ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ನಗಿಸುತ್ತೇನೆ: ಪ್ರಮೋದ್‌ ಶೆಟ್ಟಿ

By Kannadaprabha News  |  First Published Sep 2, 2020, 9:11 AM IST

ಖಡಕ್‌ ನಟನೆಯಿಂದ ಗುರುತಿಸಿಕೊಂಡವರು ಪ್ರಮೋದ್‌ ಶೆಟ್ಟಿ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ‘ಒಂದು ದೊಡ್ಡ ಹೋರಾಟ ಉಂಟು ಬಾರೋ’ ಎನ್ನುವ ಅವರ ಡೈಲಾಗ್‌ ಸಿಕ್ಕಾಪಟ್ಟೆಫೇಮಸ್‌. ಇಂಥ ಪ್ರಮೋದ್‌ ಶೆಟ್ಟಿಈಗ ‘ಲಾಫಿಂಗ್‌ ಬುದ್ಧ’ನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಡಲಿದ್ದಾರೆ.


ಆರ್‌ ಕೇಶವಮೂರ್ತಿ

 

Latest Videos

undefined

ಅಂತೂ ಲಾಫಿಂಗ್‌ ಬುದ್ಧ ಎನ್ನುತ್ತ ಹೀರೋ ಆಗುತ್ತಿದ್ದೀರಿ?

ಬೇರೆಯವರು ನನ್ನ ಈ ಚಿತ್ರದ ಹೀರೋ ಅಂತಿದ್ದಾರೆ. ಆದರೆ, ನನ್ನ ಪ್ರಕಾರ ನಾನು ಹೀರೋ ಅಲ್ಲ. ಕತೆಯೇ ಹೀರೋ. ರೆಗ್ಯುಲರ್‌ ಹೀರೋಯಿಸಂ ಇರುವ ಸಿನಿಮಾ ಅಲ್ಲ. ಕತೆ ಮತ್ತು ಕ್ಯಾರೆಕ್ಟರ್‌ ಮೇಲೆ ಸಾಗುವ ಚಿತ್ರವಿದು. ಇಲ್ಲಿ ನನ್ನದು ಕತೆಗೆ ತಕ್ಕಂತೆ ಲೀಡ್‌ ರೋಲ್‌ ಎನ್ನಬಹುದು.

ಹೌದು, ನಿಮ್ಮನ್ನು ಹೀಗೆ ಲಾಫಿಂಗ್‌ ಬುದ್ಧ ಮಾಡೋ ಐಡಿಯಾ ಬಂದಿದ್ದು ಯಾರಿಗೆ?

ರಿಷಬ್‌ ಶೆಟ್ಟಿಅವರಿಗೆ. ನನ್ನ ಬತ್‌ರ್‍ ಡೇ ಹಿಂದಿನ ರಾತ್ರಿ ಮನೆಗೆ ಬಂದು, ‘ನಿಮಗೊಂದು ಉಂಟು ಸಪ್ರೈಸ್‌ ಶೆಟ್ರೆ’ ಅಂದ್ರು. ಏನು ಅಂತ ನೋಡುತ್ತಿದ್ದಾಗ ಲಾಫಿಂಗ್‌ ಬುದ್ಧ ಚಿತ್ರದ ಪೋಸ್ಟರ್‌ ತೋರಿಸಿ, ‘ಇದರಲ್ಲಿ ನೀವೇ ಹೀರೋ, ನಾನೇ ನಿರ್ಮಾಪಕ’ ಅಂದ್ರು. ‘ನನ್ನ ಮುಖನಾ ನಂಬಿಕೊಂಡು ಯಾಕಪ್ಪ ದುಡ್ಡು ಹಾಕ್ತಿಯಾ?’ ಎಂದಾಗ, ‘ಕತೆ ಮೇಲೆ ದುಡ್ಡು ಹಾಕುತ್ತಿದ್ದೇನೆ’ ಅಂದರು. ಹಾಗೆ ನಾನು ಲಾಫಿಂಗ್‌ ಬುದ್ಧ ಆದೆ.

ಹಾಗಾದರೆ ಚಿತ್ರದಲ್ಲಿ ಅಂಥ ಕತೆ ಏನಿದೆ?

ಪೊಲೀಸ್‌ ಹಾಗೂ ಸ್ಟೇಷನ್‌ ಸುತ್ತ ಸಾಗುವ ಕತೆ. ಈವರೆಗೆ ಸಿನಿಮಾಗಳಲ್ಲಿ ಬಂದಿರುವುದಕ್ಕಿಂತ ಭಿನ್ನವಾಗಿ ನಿಜವಾದ ಸ್ಟೇಷನ್‌ ಮತ್ತು ಅಲ್ಲಿನ ಮೇಲಾಧಿಕಾರಿಗಳು, ಕೆಳಸ್ತರದ ಸಿಬ್ಬಂದಿ, ಅವರ ಜೀವನ, ಸಾಹಸಗಳು, ಸಂಕಷ್ಟಗಳನ್ನು ಹತ್ತಿರದಿಂದ ತೋರಿಸುವ ಪ್ರಯತ್ನ. ನಾನು ಕೂಡ ಹಲವು ಬಾರಿ ಪೊಲೀಸ್‌ ಪಾತ್ರ ಮಾಡಿದ್ದೇನೆ. ಇದು ಅವುಗಳಿಗಿಂತ ಭಿನ್ನ.

ರಂಗಭೂಮಿಗೆ ರಂಗಭೂಮಿಯೇ ಸಾಟಿ ಎಂದ ಪ್ರಮೋದ್ ಶೆಟ್ಟಿ

ಈ ಪೊಲೀಸ್‌ ಸ್ಟೇಷನ್‌ನಲ್ಲಿ ಲಾಫಿಂಗ್‌ ಬುದ್ಧನಿಗೆ ಏನು ಕೆಲಸ?

ನಾನೇ ಲಾಫಿಂಗ್‌ ಬುದ್ಧ. ನನ್ನದು ಪೊಲೀಸ್‌ ಕಾನ್‌ಸ್ಟೇಬಲ್‌ ಪಾತ್ರ. ದಪ್ಪ ದೇಹ ಹೊಂದಿರುವ ಪೊಲೀಸು ನಾನು. ಪಕ್ಕಾ ತಿಂಡಿಪೋತ. ಊಟ ಪ್ರಿಯ. ಹೊಟ್ಟೆಬೆಳೆಸಿಕೊಂಡ ಕಾನ್‌ಸ್ಟೇಬಲ್‌, ಕಮಿಷನರ್‌ ಗಮನಕ್ಕೆ ಬಂದು ನನಗೊಂದು ಟಾಸ್ಕ್‌ ಕೊಡುತ್ತಾರೆ. ಆ ಟಾಸ್ಕ್‌ ಪೂರೈಕೆ ಮಾಡಲು ನಾನು ಏನೆಲ್ಲ ಮಾಡುತ್ತೇನೆ ಎಂಬುದೇ ಚಿತ್ರದ ಕತೆ.

ಯಾವ ರೀತಿಯ ಜಾನರ್‌ ಸಿನಿಮಾ ಇದು?

ದೇಹವನ್ನು ಇಳಿಸಿಕೊಂಡು ಸಣ್ಣ ಆಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಏನೆಲ್ಲ ಸಾಹಸಗಳನ್ನು ಮಾಡುತ್ತಾನೋ ಅದೆಲ್ಲವೂ ನೋಡುಗನಿಗೆ ಹಾಸ್ಯವಾಗಿ ಕಾಣುತ್ತದೆ. ಹೆಸರೇ ಹೇಳುವಂತೆ ಇದು ಕಂಪ್ಲೀಟ್‌ ಕಾಮಿಡಿ ಸಿನಿಮಾ.

ಪಾತ್ರಕ್ಕೆ ನೀವು ಮಾಡಿಕೊಂಡ ತಯಾರಿ?

ಪಾತ್ರಕ್ಕೆ ತುಂಬಾ ದಪ್ಪ ಕಾಣಬೇಕು. ನಾನು ಹೇಗೂ ದಪ್ಪವೇ ಇದ್ದೇನೆ. ಇನ್ನೊಂದಿಷ್ಟುಹೊಟ್ಟೆಬೆಳೆಸಿಕೊಳ್ಳಬೇಕು ಅಷ್ಟೆ.

ನಿಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಗೆ ಏನು ಸಂದೇಶ ತಲುಪುತ್ತದೆ?

ಬದುಕಿನ ಕಷ್ಟಗಳನ್ನು ನಗು ನಗುತ್ತ ಹೇಳಿಕೊಳ್ಳಬೇಕು. ಕಾನ್‌ಸ್ಟೇಬಲ್‌ ಸಣ್ಣ ಆಗುತ್ತಾನಾ, ಇಲ್ಲವಾ ಎನ್ನುವ ಪ್ರಶ್ನೆಯಲ್ಲಿ ಒಂದು ಸಣ್ಣ ಸಾಮಾಜಿಕ ಸಂದೇಶ ಇದೆ. ಅದಕ್ಕೆ ಪ್ರೇಕ್ಷಕ ಮನಸೋಲುತ್ತಾನೆ. ಪಾತ್ರದ ಕಷ್ಟಗಳಿಗೂ ನೋಡುಗ ಕನೆಕ್ಟ್ ಆಗುತ್ತಾನೆ.

ಈ ರೀತಿಯ ಒಂದು ಸಿನಿಮಾ ಮಾಡಬೇಕು ಅನಿಸಿದ್ದು ಯಾಕೆ?

ಜನರಿಗೆ ಅವರದ್ದೇ ನೂರೆಂಟು ಕಷ್ಟಗಳು, ಗೋಳಿನ ಕತೆಗಳು ಇರುತ್ತವೆ. ಚಿತ್ರಮಂದಿರಕ್ಕೆ ಬಂದಾಗಲೂ ಅದೇ ಗೋಳು ಹೇಳಿದರೆ ಆಗಲ್ಲ. ನಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ಮಾಡುವಾಗಲೂ ಎಮೋಷನ್‌ ಹಾಗೂ ಹಾಸ್ಯದ ಜತೆಗೆ ಸಂದೇಶ ಹೇಳಬೇಕು ಎಂದುಕೊಂಡು ಹೇಳಿದ್ವಿ. ಈಗಲೂ ಅದೇ ರೀತಿ ಹ್ಯೂಮರ್‌ ಮೂಲಕ ಸಂದೇಶ ಹೇಳುತ್ತಿದ್ದೇವೆ.

ಯಾವಾಗ ಚಿತ್ರೀಕರಣಕ್ಕೆ ಹೋಗುತ್ತದೆ, ಯಾರೆಲ್ಲ ಕಲಾವಿದರು ಇದ್ದಾರೆ?

ಸೆಪ್ಟೆಂಬರ್‌ ಕೊನೆಯಲ್ಲಿ ಶೂಟಿಂಗ್‌ ಶುರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅಸೋಸೆಟ್‌ ಆಗಿದ್ದ ಭರತ್‌ ಈ ಚಿತ್ರದ ನಿರ್ದೇಶಕರು. ಇದು ಅವರ ಮೊದಲ ಸಿನಿಮಾ. ಹಿಂದೆಯೇ ಈ ಬರೆದಿದ್ದರು. ರಂಗಭೂಮಿ ಹಿನ್ನೆಲೆಯ ಹೊಸ ಕಲಾವಿದರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.

ಈಗ ನಿಮ್ಮ ಕೈಯಲ್ಲಿರುವ ಸಿನಿಮಾಗಳು?

‘ಹರಿಕತೆಯಲ್ಲ ಗಿರಿಕತೆ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಸೆ.15ರಿಂದ ಶೂಟಿಂಗ್‌ ನಡೆಯಲಿದೆ. ಇದರ ಚಿತ್ರೀಕರಣ ಮುಗಿಸಿಕೊಂಡು ಲಾಫಿಂಗ್‌ ಬುದ್ಧ ಚಿತ್ರಕ್ಕೆ ಬರುತ್ತೇನೆ. ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ದವಿದೆ. ಅದಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದರ ನಡುವೆ ರಕ್ಷಿತ್‌ ಶೆಟ್ಟಿಅವರು ಓಟಿಟಿಗಾಗಿ ಬರೆದುಕೊಂಡಿರುವ ಕತೆಯಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರ ಓಟಿಟಿಗಾಗಿಯೇ ರಕ್ಷಿತ್‌ ಶೆಟ್ಟಿಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ಗೆ ಹೋಗಲಿದ್ದೇವೆ.

* ನನ್ನ ಹುಟ್ಟು ಹಬ್ಬಕ್ಕೂ ಒಂದು ಚಿತ್ರದ ಪೋಸ್ಟರ್‌ ಬಿಡುಗಡೆ ಆಗುತ್ತದೆ ಎನ್ನುವುದೇ ಒಂದು ಖುಷಿ. ಜತೆಗೆ ನಾನು ಕಲಾವಿದನಾಗಿ ಗುರುತಿಸಿಕೊಳ್ಳುತ್ತಿದ್ದೇನೆಂಬ ಹೆಮ್ಮೆ ಇದೆ.

* ನನಗೆ ಇಲ್ಲಿವರೆಗೂ ಸಿಕ್ಕ ಪಾತ್ರಗಳು ನನ್ನ ಕಲಾವಿದನನ್ನಾಗಿ ರೂಪಿಸಿವೆ. ಯಾವುದೇ ಪಾತ್ರ ಕೊಟ್ಟರೂ ಅದನ್ನು ನಿಭಾಯಿಸುವ ವಿಶ್ವಾಸ ಮೂಡಿಸಿದೆ.

* ಪ್ರಾಮಾಣಿಕವಾದ ತಂಡ, ಸಿನಿಮಾ ಕನಸುಗಳನ್ನೇ ಕಟ್ಟಿಕೊಂಡು ಓಡಾಡುವವರ ಜತೆ ಇದ್ದು ನನ್ನ ನಾನು ಕಂಡುಕೊಂಡೆ.

* ಒಳ್ಳೆಯ ಸಿನಿಮಾಗಳು, ಒಳ್ಳೆಯ ಸ್ನೇಹಿತರು... ಇದು ನಾನು ಇಷ್ಟುವರ್ಷಗಳ ಜೀವನದಲ್ಲಿ ಪಡೆದುಕೊಂಡಿದ್ದು.

* ನಾನು ಗಂಭೀರ ಪಾತ್ರಗಳನ್ನೂ ಮಾಡಬಲ್ಲೆ, ಹಾಸ್ಯವನ್ನೂ ಮಾಡಬಲ್ಲೆ ಎಂಬುದನ್ನು ಬೆಲ್‌ ಬಾಟಮ್‌ ಚಿತ್ರದಲ್ಲಿ ಗುರುತಿಸಿದರು.

* ವಿಲನ್‌ ಪಾತ್ರಗಳಿಗೇ ಸೀಮಿತವಾಗಲ್ಲ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡುವ ಆಸೆ.

 

click me!