ದಿಗಂತ್ ಅಭಿನಯದ, ಅಭಿಜಿತ್ ಮಹೇಶ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜ.26ರಂದು ಬಿಡುಗಡೆ ಆಗುತ್ತಿದೆ. ವರ್ಷಾರಂಭದಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವ ಸಂಭ್ರಮದಲ್ಲಿರುವ ದಿಗಂತ್ ಜೊತೆ ಮಾತುಕತೆ.
ರಾಜೇಶ್ ಶೆಟ್ಟಿ
ಹೇಗಿದೆ ಬದುಕು?
ಚೆನ್ನಾಗಿದೆ. ಒಳ್ಳೊಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸೈಕ್ಲಿಂಗ್ ಮಾಡುತ್ತೇನೆ. ಆರಾಮಾಗಿದ್ದೇನೆ.
ಹೊಸ ವರ್ಷದ ಆರಂಭದಲ್ಲಿಯೇ ಹೊಸ ಸಿನಿಮಾ. ಏನು ಸಿನಿಮಾ ವಿಶೇಷತೆ?
ಆರಂಭದಿಂದ ಕೊನೆಯವರೆಗೂ ನಗಿಸುವ ಸಿನಿಮಾ ಇದು. ನಕ್ಕು ಹಗುರಾಗಿಸಿ ಆಹ್ಲಾದಕರ ಅನುಭವ ಕೊಡುವ ಸಿನಿಮಾ. ಆ್ಯಕ್ಷನ್ ಪ್ರಧಾನ ಸಿನಿಮಾಗಳು ಸಾಕಷ್ಟು ಬಂದು ಗೆದ್ದಿವೆ. ಆದರೆ ಈ ಥರದ ಔಟ್ ಆ್ಯಂಡ್ ಔಟ್ ಕಾಮಿಡಿ ಸಿನಿಮಾ ಇತ್ತೀಚೆಗೆ ಬಂದಿಲ್ಲ ಅನ್ನಿಸುತ್ತದೆ. ಇದು ಸ್ನೇಹಿತರು, ಕುಟುಂಬದವರು ಎಲ್ಲರೂ ಸೇರಿ ನೋಡಿ ಸಂತೋಷಪಡಬಹುದಾದ ಸಿನಿಮಾ.
ಇದು ಕಿರಿಕ್ ಪಾರ್ಟಿಯ 'ಬ್ಯಾಚುಲರ್ ಪಾರ್ಟಿ': ಜ.26ಕ್ಕೆ ದಿಗಂತ್, ಲೂಸ್ ಮಾದ ಯೋಗಿ ಸಿನಿಮಾ ರಿಲೀಸ್!
ಈ ಸಿನಿಮಾದಿಂದ ನೀನು ಪಡೆದದ್ದೇನು?
ಸಂತೋಷ ಎಂಬ ಹೆಸರಿನ ಪಾತ್ರ ನನ್ನದು. ಆದರೆ ಆ ಪಾತ್ರದ ಬದುಕಿನಲ್ಲಿ ಸಂತೋಷ ಇರುವುದಿಲ್ಲ. ಗಂಡ- ಹೆಂಡತಿ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ಒದ್ದಾಡುತ್ತಿರುತ್ತಾನೆ. ಅಂಥಾ ಹೊತ್ತಲ್ಲಿ ಗೆಳೆಯನೊಬ್ಬ ಬ್ಯಾಚುಲರ್ ಪಾರ್ಟಿಗೆ ಕರೆಯುತ್ತಾನೆ. ಅಲ್ಲಿಂದ ಕತೆ ಶುರು. ಈ ಸಿನಿಮಾದಲ್ಲಿ ನಾವು ಎಲ್ಲರನ್ನೂ ಮನಸಾರೆ ನಗಿಸಲು ಯತ್ನಿಸಿದ್ದೇವೆ. ಆ ಪ್ರಯತ್ನ ಸಾರ್ಥಕವಾಗಿ ಪ್ರೇಕ್ಷಕ ನಕ್ಕು ಖುಷಿ ಪಟ್ಟರೆ ಅದೇ ನನ್ನ ಈ ಸಿನಿಮಾದಿಂದ ನಾನು ಪಡೆಯುವ ಸಂತೋಷ.
ಈ ಸಿನಿಮಾ ಒಪ್ಪಿಕೊಳ್ಳಲು ಏನು ಕಾರಣ?
ಕತೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ಅಷ್ಟು ಸೊಗಸಾಗಿತ್ತು. ನಿರ್ದೇಶಕ ಅಭಿಜಿತ್ ನನಗೆ ಬಹಳ ಸಮಯದಿಂದ ಪರಿಚಯ. ಉತ್ತಮ ಸಿನಿಮಾ ಬರಹಗಾರ. ಅವರ ಬರವಣಿಗೆ ಪ್ರತಿಭೆ ಬಗ್ಗೆ ಗೊತ್ತಿತ್ತು. ಹಿಲೇರಿಯಸ್ ಆಗಿ ಬರೆಯುತ್ತಾರೆ. ಈ ಸಿನಿಮಾದ ಚಿತ್ರಕತೆ ಕೂಡ ಅಷ್ಟೊಂದು ಮಜವಾಗಿದೆ. ಜೊತೆಗೆ ಪರಂವಃ ನಿರ್ಮಾಣ ಬೇರೆ. ಪರಂವಃ ಸ್ಟುಡಿಯೋಸ್ ಉತ್ತಮ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅದೂ ಒಂದು ಕಾರಣ. ಜೊತೆಗೆ 15 ವರ್ಷಗಳ ಗೆಳೆಯ ಲೂಸ್ ಮಾದ ಜೊತೆಗೆ ಮೊದಲ ಬಾರಿ ನಟಿಸುತ್ತಿದ್ದೇನೆ. ಜನಪ್ರಿಯ ಸಿನಿಮಾಟೋಗ್ರಾಫರ್ ಅರವಿಂದ್ ಕಶ್ಯಪ್ ಇದಕ್ಕೆ ಕೆಲಸ ಮಾಡಿರುವುದೂ ನಮಗೆ ಹೆಮ್ಮೆ.
ಅಭಿಜಿತ್ ಮಹೇಶ್ ಮೊದಲ ನಿರ್ದೇಶನದ ಸಿನಿಮಾ ಇದು. ಅವರ ತಯಾರಿ ಹೇಗಿತ್ತು?
ಒಬ್ಬ ನಿರ್ದೇಶಕನಿಗೆ ಸ್ಪಷ್ಟತೆ ತುಂಬಾ ಮುಖ್ಯ. ಸ್ಪಷ್ಟತೆ ಇಲ್ಲದೇ ಗೊಂದಲ ಇದ್ದರೆ ಕಲಾವಿದರಿಗೆ ಕೆಲಸ ಮಾಡಲು ಕಷ್ಟ. ಆದರೆ ಅಭಿ ತಯಾರಿ ಮಾಡಿಕೊಂಡೇ ಬಂದಿದ್ದರು. ಅವರಿ ಅವರ ಕತೆ ಬಗ್ಗೆ ಭಾರಿ ಸ್ಪಷ್ಟತೆ ಇತ್ತು. ಹಿನ್ನೆಲೆ ಹೇಗಿರಬೇಕು, ಕ್ಯಾಮೆರಾ ಎಲ್ಲಿರಬೇಕು ಎಂಬುದೆಲ್ಲಾ ಮೊದಲೇ ತಯಾರಿ ಮಾಡಿಕೊಂಡಿದ್ದರಿಂದ ನಮಗೆ ಸುಲಭವಾಯಿತು. ಅವರ ಬರವಣಿಗೆ ಪ್ರತಿಭೆ ಬಗ್ಗೆ ಗೊತ್ತಿತ್ತು. ಈ ಸಿನಿಮಾ ಅವರ ನಿರ್ದೇಶನ ಪ್ರತಿಭೆಯನ್ನು ತೋರಿಸುತ್ತದೆ.
ಕಿರಿಕ್ ಪಾರ್ಟಿ ಆದ್ಮೇಲೆ ಬ್ಯಾಚುಲರ್ ಪಾರ್ಟಿ; ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಲೂಸ್ ಮಾದಾ- ದೂದ್ ಪೇಡಾ!
ಥಾಯ್‌ಲ್ಯಾಂಡ್ ಶೂಟಿಂಗ್ ಹೇಗಿತ್ತು?
ಬ್ಯಾಚುಲರ್ ಪಾರ್ಟಿಗೆ ಥಾಯ್‌ಲ್ಯಾಂಡ್‌ಗೆ ಹೋಗುವುದು ಮಾಮೂಲಿ. ಅದೇ ಥರ ನಮ್ಮ ಪಾತ್ರಗಳೂ ಥಾಯ್‌ಲ್ಯಾಂಡಿಗೆ ಹೋಗುತ್ತವೆ. ಅಲ್ಲಿ ಇಡೀ ದಿನ ಚಿತ್ರೀಕರಣ ಇರುತ್ತಿತ್ತು. ರಾತ್ರಿ 11 ಗಂಟೆವರೆಗೂ ಚಿತ್ರೀಕರಣ ಇದ್ದರೆ ಬೆಳಿಗ್ಗೆದ್ದು ಮತ್ತೊಂದು ಕಡೆ ಹೋಗಬೇಕಿತ್ತು. ಸುಮಾರು 20 ದಿನ ಅಲ್ಲಿ ಶೂಟಿಂಗ್ ಮಾಡಿದ್ದೇವೆ. ಥಾಯ್‌ಲ್ಯಾಂಡ್ ಅನ್ನು ಸೊಗಸಾಗಿ ತೋರಿಸಿದ್ದಾರೆ.
ಈ ಸಿನಿಮಾದ ಶಕ್ತಿ ಏನು?
ಎಲ್ಲರಿಗೂ ತಾಕಬಲ್ಲ ಗುಣ ಇದೆ ಈ ಚಿತ್ರಕ್ಕೆ. ಯಾಕೆಂದರೆ ಮದುವೆ ಇಲ್ಲಿ ಕೇಂದ್ರಬಿಂದು. ವಿಶೇಷವಾಗಿ ಮದುವೆ ಆಗುವವರು ಮತ್ತು ಹೊಸತಾಗಿ ಮದುವೆ ಆಗುವವರು ಈ ಸಿನಿಮಾವನ್ನು ಹೆಚ್ಚು ರಿಲೇಟ್ ಮಾಡಿಕೊಳ್ಳಬಹುದು.
ಮುಂದಿನ ಹಾದಿ?
ಮುಂದಿನ ತಿಂಗಳು ‘ಎಡಗೈಯೇ ಅಪಘಾತಕ್ಕೆ ಕಾರಣ’ ರಿಲೀಸ್ ಆಗಬಹುದು. ಜನಾರ್ದನ ಚಿಕ್ಕಣ್ಣ ನಿರ್ದೇಶನದ ‘ಪೌಡರ್’, ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’, ಧನಂಜಯ್ ಜೊತೆ ‘ಉತ್ತರಕಾಂಡ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಉತ್ತರಕಾಂಡ ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡಲಿದ್ದೇನೆ. ಒಳ್ಳೆಯ ಕತೆಯ ಸಿನಿಮಾದಲ್ಲಿ, ಒಳ್ಳೆಯ ಬ್ಯಾನರ್‌ನಲ್ಲಿ ನಟಿಸುತ್ತಿದ್ದೇನೆ.