ದೇವೇಗೌಡರು ಪ್ರಧಾನಿಯಾಗಿದ್ದಾಗ ಚಿಕಾಗೋದಲ್ಲಿ `ನಾಟ್ಯ ಕೋವಿದೆ' ಬಿರುದನ್ನು ಪಡೆದ ಪ್ರತಿಭಾವಂತೆ ಯಮುನಾ ಶ್ರೀನಿಧಿ. ಅಮೆರಿಕಾದಲ್ಲಿ `ಕನ್ನಡ ಕಲಿ' ಕಾರ್ಯಕ್ರಮದ ಮೂಲಕ ಕನ್ನಡ ಕಲಿಸಿದ, ಅಲ್ಲಿನ ಕನ್ನಡ ಸಂಘದ ಅಧ್ಯಕ್ಷೆ, ಉಪಾಧ್ಯಕ್ಷೆಯಾಗಿದ್ದ ಇವರು ಈಗ ನಟಿಯಾಗಿ ಕನ್ನಡಿಗರಿಗೆ ಪ್ರಿಯರು.
ಯಮುನಾ ಶ್ರೀನಿಧಿ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು ತಡವಾಗಿ. ಆದರೆ ಎಳು ವರ್ಷಗಳಲ್ಲಿ ಕನ್ನಡ ಕಿರುತೆರೆಯ ಅವಿಭಾಜ್ಯ ಅಂಗವೆನ್ನುವಂತೆ ಗುರುತಿಸಿಕೊಂಡಿದ್ದಾರೆ. ಎಂಟ್ರಿಗೆ ತಡವಾಗಲು ಕಾರಣ 21ನೇ ವರ್ಷದಲ್ಲಿ ಅಮೆರಿಕಾ ಸೇರಿಕೊಂಡವರು ಅಲ್ಲಿಯೇ 17 ವರ್ಷಗಳನ್ನು ಕಳೆದು ವಾಪಾಸಾಗಿದ್ದಾರೆ! ಇಲ್ಲಿ ಬಂದು ಕಿರುತೆರೆಗೆ ಪರಿಚಯವಾದ ಬಳಿಕ 12 ಧಾರಾವಾಹಿಗಳು ಮತ್ತು ಬೆಳ್ಳಿತೆರೆಯಲ್ಲಿ 37 ಸಿನಿಮಾ ಮಾಡಿದ್ದಾರೆ. ಅದರಲ್ಲಿ ಒಂದು ತಮಿಳು ಎರಡು ತೆಲುಗು ಚಿತ್ರಗಳೂ ಇವೆ. ಅಂದಹಾಗೆ ವಿದೇಶದಲ್ಲಿ ಕೂಡ ಇವರು ಕಲಾಕ್ಷೇತ್ರದಿಂದ ದೂರ ಇದ್ದವರಲ್ಲ. 600ರಷ್ಟು ಮಕ್ಕಳಿಗೆ ಭರತನಾಟ್ಯ ಶಿಕ್ಷಕಿಯಾಗಿದ್ದಾರೆ! ಧಾರಾವಾಹಿಯಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಮಾತ್ರ ಗುರುತಿಸಿಕೊಂಡಿರುವ ಯಮುನಾ ಶ್ರೀನಿಧಿ ತಮ್ಮ ವೃತ್ತಿ, ಪ್ರವೃತ್ತಿ ಮತ್ತು ಕುಟುಂಬದ ಬಗ್ಗೆ ಸುವರ್ಣ ನ್ಯೂಸ್.ಕಾಮ್‌ಗೆ ವಿವರವಾದ ಮಾಹಿತಿ ನೀಡಿದ್ದಾರೆ.
- ಶಶಿಕರ ಪಾತೂರು
undefined
ಬಣ್ಣದ ನಂಟಿಗೆ ಮಧ್ಯದಲ್ಲೊಂದು ತಡೆಯಾದಾಗ ಹೇಗೆ ಅನಿಸಿತು?
ಬಣ್ಣಕ್ಕಿಂತಲೂ ಮುನ್ನ ನಾನು ನಾಟ್ಯದ ಸಂಗಾತಿ! ದೇವರ ದಯೆಯಿಂದ ಅದಕ್ಕೆ ಒಮ್ಮೆಯೂ ತಡೆಯಾಗಿಲ್ಲ. ಯಾಕೆಂದರೆ ಮುಂಚಿನಿಂದಲೂ ನನ್ನ ವಿದೇಶದಲ್ಲಿರುವ ವಿದ್ಯಾರ್ಥಿನಿಯರಿಗಾಗಿ ಆನ್ಲೈನ್ ಕ್ಲಾಸ್ ಮಾಡುವ ಅಭ್ಯಾಸವನ್ನೇ ಹೊಂದಿದ್ದೆ. ಹಾಗಾಗಿ ಹೊರಗೆ ಲಾಕ್ಡೌನ್ ಇದ್ದರೂ ನನಗೆ ಅಂಥ ವಿಶೇಷ ಏನೂ ಅನಿಸಲಿಲ್ಲ. ಯೋಗ ಮೆಡಿಟೇಶನ್, ಭರತನಾಟ್ಯ ಎಲ್ಲವನ್ನೂ ಮನೆಯಲ್ಲೇ ಮಾಡುತ್ತೇನೆ. ಮಾತ್ರವಲ್ಲ ಮನೆ, ಮಕ್ಕಳು, ಗಂಡ ಎನ್ನುವುದು ಯಾವಾಗಲೂ ನನ್ನ ಮೊದಲ ಆದ್ಯತೆ. ಹಾಗಾಗಿ ಅಡುಗೆ ಮಾಡುವುದನ್ನು ನನ್ನ ಮಕ್ಕಳಿಗೆ ಹೇಳಿ ಕೊಡುತ್ತಾ ಎಂಜಾಯ್ ಮಾಡಿದ್ದೇನೆ.
ಹೊಸ ಸಿನಿಮನೆ ಸರುವ ಬಗ್ಗೆ ಅನು ಸಿರಿಮನೆ ಮಾತು
ನಿಮ್ಮ ಕುಟುಂಬದ ಬಗ್ಗೆ ಹೇಳಿ
ನನ್ನ ಪತಿ ಶ್ರೀನಿಧಿ ಗ್ಲೋಬಲ್ ಇನ್‌ಚಾರ್ಜ್ ಸಾಫ್ಟ್‌ವೇರ್ ಕನ್ಸಲ್ಟೆಂಟ್. ಮಗ ವೇದಾಂತ್ ಶ್ರೀನಿಧಿ ಫಸ್ಟ್ ಪಿಯುಗೆ ಕಾಲಿಟ್ಟಿದ್ದಾನೆ. ಆತ ಒಳ್ಳೆಯ ಡ್ರಮ್ಮರ್, ಮೃದಂಗ ಕೂಡ ನುಡಿಸುತ್ತಾನೆ. ಮಗಳು ಲಾಸ್ಯಾ ಶ್ರೀನಿಧಿ ಎಂಟನೇ ತರಗತಿಯ ವಿದ್ಯಾರ್ಥಿನಿ. ಭರತನಾಟ್ಯದಲ್ಲಿ ಒಳ್ಳೆಯ ಅಂಕಗಳೊಂದಿಗೆ ಜ್ಯೂನಿಯರ್ ಮುಗಿಸಿದ್ದಾಳೆ. ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದಾಳೆ. ಅದರ ಜತೆಗೆ ಲಾಕ್ಡೌನ್ ಸಂದರ್ಭದಲ್ಲಿ ಆಗಲೇ ಹೇಳಿದಂತೆ ಅಡುಗೆ ಮಾಡುವುದು, ಗಿಡ ಬೆಳೆಸುವುದು, ಗಾರ್ಡನಿಂಗ್ ಮಾಡುವುದು ಎಲ್ಲವನ್ನು ಹೇಳಿಕೊಟ್ಟಿದ್ದೇನೆ. ನಮ್ಮ ಮನೆ ಬೆಂಗಳೂರಲ್ಲೇ ಆದರೂ ಕಾಂಪೌಂಡ್ ಒಳಗೆ ಒಂದಷ್ಟು ಜಾಗವಿದೆ. ಹಾಗಾಗಿ ಎಲ್ಲವೂ ಉಪಯೋಗಕ್ಕೆ ಬಂತು.
ಮದುವೆ ಬಗ್ಗೆ ಶೈನ್ ಶೆಟ್ಟಿ ಏನು ಹೇಳುತ್ತಾರೆ ಗೊತ್ತಾ?
ಪ್ರಸ್ತುತ ನಿಮ್ಮ ಯಾವೆಲ್ಲ ಪ್ರಾಜೆಕ್ಟ್‌ಗಳು ಹೇಗೆ ನಡೆಯುತ್ತಿವೆ?
ಉದಯದಲ್ಲಿ `ಮನಸಾರೆ' ಚಿತ್ರೀಕರಣ ಜೂನ್ ತಿಂಗಳಿಂದಲೇ ಶುರುವಾಯಿತು. ಅದರಲ್ಲಿ ನನ್ನದು ಮೇಜರ್ ನೆಗೆಟಿವ್ ಕ್ಯಾರೆಕ್ಟರ್. ಮೊದಲು ಒಂದು ಡಬಲ್ ರೋಲ್ ಇತ್ತು. ಒಳ್ಳೆಯ ತಾಯಿ ಮತ್ತು ಆಕೆಯ ಕೆಟ್ಟವಳಾದ ತಂಗಿಯ ಪಾತ್ರ ನನ್ನದು. ತಾಯಿ ತೀರಿಕೊಂಡ ಮೇಲೆ ಈಗ ತಂಗಿಯ ಪಾತ್ರ ಮಾತ್ರ. ಆದರೆ ಮಗಳಿಗೆ ತನ್ನ ಚಿಕ್ಕಮ್ಮನನ್ನು ಕಂಡಾಗ ತಾಯಿಯ ನೆನಪಾಗುವ ದೃಶ್ಯಗಳಿವೆ. ಹಾಗಾಗಿ ಈಗಲೂ ತಾಯಿಯ ಪಾತ್ರದಲ್ಲಿ ಒಮ್ಮೊಮ್ಮೆ ಕಾಣಿಸುತ್ತೇನೆ. ಎರಡು ಪಾತ್ರಗಳ ಮನಸ್ಥಿತಿಯಲ್ಲಿನ ಬದಲಾವಣೆ ಮಾತ್ರವಲ್ಲ, ಧರಿಸುವ ವಸ್ತ್ರದಲ್ಲಿಯೂ ಸಾಂಪ್ರದಾಯಿಕ ಮತ್ತು ಸಂಪೂರ್ಣ ಆಧುನಿಕ ಶೈಲಿ ಎನ್ನುವ ವ್ಯತ್ಯಾಸ ಇವೆ. ಹಾಗಾಗಿ ಕಾಸ್ಟ್ಯೂಮ್ ಬದಲಾದೊಡನೆ ನನ್ನಲ್ಲಿ ಆ ಪಾತ್ರ ತನ್ನಷ್ಟಕ್ಕೇನೇ ಮೈಗೂಡಿಕೊಳ್ಳುತ್ತದೆ! ಇದಲ್ಲದೆ ಪುನೀತ್ ಸರ್ ಅವರೊಂದಿಗೆ ನಟಿಸಿರುವ `ಯುವರತ್ನ' ಚಿತ್ರ ಬಿಡುಗಡೆಯಾಗಬೇಕಿದೆ.
`ಮೂರು ಗಂಟು' ಜ್ಯೋತಿ ರೈ ನಿಜ ಬದುಕಿನ ಬಗ್ಗೆ..
`ಯುವರತ್ನ' ದಲ್ಲಿನ ನಿಮ್ಮ ಪಾತ್ರ ಹೇಗಿತ್ತು?
`ಯುವರತ್ನ'ದಲ್ಲಿ ಪುನೀತ್ ರಾಜ್ ಕುಮಾರ್ ಜತೆಗೆ ಒಂದು ಒಳ್ಳೆಯಪಾತ್ರ. ಅದರಲ್ಲಿ ಇದುವರೆಗೆ ನಾನು ಮಾಡಿರದಂಥ ಪಾತ್ರ. ಸ್ಪೋರ್ಟ್ಸ್ ಡಿಪಾರ್ಟ್ಮೆಂಟ್ ಹೆಡ್ ಆಗಿ ನಟಿಸಿದ್ದೇನೆ. ಅಪ್ಪು ಸರ್ ಜತೆಗೆ ಸೇರಿಕೊಂಡು ಆಕ್ಷನ್ ದೃಶ್ಯಗಳಲ್ಲಿ ಕೂಡ ಪಾರ್ಟಿಸಿಪೇಟ್ ಮಾಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಅಂಥದೊಂದು ಚಾಲೆಂಜಿಂಗ್ ಪಾತ್ರ ಸಿಕ್ಕಿರುವುದು ನನ್ನ ಅದೃಷ್ಟ ಎಂದುಕೊಂಡಿದ್ದೇನೆ. ಪಾತ್ರಕ್ಕಾಗಿ ನಾನು ಮಸಲ್ಸ್ ಎಲ್ಲ ಬಿಲ್ಡ್ ಮಾಡಿದ್ದೇನೆ! ಬಾಲ್ಯದಲ್ಲೇ ಎನ್‌ಸಿಸಿ ಸೇರಿಕೊಂಡಿದ್ದೆ. ಇಂಡಿಯನ್ ನೇವಿ ಸೇರಲು ಆಶೆ ಪಟ್ಟಿದ್ದೆ. ಹಾಗಾಗಿ ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್ ಎರಡೂ ಇರುವ ಕಾರಣ ಅಂಥದೊಂದು ಪಾತ್ರ ಮಾಡಲು ತುಂಬ ಖುಷಿಯಾಗಿತ್ತು.
ಇಷ್ಟೆಲ್ಲ ಪ್ರತಿಭೆಗಳ ನಡುವೆ ನಿಮ್ಮ ಮುಖ್ಯವಾದ ಆಸಕ್ತಿ ಯಾವುದು?
ಭರತನಾಟ್ಯ ನನ್ನ ಪ್ರಥಮ ಆಸಕ್ತಿ. ಆದರೆ ಎಲ್ಲಕ್ಕೂ ಮೊದಲು ಇತರರಿಗೆ ಆದರ್ಶವಾಗುವ ಬದುಕನ್ನು ನಡೆಸುವುದು ಮುಖ್ಯವಾಗುತ್ತದೆ. ಉದಾಹರಣೆಗೆ ಹಾಸನದ ಹನುಮಂತಪುರದಲ್ಲಿ ನಾವು ಹಳ್ಳಿಯೊಂದನ್ನು ದತ್ತು ತೆಗೆದುಕೊಂಡಿದ್ದೇವೆ. ಅಲ್ಲಿ ಮಕ್ಕಳಿಗೆ ಆಟದ ಮೈದಾನ ಇರಲಿಲ್ಲ. ಹಿಂದುಳಿದ ಹಳ್ಳಿ. ಹೊರಗಡೆಯ ಫಂಡ್ ಅಥವಾ ಸರ್ಕಾರಿ ಸೌಲಭ್ಯ ಯಾವುದನ್ನು ಬಳಸಿಕೊಳ್ಳದೇ ನಾವೇ ಸ್ವಂತ ಖರ್ಚಲ್ಲಿ ಮೈದಾನ ಮಾಡಿದ್ದೇವೆ. ಪಾಠ ಬಿಟ್ಟು ಇಂಗ್ಲಿಷ್ ಅಥವಾ ಜನರಲ್ ನಾಲೆಜ್ ಕಲಿಸುವ ವ್ಯವಸ್ಥೆ ಇರಲಿಲ್ಲ. ಪುಸ್ತಕಗಳು ಇರಲಿಲಲ್ಲ. ಸ್ವಯಂ ಸೇವಕಿಯಾಗಿ ಇಂಗ್ಲಿಷ್ ಹೇಳಿಕೊಡುವುದು, ಭರತನಾಟ್ಯ ಕಲಿಸುವ ಕೆಲಸ ಮಾಡಿದ್ದೇನೆ. ಅಮೆರಿಕಾದ ಕ್ಯಾಲಿಫೋರ್ನಿಯಾದಿಂದ ಎಲ್ಲ ವಿದ್ಯಾರ್ಥಿನಿಯರು ಬಂದು ಆ ಹಳ್ಳಿಯಲ್ಲಿ ಕೆಲಸ ಮಾಡಿ, ಡೊನೇಟ್ ಮಾಡಿ ಅಲ್ಲಿನವರ ನಾಲೆಜ್ ಹೆಚ್ಚಾಗಿಸಿ ಹೋಗಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಅವೇರ್ನೆಸ್ ಕಾರ್ಯಕ್ರಮಗಳನ್ನು ನೀಡುತ್ತೇವೆ. ಇವೆಲ್ಲ ಸಂತೃಪ್ತಿ ನೀಡುತ್ತವೆ.