ತೋತಾಪುರಿ ವರ್ಸಸ್‌ ಪೆಟ್ರೋಮ್ಯಾಕ್ಸ್‌, ಜಗ್ಗೇಶ್‌ ಬೈತಿರೋದು ಪ್ರೀತಿಯಿಂದ: ವಿಜಯ್‌ ಪ್ರಸಾದ್‌

Kannadaprabha News   | Asianet News
Published : Dec 26, 2020, 10:13 AM ISTUpdated : Dec 26, 2020, 10:49 AM IST
ತೋತಾಪುರಿ ವರ್ಸಸ್‌ ಪೆಟ್ರೋಮ್ಯಾಕ್ಸ್‌, ಜಗ್ಗೇಶ್‌ ಬೈತಿರೋದು ಪ್ರೀತಿಯಿಂದ: ವಿಜಯ್‌ ಪ್ರಸಾದ್‌

ಸಾರಾಂಶ

‘ತೋತಾಪುರಿ’ ಎರಡು ಭಾಗಗಳಲ್ಲಿ ಬರಲಿದೆ ಅನ್ನೋದು ಸುದ್ದಿಯಾಯ್ತು. ಸಿನಿಮಾ ಎಲ್ಲೀ ತನಕ ಬಂತು ಅಂತ ಜಗ್ಗೇಶ್‌ ಹತ್ರ ಕೇಳಿದಿರೋ ಜಗ್ಗೇಶ್‌ ಗರಂ ಆಗುತ್ತಾರೆ. ವಿಜಯಪ್ರಸಾದ್‌ ಕಡೆ ಮಾತಿನ ಬಾಣ ಬಿಡುತ್ತಾರೆ. ವಿಜಯಪ್ರಸಾದ್‌ ಏನಂತಾರೆ?

ಆರ್‌. ಕೇಶವಮೂರ್ತಿ 

ನಿಮ್ಮ ‘ತೋತಾಪುರಿ’ ಹಣ್ಣಾಗಲು ಇನ್ನೆಷ್ಟುವರ್ಷ ಬೇಕು?

ನಾನು ಯಾವುದಕ್ಕೂ ರಾಜಿ ಮಾಡಿಕೊಳ್ಳದ ವ್ಯಕ್ತಿ. ಅಲ್ಲದೆ ಸಿನಿಮಾ ಎರಡು ಪಾರ್ಟ್‌ಗಳಲ್ಲಿ ಬರಲಿದೆ ಎನ್ನುವ ಕಾರಣಕ್ಕೆ ಹೆಚ್ಚಿನ ಸಮಯ ತೆಗೆದುಕೊಂಡ್ವಿ. ಸಾಲದ್ದಕ್ಕೆ ಕೊರೋನಾ ಸಂಕಷ್ಟ. ಇವೆಲ್ಲವೂ ಸೇರಿಕೊಂಡು ಹೆಚ್ಚು ಸಮಯ ಹಿಡಿಯುತ್ತಿದೆ.

ಬಿಡುಗಡೆಗೂ ಮುನ್ನವೇ ತೋತಾಪುರಿ ಹೊಸ ದಾಖಲೆ! 

ತೋತಾಪುರಿ ಚಿತ್ರಕ್ಕೂ ಮುನ್ನವೇ ಪೆಟ್ರೋಮ್ಯಾಕ್ಸ್‌ ಶುರು ಮಾಡಿದ್ದೀರಲ್ಲ?

ಲಾಕ್‌ಡೌನ್‌ ಮುಗಿದ ಮೇಲೆ ‘ತೋತಾಪುರಿ’ ಚಿತ್ರದ ಶೂಟಿಂಗ್‌ಗೆ ಹೊರಡಬೇಕಿತ್ತು. ಆದರೆ, ಇನ್ನೊಂದಿಷ್ಟುದಿನ ಕಾಯೋಣ, ವ್ಯಾಕ್ಸಿನ್‌ ಬರಲಿ ಎಂದರು. ನಾನು ನನ್ನ ಹೊಟ್ಟೆಪಾಡು ನೋಡಬೇಕಲ್ಲ. ದುಡಿಮೆ ಇಲ್ಲದೆ ಸುಮ್ಮನೆ ಕೂತು ಜೀವನ ಮಾಡೋದು ಹೇಗೆ? ಯಾಕೆಂದರೆ ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಹೀಗಾಗಿ ‘ತೋತಾಪುರಿ’ ಸೆಟ್‌ಗೆ ಹೋಗುವಷ್ಟರಲ್ಲಿ ಮತ್ತೊಂದು ಸಿನಿಮಾ ಮಾಡೋಣ ಎಂದು ನಾನು ಮತ್ತು ನೀನಾಸಂ ಸತೀಶ್‌ ಅವರು ‘ಪೆಟ್ರೋಮ್ಯಾಕ್ಸ್‌’ಗೆ ಕೈ ಹಾಕಿದ್ವಿ ಅಷ್ಟೆ. ಹಾಗಂತ ಯಾರನ್ನು, ಯಾವ ಚಿತ್ರವನ್ನೂ ನಡು ನೀರಿನಲ್ಲಿ ಕೈ ಬಿಟ್ಟು ಹೋಗಿಲ್ಲ.

ಈ ಕಾರಣಕ್ಕೆ ನಿಮ್ಮ ಮೇಲೆ ಜಗ್ಗೇಶ್‌ ಅವರು ಗರಂ ಆಗಿದ್ದಾರಲ್ಲ?

ಅದು ಜಗ್ಗಣ್ಣ ಅವರಿಗೆ ನನ್ನ ಮೇಲೆ ಇರೋ ಪ್ರೀತಿ. ‘ನಿನಗೆ ಪ್ರತಿಭೆ ಇದೆ. ಬೇಗ ಬೇಗ ಸಿನಿಮಾ ಮಾಡಯ್ಯ. ಯಾಕೆ ಕಾಯುತ್ತೀರಿ, ಕಾಯಿಸುತ್ತೀರಿ’ ಎಂಬುದು ಅವರ ಪ್ರೀತಿಯ ನುಡಿಗಳು. ಹೀಗಾಗಿ ಅವರು ನನ್ನ ಮೇಲೆ ಗರಂ ಆಗಿದ್ದಾರೆ ಎಂದರೆ ‘ತೋತಾಪುರಿ’ ಸಿನಿಮಾ ಅವರಿಗೆ ಇಷ್ಟವಾಗಿದೆ ಎಂದರ್ಥ. ಅದನ್ನು ಆದಷ್ಟುಬೇಗ ಮುಗಿಸಿ ಚಿತ್ರಮಂದಿರಗಳಿಗೆ ತರಬೇಕು ಎಂಬುದು ಅವರ ಆಸೆ.

ಮಾಸ್ಕ್, ಟೋಪಿ ಧರಿಸಿ ಮೈಸೂರಿನಲ್ಲಿ ಸುತ್ತಾಡಿದ ಸತೀಶ್, ಹರಿಪ್ರಿಯಾ!

ಈ ವಿಷಯ ‘ತೋತಾಪುರಿ’ ತಂಡಕ್ಕೆ ಮೊದಲೇ ಹೇಳಿದ್ದೀರಾ?

ಹೌದು. ನಿರ್ಮಾಪಕ ಕೆ ಎ ಸುರೇಶ್‌ ಹಾಗೂ ಜಗ್ಗೇಶ್‌ ಅವರಿಗೆ ಹೇಳಿಯೇ ‘ಪೆಟ್ರೋಮ್ಯಾಕ್ಸ್‌’ ಚಿತ್ರಕ್ಕೆ ಚಾಲನೆ ಕೊಟ್ಟಿದ್ದು.

ಹಾಗಾದರೆ ‘ಪೆಟ್ರೋಮ್ಯಾಕ್ಸ್‌ ’ ಮೊದಲು ತೆರೆಗೆ ಬರಲಿದೆಯೇ?

ಓಟಿಟಿ ಪ್ಲಾಟ್‌ಫಾಮ್‌ರ್‍ಗೆ ಅಂತಲೇ ರೆಡಿ ಮಾಡುತ್ತಿರುವ ಸಿನಿಮಾ ಇದು. ಹೀಗಾಗಿ ಬೇಗ ಬರಬಹುದು. ಜನವರಿ ತಿಂಗಳಿಂದ ‘ತೋತಾಪುರಿ’ ಶೂಟಿಂಗ್‌ ಶುರು ಮಾಡಲಿದ್ದೇವೆ.

ಸಿನಿಮಾ ಮಾಡಲು ಯಾಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ?

‘ಸಿದ್ಲಿಂಗು’ ಚಿತ್ರಕ್ಕೆ ಬೇಗ ಚಿತ್ರೀಕರಣ ಮುಗಿಸಿದೆ. ಬಿಡುಗಡೆ ತಡ ಆಯ್ತು. ‘ನೀರ್‌ದೋಸೆ’ ತಡವಾಗಿದ್ದು ನಿಜ. ಈಗ ‘ತೋತಾಪುರಿ’ ಚಿತ್ರದ್ದು ಅದೇ ಕತೆ. ಆದರೆ, ತಡ ಆಗಲು ನಾನು ಒಬ್ಬನೇ ಕಾರಣ ಅಲ್ಲ. ಅದರ ಬಗ್ಗೆ ಮಾತನಾಡಿದ್ರೆ ಮನಸ್ಸುಗಳು ಒಡೆದುಹೋಗುತ್ತವೆæ. ಎಲ್ಲಕ್ಕಿಂತ ಮುಖ್ಯವಾಗಿ ಸಿನಿಮಾಕ್ಕೆ ಏಟು ಬೀಳತ್ತೆ. ಅದರಿಂದ ನಿರ್ಮಾಪಕರಿಗೆ ತೊಂದರೆಯಾಗತ್ತೆ. ನಿರ್ಮಾಪಕರನ್ನ ಉಳಿಸಿಕೊಳ್ಳೋ ಜವಾಬ್ದಾರಿ ನನ್ನದು. ಏನೇ ಆದರೂ ಸಿನಿಮಾ ಮುಗಿಸಿಕೊಡೋ ಜವಾಬ್ದಾರಿ ನನ್ನದು. ಹೀಗಾಗಿ ನನ್ನ ಮೇಲಿನ ಎಲ್ಲ ಆರೋಪ, ಸಿಟ್ಟುಗಳಿಗೂ ಸಿನಿಮಾ ಮೂಲಕವೇ ಉತ್ತರ ಕೊಡಲು ನಿರ್ಧರಿಸಿದ್ದೇನೆ. ನಾನು ಏನೇ ತಡ ಮಾಡಿದ್ರೂ ‘ತೋತಾಪುರಿ’ ಎಲ್ಲವನ್ನೂ ಮರೆಸುತ್ತದೆ ಎಂಬ ಭರವಸೆ ಇದೆ.

"

ಎರಡು ಭಾಗಗಳಲ್ಲಿ ಬರುತ್ತಿರುವ ಸಿನಿಮಾ ಯಾವ ರೀತಿ ಇರುತ್ತದೆ?

ಎರಡು ಪಾರ್ಟ್‌ಗಳಲ್ಲಿ ಬರುತ್ತಿದ್ದೇವೆ ಎಂದ ಮಾತ್ರಕ್ಕೆ ಇದು ‘ಬಾಹುಬಲಿ’ ಸಿನಿಮಾ ಅಂತೂ ಖಂಡಿತ ಅಲ್ಲ. ಪಕ್ಕಾ ಕನ್ನಡದ ಕೌಟುಂಬಿಕ ಮನರಂಜನಾತ್ಮಕ ಸಿನಿಮಾ. ಹೀಗಾಗಿ ನಮ್ಮ ಚಿತ್ರಕ್ಕಾಗಿ ಯಾರೂ ಜಿಮ್‌ಗೆ ಹೋಗಿ ಸಣ್ಣ ಆಗಬೇಕಿಲ್ಲ. ದಪ್ಪನೂ ಆಗುವ ಅಗತ್ಯವಿಲ್ಲ. ಸಿಕ್ಸ್‌ ಪ್ಯಾಕು ಬೇಡ. ಆದರೆ, ಕತೆಗೆ ಬೇಕಾಗುವ ಸಿಕ್ಸ್‌$್ತ ಸೆನ್ಸ್‌ ಇದ್ದರೆ ಸಾಕು. ಹಾಗೆ ಸೂಕ್ಷ್ಮತೆ ಇರುವ ಕಲಾವಿದರು ಇದ್ದಾರೆ. ಅದೇ ನನ್ನ ಧೈರ್ಯ. ಜಾತಿ ಹಾಗೂ ಮನುಷ್ಯತ್ವದ ನಡುವೆ ಸಾಗುವ ಕಾಮಿಡಿ ಸಿನಿಮಾ ‘ತೋತಾಪುರಿ’. ಸಂದೇಶವನ್ನು ಸರಳವಾಗಿ, ಮನರಂಜನೆಯ ನೆಲೆಯಲ್ಲಿ ಹೇಳುವ ಪ್ರಯತ್ನ ಇಲ್ಲಿದೆ. ಇದು ನನ್ನ ಮತ್ತು ಜಗ್ಗಣ್ಣ ಅವರ ನೆಚ್ಚಿನ ಜಾನರ್‌ ಸಿನಿಮಾ.

ಕಾಮಿಡಿ ಚಿತ್ರ ಮುಗಿಸಲೂ ಎರಡು ವರ್ಷ ಬೇಕಿತ್ತಾ?

ಇಲ್ಲಿ ಮೇಕಿಂಗ್‌ ಅದ್ದೂರಿಯಾಗಿದೆ. ಒಂದೊಂದು ದೃಶ್ಯವೂ ಬೇರೆ ಬೇರೆ ರೀತಿಯಲ್ಲಿ ಮೂಡಿ ಬರುತ್ತದೆ. ಒಂದು ದೃಶ್ಯವನ್ನು ಹತ್ತು ರೀತಿಯಲ್ಲಿ ನೋಡಬಹುದು. ಇನ್ನೂ ಇದಕ್ಕೆ ತಕ್ಕಂತೆ ಲೋಕೇಶನ್‌, ಕಾಸ್ಟೂ್ಯಮ್‌ ಎಲ್ಲವೂ ಡಬಲ್‌ ಆಗಿದೆ. ಎಲ್ಲ ಕಲಾವಿದರಿಗೆ ಸ್ಕಿ್ರಪ್ಟ್‌ ರೀಡಿಂಗ್‌ ಕೊಟ್ಟಮೇಲೆಯೇ ನಾನು ಶೂಟಿಂಗ್‌ ಮಾಡಿದ್ದು.

‘ಪರಿಮಳ ಲಾಡ್ಜ್‌’ ಚಿತ್ರದ ಕತೆ ಏನಾಯಿತು?

ಕಳೆದ ಡಿಸೆಂಬರ್‌ನಲ್ಲೇ ‘ತೋತಾಪುರಿ’ ಭಾಗ 1 ರೆಡಿಯಾಗಿತ್ತು. ಅದನ್ನು ರಿಲೀಸ್‌ ಮಾಡಿದ ಬಳಿಕ ‘ತೋತಾಪುರಿ-2’ ಉಳಿದ ಭಾಗದ ಶೂಟಿಂಗ್‌ ಮುಗಿಸುವ ಆಲೋಚನೆ ಇತ್ತು. ಈ ಚಿತ್ರದ ನಂತರ ‘ಪರಿಮಳ ಲಾಡ್ಜ್‌’ಗೆ ಚಾಲನೆ ಕೊಡಬೇಕಿತ್ತು. ಆದರೆ, ಕೊರೋನಾ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಆರ್ಥಿಕ ಸಂಕಷ್ಟಎದುರಾಯಿತು. ನಿರ್ಮಾಪಕರು ರೆಡಿ ಇದ್ದರೆ ಖಂಡಿತ ‘ತೋತಾಪುರಿ’ ಹಾಗೂ ‘ಪೆಟ್ರೋಮ್ಯಾಕ್ಸ್‌’ ನಂತರ ‘ಪರಿಮಳ ಲಾಡ್ಜ್‌’ ಬಾಗಿಲು ತೆಗೆಯಲು ನಾನು ರೆಡಿ.

1. ಪೆಟ್ರೋಮ್ಯಾಕ್ಸ್‌ ಚಿತ್ರದ್ದು ಭಾವನಾತ್ಮಕ ವಿಷಯ. ಚೇಷ್ಟೆಗಳ ಮೂಲಕ ಒಂದು ಸಣ್ಣ ಕತೆಯನ್ನು ಹೇಳಲಾಗಿದೆ. ಹಾಗಂತ ಇದು ನಾನು ಬರೆದ ‘ಸಿಲ್ಲಿ ಲಲ್ಲಿ’ ಧಾರಾವಾಹಿಯ ಮರು ಜನ್ಮ ಅಂದುಕೊಳ್ಳಬೇಡಿ.

2. ಪೆಟ್ರೋಮ್ಯಾಕ್ಸ್‌ ಚಿತ್ರಕ್ಕೆ ಯಾರೂ ನಿರ್ಮಾಪಕರು ಬರಲಿಲ್ಲ ಅಂತ ನಾವೇ ನಿರ್ಮಾಪಕರು ಆಗಿದ್ದಲ್ಲ, ನಮಗೆ ದುಡಿಮೆ ಅಗತ್ಯವಿದೆ ಅಂತ ಆ ಸಿನಿಮಾ ಶುರು ಮಾಡಿದ್ದು. ನನ್ನ ಬಳಿ ಇಂಥ ಸಣ್ಣ ಸಣ್ಣ ಕತೆಗಳು ಸಾಕಷ್ಟುಇವೆ. ಅವುಗಳನ್ನು ಹೀಗೆ ತೆರೆ ಮೇಲೆ ತರುವ ಆಸೆ ಇದೆ.

3. ನಾನು ಯಾವುದೇ ಚಿತ್ರ ಶುರು ಮಾಡಿದರೂ ಬಜೆಟ್‌, ಕಲಾವಿದರು ಮತ್ತು ಕತೆಯಲ್ಲಿ ರಾಜಿ ಆಗಲ್ಲ. ಒಂದು ದೃಶ್ಯ ಹೀಗೇ ಬರಬೇಕು ಅಂದರೆ ಅದು ಅದೇ ರೀತಿ ಬರುವ ತನಕ ಕಾಯುತ್ತೇನೆ. ನನ್ನ ಕತೆ ಸೆಟ್‌ನಲ್ಲಿ ಇರುವ ಎಲ್ಲರಿಗೂ ಗೊತ್ತಿರುತ್ತದೆ. ಅದು ನನ್ನ ಸಿನಿಮಾ ಸ್ಟೈಲು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು