ನಿರ್ದೇಶಕರೊಂದಿಗೆ ಜಗಳ ಮಾಡಿದ್ರು ಕನ್ನಡತಿ ನಟಿ ವರುಧಿನಿ

By Suvarna News  |  First Published Jan 31, 2021, 4:04 PM IST

ಬಹುಶಃ ಸಾರಾ ಅಣ್ಣಯ್ಯ ಎನ್ನುವುದಕ್ಕಿಂತ `ವರೂಧಿನಿ' ಎಂದರೇನೇ ಜನ ಈಕೆಯನ್ನು ಗುರುತಿಸುವಂತಾಗಿದೆ. ಅದಕ್ಕೆ ಕಾರಣ `ಕನ್ನಡತಿ' ಎನ್ನುವ ಧಾರಾವಾಹಿ. ಆದರೆ ಅಂಥದೊಂದು ಪಾತ್ರ ಕೊಟ್ಟ ನಿರ್ದೇಶಕರೊಂದಿಗೆ ತಾನು ದೊಡ್ಡ ರಂಪಾಟವನ್ನೇ ಮಾಡಿದ್ದೆ ಎಂದಿದ್ದಾರೆ ಸಾರಾ ಅಣ್ಣಯ್ಯ. ಕಾರಣ ಇಲ್ಲಿದೆ.
 


ಶಶಿಕರ ಪಾತೂರು

`ಕನ್ನಡತಿ' ಧಾರಾವಾಹಿಯ ಮೂರು ಪ್ರಧಾನ ಪಾತ್ರಗಳಲ್ಲಿ ಒಂದು ವರೂಧಿನಿ. ಒಂದೊಮ್ಮೆ ಎಲ್ಲ ಪಾತ್ರಗಳನ್ನು ಮೀರಿದಂಥ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದಕ್ಕೆ ಕಾರಣ ಈ ಪಾತ್ರ ಮುಂದಿನ ಕ್ಷಣ ಹೇಗೆ ವರ್ತಿಸುತ್ತದೆ ಎನ್ನುವ ಬಗ್ಗೆ ಯಾವುದೇ ಸುಳಿವು ಯಾರಿಗೂ ಇರುವುದಿಲ್ಲ.

Tap to resize

Latest Videos

undefined

ಅಂಥದೊಂದು ಸ್ವಭಾವದ ಪಾತ್ರವನ್ನು ಸೃಷ್ಟಿಸಿದ ಕತೆಗಾರರಿಗೆ ಸಲ್ಲುವಷ್ಟೇ ಮನ್ನಣೆ ಅದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಸಾರಾ ಅಣ್ಣಯ್ಯ ಅವರಿಗೂ ಸಲ್ಲುತ್ತದೆ. ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇದು.

`ಕನ್ನಡತಿ' ನಿರ್ದೇಶಕ ಈ ಕೇರಳದ ಯಶವಂತ!

ಪಾತ್ರವನ್ನು ಒಪ್ಪಿಕೊಳ್ಳುವಾಗಲೇ `ವರೂಧಿನಿ'ಗೆ ಇಷ್ಟು ಜನಪ್ರಿಯತೆ ಸಿಗಬಹುದೆನ್ನುವ ನಿರೀಕ್ಷೆ ನಿಮಗಿತ್ತೇ?

ಖಂಡಿತವಾಗಿ ಇಲ್ಲ! ವಾಹಿನಿಯಿಂದ ನನಗೆ ಕರೆ ಬರುವಾಗ ನಾನು ಚೆನ್ನೈನಲ್ಲಿ `ಪಬ್ ಗೋವ' ಎನ್ನುವ ವೆಬ್ ಸೀರೀಸ್ ಮಾಡುತ್ತಿದ್ದೆ. ಅವರು ನನಗೆ ಹೇಳಿದ್ದು ಇಬ್ಬರು ನಾಯಕಿಯರಲ್ಲಿ ಒಬ್ಬಳ ಪಾತ್ರ ಎಂದು. ವರೂಧಿನಿ ಪಾತ್ರ ಇಷ್ಟು ವಿಭಿನ್ನವಾಗಿ ಸಾಗುತ್ತದೆ ಎನ್ನುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ನನಗೆ ಅವರು ಉದಾಹರಣೆ ನೀಡಿದ್ದು `ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿನ  `ಚಿನ್ನು ಗೊಂಬೆ' ಪಾತ್ರಗಳ ಮಾದರಿಯಲ್ಲಿರುತ್ತದೆ.

ಒಟ್ಟಿನಲ್ಲಿ ನನ್ನದು ಪ್ರಧಾನ ಪಾತ್ರ ಎನ್ನುವುದಕ್ಕಾಗಿ ಮಾತ್ರವಲ್ಲ, ಅಪರೂಪಕ್ಕೆ ಕನ್ನಡದಲ್ಲಿ ಸಿಕ್ಕ ಅವಕಾಶ ಎನ್ನುವ ಕಾರಣಕ್ಕಾಗಿ ತಕ್ಷಣವೇ ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ ಫೋನಲ್ಲೇ ಒಪ್ಪಿಗೆ ನೀಡುವಾಗ ನನಗೆ ಧಾರಾವಾಹಿಯ ಹೆಸರು, ಪ್ರಸಾರವಾಗುವ ಸಮಯ ಯಾವುದೂ ಗೊತ್ತಿರಲಿಲ್ಲ.

ನಟನೆಯಲ್ಲೇ ಸುಖ ಎನ್ನುತ್ತಾರೆ ನಿಮಿಕಾ ರತ್ನಾಕರ!

ಈಗ ಕನ್ನಡ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿದೆಯಂತೆ.. ನಿಜವೇ?

ಹೌದು. `ಕನ್ನಡತಿ'ಯ ಜನಪ್ರಿಯತೆ ಹೆಚ್ಚಿದಂತೆ ನನಗೆ ಬರುತ್ತಿರುವ ಅವಕಾಶಗಳು ಹೆಚ್ಚಿವೆ. ಆದರೆ ನನಗೆ ಈ ಧಾರಾವಾಹಿ ತಂಡವನ್ನು ಬಿಟ್ಟು ಹೋಗಲು ಮನಸಿಲ್ಲ. ಯಾಕೆಂದರೆ ನನ್ನನ್ನು ಈಗ ಸಾರಾ ಅಣ್ಣಯ್ಯ ಎಂದು ಗುರುತಿಸುವುದಕ್ಕಿಂತ ವರೂಧಿನಿ ಎಂದು ಗುರುತಿಸುವವರೇ ಹೆಚ್ಚು. ಅಷ್ಟು ಹೆಸರು ಕೊಟ್ಟ ಧಾರಾವಾಹಿಯನ್ನು, ನನಗೊಂದು ಸಿನಿಮಾ ಅವಕಾಶ ಸಿಕ್ಕಿತು ಎನ್ನುವ ಕಾರಣಕ್ಕೆ ಒಮ್ಮೆಲೆ ತೊರೆಯಲು ಸಾಧ್ಯವಿಲ್ಲವಲ್ಲ. ಧಾರಾವಾಹಿಯ ಶೂಟಿಂಗ್‌ಗೆ ಹೊಂದಿಕೊಂಡಂತೆ  ಒಂದು ಸಿನಿಮಾ ಸಿಕ್ಕು, ಆ ಪಾತ್ರ ನನಗೆ ಇಷ್ಟವಾದರೆ ಮಾಡಬಲ್ಲೆನೇ ಹೊರತು, ಸಿನಿಮಾ ಎನ್ನುವ ಕಾರಣಕ್ಕೆ ತಕ್ಷಣವೇ ಒಪ್ಪಿಕೊಳ್ಳಲಾರೆ.

ಲಗ್ನದಲ್ಲಿ ರಂಗಭೂಮಿ ಕಲಾವಿದರನ್ನು ಸೇರಿಸಿದ ಕಾಸರಗೋಡು ಚಿನ್ನ

`ಕನ್ನಡತಿ' ತಂಡದೊಡನೆ ನಿಮ್ಮ ಅನ್ಯೋನ್ಯತೆ ಆ ಮಟ್ಟಕ್ಕಿದೆಯೇ?

ಮೊದಲು ಇರಲಿಲ್ಲ! ತಂಡದಲ್ಲಿ ಕಿರಣ್ ರಾಜ್ ಮತ್ತು ಆದಿ ಪಾತ್ರಧಾರಿ ರಕ್ಷಿತ್ ಎನ್ನುವ ಇಬ್ಬರನ್ನು ಬಿಟ್ಟರೆ ಎಲ್ಲರೂ ನನಗೆ ಅಪರಿಚಿತರಾಗಿದ್ದರು. ಮಾತ್ರವಲ್ಲ ಇಲ್ಲಿನ ಶೂಟಿಂಗ್ ರೀತಿಯೂ ಹೊಸದಾಗಿ ಕಂಡ ಕಾರಣ,  ಆರಂಭದಲ್ಲಿ ನನಗೆ ಬಹಳಷ್ಟು ಕಷ್ಟವಾಯ್ತು. ಯಾಕೆಂದರೆ ನಾನು ಹಿಂದೆ ತಮಿಳಲ್ಲಿ ಮಾಡಿದ್ದ ಧಾರಾವಾಹಿಗಳಲ್ಲಿ ಲೈವ್ ರೆಕಾರ್ಡಿಂಗ್ ಇರಲಿಲ್ಲ. ಅಲ್ಲೆಲ್ಲ ಶೂಟಿಂಗಲ್ಲೇ ಸಂಭಾಷಣೆ ಹೇಳಿ ಕೊಡೋರು, ನಾವು ಜಸ್ಟ್ ಲಿಪ್ ಸಿಂಕ್ ಮಾಡಿ ಆಮೇಲೆ ಡಬ್ಬಿಂಗ್ ಮಾಡ್ಕೊಳ್ತಿದ್ದೆವು. ಆದರೆ ಇಲ್ಲಿ ಬಂದ ಮೇಲೆ ಪುಟಗಟ್ಟಲೆ ಸಂಭಾಷಣೆಗಳನ್ನು ಮೊದಲೇ ಓದಿ ಕಲಿಯಬೇಕಾದ ಅನಿವಾರ್ಯತೆ ಬಂತು.

ಅದನ್ನು ನೆನಪಿರಿಸಿಕೊಂಡು ಲೈವಾಗಿ ಡೆಲಿವರ್ ಮಾಡುವುದು ತುಂಬಾನೇ ಕಷ್ಟವಾಯ್ತು.ಅದೇ ಕಾರಣಕ್ಕಾಗಿ ನಿರ್ದೇಶಕರೊಂದಿಗೆ ಜಗಳವೂ ಆಗಿತ್ತು. ಕೊನೆಗೆ ನಾನೇ ಅವರಿಗೆ ಹೇಳಿದೆ, "ಸರ್ ನನಗೆ ಗದರಬೇಡಿ. ನೀವು ಗದರಿದರೆ ನನಗೆ ವಾಯ್ಸೇ ಬರಲ್ಲ. ಬಳಿಕ ನಾನು ಕೂಡ ಜಗಳವಾಡುವ ಹಾಗೆ ಆಗುತ್ತದೆ. ದಯವಿಟ್ಟು ಆರಾಮವಾಗಿ ಹೇಳಿ. ನಾನು ಸರಿ ಮಾಡ್ಕೋತೇನೆ" ಅಂದೆ. ಅವರು ಅದನ್ನು ಅರ್ಥ ಮಾಡಿಕೊಂಡರು. ಆಕ್ಚುವಲಿ ಯಾವ ಕಲಾವಿದರಿಂದ ಹೇಗೆ ಅಭಿನಯ ತೆಗೆಯಬೇಕು ಎನ್ನುವುದರಲ್ಲಿ ನಮ್ಮ ನಿರ್ದೇಶಕರು ನಿಸ್ಸೀಮರು. ಆದರೆ ಡೈಲಾಗ್ ಶೀಟ್‌ನಲ್ಲಿ ಕೊಟ್ಟ ಸಂಭಾಷಣೆಯನ್ನೇ ಆಡಬೇಕು, ಪ್ರತಿ ಪಾತ್ರ ಅವರು ಹೇಳಿದಷ್ಟೇ ನಟನೆ ಮಾಡಬೇಕು, ಅದಕ್ಕಿಂತ ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು ಎನ್ನುವ ವಿಚಾರದಲ್ಲಿ ತುಂಬ ಕಟ್ಟುನಿಟ್ಟಾಗಿರುತ್ತಾರೆ.

ನಮ್ಮ ನಿರ್ದೇಶಕರು ಎಲ್ಲವನ್ನೂ ಹೇಳಿಕೊಟ್ಟು ನನ್ನನ್ನು ಒಂದು ಹಂತಕ್ಕೆ ತಂದಿದ್ದಾರೆ. ನನ್ನ ನಟನೆಯನ್ನು ಇಂಪ್ರೂವ್ ಮಾಡಿಸುವುದು ಸೇರಿದಂತೆ ನನ್ನ ಜನಪ್ರಿಯತೆಯಲ್ಲಿ ಅವರ ಪಾಲು ದೊಡ್ಡದಾಗಿದೆ.

click me!