ಒಂದೇ ಗುಕ್ಕಿನಲ್ಲಿ ನೋಡುವ ಅವಕಾಶ ಇದಾಗಿದೆ.

ಇದು ಏಪ್ರಿಲ್ ಫೂಲ್ ಇರಬಹುದಾ?

ಆದರೆ, ಈ ಸುದ್ದಿಯ ಬೆನ್ನಲ್ಲೇ ಸಣ್ಣದೊಂದು ಅನುಮಾನವೂ ಕಾಡುತ್ತಿದೆ. ಏಪ್ರಿಲ್ ತಿಂಗಳು ಆರಂಭವಾಗಿರುವುದರಿಂದ, ಇದು ಕೇವಲ ಪ್ರೇಕ್ಷಕರನ್ನು 'ಏಪ್ರಿಲ್ ಫೂಲ್' ಮಾಡುವ ತಂತ್ರವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ವಿಶೇಷವೆಂದರೆ, ಚಿತ್ರತಂಡದ ಕಡೆಯಿಂದ ಇಂದಿನವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. 'ಧುರಂಧರ್ 2' ಈಗಾಗಲೇ 'ಬಾಹುಬಲಿ 2' ದಾಖಲೆಯನ್ನು ಮುರಿದು ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇಂತಹ ಹೊತ್ತಿನಲ್ಲಿ ಚಿತ್ರತಂಡ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ.

'ಬಾಹುಬಲಿ ದಿ ಎಪಿಕ್' ತರಹ?

ಹಿಂದೆ 'ಬಾಹುಬಲಿ' ಸಿನಿಮಾವನ್ನು 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಸೇರಿಸಿ ರಿಲೀಸ್ ಮಾಡಲಾಗಿತ್ತು. ಈಗ ರಣವೀರ್ ಅಭಿಮಾನಿಗಳು ಕೂಡ ಅದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕಂತೂ ಹಾಂಕಾಂಗ್ ಸಿನಿಪ್ರಿಯರಿಗೆ ಈ 'ಧುರಂಧರ್ ಮ್ಯಾರಾಥಾನ್' ಮಸ್ತ್ ಮನರಂಜನೆ ನೀಡಲು ಸಜ್ಜಾಗಿದೆ. ಭಾರತದಲ್ಲೂ ಇಂಥದ್ದೊಂದು ಪ್ರದರ್ಶನ ನಡೆಯುತ್ತಾ? ಅಭಿಮಾನಿಗಳ ಆಸೆ ಈಡೇರುತ್ತಾ? ಕಾದು ನೋಡೋಣ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತುಕೊಂಡೇ ಮಲಗಿದ ದಿನಗಳಿದ್ದವು, ಅಕ್ಷಯ್ ಕೊಟ್ಟ ಆ ಸಲಹೆ ನನ್ನನ್ನು ಬದಲಿಸಿತು: ಸೀತಾ ರಾಮಂ ನಟಿ!
ಉಗ್ರಾಯುಧಂ ಚಿತ್ರಕ್ಕೆ ಎಂಟ್ರಿ ಕೊಟ್ಟ ಕಾಂತಾರ ಬೆಡಗಿ: ಶ್ರೀಮುರಳಿಗೆ ಸಪ್ತಮಿ ಗೌಡ ಜೋಡಿ!