ಕಿರುಚಿತ್ರಗಳು, ಕಿರುತೆರೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಟ, ನಿರ್ದೇಶಕ ರಾಜೇಶ್ ಧ್ರುವ ಅವರು ಮೊದಲ ಬಾರಿಗೆ ಹಿರಿತೆರೆಯಲ್ಲಿ ನಿರ್ದೇಶಿಸಿರುವ ‘ಶ್ರೀ ಬಾಲಾಜಿ ಸ್ಟುಡಿಯೋ’ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದ ಕುರಿತು ರಾಜೇಶ್ ಧ್ರುವ ಅವರ ಮಾತುಗಳು ಇಲ್ಲಿವೆ.
1. ನಾನು ಕಳೆದ 13 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಆರಂಭದಲ್ಲಿ ಕಿರುಚಿತ್ರಗಳನ್ನು ನಿರ್ದೇಶನ ಮಾಡುವ ಜತೆಗೆ ನಾನೇ ಅವುಗಳಲ್ಲಿ ನಟಿಸುತ್ತಿದ್ದೆ. ಹೀಗೆ ಕಿರುಚಿತ್ರಗಳನ್ನು ಮಾಡಿಕೊಂಡಿದ್ದವನಿಗೆ ದೊಡ್ಡ ಅವಕಾಶ ಅಂತ ಸಿಕ್ಕಿದ್ದು ಕಿರುತೆರೆಯಲ್ಲಿ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ.
2. ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಜನ ನನ್ನ ಗುರುತಿಸಿದರು. ಜತೆಗೆ ನನ್ನ ವೃತ್ತಿಪಯಣಕ್ಕೆ ಇದು ಹೊಸ ತಿರುವು ನೀಡಿತು. ಹೀಗೆ ‘ಅಗ್ನಿಸಾಕ್ಷಿ’ ಧಾರಾವಾಹಿ ಜನಪ್ರಿಯತೆಯಲ್ಲಿ ಇದ್ದಾಗಲೇ ಸಿಕ್ಕ ಅವಕಾಶವೇ ಈ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ.
undefined
3. ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’, ನನ್ನ ಮೊದಲ ಹಿರಿತೆರೆ ನಿರ್ದೇಶನದ ಸಿನಿಮಾ. ಅಭಿ ಎಂಬುವವರು ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. 23 ದಿನಗಳ ಕಾಲ ಹೊನ್ನಾವರ, ಉತ್ತರ ಕನ್ನಡ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
4. ಛಾಯಾಗ್ರಾಹಕನೊಬ್ಬನ ಭಾವನಾತ್ಮಕ ಪಯಣವನ್ನು ಹೇಳುವ ಸಿನಿಮಾ ಇದು. ಯಾಕೆ ಫೋಟೋಗ್ರಾಫರ್ ಮೇಲೆ ಸಿನಿಮಾ ಮಾಡಿದ್ದು, ಕನ್ನಡದಲ್ಲಿ ಛಾಯಾಗ್ರಾಹಕನ ಕುರಿತ ಚಿತ್ರಗಳು ಬಂದಿಲ್ಲ. ಆದರೆ, ಛಾಯಾಗ್ರಾಹಕನ ಕೊಡುಗೆ ತುಂಬಾ ದೊಡ್ಡದು. ಕ್ಯಾಮೆರಾ ಕಣ್ಣಿನ ನಿಜವಾದ ಹೀರೋ ಎನಿಸಿಕೊಂಡವನ ಕತೆ ಹೇಳಬೇಕು ಅನಿಸಿ ಫೋಟೋಗ್ರಾಫರ್ ಕತೆ ಸಿನಿಮಾ ಮಾಡಿದೆ.
5. ಒಂದು ಚಿಕ್ಕ ಹಳ್ಳಿ. ಅಲ್ಲೊಬ್ಬ ಛಾಯಾಗ್ರಾಹಕ, ಅವನ ಫೋಟೋ ಸ್ಟುಡಿಯೋ. ಅದರ ಸುತ್ತ ಕತೆ ಸಾಗುತ್ತಿರುವಾಗ ಒಂದು ದುರಂತ ನಡೆಯುತ್ತದೆ. ಇದರಿಂದ ಆ ಫೋಟೋಗ್ರಾಫರ್‌ನ ಬದುಕಿನಲ್ಲಿ ಏನೆಲ್ಲ ಸಂಕಷ್ಟಗಳು, ಸಂಭ್ರಮಗಳು ಎದುರಾಗುತ್ತವೆ ಎಂಬುದು ಚಿತ್ರದ ಕತೆ. ಮನರಂಜನೆಯ ನೆರಳಿನಲ್ಲಿ ಸಾಗುವ ಕತೆ ಇಲ್ಲಿದೆ.
6. ಈ ಚಿತ್ರಕ್ಕೆ ನಾನೇ ಹೀರೋ ಮತ್ತು ನಿರ್ದೇಶಕನಾಗುವುದಕ್ಕೆ ಕಾರಣಗಳು ಇವೆ. ನನ್ನ ಸ್ನೇಹಿತ ನನಗೇ ಅಂತಲೇ ಈ ಕತೆ ಬರೆದಿದ್ದು. ಹೀಗಾಗಿ ನಾನು ಅವರ ಕತೆಗೆ ಪೂರ್ವ ತಯಾರಿ ಮಾಡಿಕೊಂಡು ಹೀರೋ ಆದೆ. ಇನ್ನೂ ನಾನೇ ನಿರ್ದೇಶಕನಾಗಿದ್ದು, ನನ್ನ ಮಗುನಾ ನಾನೇ ಸಾಕಬೇಕು ಎನ್ನುವ ಕಾರಣಕ್ಕೆ. ಅಂದರೆ ನಾನು ರೂಪಿಸಿದ ಚಿತ್ರಕ್ಕೆ ಇನ್ನೊಬ್ಬರು ನಿರ್ದೇಶಕರಾಗಿ ಬಂದರೆ ಅದು ನನ್ನ ಮಗುನಾ ಬೇರೆಯವರ ಕೈಗೆ ಕೊಟ್ಟಂತೆ. ಹೀಗಾಗಿ ನನ್ನ ಮಗುನಾ ನಾನೇ ಸಾಕಬೇಕು ಅನಿಸಿ ನಾನೇ ನಿರ್ದೇಶಕನಾದೆ.
ಸ್ಟಾರ್ ಕಲಾವಿದರು ಕಿರುತೆರೆಗೆ ಆಡಿಷನ್ ನೀಡುತ್ತಿದ್ದಾರೆ; ಲಾಕ್‌ಡೌನ್ ಅವಾಂತರದ ಬಗ್ಗೆ ನಟ ರಾಜೇಶ್ ಮಾತು!
7. ಈ ಸಿನಿಮಾ ತುಂಬಾ ಜನಕ್ಕೆ ಕನೆಕ್ಟ್ ಆಗುತ್ತದೆ. ಒಮ್ಮೆಯಾದರೂ ಫೋಟೋ ತೆಗೆಸಿಕೊಳ್ಳಬೇಕೆಂಬ ಪ್ರತಿಯೊಬ್ಬನ ಕತೆ ಇಲ್ಲಿದ್ದು, ಅದನ್ನು ಫೋಟೋಗ್ರಾಫರ್ ಮೂಲಕ ಹೇಳಿದ್ದೇನೆ.
8. ನನ್ನ ಹಿನ್ನೆಲೆ ಹೇಳಬೇಕು ಎಂದರೆ ನಾನು ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಚಿತ್ರರಂಗಕ್ಕೆ ಬಂದು 13 ವರ್ಷ ಆಯಿತು. ಕಿರು ಚಿತ್ರಗಳ ನಿರ್ದೇಶನದ ಅನುಭವದ ಮೇರೆಗೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಚಿತ್ರವನ್ನು ನಿರ್ದೇಶಿಸಿದ್ದೇನೆ.