
ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್ ಮಾಡಕ್ಕೆ ಬಿಡಲ್ಲ, ಕಟ್ ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು ಎಂದು ಸಂದರ್ಶನದಲ್ಲಿ ನಟ ರಂಗಾಯಣ ರಘು ಹೇಳಿದರು.
ಆರ್.ಕೇಶವಮೂರ್ತಿ
* 400 ಚಿತ್ರಗಳ ಸಂಭ್ರಮದಲ್ಲಿದ್ದೀರಿ, ಹೇಗನಿಸುತ್ತಿದೆ?
ಕೆಲಸ ಮಾಡಿಕೊಂಡು ಹೋಗ್ತಾ ಇದ್ದೀನಿ ಅನಿಸುತ್ತದೆ. ನನಗಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಾಕಷ್ಟು ಕಲಾವಿದರ ಇದ್ದಾರೆ.
* ಈಗ ಸೆಟ್ಟೇರಿರುವ 400ನೇ ಚಿತ್ರದ ಬಗ್ಗೆ ಹೇಳುವುದಾದರೆ?
ಚಿತ್ರದ ಹೆಸರು ‘ಹೊಸ ಜೀವನ’. ಮೋಹನ್ ಕುಮಾರ್ ಹನುಮಯ್ಯ ನಿರ್ದೇಶನ, ಜಿ.ಎಸ್. ಸಂಜೀವ್ ಪ್ರಸಾದ್ ನಿರ್ಮಾಣದ ಚಿತ್ರ. ಸ್ನೇಹ, ಪ್ರೀತಿ, ಜೀವನದ ಹೋರಾಟ ಹಾಗೂ ಮೌಲ್ಯಗಳ ಸುತ್ತಾ ಸಾಗುವ ಕತೆ. ಕತೆ ಕೇಳಿದ ಕೂಡಲೇ ನನ್ನ ಪಾತ್ರ ನನ್ನ ಕಣ್ಣ ಮುಂದೆ ಬಂತು.
* ನಿಮ್ಮ ಕಲೆಯ ಬೇರು ಶುರುವಾಗಿದ್ದು ಎಲ್ಲಿಂದ?
ನಮ್ಮ ಊರು ತುಮಕೂರು ಜಿಲ್ಲೆ, ಪಾವಗಡ ತಾಲಕು, ಕೊತ್ತೂರು ಎನ್ನುವ ಗ್ರಾಮ. ನನ್ನ ತಂದೆ ಚಿಕ್ಕರಂಗಪ್ಪ, ಬಯಲಾಟದ ಕಲಾವಿದರು. ಬಹುಶಃ ನನ್ನ ಕಲೆಯ ಬೇರುಗಳು ಅಲ್ಲಿಂದಲೇ ಬಂದಿರಬೇಕು.
* ರಂಗಭೂಮಿಯಿಂದ ಸಿನಿಮಾಗೆ ಬಂದಿದ್ದು ಹೇಗೆ?
1992ರಲ್ಲಿ ಬಿ.ಸುರೇಶ್ ಅವರ ನಿರ್ದೇಶನದ, ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ ‘ಕನಸುಗಿತ್ತಿ’ ಟೆಲಿಫಿಲಮ್ ಮೂಲಕ. ಯೋಗರಾಜ್ ಭಟ್ ಅವರು ಬರೆದ ಮೊದಲ ಕತೆ ಇದು. ಹಂಸಲೇಖ ನಿರ್ದೇಶನದ ‘ಸುಗ್ಗಿ’ ನನ್ನ ಮೊದಲ ಚಿತ್ರ ಬಿಡುಗಡೆ ಆಗಲಿಲ್ಲ. ‘ಭೂಮಿ ತಾಯಿ ಚೊಚ್ಚಲ ಮಗ’, ‘ಮೇಘ ಬಂತು ಮೇಘ’, ‘ಭೂಮಿಗೀತೆ’, ‘ಚಂದ್ರೋದಯ’, ‘ಸಿಂಗಾರವ್ವ’, ‘ಅರಮನೆ’, ‘ದುನಿಯಾ’, ‘ಮೊದಲಸಲ’ ಇವು ನನ್ನ ಆರಂಭದ ದಿನಗಳ ಕೆಲ ಚಿತ್ರಗಳು.
* ಚಿತ್ರರಂಗದಲ್ಲಿ ನಿಮಗೆ ತಿರುವು ಸಿಕ್ಕಿದ್ದು ಎಲ್ಲಿಂದ?
ಹೀರೋ ಅಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕೊಟ್ಟ ಮೊದಲ ಚಿತ್ರ ‘ಅರ್ಥ’. ಇದು ಬಿ.ಸುರೇಶ್ ಅವರಿಗೆ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ರಾಜ್ಯ ಪ್ರಪಶಸ್ತಿ ಬಂದರೆ, ನನಗೆ ಎಸ್‌ಐಸಿದಿಂದ (ಈಗಿನ ಸೈಮಾ) ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ನೀಡಿತು. ಆ ನಂತರ ಸುದೀಪ್ ಅವರ ‘ಧಮ್’ ಚಿತ್ರದ ಮೂಲಕ ನನಗೆ ತಿರುವು ಸಿಕ್ಕಿತು.
* ನೀವೇ ಬೇಕು ಅಂತ ಬರೋ ನಿರ್ದೇಶಕರ ಕತೆಗಳು ಹೇಗಿರುತ್ತವೆ?
ರಿಮೇಕ್ ಅಲ್ಲದ ಊರಿನ, ನೆಲದ ಕತೆಗಳನ್ನು ಮಾಡಿಕೊಳ್ಳುವ ನಿರ್ದೇಶಕರ ನಾನು ಬೇಕು ಅಂದುಕೊಂಡು ಬರುತ್ತಿದ್ದಾರೆ.
* ಪ್ರೇಕ್ಷಕರು ನಿಮ್ಮ ಯಾವ ಚಿತ್ರಗಳನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ?
ಡೈಕ್ಟರ್ ಸ್ಪೆಷಲ್, ಶ್ರೀರಾಮ್, ರಂಗ ಎಸ್‌ಎಸ್‌ಎಲ್‌ಸಿ, ದುನಿಯಾ, ಶಾಖಾಹಾರಿ, ಅಜ್ಞಾತವಾಸಿ, ಟಗರು ಪಲ್ಯ, ಮೂರನೇ ಕೃಷ್ಣಪ್ಪ, ಕೃಷ್ಣಂ ಪ್ರಣಯ ಸಂಖಿ, ಮುಂದೆ ಪ್ರೇಮದ ಊರಲ್ಲಿ, ಪಾರ್ಥನ ಪ್ರಪಂಚ, ದೇವಿ ಮಹಾತ್ಮೆ, ಹೊಸ ಜೀವನ ಚಿತ್ರಗಳನ್ನೂ ನೆನಪಿಸಿಕೊಳ್ಳುತ್ತಾರೆ.
* ರಂಗಭೂಮಿಯಿಂದ ಸಿನಿಮಾ ಕಡೆಗೆ ಬಂದಾಗ ಇದ್ದ ಭಾವನೆಗಳೇನು?
ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್ ಮಾಡಕ್ಕೆ ಬಿಡಲ್ಲ, ಕಟ್ ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು. ಸಿನಿಮಾಗಳಿಗೆ ನಾನು ಅಜೆಸ್ಟ್ ಆಗಲು 10 ವರ್ಷ ಬೇಕಾಯಿತು.
* ರೀಲ್ಸ್ ಜಮಾನದಲ್ಲಿ ಸಿನಿಮಾ ನಟ-ನಟಿಯರಿಗೆ ರಂಗಭೂಮಿ ಕಲಿಕೆ ಬೇಕಾ?
ಖಂಡಿತ ಬೇಕು. ಕನಿಷ್ಠ 5 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದರೆ ಚಿತ್ರರಂಗ ಶ್ರೀಮಂತವಾಗುತ್ತದೆ. ಧೀರ ನಗಡಿ, ಪ್ರಸನ್ನ ಭಾವನೆ, ಗಂಭೀರತೆ... ಇವು ರಂಗಭೂಮಿಯಲ್ಲಿ ಕಲಿಸುತ್ತಾರೆ. ಜಿಮ್ ಹೋಗಿ ಬಂದರೆ ಅಂಡರ್‌ವೇರ್ ಕಂಪನಿಗಳಿಗೆ ಮಾಡೆಲ್ ಆಗಬಹುದು, ಕಲಾವಿದ ಆಗಕ್ಕೆ ಆಗಲ್ಲ. ಶರೀರ ಮತ್ತು ಶಾರೀರ ಎರಡೂ ಸರಿಯಾಗಿ ರೂಪಿಸುವುದು ರಂಗಭೂಮಿ.
* ನೀವು ಕಲಾವಿದ ಆಗದೆ ಹೋಗಿದ್ದರೆ?
ಕೃಷಿಕ ಆಗುತ್ತಿದ್ದೆ. ಈಗಲೂ ಬಿಡಿದಿ ಬಳಿ ಜಮೀನು ತೆಗೆದುಕೊಂಡಿದ್ದೇನೆ. ಅಲ್ಲಿ ಮರ, ಗಿಡಗಳನ್ನು ಬೆಳೆಸಿದ್ದೇನೆ. ನಾಲ್ಕೈದು ಹಸುಗಳಿವೆ. ಎಲ್ಲೇ ಹೋದರೂ ಒಂದು ಗಿಡ ತರುತ್ತೇನೆ. ಶೂಟಿಂಗ್ ಇಲ್ಲದಿದ್ದಾಗ ಇದೇ ಜಮೀನಿನಲ್ಲಿರುತ್ತೇನೆ. ಸೈಕಲಾಜಿ ಆಂಡ್ ಥಿಯೇಟರ್ ಓದಿರುವ ಮಗಳು ಚುಕ್ಕಿಗೂ ನಟನೆ ಬಗ್ಗೆ ಆಸಕ್ತಿ ಇದೆ. ಇತ್ತೀಚೆಗೆ ‘ರೋಶಮನ್’ ನಾಟಕದಲ್ಲಿ ನಟಿಸಿದ್ದಳು. ನನ್ನ ಪತ್ನಿ ಮಂಗಳ ರಂಗಭೂಮಿಯಲ್ಲೇ ಇದ್ದಾರೆ.
* ನೀವು ಮಾಡಲೇಬೇಕಂತಿರೋ ಪಾತ್ರ ಯಾವುದು?
ಮಹಾಭಾರತದ ವಿಧುರನ ಪಾತ್ರ. ಇವತ್ತಿಗೂ ಅದು ಪ್ರಸ್ತುತ. ಈ ವಿಧುರನ ಕ್ಯಾರೆಕ್ಟರ್ ಮಾಡುವ ಆಸೆ ಇದೆ.
ಖಂಡಿತ ಬಂದಿತ್ತು. ಮಧುಗಿರಿಯಿಂದ ಶಾಸಕನಾಗಿ ಸ್ಪರ್ಧಿಸಬೇಕೆಂದು ತಯಾರಿ ಕೂಡ ಮಾಡಿಕೊಂಡಿದ್ದೆ. ಆದರೆ, ರಾಜಕಾರಣಿಗಳ ಬಗ್ಗೆ ಸಾಮಾನ್ಯ ಜನರಿಗೆ ಇರುವ ಅಭಿಪ್ರಾಯ ನೋಡಿ ಅಯ್ಯೋ ಈ ರಾಜಕೀಯ ಯಾಕೆ ಬೇಕು ಅನಿಸುತ್ತದೆ. ಆದರೆ, ನಮ್ಮ ಹಳ್ಳಿಗೆ ಹೋದಾಗ ಅಲ್ಲಿನ ಸಮಸ್ಯೆಗಳು ನೋಡಿದಾಗ ಪೊಲಿಟಿಕಲ್ ಪವರ್ ಬೇಕು ಅನಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.