ಬಿ ಎಸ್ ಲಿಂಗದೇವರು ನಿರ್ದೇಶನದ ‘ವಿರಾಟಪುರ ವಿರಾಗಿ’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಹಾನಗಲ್‌ನ ಶಿವಯೋಗಿ ಕುಮಾರ ಸ್ವಾಮಿಗಳ ಜೀವನವನ್ನಾಧರಿಸಿದ ಚಿತ್ರವಿದು. ಮೌನ ತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಬಗ್ಗೆ ಲಿಂಗದೇವರು ಮಾತುಗಳು.
- ವಿರಾಟಪುರ ವಿರಾಗಿ ಸಿನಿಮಾ ಮಾಡಬೇಕೆಂಬುದು ಒಬ್ಬ ಸಂತರ ಕನಸು. ಇದಕ್ಕಾಗಿ ಅವರು ಭಕ್ತರ ಬಳಿ ಹೋಗಿ ಭಿಕ್ಷೆ ಬೇಡಿದರು. ಅವರಿಗೆ 50 ರು.ನಿಂದ 5 ಲಕ್ಷ ರು.ವರೆಗೆ ಕೊಟ್ಟವರೂ ಇದ್ದಾರೆ. ಆ ಸಂತನ ಹೆಸರು ಮೌನತಪಸ್ವಿ ಶಾಂತಲಿಂಗೇಶ್ವರ ಸ್ವಾಮೀಜಿ. 12 ವರ್ಷಗಳ ಹಿಂದೆ ದೆಹಲಿಯಲ್ಲಿ ನೀಲಕಂಠ ಡಾಕ್ಯುಮೆಂಟರಿ ನೋಡಿ ತಮ್ಮ ಗುರುಗಳ ಬಗ್ಗೆಯೂ ಒಂದು ಸಿನಿಮಾ ಮಾಡುವ ಕನಸು ಕಂಡರು. 43 ವರ್ಷದಿಂದ ಮೌನವಾಗಿರುವ ಸ್ವಾಮೀಜಿ ಈ ಸಿನಿಮಾದಲ್ಲಿ ಕುಮಾರ ಸ್ವಾಮಿಗಳ ಗುರುಗಳ ಪಾತ್ರ ಮಾಡಿದ್ದಾರೆ.
- ನಮ್ಮ ಚಿತ್ರದ ಪ್ರಚಾರಕ್ಕೆ ರಥಯಾತ್ರೆ ಮಾಡಿದ್ದೆವು. ಅದರಲ್ಲೇ 75000 ಟಿಕೇಟ್ ಸೇಲ್ ಮಾಡಿದೆವು. ಈ ಯಾತ್ರೆಯಲ್ಲಿ ಕುಮಾರಸ್ವಾಮಿಗಳು ಮತ್ತು ಶಾಂತಲಿಂಗೇಶ್ವರ ಸ್ವಾಮೀಜಿಗಳೇ ಸೂಪರ್ಸ್ಟಾರ್ಸ್. ಈ ರಥಯಾತ್ರೆ ಭಕ್ತರ ಯಾತ್ರೆಯೇ ಆಗಿತ್ತು. ಜನ ಇದನ್ನು ಸಿನಿಮಾಕ್ಕಿಂತಲೂ, ಕುಮಾರ ಅಜ್ಜಾವ್ರು ನಮ್ಮೂರಿಗೆ ಬರ್ತವ್ರೆ ಅಂತ ಭಕ್ತಿಪೂರ್ವಕವಾಗಿ ಸ್ವಾಗತಿಸುತ್ತಿದ್ದರು.
undefined
ವಿರಾಟಪುರದ ವಿರಾಗಿ ಚಿತ್ರದ ಹಾಡಿಗೆ ಜನ ಕಣ್ಣೀರಾಗುತ್ತಿದ್ದಾರೆ: ಮಣಿಕಾಂತ್ ಕದ್ರಿ
- ಸ್ವಾಮೀಜಿ ಒಬ್ಬರು ರಥದಲ್ಲಿ ಹುಂಡಿ ಇಟ್ಕೊಳ್ಳಿ ಅಂದರು. ಹಾಗೆ ಇಟ್ಟಹುಂಡಿಯಿಂದಲೇ 10,58,000 ರು. ಸಂಗ್ರಹವಾಯ್ತು.
- ಥಿಯೇಟರ್ ಕೊರತೆಯಿಂದ ಟಿಕೇಟ್ ಬುಕಿಂಗ್ ಅನ್ನು 75,000 ಟಿಕೇಟ್ ಮಾರಾಟಕ್ಕೆ ಸೀಮಿತಗೊಳಿಸಬೇಕಾಯ್ತು. ಚಿತ್ರ ಉತ್ತರ ಕರ್ನಾಟದಲ್ಲಿ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣಲಿದೆ.
- ಈ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್ ಕುಮಾರ ಸ್ವಾಮಿಗಳ ಪಾತ್ರ ಮಾಡಿದ್ದಾರೆ. ಉಳಿದಂತೆ ಅನೇಕ ಸ್ವಾಮೀಜಿಗಳು, ಸ್ಥಳೀಯ ಪ್ರತಿಭೆಗಳು, ಗದುಗಿನ ಪುಣ್ಯಾಶ್ರಮದ ಅಂಧ ಮಕ್ಕಳು ಪಾತ್ರ ಮಾಡಿದ್ದಾರೆ. ಅವರವರ ಪಾತ್ರಕ್ಕೆ ಅವರವರೇ ಡಬಿಂಗ್ ಮಾಡಿದ್ದು ವಿಶೇಷ. ಅದರಲ್ಲೂ ಅಂಧ ಮಕ್ಕಳಿಗೆ ಲಿಪ್‌ಸಿಂಕ್ ಹೇಳಿಕೊಡೋದು ಚಾಲೆಂಜಿಂಗ್ ಆಗಿತ್ತು.
- ಕುಮಾರ ಸ್ವಾಮಿಗಳ 63 ವರ್ಷಗಳ ಬದುಕನ್ನು 3 ಗಂಟೆಗಳಲ್ಲಿ ಕಟ್ಟುಕೊಡುವುದು ಸವಾಲೇ. ಈ ಸವಾಲು ಜಯಿಸಲು ನೆರವಾದದ್ದು ಸಂಗೀತ.
- ಇದು ಒಂದು ಧರ್ಮಕ್ಕೆ, ಒಂದು ಸಮುದಾಯಕ್ಕೆ ಸೀಮಿತವಾದ ಸಿನಿಮಾ ಅಲ್ಲ. ಈ ಸಂತರು ಸಮಾಜಮುಖಿ ಕೆಲಸವನ್ನು ಧರ್ಮದ ಚೌಕಟ್ಟಿನಲ್ಲಿ ಮಾಡಿದರೂ ಅದರ ಪ್ರಯೋಜನ ಇಡೀ ಸಮಾಜಕ್ಕಾಗಿದೆ. ಇದು ಲಿಂಗಾಯತ ಸಿನಿಮಾ ಆಗುತ್ತಾ ಅಂದವರಿಗೆ ನನ್ನದು ಇದೇ ಉತ್ತರ.
‘ಕುಮಾರ ಶಿವಯೋಗಿಗಳು ಯಾವತ್ತೂ ತಮ್ಮ ಬಗ್ಗೆ ಬರೆಯಲು ಬಿಟ್ಟವರಲ್ಲ. ಅಧ್ಯಾತ್ಮದಲ್ಲಿ ಉನ್ನತ ಸಾಧನೆ ಮಾಡಿದ, ಸಾಮಾಜಿಕ ಉನ್ನತಿಗೆ ಶ್ರಮಿಸಿದ ಕುಮಾರ ಶಿವಯೋಗಿಗಳ ಕುರಿತು ಸಿನಿಮಾ ಮಾಡುವ ವಿಚಾರ ಬಂದಾಗ ಆರಂಭದಲ್ಲಿ ಧೈರ್ಯ ಬಂದಿರಲಿಲ್ಲ. ನಾವೆಲ್ಲಾ ಅಜ್ಜಾರು ಎಂದೇ ಸಂಬೋಧಿಸುವ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು ಖುದ್ದು ಜೊತೆಗೆ ನಿಂತರು. ಸಿನಿಮಾ ಮಾಡಲೇಬೇಕು ಎಂದರು. ನಾನೇ ಭಿಕ್ಷೆ ಎತ್ತಿ ದುಡ್ಡು ತರುತ್ತೇನೆ ಎಂದರು. ಅವರಿಗೆ ಮಾನ್ವಿ ಮತ್ತು ದಾಮಾ ಪರಿವಾರ ಜೊತೆಯಾಯಿತು. ಅಜ್ಜಾರ ಆಶೀರ್ವಾದ. ನಾನು ಸಿನಿಮಾ ಮಾಡಲು ಮುಂದಾದೆ. ನನ್ನ ಮುಂದೆ 2000 ಪುಟಗಳ ಸಾಹಿತ್ಯ ಇತ್ತು. ಅದನ್ನು ಒಂದೂವರೆ ವರ್ಷಗಳ ಕಾಲ ಕುಳಿತು ಚಿತ್ರಕತೆ ಮಾಡಿದೆ. ಗದಗಕ್ಕೆ ಹೋದೆ, ಕಾಸರವಳ್ಳಿ, ಹಲವು ಸ್ವಾಮಿಗಳು, ವಿದ್ವಾಂಸರ ಜೊತೆ ಮಾತನಾಡಿದೆ. ತಿದ್ದಿ ತಿದ್ದಿ ಚಿತ್ರಕತೆಗೆ ಸ್ಪಷ್ಟರೂಪ ಕೊಟ್ಟೆ. ಅವರಿದ್ದಿದ್ದು 150 ವರ್ಷಗಳ ಹಿಂದೆ.ಅಂದಿನ ಪರಿಸರವನ್ನು ಚಿತ್ರೀಕರಿಸುವುದೇ ಸವಾಲಾಗಿತ್ತು. ಒಳ್ಳೆಯ ತಂಡದಿಂದಾಗಿ ಈಗ ಸಿನಿಮಾ ರೂಪುಗೊಂಡಿದೆ. ಸಿನಿಮಾ ಸಿದ್ಧವಾದ ಮೇಲೆ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಬಿ ಎಸ್ ಲಿಂಗದೇವರು ಹೇಳಿದ್ದಾರೆ.