ಶ್ರೀನರಸಿಂಹ ನಿರ್ದೇಶನದ, ಎಆರ್ ವಿಖ್ಯಾತ್ ನಿರ್ಮಾಣದ ‘ಇನ್ಸ್‌ಪೆಕ್ಟರ್ ವಿಕ್ರಮ್’ ಫೆ.5ರಂದು ತೆರೆಗೆ ಬರುತ್ತಿದೆ. ಟೀಸರ್, ಟ್ರೇಲರ್ ಮೂಲಕ ಸಾಕಷ್ಟುನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಅವರ ಜತೆಗಿನ ಮಾತುಕತೆ ಇಲ್ಲಿದೆ.
ಕೇಶವ
ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರ ಬರುತ್ತಿರುವ ಮೊದಲ ಚಿತ್ರ ನಿಮ್ಮದೇ. ಹೇಗನಿಸುತ್ತಿದೆ?
ಚಿತ್ರಮಂದಿರದ ತುಂಬಾ ಜನ ಕೂರುವ ಅವಕಾಶ ಸಿಕ್ಕಿದೆ. ಜನರಿಂದ ಸಿನಿಮಾ ಮಂದಿರ ತುಂಬಿದರೆ ಹೇಗಿರುತ್ತದೆ ಎಂದು ಮಾತುಗಳಲ್ಲಿ ಹೇಳಲಾಗದು. ಯಾಕೆಂದರೆ ಆ ಸಂಭ್ರಮವೇ ಬೇರೆ. ನಮ್ಮ ‘ಇನ್ಸ್‌ಪೆಕ್ಟರ್ ವಿಕ್ರಮ್’ ಚಿತ್ರ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತದೆಂಬ ಭರವಸೆ ಇದೆ.
ನಗಿಸಿ ರಂಜಿಸಿ ಖುಷಿ ಪಡಿಸಿ ಆಚೆ ಕಳಿಸ್ತೀನಿ: ನರಸಿಂಹ
ನೀವು ಬಾಲ್ಯದಲ್ಲೇ ಪೊಲೀಸ್ ಕಾಸ್ಟೂ್ಯಮ್ ತೊಟ್ಟಪೋಟೋದೊಂದಿಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದಲ್ಲ?
ಯಾಕೆಂದರೆ ನನಗೆ ಪೊಲೀಸ್ ಪಾತ್ರ ಮತ್ತು ಪೊಲೀಸ್ ಡ್ರಸ್ ಎಂದರೆ ಚಿಕ್ಕಂದಿನಿಂದಲೂ ಆಸೆ. ನಾನು ಹೀರೋ ಆದರೆ, ಪೊಲೀಸ್ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕೆಂದುಕೊಳ್ಳುತ್ತಿದ್ದೆ. ನನ್ನ ಈ ಆಸೆ 25ನೇ ಚಿತ್ರಕ್ಕೆ ಈಡೇರಿದೆ.
ಯಾಕೆ ಪೊಲೀಸ್ ಪಾತ್ರ ಅಂದರೆ ಅಷ್ಟುಇಷ್ಟ?
ಇದಕ್ಕೆ ಕಾರಣ ನನ್ನ ತಂದೆ ದೇವರಾಜ್ ಅವರು. ಅವರು ಪೊಲೀಸ್ ಪಾತ್ರಗಳಲ್ಲೇ ಹೆಚ್ಚಾಗಿ ಮಿಂಚಿದವರು. ಡೈನಾಮಿಕ್ ಸ್ಟಾರ್ ಪಟ್ಟದ ಹಿಂದೆ ಈ ಖಾಕಿ ಡ್ರಸ್ ತುಂಬಾ ಕೆಲಸ ಮಾಡಿದೆ. ನಾನು ಪೊಲೀಸ್ ಮಾಡಬೇಕು ಎನಿಸಿದ್ದು, ಈಗ ಈ ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಕ್ಕೂ ನನ್ನ ತಂದೆಯೇ ಸ್ಫೂರ್ತಿ.
ನಿಮ್ಮ ಆಸೆಯಂತೆ ಖಾಕಿ ಡ್ರಸ್ ತೊಟ್ಟಿದ್ದೀರಿ?
ಹೌದು. ಅದೇ ದೊಡ್ಡ ಖುಷಿ. ಈ ಹಿಂದೆ ಬಂದ ‘ಕೋಟೆ’ ಚಿತ್ರದಲ್ಲಿ ನಾನು ಪೊಲೀಸ್ ಆಗಬೇಕು ಎಂದು ಕನಸು ಕಾಣುತ್ತಿರುತ್ತೇನೆ. ಆದರೆ, ವಿಲನ್‌ಗಳು ಅಡ್ಡ ಬರುತ್ತಿರುತ್ತಾರೆ. ಒಂದೇ ದೃಶ್ಯದಲ್ಲಿ ಪೊಲೀಸ್ ಡ್ರೆಸ್ ಹಾಕುತ್ತೇನೆ. ಸಿನಿಮಾ ಮುಗಿಯುತ್ತದೆ. ಆದರೆ, ‘ಇನ್ಸ್‌ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ಪೂರ್ತಿ ಪೊಲೀಸ್ ಪಾತ್ರ ಮಾಡಿದ್ದೇನೆ. ಈ ಪಾತ್ರವೇ ನನ್ನ ಕುತೂಹಲಕ್ಕೆ ಕಾರಣವಾಗಿ, ನಾನೂ ಕೂಡ ಒಬ್ಬ ಪ್ರೇಕ್ಷಕನಂತೆ ಈ ಚಿತ್ರಕ್ಕಾಗಿ ಕಾಯುತ್ತಿದ್ದೇನೆ.
ಮೂರು ಶೇಡ್‌ನಲ್ಲಿ ಪ್ರಜ್ವಲ್ ದೇವರಾಜ್; 'ಅಬ್ಬರ'ಕ್ಕೆ ಶಿವಣ್ಣ ಬೆಂಬಲ! ...
ನಿಮ್ಮನ್ನ ನೀವು ಪೊಲೀಸ್ ಡ್ರಸ್‌ನಲ್ಲಿ ನೋಡಿಕೊಂಡಾಗ ಏನೆಲ್ಲ ನೆನಪಾದವು?
ನಮ್ಮ ತಂದೆ ಜತೆಗೆ ಡಬ್ಬಿಂಗ್ ಸ್ಟುಡಿಯೋಗೆ ಹೋಗುತ್ತಿದ್ದದ್ದು, ಅವರು ತಮ್ಮ ಪೊಲೀಸ್ ಪಾತ್ರಕ್ಕೆ ಡಬ್ಬಿಂಗ್ ಮಾಡುತ್ತಿದ್ದದ್ದು, ಅವರಿಗೆ ಸೆಲ್ಯೂಟ್ ಮಾಡುತ್ತಿದ್ದದ್ದು, ಮನೆಯಲ್ಲಿ ಖಾಯಂ ಆಗಿದ್ದ ಪೊಲೀಸ್ ಕಾಸ್ಟೂ್ಯಮ್, ಅದನ್ನು ತೊಟ್ಟು ನಾನು ಪೋಟೋ ತೆಗೆಸಿಕೊಂಡಿದ್ದು... ಹೀಗೆ ಎಲ್ಲವೂ ನೆನಪಾದವು.
ಚಿತ್ರದ ಟೀಸರ್, ಟ್ರೇಲರ್ ನೋಡಿದರೆ ಖಡಕ್ ಪೊಲೀಸ್ ಅನಿಸಲ್ವಲ್ಲ?
ಟ್ರೇಲರ್, ಟೀಸರ್‌ನಲ್ಲಿ ನನ್ನ ಪಾತ್ರದ ಒಂದು ಮುಖ ಮಾತ್ರ ತೋರಿಸಿದ್ದಾರೆ. ಫನ್, ಹುಡುಗಾಟಿಕೆ ಇದೆ. ವಿಕ್ರಮ್ ಮತ್ತೊಂದು ಮುಖ ತೆರೆ ಮೇಲೆ ನೋಡಬೇಕು. ಖಡಕ್ ಇಮೇಜ್ ಜತೆಗೆ ಮೊದಲ ಬಾರಿಗೆ ಹಾಸ್ಯ ಮಾಡಿದ್ದೇನೆ. ಚಿತ್ರದ ಕೊನೆವರೆಗೂ ಈ ಹ್ಯೂಮರ್ ಸಾಗುತ್ತದೆ.
ನೀವು, ಭಾವನಾ, ರಘು ಮುಖರ್ಜಿ... ತುಂಬಾ ಅಪರೂಪ ಕಾಂಬಿನೇಷನ್ ಅನಿಸುತ್ತಿದೆಯಲ್ಲ?
ನಿಜ. ವಿಲನ್ ಪಾತ್ರಕ್ಕೆ ಯಾರು ಅಂತ ಚರ್ಚೆ ಮಾಡುತ್ತಿದ್ದಾಗ ನಾನೇ ಹೇಳಿದ ಹೆಸರು ರಘು ಮುಖರ್ಜಿ. ಅವರು ಆ ಪಾತ್ರಕ್ಕೆ ತುಂಬಾ ಸೂಕ್ತ ಅನಿಸಿತು. ಇನ್ನೂ ಭಾವನಾ ಜತೆ ಮೊದಲ ಬಾರಿಗೆ ನಟನೆ ಮಾಡಿದ್ದೇನೆ. ತೆರೆ ಮೇಲೆ ನೋಡುವ ಭಾವನಾ ಬೇರೆ, ಶೂಟಿಂಗ್ ಸೆಟ್‌ನಲ್ಲಿ ನೋಡುವ ಭಾವನಾ ಬೇರೆ. ತುಂಬಾ ಮಾತಾಡುತ್ತಾರೆ. ಟಾಕಿಂಗ್ ಗಲ್‌ರ್ ಅನ್ನಬಹುದು.
ಎಲ್ಲರಿಗೂ ದರ್ಶನ್ ಪಾತ್ರ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಇದೆಯಲ್ಲ?
ನಾನು ಮತ್ತು ದರ್ಶನ್ ಅವರು ಸಿನಿಮಾ ಆಚೆಗೆ ಹೇಗೆ ಸ್ನೇಹಿತರಾಗಿದ್ದೇವೋ ಅದೇ ಬಾಂಧವ್ಯ ಈ ಚಿತ್ರದಲ್ಲಿ ಮುಂದುವರಿದಿದೆ. ಅವರ ಪಾತ್ರ ಯಾಕೆ, ಹೇಗೆ ಬರುತ್ತದೆ ಎಂಬುದನ್ನು ನಾನು ಹೇಳುವುದಕ್ಕಿಂತ ನೀವು ನೋಡಬೇಕು. ನಾನು ಕೂಡ ಕಾಯುತ್ತಿದ್ದೇನೆ.