ರಿಷಬ್ ಶೆಟ್ಟಿ ನನ್ನ ಇಂಡಸ್ಟ್ರಿಗೆ ಕರೆದುಕೊಂಡು ಬಂದ: ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ

By Kannadaprabha News  |  First Published Aug 30, 2024, 11:06 AM IST

ಫೈಟ್ ಮಾಡುವುದಿಲ್ಲ. ಕುಣಿಯುವುದಿಲ್ಲ. ಆದರೆ ಏನೋ ಒಂದು ಮನಸ್ಸಲ್ಲಿ ಉಳಿಸಿಹೋಗುವ ಪಾತ್ರ. ಹಾಗಾಗಿ ಕಷ್ಟ ಆಗಲಿಲ್ಲ. ಸ್ವಲ್ಪ ಟೆನ್ಷನ್ ಉಂಟು. ನನ್ನ ಎದೆಬಡಿತ ನನಗೇ ಕೇಳಿಸುವ ಹೊತ್ತಿದು. ಒಂದೊಳ್ಳೆಯ ಕ್ಷಣಕ್ಕಾಗಿ ಕಾಯುತ್ತಿದ್ದೇನೆ.


ರಾಜೇಶ್ ಶೆಟ್ಟಿ

ಹೀರೋ ಆಗುವುದು ಎಷ್ಟು ಕಷ್ಟ, ಎಷ್ಟು ಸುಲಭ? ನಾನು ಇಲ್ಲಿ ಹೀರೋ ಅನ್ನುವುದಕ್ಕಿಂತ ಪ್ರಧಾನ ಪಾತ್ರ ಅನ್ನುವುದು ಒಳ್ಳೆಯದು. ಆಗ ಭಾರ ಇರುವುದಿಲ್ಲ. ಆ ಪಾತ್ರ ರೆಗ್ಯುಲರ್‌ ಹೀರೋ ಪಾತ್ರ ಅಲ್ಲ. ಫೈಟ್ ಮಾಡುವುದಿಲ್ಲ. ಕುಣಿಯುವುದಿಲ್ಲ. ಆದರೆ ಏನೋ ಒಂದು ಮನಸ್ಸಲ್ಲಿ ಉಳಿಸಿಹೋಗುವ ಪಾತ್ರ. ಹಾಗಾಗಿ ಕಷ್ಟ ಆಗಲಿಲ್ಲ. ಸ್ವಲ್ಪ ಟೆನ್ಷನ್ ಉಂಟು. ನನ್ನ ಎದೆಬಡಿತ ನನಗೇ ಕೇಳಿಸುವ ಹೊತ್ತಿದು. ಒಂದೊಳ್ಳೆಯ ಕ್ಷಣಕ್ಕಾಗಿ ಕಾಯುತ್ತಿದ್ದೇನೆ.

Latest Videos

undefined

* ಖಡಕ್ ಪೊಲೀಸ್ ಆಫೀಸರ್ ಆಗಿದ್ದವರು ತಿಂಡಿಪೋತ ಕಾನ್‌ಸ್ಟೇಬಲ್‌ ಆಗಿದ್ದೀರಿ...
ನೆಗೆಟಿವ್ ಪಾತ್ರ, ಗಂಭೀರ ಪಾತ್ರ, ತಮಾಷೆ ಪಾತ್ರ ಎಲ್ಲಾ ಮಾಡಿದ್ದೇನೆ. ಆದರೆ ನನ್ನಲ್ಲಿರುವ ಮುಗ್ಧತೆಯನ್ನು ಮೊದಲು ಕಂಡಿದ್ದು ನಿರ್ದೇಶಕ ಭರತ್‌ರಾಜ್‌. ನಂಗೇ ಅನುಮಾನವಿತ್ತು. ಈ ಪಾತ್ರ ಮಾಡಬಹುದಾ ಅಂತ. ಆದರೆ ಅದನ್ನು ತೊಡೆದು ತುಂಬಾ ಹಸನ್ಮುಖನಾಗಿಯೇ ಇರುವಂತೆ ಭರತ್‌ ಮಾಡಿದ್ದಾರೆ. ಅವರು ಹ್ಯಾಪ್ಪಿಯಾಗಿದ್ದಾರೆ ಹಾಗಾಗಿ ನಾನು ನಿರಾಳನಾಗಿದ್ದೇನೆ.

ಪೆಪೆ ನಿಮ್ಮೊಳಗೊಂದು ಮೌನವನ್ನು ಉಳಿಸುತ್ತದೆ: ವಿನಯ್‌ ರಾಜ್‌ಕುಮಾರ್‌ ವಿಶೇಷ ಸಂದರ್ಶನ

* ಕುಂದಾಪುರದಲ್ಲಿ ಕಟೌಟ್‌ ಬಿದ್ದಿದೆ, ಅದನ್ನು ನೋಡಿದ ಕ್ಷಣ ಯಾವ ಭಾವ ಮೂಡಿ ಬಂತು?
ಆ ಕಟೌಟ್ ನೋಡಿದ ತಕ್ಷಣ ಕಣ್ಣಲ್ಲೊಂದು ನೀರ ಪೊರೆ ಕಾಣಿಸಿ ತಕ್ಷಣ ವಾಪಸ್‌ ಹೋಯಿತು. ನಾನು ಕಟೌಟ್‌ ಇಷ್ಟಪಡಲ್ಲ ಅಂದಿದ್ದೆ. ಆದರೆ ಕುಂದಾಪುರದ ನಮ್ಮ ಹುಡುಗರು ನನಗೆ ಹೇಳದೆಯೇ ಕಟೌಟ್ ಹಾಕಿಸಿದ್ದಾರೆ. ಅದನ್ನು ನೋಡಿದಾಗ ಆ ಪ್ರೀತಿಗೆ ಮನಸ್ಸು ಶರಣಾಯಿತು. ನಾನು ಯಾವುದೇ ಆಸೆ ಇಟ್ಟುಕೊಂಡು ಚಿತ್ರರಂಗಕ್ಕೆ ಬಂದವನಲ್ಲ. ಇಂಡಸ್ಟ್ರಿಗೆ ಬರಬೇಕು ಅಂತ ಆಸೆಯೂ ಇರಲಿಲ್ಲ. ರಂಗಭೂಮಿಯಲ್ಲಿ ಏನೋ ಸೇವೆ ಮಾಡಿಕೊಂಡು ಇದ್ದುಬಿಡಬೇಕು ಅಂದುಕೊಂಡಿದ್ದೆ. ರಿಷಬ್ ನನ್ನ ಇಂಡಸ್ಟ್ರಿಗೆ ಕರೆದುಕೊಂಡು ಬಂದ. ಈಗ ಸಿನಿಮಾದ ಪ್ರಧಾನ ಪಾತ್ರವನ್ನೂ ಅವನೇ ಕೊಟ್ಟಿದ್ದಾನೆ. ಈ ಪ್ರಯಾಣದಲ್ಲಿ ಅವನು ನನಗೆ ಏನು, ನಾನು ಅವನಿಗೆ ಏನು ಎಂಬುದಕ್ಕೆ ಉತ್ತರ ಇಲ್ಲ. ಒಂದು ಬಂಧ ಮುಂದೆ ನಡೆಸುತ್ತಿದೆ.

* ಲಾಫಿಂಗ್ ಬುದ್ಧ ಯಾಕೆ ಮುಖ್ಯ?
ಈ ಸಿನಿಮಾದಲ್ಲಿ ಬೇರೆ ಬೇರೆ ಲೇಯರ್‌ಗಳಿವೆ. ಪೊಲೀಸರ ತೂಕದ ಬಗ್ಗೆ, ಮನೆಯ ಪರಿಸ್ಥಿತಿ ಕುರಿತು, ಸ್ಟೇಷನ್‌ ರಾಜಕೀಯ ಹೀಗೆ ನೋಡುತ್ತಾ ಹೊಳೆಯುತ್ತಾ ಹೋಗುತ್ತದೆ. ನಮ್ಮ ಸಹಿಪ್ರಾ ಶಾಲೆ ಕಾಸರಗೋಡು ಸಿನಿಮಾ ಬಂದಾಗ ಸಾಮಾಜಿಕ ಬದಲಾವಣೆ ಆಗಿತ್ತು. ಅನೇಕ ಸರ್ಕಾರಿ ಶಾಲೆಗಳ ಅಭಿವೃದ್ಧಿ ಆಯಿತು. ಈ ಸಿನಿಮಾದ ಕೊನೆಯ ಕ್ಲೈಮ್ಯಾಕ್ಸ್ ಮನಸ್ಸಿಗೆ ತಟ್ಟಿದರೆ ಮತ್ತೆ ಅಂಥದ್ದೊಂದು ಬದಲಾವಣೆ ಆಗಲಿದೆ. ಆ ಕ್ಷಣಕ್ಕೆ ಕಾಯುತ್ತಿದ್ದೇನೆ. ಒಂದು ಸಿನಿಮಾದ ಗೆಲುವು ಇರುವುದು ಅದು ಎಷ್ಟು ಕೋಟಿ ಗಳಿಸಿತು ಎಂಬುದರಿಂದ ಅಲ್ಲ, ಆ ಸಿನಿಮಾ ಜನರಲ್ಲಿ ಎಷ್ಟು ಪರಿಣಾಮ ಬೀರಿದೆ ಎಂಬುದರ ಮೇಲೆ.

* ನಿಜವಾಗಿ ತಟ್ಟುವ ಸಿನಿಮಾ ಬರವಣಿಗೆ ಹೇಗಿರಬೇಕು?
ಪ್ರೇಕ್ಷಕ ಸ್ವಲ್ಪ ಸೀರಿಯಸ್‌ ಆಗಿ ಥಿಯೇಟರ್‌ಗೆ ಬರುತ್ತಾನೆ. ಅವನನ್ನು ಮೊದಲು ಹಗುರಗೊಳಿಸಬೇಕು. ಅವನು ಕತೆಗೆ ಕನೆಕ್ಟ್ ಆದ ಮೇಲೆ ಕೊನೆಯಲ್ಲಿ ಹೇಳಬೇಕಾದ ಗಂಭೀರ ವಿಚಾರವನ್ನು ಹೇಳಬೇಕು. ಹಗುರಾದಾಗಲೇ ಸತ್ಯ ಅರ್ಥ ಆಗುವುದು. ಪ್ರೇಕ್ಷಕನನ್ನು ಸಿದ್ಧಗೊಳಿಸಿ ಕಾದು ವಿಚಾರ ಹೇಳುವ ಕಲೆ ಇವತ್ತಿನ ಬರವಣಿಗೆಗೆ ಬೇಕಾಗಿದೆ. ಸಾಮಾನ್ಯವಾಗಿ ಒಬ್ಬ ನಿರ್ದೇಶಕನ ಪ್ರಸ್ತುತ ಇರುವುದು 10 ವರ್ಷ. ಅಷ್ಟು ಕಾಲ ಅವನ ಜನರೇಷನ್‌ ಇರುತ್ತದೆ. ನಂತರ ಹೊಸ ಜನರೇಷನ್‌ ಬರುತ್ತದೆ. ಅದಕ್ಕೆ ಅಪ್‌ಡೇಟ್‌ ಆಗಬೇಕು. 5 ವರ್ಷಕ್ಕೊಮ್ಮೆ ನಿರ್ದೇಶಕ ಹೊಸ ಕಾಲಕ್ಕೆ ಅಪ್‌ಡೇಟ್‌ ಆಗುತ್ತಾ ಹೋದಾಗಲೇ ಹೊಸ ಬರವಣಿಗೆ, ಹೊಸ ಶೈಲಿ, ಹೊಸ ಪ್ರೇಕ್ಷಕರು ಕೈಹಿಡಿದು ನಡೆಸುವುದು.

* ಸಿನಿಮಾ ಬಿಡುಗಡೆ ಕ್ಷಣ ಹೇಗಿದೆ?
ನನ್ನ ಹೆಂಡತಿ ಹೆರಿಗೆ ಸಂದರ್ಭದಲ್ಲಿ ಬಹುಶಃ ಇದೇ ಫೀಲಿಂಗ್‌ ಹೊಂದಿದ್ದಳು ಅಂತ ಈಗ ನನಗೆ ಅನ್ನಿಸುತ್ತಿದೆ. ನಿರ್ಮಾಪಕನ ಸ್ಥಾನದಲ್ಲಿ ಅದೆಷ್ಟೋ ಸಿನಿಮಾ ಬಿಡುಗಡೆ ಸಿದ್ಧತೆ ಮಾಡಿದ್ದೇನೆ. ಆದರೆ ಈಗ ಬೇರೆಯೇ ಅನುಭವ. ಒಳಗೆ ಏನೋ ಸಣ್ಣ ಸಂಚಲನ.

ದರ್ಶನ್ ಶಿಫ್ಟಿಗೂ ಬಳ್ಳಾರಿ ಉಸ್ತುವಾರಿ ಜಮೀರ್‌ಗೂ ಸಂಬಂಧವಿಲ್ಲ: ಸಚಿವ ಪರಮೇಶ್ವರ್

ಒಟ್ಟೊಟ್ಟಿಗೆ ರಂಗಭೂಮಿಯಿಂದ ಬಂದವರು ನಾನು ಮತ್ತು ಪ್ರಮೋದ್. ಈಗ ಅವನು ಹೀರೋ ಆಗಿದ್ದಾನೆ. ನಾನು ಹೀರೋ ಮಾಡಿದ್ದಲ್ಲ. ಕಲಾದೇವಿ ಕೈಬೀಸಿ ಕರೆದಾಗ ಎಲ್ಲಾ ಕಲಾವಿದರು ಪ್ರಮುಖ ಪಾತ್ರ ಮಾಡಲೇಬೇಕು. ಆದರೆ ಅದಕ್ಕಾಗಿ ಕಾಯಬೇಕು. ಭರತ್‌ರಾಜ್‌ ಪ್ರಮೋದ್‌ನಲ್ಲಿ ಹೀರೋ ಕಂಡರು. ಸಿನಿಮಾ ಆಯಿತು. ಇದು ಪೊಲೀಸರ ಕತೆ. ಹಾಗಾಗಿ ಪೊಲೀಸರಿಗೆ ಈ ಸಿನಿಮಾ ಅರ್ಪಣೆ ಮಾಡಿದ್ದೇವೆ. ಜನರು ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಇದೆ. ಈ ನಂಬಿಕೆ ನಿಜವಾಗಲು ಕಾಯುತ್ತಿದ್ದೇವೆ.
- ರಿಷಬ್ ಶೆಟ್ಟಿ

click me!