
ನಿಮ್ಮ ಹಿನ್ನೆಲೆ ಏನು?
ನನ್ನ ಮೂಲ ಹುಣಸೂರು. ಹಿರಿಯ ನಿರ್ದೇಶಕ ದಿ.ಹುಣಸೂರು ಕೃಷ್ಣಮೂರ್ತಿ ಅವರು ನನ್ನ ಪತಿಯ ಸಂಬಂಧಿ. ನನ್ನ ಓದಿಗೆ ಶಿಕ್ಷಕಿ ಉದ್ಯೋಗ ಬಂದರೂ ನಾನು ಅದನ್ನು ಆಯ್ಕೆ ಮಾಡಿಕೊಳ್ಳದೆ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗುವಂತಹ ನಿಟ್ಟಿನಲ್ಲಿ ಉದ್ಯಮ ಆರಂಭಿಸಿದೆ. ಅದೇ ಟ್ರೇಲರ್‌ರಿಂಗ್. ಐಟಿಐ ಸ್ಥಾಪಿಸಿ ಇಲ್ಲಿವರೆಗೂ 1500ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಟ್ರೇಲರಿಂಗ್ ತರಬೇತಿ ನೀಡಿದ್ದೇನೆ.
ಸಿನಿಮಾ ನಂಟಿಗೆ ಬಂದಿದ್ದೇಗೆ?
ಟೈಲರಿಂಗ್ ಮಾಡುತ್ತಿದ್ದ ನಾನು ಕಾಸ್ಟ್ಯೂಮ್ ಡಿಸೈನರ್ ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.
ನಿಮ್ಮ ನಟನೆಯ ಶುರುವಾಗಿದ್ದು ಎಲ್ಲಿಂದ?
ಕಳೆದ ಮೂರು ದಶಕಗಳಿಂದ ಕಿರುತೆರೆ, ಸಿನಿಮಾ, ಟಿವಿ ಶೋಗಳ ಮೂಲಕ ಗುರುತಿಸಿಕೊಂಡಿರುವ ಈಗ ನನಗೆ 70 ವರ್ಷ. 1988ರಿಂದ ನಾನು ನಟನೆ ಶುರು ಮಾಡಿದ್ದೇನೆ. ಅಲ್ಲಿಂದ ಇಲ್ಲಿವರೆಗೂ ನಟಿಸಿರುವ ಧಾರಾವಾಹಿಗಳ ಬಗ್ಗೆ ಹೇಳುತ್ತಾ ಹೋದರೆ ಅದೇ ದೊಡ್ಡ ಪಟ್ಟಿಯಾಗುತ್ತದೆ. ‘ಮಾಯಾಮೃಗ’, ‘ಚರಣದಾಸಿ’, ‘ಕಣ್ಣಾಮುಚ್ಚಾಲೆ’, ‘ಬೆಳದಿಂಗಳಾಗಿ ಬಾ’, ‘ಶ್ರೀ ರಾಘವೇಂದ್ರ ಮಹಾತ್ಮೆ’, ‘ಸೀತಾರಾಮ’ ಮುಂತಾದವು ತಕ್ಷಣಕ್ಕೆ ಹೇಳಬಹುದು. ಪ್ರಸ್ತುತ ಈಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.
‘ಸಂಕೀರ್ತನ’ ಸಿನಿಮಾ ಮಾಡಬೇಕು ಅನಿಸಿದ್ದೇಕೆ?
ನಾನು ಚಿಕ್ಕವಳಿದ್ದಾಗಿನಿಂದಲೂ ದಾಸರ, ಭಕ್ತಿ ವಿಜಯ ಕತೆಗಳನ್ನು ಕೇಳುತ್ತಿದ್ದೆ. ಚಂದಮಾನ ಕತೆಗಳನ್ನು ಓದುತ್ತಿದ್ದೆ. ನಾನೂ ಕೂಡ ಜೀವನದಲ್ಲಿ ಭಕ್ತಿಯನ್ನು ಅಳವಡಿಸಿಕೊಳ್ಳಬೇಕೆಂಬ ಭಾವನೆಯಲ್ಲಿ ಸಿನಿಮಾ ಮಾಡಿದ್ದೇನೆ. 15 ವರ್ಷಗಳ ಹಿಂದೆ ಅಂದುಕೊಂಡ ಯೋಜನೆ ಇದು.
ಈ ಚಿತ್ರದ ಉದ್ದೇಶ ಏನು?
ದಾಸರ ಪದಗಳು, ದೇವರ ನಾಮಗಳು, ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು. ಅದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಚಿತ್ರ ಮಾಡಿದೆ.
ಸಂಕೀರ್ತನ ಕತೆ ಏನು?
ವಿಜಯನಗರ ಸಾಮ್ರಾಜ್ಯದಲ್ಲಿದ್ದ ಸಂತರ ಕುರಿತ ಸಿನಿಮಾ. ಅಂದರೆ ಕೃಷ್ಣದೇವರಾಯನ ಕಾಲದಲ್ಲಿ ಅವತರಿಸಿದ್ದ ಯತಿಶ್ರೇಷ್ಟರ, ದಾಸ ಶ್ರೇಷ್ಟರ, ಕವಿಶ್ರೇಷ್ಟರ ಮಹಿಮೆ, ಚರಿತ್ರೆಯನ್ನು ಒಳಗೊಂಡ ಸಿನಿಮಾ ಇದು. ಜೆ.ಎಂ.ಪ್ರಹ್ಲಾದ್ ಅವರು ಕತೆ, ಚಿತ್ರಕಥೆ, ಸಂಭಾಷಣೆ ಬಂದಿದ್ದಾರೆ. ಕಲಾ ಗಂಗೋತ್ರಿ ಮಂಜು ನಿರ್ದೇಶಿಸಿದ್ದಾರೆ. ನಾನು ನಟನೆ, ಕಲಾ ನಿರ್ದೇಶನ, ವಸ್ತ್ರ ವಿನ್ಯಾಸದ ಜೊತೆಗೆ ನಿರ್ಮಾಪಕಿ ಕೂಡ. ರಮೇಶ್ ಭಟ್, ಶ್ರೀಧರ್, ರಾಮಕೃಷ್ಣ ಸೇರಿದಂತೆ ಸುಮಾರು 200 ಕಲಾವಿದರು ನಟಿಸಿದ್ದಾರೆ. ಸಿದ್ದೇಶ್ ಕ್ಯಾಮೆರಾ, ಪ್ರವೀಣ್ ಡಿ ರಾವ್ ಸಂಗೀತ ಇದೆ. ಅಮೆರಿಕಾದಲ್ಲಿರುವ ನನ್ನ ಪುತ್ರಿ ದಿವ್ಯಾ ಈ ಚಿತ್ರಕ್ಕಾಗಿ ಹಾಡಿರುವುದು ಮತ್ತೊಂದು ವಿಶೇಷ.
ಏಪ್ರಿಲ್ 2ರಂದು ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ವಿದೇಶಗಳಲ್ಲೂ ಸಿನಿಮಾ ಬಿಡುಗಡೆ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.