ಜೀ ಕನ್ನಡದ `ನಾಗಿಣಿ 2' ಧಾರಾವಾಹಿ ವೀಕ್ಷಕರಿಗೆ ನಿನಾದ್ ಪರಿಚಯ ಚೆನ್ನಾಗಿಯೇ ಇರುತ್ತದೆ. ತ್ರಿಶೂಲ್ ಪಾತ್ರದ ಮೂಲಕ ಪ್ರೇಕ್ಷಕರ ಮನ ಸೆಳೆದಿರುವ ಈ ಸುಂದರಾಂಗನ ಹೆಸರೇ ನಿನಾದ್. ಅವರೊಂದಿಗಿನ ವಿಶೇಷ ಮಾತುಕತೆ ಇಲ್ಲಿದೆ.
ಇವರು ಕಲಾವಿದರ ಕುಟುಂಬದಿಂದಲೇ ಬಂದವರು. ತಂದೆ ಪ್ರಸನ್ನ ರಾವ್ ಮತ್ತು ತಾಯಿ ಮಾಲಿನಿ ಪ್ರಸನ್ನ ಇಬ್ಬರೂ ರಂಗಭೂಮಿ ಕಲಾವಿದರು. ನಿನಾದ್ ರಂಗಭೂಮಿಯಿಂದ ಬಣ್ಣದ ಲೋಕವನ್ನು ನೋಡಿಕೊಂಡೇ ಬೆಳೆದರೂ ಕಿರುತೆರೆ ನಟನಾಗುವ ಅವಕಾಶ ಅವರಿಗೆ ಅಷ್ಟು ಸುಲಭದಲ್ಲಿ ದೊರಕಿರಲಿಲ್ಲ. ಆದರೆ ನಾಗಿಣಿಯ ಮೂಲಕ ಸಿಕ್ಕಂಥ ಜನಪ್ರಿಯತೆ ಅದರ ಹಿಂದಿನ ಎಲ್ಲ ಆತಂಕಗಳನ್ನು ಮರೆಯುವಂಥದ್ದು. ಈ ಎಲ್ಲ ವಿಚಾರಗಳ ಬಗ್ಗೆ ನಿನಾದ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಇಲ್ಲಿ ಮಾತನಾಡಿದ್ದಾರೆ.
- ಶಶಿಕರ ಪಾತೂರು
undefined
ಕಲಾವಿದನಾಗಿ ರಂಗಭೂಮಿಯಲ್ಲಿ ನಟಿಸಿದ ಅನುಭವ ಹೇಗಿತ್ತು?
ನಾನು ರಂಗಭೂಮಿಯಲ್ಲಿ ತಂದೆ,ತಾಯಿ ಮೊದಲಾದವರ ಅಭಿನಯ ನೋಡಿಕೊಂಡೇ ಬೆಳೆದೆ. ಏಳನೇ ವರ್ಷದವನಿದ್ದಾಗಲೇ `ಟೈಮ್ ಪಾಸ್ ತೆನಾಲಿ' ಎನ್ನುವ ಧಾರಾವಾಹಿಯಲ್ಲಿ ಬಾಲನಟನಾಗಿ ರಂಗ ಪ್ರವೇಶಿಸಿದೆ. ಬಳಿಕ `ಕುಬೇರಪ್ಪ ಆಂಡ್ ಸನ್ಸ್' ಎನ್ನುವ ಧಾರಾವಾಹಿಯಲ್ಲಿಯೂ ನಟಿಸಿದೆ. ಹಾಗಾಗಿ ನಟನೆಯ ಕುರಿತಾದ ರುಚಿ ಸಿಕ್ಕಿತ್ತು. ಶಾಲಾ, ಕಾಲೇಜ್‌ಗಳಲ್ಲಿ ಕೂಡ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಆದರೆ ಒಬ್ಬ ಯುವನಟನಾಗಿ ಪ್ರವೇಶಿಸುವಾಗ ಅಭಿನಯ ಪಾಠ ಅರಿತುಕೊಂಡೇ ಇರಬೇಕು ಎನ್ನುವುದು ನನ್ನ ಆಶಯವಾಗಿತ್ತು. ಹಾಗೆ ಅಧಿಕೃತವಾಗಿ ರಂಗಭೂಮಿಗೆ ಸೇರಿಕೊಂಡೆ. ಅಲ್ಲಿ ನಟನೆಗಿಂತ ಬ್ಯಾಕ್‌ಸ್ಟೇಜ್ ಕೆಲಸಗಳು, ಮೇಕಪ್ ವಿಭಾಗಗಳಲ್ಲಿ ಕೆಲಸ ಮಾಡಿದ್ದೇ ಹೆಚ್ಚು. `ತ್ರಿ ರೋಸಸ್' ನಾಟಕ ನನಗೆ ನಟನೆಯಲ್ಲಿ ಬೆಳೆಯಬಹುದು ಎನ್ನುವ ಧೈರ್ಯ ನೀಡಿತು. ನಿರ್ದೇಶಕ ಅಕ್ಷಯ್ ಕಾರ್ತಿಕ್ ಅವರು ನನಗೆ ಮೆಂಟರ್ ಎಂದೇ ಹೇಳಬಹುದು. `ಗುಲೇಬ ಕಾವಲಿ' ನಾಟಕದಲ್ಲಿ ಎಂ ಎಸ್ ಸತ್ಯು ಅವರೊಂದಿಗೆ ಕೆಲಸ ಮಾಡುವ ಅವಕಾಶ ಲಭಿಸಿತು. ಮುಂದೆ `ಸ್ವಪ್ನ ಸಿದ್ಧಿ' ಸೇರಿದಂತೆ ಒಂದಷ್ಟು ನಾಟಕಗಳಲ್ಲಿ ಮಾಡಿದೆ. ಹೆಚ್ಚು ನಾಟಕಗಳಲ್ಲಿ ಮಾಡದಿದ್ದರೂ ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು, ಅಸ್ಸಾಮ್, ಷಿಲ್ಲಾಂಗ್ ಹೀಗೆ `ಥಗ್ಸ್ ಥಿಯೇಟರ್ಸ್' ಜೊತೆಗೆ ಭಾರತದಾದ್ಯಂತ ಕೆಲಸ ಮಾಡುವ ಅವಕಾಶ ಲಭಿಸಿತ್ತು.
ರಂಗಭೂಮಿಯ ಅನುಭವವು ಕಿರುತೆರೆಯಲ್ಲಿ ನಿಮಗೆ ಹೇಗೆ ಸಹಕಾರಿಯಾಯಿತು?
ಸ್ವತಃ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರಿಂದಾಗಿ ನನಗೆ ಆಡಿಶನ್ಸ್ ಬಗ್ಗೆ ಮಾಹಿತಿ ದೊರಕಿತೇ ಹೊರತು ಅವಕಾಶಗಳಲ್ಲ! ಯಾಕೆಂದರೆ ನಾನು ನೂರಾರು ಆಡಿಶನ್‌ಗಳಲ್ಲಿ ಪಾಲ್ಗೊಂಡಿದ್ದೇನೆ. ಹತ್ತಾರು ಧಾರಾವಾಹಿಗಳಲ್ಲಿ ನನ್ನನ್ನು ಆಯ್ಕೆ ಮಾಡಿರುವುದಾಗಿ ಹೇಳುತ್ತಿದ್ದರು. ನಂಬಿ ಕುಳಿತಿರುತ್ತಿದ್ದ ನನಗೆ ಟಿವಿಯಲ್ಲಿ ಆ ಧಾರಾವಾಹಿಗಳ ಪ್ರಸಾರ ಶುರುವಾದಾಗಲೇ `ಓಹ್ ಇವರು ನನ್ನನ್ನು ಸೆಲೆಕ್ಟ್ ಮಾಡಿಲ್ಲ' ಎನ್ನುವ ಅರಿವಾಗುತ್ತಿತ್ತು. ಆದರೂ ಎರಡು ಒಳ್ಳೆಯ ಧಾರಾವಾಹಿಗಳ ಭಾಗವಾಗಲು ಸಾಧ್ಯವಾಯಿತು. ಐದೂವರೆ ವರ್ಷಗಳ ಹಿಂದೆ `ಅರಮನೆ' ಎನ್ನುವ ಧಾರಾವಾಹಿಯೊಂದಿಗೆ ಕೆಲಸ ಶುರು ಮಾಡಿದೆ. ಜೈಜಗದೀಶ್ ಅವರ ಪುತ್ರನ ಪಾತ್ರ ದೊರಕಿತ್ತು. ಅದರಲ್ಲಿ ಎರಡೂವರೆ ವರ್ಷಗಳ ಕಾಲ ನಟಿಸಿದ ಬಳಿಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಸಹ ನಾಯಕನಾಗಿ ಸುಮಾರು ಎರಡು ವರ್ಷ ನಟಿಸಿದೆ. ಇದೀಗ ಕಳೆದ ಒಂದೂವರೆ ವರ್ಷಗಳಿಂದ `ನಾಗಿಣಿ 2' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ನಟನಾಗಿ ನನ್ನದೇ ಆದ ಶೈಲಿ ಮೂಡಿಸಿಕೊಳ್ಳಲು, ನಿರ್ದೇಶಕರು ಹೇಳಿರುವುದನ್ನು ಬೇಗ ಅರ್ಥ ಮಾಡಿಕೊಳ್ಳಲು ರಂಗಭೂಮಿ ನನಗೆ ಸಹಾಯ ಮಾಡಿದೆ ಎನ್ನಬಹುದು.
ಗಡಿನಾಡಿನಿಂದ ಬಂದ ಯುವ ನಟ ರಘು ಭಟ್
`ನಾಗಿಣಿ 2' ಧಾರಾವಾಹಿಯ ಪಾತ್ರ ನಿಮಗೆ ಎಷ್ಟರ ಮಟ್ಟಿಗೆ ಸವಾಲಾಗಿದೆ?
ಇದು ನಾಯಕನಾಗಿ ನನಗೆ ಮೊದಲ ಧಾರಾವಾಹಿ. ಎರಡು ಧಾರಾವಾಹಿಗಳ ಬಳಿಕ ಇನ್ನು ನಟಿಸಿದರೆ ನಾಯಕ ಪಾತ್ರದಲ್ಲೇ ಎಂದುಕೊಂಡು ಸಣ್ಣ ಪಾತ್ರಗಳನ್ನು ಒಪ್ಪಿಕೊಳ್ಳದೆ ಸುಮ್ಮನಾಗಿದ್ದೆ. ಆರಂಭದಲ್ಲಿ ಇಬ್ಬರು ನಾಯಕರು ಎಂದಿದ್ದರು. ಇನ್ನು ನಾಯಕನ ಪಾತ್ರವನ್ನಷ್ಟೇ ಮಾಡುತ್ತೇನೆ ಎಂದು ನಿರ್ಧರಿಸಿದ್ದ ನನಗೆ ಅದೇ ಸಂದರ್ಭದಲ್ಲಿ ಸಿಕ್ಕಂಥ ಅವಕಾಶ ಇದು. ಧಾರಾವಾಹಿ ವೀಕ್ಷಕರಿಗೆ ನನ್ನ ಪಾತ್ರದ ಪ್ರಾಮುಖ್ಯತೆ ತಿಳಿದಿರುತ್ತದೆ. ಇದೊಂದು ಫ್ಯಾಂಟಸಿ ಕತೆ ಎಂದಾಗಲೇ ನನಗೆ ಅದು ಚಾಲೆಂಜ್ ಅನಿಸಿತ್ತು.
ಯಾಕೆಂದರೆ ಆರಂಭದಲ್ಲಿ ಅನುಭವಿ ಕಲಾವಿದರಾದ ಮೋಹನ್ ಅವರೊಂದಿಗೆ, ಮುನಿಯವರೊಂದಿಗೆ ನಟಿಸುವುದೇ ಒಂದು ರೀತಿಯ ಚಾಲೆಂಜಿಂಗ್ ಅನಿಸಿತ್ತು. ದೊಡ್ಡ ನಟರು ಎನ್ನುವ ಕಾರಣಕ್ಕೆ ನರ್ವಸ್ ಆಗಿದ್ದೆ. ಆದರೆ ಅವರು ತುಂಬಾ ಆತ್ಮೀಯವಾಗಿ ನಡೆಸಿಕೊಂಡ ಮೇಲೆ ಆ ಭಯ ಹೋಯಿತು. ಉಳಿದಂತೆ ಈ ಧಾರಾವಾಹಿಯಲ್ಲಿ ನನಗೆ ಕಂಪ್ಯೂಟರ್ ಗ್ರಾಫಿಕ್ಸ್ ದೃಶ್ಯಗಳು ಹೆಚ್ಚಿರುವುದು ಕೂಡ ಒಂದು ಸವಾಲು ಎನ್ನಬಹುದು. ಯಾಕೆಂದರೆ ನಾನು ಅಥವಾ ಜೊತೆಗಿರುವ ಪಾತ್ರ ಹಾವಾಗಿ ಬದಲಾಗುವ ಸನ್ನಿವೇಶಗಳು ಇರುವುದರಿಂದ ಆ ಹಾವನ್ನು ಕಲ್ಪಿಸಿಕೊಂಡು ಗ್ರೀನ್ ಮ್ಯಾಟ್ ಸ್ಟುಡಿಯೋದಲ್ಲಿ ನಟಿಸಬೇಕಾಗಿರುತ್ತದೆ. ರೋಪ್ ಹಾಕಿಕೊಂಡು ಮೇಲೆ ನೇತಾಡಿಸುತ್ತಾರೆ, ಫೈಟ್ ಸೀನ್‌ಗಳಲ್ಲಿ ನಟಿಸಬೇಕಿರುತ್ತದೆ ಇವೆಲ್ಲ ನನ್ನ ಪಾಲಿಗೆ ಹೊಸದು. ಇತ್ತೀಚೆಗೆ ಅದು ಕೂಡ ಅಭ್ಯಾಸವಾಗುತ್ತಿದೆ.
ಹೊಸ ಲುಕ್‌ನಲ್ಲಿ `ಹೂ ಮಳೆ'ಯ ಶ್ರೀರಾಮ್
ನಿಮ್ಮ ಮುಂದಿರುವ ಕನಸು ಏನು?
ನನಗಿದ್ದಿದ್ದು ಒಬ್ಬ ಜನಪ್ರಿಯ ಕಲಾವಿದನಾಗಬೇಕು ಎನ್ನುವ ಕನಸು. ಅದು `ನಾಗಿಣಿ'ಯ ಮೂಲಕ ನನಸಾಗಿದೆ. ಇದು ನನ್ನ ವೃತ್ತಿ ಬದುಕಿಗೆ ಬ್ರೇಕ್ ತಂದು ಕೊಟ್ಟ ಧಾರಾವಾಹಿ. ಹೆಚ್ಚು ಜನ ಗುರುತಿಸಿ ಪ್ರಶಂಸಿಸಿದ್ದಾರೆ. ಇನ್ನು ಏನಿದ್ದರೂ ಮತ್ತಷ್ಟು ಹೆಚ್ಚು ತೃಪ್ತಿ ನೀಡುವಂಥ ಪಾತ್ರಗಳು, ಸಾಕಷ್ಟು ರೀಚ್ ಆಗುವಂಥ ಅವಕಾಶಗಳು ಸಿಗಲೆನ್ನುವ ಆಶಯವಿದೆ. ಸಿನಿಮಾದ ಮೂಲಕ ಒಳ್ಳೆಯದೊಂದು ಕತೆಯಲ್ಲಿ, ನಮ್ಮ ಸೊಗಡನ್ನು ಪ್ರಪಂಚಕ್ಕೆ ತಲುಪಿಸುವ ಪಾತ್ರ ಮಾಡಬೇಕು ಅನಿಸುತ್ತದೆ.