ನಿರ್ದೇಶಕ ಸೂರಿಯವರ ಸಿನಿಮಾಗಳೆಂದರೆ ಅದರಲ್ಲಿ ಪಾತಕ ಲೋಕವನ್ನು ಹಸಿ ಹಸಿಯಾಗಿ ತೋರಿಸಿರುತ್ತಾರೆ. ಇದೀಗ ಡ್ರಗ್ಸ್ ಎನ್ನುವ ಪಾತಕಕ್ಕೆ ಸಂಬಂಧಿಸಿದಂತೆ ಚಂದನವನದ ಕದ ತಟ್ಟಿದ್ದಾರೆ ಪೊಲೀಸರು. ಈ ಸಂದರ್ಭದಲ್ಲಿ ಸೂರಿಯವರ ಪ್ರತಿಕ್ರಿಯೆ ಏನು ಎನ್ನುವ ವಿವರ ಇಲ್ಲಿದೆ.
ಸೂರಿ ನಿರ್ದೇಶನದ `ಕೆಂಡ ಸಂಪಿಗೆ'ಯಿಂದ ಹಿಡಿದು ತೀರ ಇತ್ತೀಚೆಗೆ ತೆರೆಕಂಡ `ಪಾಪ್ ಕಾರ್ನ್ ಮಂಕಿ ಟೈಗರ್' ತನಕ ಸಾಕಷ್ಟು ಚಿತ್ರಗಳಲ್ಲಿ ಡ್ರಗ್ಸ್ ಜಾಲದ ಬಗ್ಗೆ ತೋರಿಸಲಾಗಿದೆ. ಪ್ರತಿ ಚಿತ್ರಕ್ಕಾಗಿ ಸಾಕಷ್ಟು ಅಧ್ಯಯನ ನಡೆಸುವ ಸೂರಿಗೆ ಡ್ರಗ್ಸ್ ದಂಧೆಯ ಬಗ್ಗೆ ಇರುವ ಅರಿವುಗಳೇನು? ಚಿತ್ರರಂಗದ ಜತೆಗೆ ಡ್ರಗ್ಸ್ ಸಂಬಂಧ ಹೇಗಿರಬಹುದು ಎನ್ನುವ ಪ್ರಶ್ನೆಗಳನ್ನು ಕೇಳಿದಾಗ ಅವರು ಸುವರ್ಣ ನ್ಯೂಸ್.ಕಾಮ್ ಗೆ ನೀಡಿರುವ ವಿವರವಾದ ಉತ್ತರಗಳು ಇಲ್ಲಿವೆ.
- ಶಶಿಕರ ಪಾತೂರು
ನಿಮ್ಮ ಸಿನಿಮಾಗಳಲ್ಲಿ ರೌಡಿಸಂ ಮತ್ತು ಡ್ರಗ್ಸ್ ಮೊದಲಾದ ಅಂಶಗಳು ಸಾಮಾನ್ಯ. ನಿಮ್ಮ ಪ್ರಕಾರ ಚಿತ್ರರಂಗಕ್ಕೆ ಡ್ರಗ್ಸ್ ಎಷ್ಟರ ಮಟ್ಟಿಗೆ ಆವರಿಸಿರಬಹುದು?
ನನ್ನ ಸಿನಿಮಾದಲ್ಲಿ ನೈಜತೆ ಇರಬಹುದು. ಹಾಗಂತ ನಾನು ನಿಜವಾದ ಪರಿಸರಕ್ಕೆ ಹೋಗಿ, ಅವರ ಸಂಪರ್ಕದೊಂದಿಗೆ ಚಿತ್ರ ಮಾಡಿಲ್ಲ. ರೌಡಿಸಂ ಬಗ್ಗೆ, ಡ್ರಗ್ಸ್ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದು ಚಿತ್ರ ಮಾಡಿದ್ದೇನೆ. ಹಾಗಾಗಿ ಸಿನಿಮಾ ಬಿಟ್ಟು, ಚಿತ್ರರಂಗಕ್ಕೆ ನೇರವಾಗಿ ಎಷ್ಟರ ಮಟ್ಟಿಗೆ ಡ್ರಗ್ಸ್ ಸಂಬಂದ ಇದೆ ಎನ್ನುವ ಅರಿವು ನನಗಿಲ್ಲ. ಮೆಟ್ರೊಪಾಲಿಟನ್ ಸಿಟಿ ಎಂದಾಗ ಅಂಥ ಎಲ್ಲ ದಂಧೆಗಳು ಕೂಡ ನಡೆಯುವ ಸಾಧ್ಯತೆ ಇದೆ. ನಾನು ರೌಡಿಗಳನ್ನು ತೋರಿಸಿದೆ ಎಂದ ಮಾತ್ರಕ್ಕೆ ನಿಜದಲ್ಲಿ ಬೆಂಗಳೂರಿನ ರೋಡ್ ತುಂಬ ರೌಡಿಗಳು ಇರುವುದಿಲ್ಲ. ಅದೇ ಡ್ರಗ್ಸ್ ಕೂಡ ತುಂಬಿಕೊಂಡಿದೆ ಎಂದು ಹೇಳುವುದಿಲ್ಲ. ಸುಮಾರು ಐದು ಪರ್ಸೆಂಟ್ ಇರಬಹುದೇನೋ. ಆದರೆ ಅವರ ಬದುಕು ಸರಿಯಿಲ್ಲ; ಅದರಲ್ಲಿ ಗೆಲುವಿಲ್ಲ ಎಂದು ತೋರಿಸಲಿಕ್ಕಾಗಿ ಆ ದೃಶ್ಯಗಳನ್ನು ಇಡುತ್ತೇವೆ. ಸಮಾಜ ಎಂದ ಮೇಲೆ ಎಲ್ಲ ಕಡೆ ಎಲ್ಲರೀತಿಯವರು ಇರುತ್ತಾರೆ. ಹಾಗೆ ಚಿತ್ರರಂಗದಲ್ಲಿಯೂ ಇರಬಹುದು.
ಅಧ್ಯಾತ್ಮದ ಬಗ್ಗೆ ಮಾಸ್ಟರ್ ಆನಂದ್ ಮಾತು
ಸಮಾಜದಲ್ಲಿ ನಿಧಾನಕ್ಕೆ ಕ್ರೈಮ್ ಹೆಚ್ಚಾಗಲು ಕಾರಣವೇನು ಎಂದು ನಿಮ್ಮ ಅನಿಸಿಕೆ?
ಎಲ್ಲದರ ಮೂಲ ವಿದ್ಯೆ ಮತ್ತು ಸಂಸ್ಕಾರ. ಇಂದಿನ ಖರ್ಚುಗಳನ್ನು ಭರಿಸಿ ವಿದ್ಯೆ ನೀಡಲು ಶಕ್ತಿ ಇಲ್ಲದವರು ವಿದ್ಯೆ ಕೊಡಿಸುವುದಿಲ್ಲ. ಒಳ್ಳೆಯ ವಿದ್ಯಾಭ್ಯಾಸ ಇರದ ಕಾರಣ ಒಳ್ಳೆಯ ಕೆಲಸ ಸಿಗುವುದಿಲ್ಲ. ಕೆಲಸ ಇಲ್ಲದೆ ಐಷಾರಾಮದ ಸಂಪಾದನೆ ಮಾಡಲು ಕಳ್ಳತನಕ್ಕೆ ಕೈ ಹಾಕುತ್ತಾರೆ. ಇನ್ನು ಸಂಸ್ಕಾರದ ವಿಚಾರಕ್ಕೆ ಬಂದರೆ ವಿದ್ಯೆ ಕಲಿಸುವ ಮನೆಯವರು ಸಂಸ್ಕಾರ ಹೇಳಿ ಕೊಡಲು ಮರೆಯುತ್ತಾರೆ. ಸಣ್ಣ ವಯಸ್ಸಿನಲ್ಲೇ ಬೇರೆ ಮಕ್ಕಳಿಗಿಂತ ದುಬಾರಿ ಎನಿಸುವಂಥ ಸ್ಕೂಲ್ ಬ್ಯಾಗ್ ತೆಗೆದುಕೊಡುವ ಮೂಲಕ ಅವರಿಗೆ ತಾರತಮ್ಯ ಮಾಡುವುದನ್ನು ಕಲಿಸುತ್ತೇವೆ. ಇವೆರಡೂ ಬದಲಾದ ದಿನಗಳಲ್ಲಿ ಅಪರಾಧದ ಸಂಖ್ಯೆಯೂ ಇಳಿಮುಖವಾಗಬಹುದು. ಆದರೆ ನಾವು ಅಪರಾಧಕ್ಕೆ ಹೊಂದಿಕೊಳ್ಳುತ್ತಿದ್ದೇವೆ ಎನ್ನುವುದೇ ದುರಂತ.
ಡ್ರಗ್ಸ್ ಬಗ್ಗೆ ರಘು ರಾಮಪ್ಪ ಹೇಳಿದ್ದೇನು?
ಸಿನಿಮಾದ ಮೂಲಕ ಒಳ್ಳೆಯ ಸಂದೇಶ ನೀಡಲು ಸಾಧ್ಯ ಎಂದು ನೀವು ನಂಬುತ್ತೀರ?
ತುಂಬ ವಿಷಯಗಳನ್ನು ಸಿನಿಮಾದ ಮೂಲಕ ಮಾಡಲು ಹೋಗುತ್ತೇನೆ. ಅದಕ್ಕೋಸ್ಕರ ಬೈಸಿಕೊಂಡಿದ್ದೇನೆ. ಉದಾಹರಣೆಗೆ `ಟಗರು' ಮಾಡಬೇಕಾದರೆ ಅದರಲ್ಲಿ ಹಲವಾರು ವಿಚಾರಗಳಿದ್ದವು. ಅದನ್ನು ಮಾಡಬೇಕಾದರೆ ಪೊಲೀಸರು `ಹುಷಾರು' ಅಂದ್ರು. ಒಬ್ಬ ಪೊಲೀಸ್ ಅಧಿಕಾರಿ ತಮ್ಮ ಪರವಾದ ಚಿತ್ರ ಮಾಡುವಾಗ ಎಚ್ಚರಿಕೆ ವಹಿಸಿಕೊಳ್ಳುವಂತೆ ಸಲಹೆ ನೀಡುವ ಪರಿಸ್ಥಿತಿ ಯಾಕೆ ಇದೆ ಎನ್ನುವ ಯೋಚನೆ ಬಂತು. ಅಂದರೆ ಸಮಾಜ ಅಷ್ಟೊಂದು ಹಾಳಾಗಿದೆ ಎಂದು ತಾನೇ ಅರ್ಥ? ನೀವು ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಇದ್ದಾಗ ಮನೆಯಿಂದ ಫೋನ್ ಮಾಡಿದವರು `ಹುಷಾರಾಗಿ ಬಾ' ಅಂತಾರೆ. ಹಾಗಂದರೇನು? ಸಮಾಜ ಸರಿಯಾಗಿಲ್ಲ ಎಂದು ಅರ್ಥ ತಾನೇ? ನಾನು ನನಗೋಸ್ಕರ ಸಿನಿಮಾ ಮಾಡಬೇಕು ಎನ್ನುವುದಕ್ಕಿಂತ ನಿರ್ಮಾಪಕರಿಗೆ ಗೆಲುವಿನ ಭರವಸೆ ಮೂಡಿಸುವ ಚಿತ್ರ ಮಾಡಬೇಕು. ನನಗೋಸ್ಕರ ಆಹಾರ ಮಾಡಿ ತಿಂದುಕೊಳ್ಳಬಹುದು ಅಷ್ಟೇ. ಆದರೆ ಜನರಿಗಾಗಿ ಸಿನಿಮಾ ಮಾಡುವುದು ಎಂದರೆ ಮಗುವಿಗೆ ಮಾಡಿಕೊಡುವಷ್ಟು ಕಾಳಜಿಯಿಂದ ಮಾಡಬೇಕಾಗುತ್ತದೆ. ಮಗುವಿಗೆ ಅನ್ನ ಕಲಸಿ ತುಪ್ಪ ಹಾಕಿ ಕೊಡುವುದಾದರೂ ನಾವು ಮೊದಲು ಕೈ ತೊಳೆದು ಶುದ್ಧವಾಗಿರಬೇಕು. ಆದರೆ ಅಂತಿಮವಾಗಿ ಏನನ್ನಾದರೂ ಕಮರ್ಷಿಯಲ್ಲಾಗೇ ಹೇಳಬೇಕಾಗುತ್ತದೆ.
ಚಿತ್ರರಂಗದವರಿಗೆ ಡ್ರಗ್ಸ್ ಮೋಹ ಮೂಡಲು ವಿಶೇಷ ಕಾರಣಗಳೇನಾದರೂ ಇವೆ ಅನಿಸಿದೆಯೇ?
ಎಲ್ಲವೂ ಮನಸಿನ ಮೇಲೆ ಹೇರುವಂಥದ್ದು. ಎಲ್ಲರಿಗೂ ನಿರಂತರವಾದ ಸುಖ ಬೇಕು. ನಾನು ನಿರಂತರವಾಗಿ ಟೀನೇಜ್ ಹುಡುಗನಂತೆ ಇರಬೇಕು ಅಂದರೆ ಹೇಗೆ? ಹಲ್ಲು ಉದುರಿ ಹೋಗುವುದು ಏಕೆ ಗೊತ್ತೇ? ಇನ್ನು ಮುಂದೆ ಜಗಿದು ತಿನ್ನುವಂಥದ್ದು ನಿನ್ನ ದೇಹಕ್ಕೆ ಯೋಗ್ಯವಲ್ಲ ಎಂದು ಅದರ ಅರ್ಥ. ಆದರೆ ನಾವು ಚಿನ್ನದ ಹಲ್ಲು ಕಟ್ಟಿಕೊಂಡು ಜಗಿಯುತ್ತೇವೆ ಎಂದುಕೊಳ್ಳುವವರು. ಹಲ್ಲು, ಕೃತಕ ಕೂದಲು ಹೀಗೆ ಎಲ್ಲಕ್ಕೂ ಬೇಡಿಕೆ ಇರುವವರೆಗೆ ಮಾರುಕಟ್ಟೆಯೂ ಸಹಜ. ಮದ್ಯ ಸೇವಿಸುವವರಿಗಾಗಿ ಒಂದು ದಿನ ಲಾಕ್ಡೌನ್ ನಡುವೆ ವೈನ್ ಶಾಪ್ ತೆರೆದಾಗ 400 ಕೋಟಿ ವ್ಯಾಪಾರ ಆಯಿತು! ಅದನ್ನು ಬಿಟ್ಟು ಬೇರೆ ಯಾವುದೇ ಒಂದು ವ್ಯಾಪಾರದಿಂದ ಅಷ್ಟು ಸಂಪಾದನೆ ಸಾಧ್ಯವೇ? ಮನುಷ್ಯನ ಬೆಂಕಿ ಎನ್ನುವುದು ನಶೆಯ ಕಡೆಗೆ ಇದೆ ಎನ್ನುವುದಕ್ಕೆ ಅದೇ ಸ್ಪಷ್ಟ ಉದಾಹರಣೆ. ಹುಡುಗಿ ಸಹಜವಾಗಿ ವಯಸ್ಸಿಗೆ ಬಂದಾಗ ಆಗುವ ಬದಲಾವಣೆಯಲ್ಲಿ ಖರ್ಚುಗಳೇನಿವೆ? ಆಕೆಯ ದೇಹದಲ್ಲಾದ ಆ ಪ್ರಗತಿಯ ಬಗ್ಗೆ ತಾಯಿಯೇ ಮಾಹಿತಿ ಕೊಡುತ್ತಾಳೆ. ತಲೆಗೆ ಹಚ್ಚೋ ಕೊಬ್ಬರಿ ಎಣ್ಣೆ, ಮೈಗೆ ಹಚ್ಚುವ ಅರಸಿನ ಬಿಟ್ಟರೆ ಬೇರೆ ಖರ್ಚುಗಳೇ ಇಲ್ಲ. ಆದರೆ ಈಗ ಒಬ್ಬಳು ಹೆಣ್ಣು ಮಗಳಿಗೆ ಸೌಂದರ್ಯ ವರ್ಧಕಕ್ಕೆಂದೇ ಹದಿನೈದರಿಂದ ಇಪ್ಪತ್ತು ಸಾವಿರ ಖರ್ಚಾಗುತ್ತದೆ. ಅವುಗಳನ್ನು ನಿಮಗೆ ಯಾರು ತಂದು ಕೊಡುತ್ತಾರೆ? ಒಟ್ಟಿನಲ್ಲಿ ಆಗಲೇ ಹೇಳಿದಂತೆ ವಿದ್ಯೆ ಮತ್ತು ಸಂಸ್ಕಾರ ಕಲಿಯುವ, ಮಕ್ಕಳಿಗೆ ಕಲಿಸುವ ಮೂಲಕ ಮಾತ್ರ ಇವುಗಳನ್ನು ಮೂಲದಿಂದಲೇ ನಿಯಂತ್ರಿಸಲು ಸಾಧ್ಯ.