ನಾನೀಗ ಪೂರ್ಣ ಪ್ರಮಾಣದ ಕನ್ನಡತಿ: ಶಾನ್ವಿ

By Kannadaprabha News  |  First Published Dec 13, 2019, 5:31 PM IST

ಕನ್ನಡ ಚಿತ್ರರಂಗವೀಗ ಬಹುಕಾತುರದಲ್ಲಿ ಎದುರು ನೋಡುತ್ತಿರುವ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’. ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅದ್ಧೂರಿ ವೆಚ್ಚದ ಸಿನಿಮಾ ಎನ್ನುವುದು ಅದಕ್ಕಿರುವ ಮೊದಲ ಕಾರಣ. ಇನ್ನು ಬಹುಭಾಷೆಗಳಲ್ಲಿ ಬರುತ್ತಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವುದು ಅದಕ್ಕಿರುವ ಎರಡನೇ ಕಾರಣ. ಇಂತಹ ಹಲವು ಕಾರಣಗಳಲ್ಲಿ ಗ್ಲಾಮರಸ್ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿ ಆಗಿ ಅಭಿನಯಿಸಿದ್ದು ಕೂಡ ಒಂದು. ಡಿ.೨೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿನ ಅವರ ಪಾತ್ರ, ಚಿತ್ರೀಕರಣದ ಅನುಭವ, ಇತ್ಯಾದಿ ಕುರಿತು ಅವರೊಂದಿಗೆ ಮಾತುಕತೆ.


ದೇಶಾದ್ರಿ ಹೊಸ್ಮನೆ

ಚಿತ್ರದ ಬಗ್ಗೆ ನಿಮಗೂ ಸಾಕಷ್ಟು ಕುತೂಹಲ ಇದ್ದಿರಬೇಕು ಅಲ್ವಾ?

Tap to resize

Latest Videos

ಖಂಡಿತ ಹೌದು. ಪ್ರೇಕ್ಷಕರಿಗೆ ಇರುವಷ್ಟೇ ಕ್ಯೂರಿಯಾಸಿಟಿ ನನಗೂ ಇದೆ. ಯಾಕಂದ್ರೆ, ನನ್ನ ಮಟ್ಟಿಗೆ ಇದು ತುಂಬಾ ಇಂಫಾರ್ಟೆಂಟ್ ಸಿನಿಮಾ. ನಾಯಕಿ ಆಗಿ ಮೊದಲ ಸಿನಿಮಾ ಎನ್ನುವ ಫೀಲ್‌ನಲ್ಲೇ ಇದ್ದೇನೆ. ಅಂತಹ ವಿಶೇಷವಾದ ಅನುಭವ ಕೊಟ್ಟ ಸಿನಿಮಾ ಇದು. ಸರಿ ಸುಮಾರು ಎರಡು ವರ್ಷ ಆ ಸಿನಿಮಾದಲ್ಲೇ ಕಳೆದಿದ್ದೇನೆಂದರೆ, ನನಗೂ ಆ ಕಾತರ ಸಹಜವೇ.

‘ಅವನೇ ಶ್ರೀಮನ್ನಾರಾಯಣ’ ನಿಮಗೆ ಯಾಕಿಷ್ಟು ಇಂಪಾರ್ಟೆಂಟ್?

ನಾನು ಅಭಿನಯಿಸಿದ ಮೊದಲ ಬಿಗ್ ಬಜೆಟ್ ಸಿನಿಮಾ. ಜತೆಗೆ ಬಹುಭಾಷೆಗಳಲ್ಲಿ ಬರುತ್ತಿರುವ  ಪ್ಯಾನ್ ಇಂಡಿಯಾ ಸಿನಿಮಾವೂ ಹೌದು. ರೆಗ್ಯುಲರ್ ಗ್ಲಾಮರಸ್ ಪಾತ್ರ ಬಿಟ್ಟು, ಹೊಸ ರೀತಿಯ ಪಾತ್ರ ಇಲ್ಲಿ ಸಿಕ್ಕಿದೆ. ಈ ಸಿನಿಮಾ ಮೂಲಕ ತುಂಬಾ ಕಲಿತಿದ್ದೇನೆ. ಡಬ್ಬಿಂಗ್ ಕೂಡ ಮಾಡಿದ್ದೇನೆ. ನನ್ನದೇ ಸಿನಿಮಾ ಎನ್ನುವಷ್ಟು ಆತ್ಮೀಯತೆ, ಪ್ರೀತಿ ಇಲ್ಲಿ ಸಿಕ್ಕಿದೆ.

ಸಿನಿಮಾ ಒಪ್ಪಿಕೊಳ್ಳುವಾಗ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗುವ  ನಿರೀಕ್ಷೆ ಇತ್ತಾ?

ನೋ, ಆ ರೀತಿಯ ಯಾವುದೇ ಕ್ಲೂ ಕೂಡ ಸಿಕ್ಕಿರಲಿಲ್ಲ. ನಿರ್ದೇಶಕ ಸಚಿನ್ ಕತೆ ಹೇಳುವಾಗ ಇದೊಂದು ನಾರ್ಮಲ್ ಕತೆ ಅಲ್ಲ ಎಂದೆನಿಸಿತ್ತು. ಹೆಚ್ಚು ಕಡಿಮೆ ೨ ರಿಂದ ೩ ಗಂಟೆಯಷ್ಟು ಕಾಲ ಕತೆ ಕೇಳಿದೆ. ನನ್ನ ಪಾತ್ರದ ಬಗ್ಗೆ ಹೇಳಿದಾಗ ಅದರ ಅಂದಾಜು ಕೂಡ ಇರಲಿಲ್ಲ. ಸೆಟ್‌ಗೆ ಹೋದಾಗಲೇ ಆ ಪಾತ್ರ ಏನು ಅಂತ ಗೊತ್ತಾಗಿದ್ದು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ನನಗೆ ಇದೊಂದು ಎಕ್ಸ್‌ಟ್ರಾರ್ಡಿನರಿ ಸಿನಿಮಾ ಆಗುತ್ತೆ ಎಂದೆನಿಸಿದ್ದು ಬಿಟ್ಟರೆ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ.

ಚಿತ್ರದಲ್ಲಿ ನಿಮ್ಮ ಪಾತ್ರ ಎಂಥದ್ದು, ಅದು ಹೊಸ ರೀತಿಯ ಪಾತ್ರ ಅಂದ್ರೆ ಹೇಗೆ ?

ನನ್ನ ಪಾತ್ರದ ಹೆಸರು ಲಕ್ಷ್ಮಿ ಅಂತ.  ಆಕೆ ಒಬ್ಬ ಹಳ್ಳಿ ಹುಡುಗಿ. ಆ ವಿಚಾರದಲ್ಲಿ ನಂಗಿಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ಇಲ್ಲಿಯವರೆಗೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೆ. ಫಸ್ಟ್ ಟೈಮ್ ಅದಿಲ್ಲಿ  ಬ್ರೇಕ್ ಆಗಿದೆ. ಲಕ್ಷ್ಮಿ ಹಳ್ಳಿ ಹುಡುಗಿಯಾದರೂ, ಮಾನಸಿಕವಾಗಿ ತುಂಬಾ ಸ್ಟ್ರಾಂಗ್. ಜನರಿಗೋಸ್ಕರ ಗಟ್ಟಿಯಾಗಿ ನಿಲ್ಲುವಂತಹ ಪಾತ್ರ. ಇಂತಹ ಪಾತ್ರದಲ್ಲಿ ಅಭಿನಯಿಸಿದ್ದು ಇದೇ ಮೊದಲು. ಆ ಮೂಲಕ ನನ್ನನ್ನು ನಾನು ನಟಿ ಎನ್ನುವುದಕ್ಕಿಂತ ಕಲಾವಿದೆಯಾಗಿ ನಿರೂಪಿಸಿಕೊಳ್ಳಲು ಸಾಧ್ಯವಾಗಿದೆ. ಅದಕ್ಕೆ ದೊಡ್ಡ ಸ್ಪೇಸ್ ಇಲ್ಲಿ ಸಿಕ್ಕಿದೆ. ಅದೆಷ್ಟು ಸತ್ಯವೋ, ನಂಬಿಕೆಯೋ ಚಿತ್ರ ರಿಲೀಸ್ ಆದ ನಂತರ ಗೊತ್ತಾಗಲಿದೆ.

ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್‌ ಸಿನಿಮಾ!

ಪಾತ್ರದ ವಿಚಾರದಲ್ಲಿ ಇಂತಹದೊಂದು ಚೇಂಜ್ ಓವರ್ ನಿಮಗೆ ಬೇಕೆನಿಸಿದ್ದು ಯಾಕೆ?

ಪ್ರತಿಯೊಬ್ಬ ಕಲಾವಿದರಿಗೂ ತಾವೇನು ಅಂತ ಪ್ರೂವ್ ಮಾಡಿಕೊಳ್ಳಬೇಕಾದರೆ, ವೆರೈಟಿ ಪಾತ್ರಗಳು ಸಿಗಬೇಕು. ಆಗಲೇ ಅದು ಸಾಧ್ಯ. ಅದು ಬಿಟ್ಟು ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಹೋದರೆ, ಜನರಿಗೆ ಬೋರ್ ಆಗುತ್ತೆ. ಜತೆಗೆ ನಮಗೂ ಏಕತಾನತೆಯ ರೋಗ ಅಂಟುತ್ತೆ. ಈ ವಿಚಾರದಲ್ಲಿ ನನಗೆ ಚೇಂಜ್ ಓವರ್ ಸಿಕ್ಕಿದ್ದು ನಿರ್ದೇಶಕ ಸಚಿನ್ ಮೂಲಕ. ನಾನು ಹಳ್ಳಿ ಹುಡುಗಿ ಆಗಬೇಕು ಎನ್ನುವುದಕ್ಕಿಂತ ಅಂತಹ ಪಾತ್ರದಲ್ಲಿ ನನ್ನ ತೋರಿಸಬೇಕೆಂದು ಬಯಸಿದ್ದು ನಿರ್ದೇಶಕರು. ಅವರು ಮನಸ್ಸು ಮಾಡಿದರಿಂದ ಇದು ಸಾಧ್ಯವಾಗಿದೆ.

ಚಿತ್ರೀಕರಣದ ಅನುಭವ ಹೇಗಿತ್ತು?

ಸುಮಾರು 200 ದಿನಗಳ ಚಿತ್ರೀಕರಣ ಅದು. ಇಷ್ಟು ದೊಡ್ಡ ಸಮಯದಲ್ಲಿ ಒಂದು ಸಿನಿಮಾಕ್ಕೆ ಶೂಟಿಂಗ್ ಅಂತ ಓಡಾಡಿದ್ದು ಇದೇ ಮೊದಲು. ಕತೆ ಕೇಳಿ, ಓಕೆ ಅಂದಾಗ ನನ್ನ ಪಾತ್ರಕ್ಕೆ ೩೦ ರಿಂದ ೪೦ ದಿನಗಳ ಶೆಡ್ಯೂಲ್ ಸಾಕು ಅಂದಿದ್ರು. ಆದ್ರೆ ಚಿತ್ರೀಕರಣ ಶುರುವಾದಾಗ ಅದರ ರಿಯಾಲಿಟಿ ತಿಳಿಯಿತು. ಚಿತ್ರದ ಕತೆಯೇ ಹಾಗಿತ್ತು. ಶೂಟಿಂಗ್ ಶೆಡ್ಯೂಲ್ ಹೆಚ್ಚಾಯಿತು. ಸಿನಿಮಾಕ್ಕೆ ಇದು ಅಗತ್ಯವೂ ಇತ್ತು. ಅಷ್ಟಾಗಿಯೂ ನನಗೆ ಎಲ್ಲೂ ಬೇಸರ ಅನಿಸಿದ್ದೇ ಇಲ್ಲ. ಬಾದಾಮಿಯ ೪೫ ಡಿಗ್ರಿ ಬಿಸಿಲಿನಲ್ಲಿದ್ದಾಗ ಒಂದಷ್ಟು ಕಿರಿ ಕಿರಿ ಎನಿಸಿದ್ದು ಬಿಟ್ಟರೆ, ಚಿತ್ರೀಕರಣದ ಅಷ್ಟು ದಿನಗಳ ಜರ್ನಿ ವಂಡರ್‌ಫುಲ್ ಹಾಗೂ ಮೋಸ್ಟ್ ಮೆಮೋರೆಬಲ್.

ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ?

ಅವನೇ ಶ್ರೀಮನ್ನಾರಾಯಣ ಚಿತ್ರದ ಮೂಲಕ ಏನು ಕಲಿತ್ರಿ?

ನಟಿಯಾಗಿ ಏನೇನು ಕಲಿಯಬೇಕಿತ್ತೋ ಅದರಲ್ಲಿ ಒಂದಷ್ಟು ಅಂಶಗಳು ಇಲ್ಲಿ ಸಿಕ್ಕಿವೆ. ಮೇಕಿಂಗ್ ಅಂದ್ರೆ ಏನು, ಸಿನಿಮಾ ನಿರ್ಮಾಣದಲ್ಲಿ ತಾಳ್ಮೆ, ಮುನ್ನೆಚ್ಚರಿಕೆ, ಎಲ್ಲವನ್ನು ಸಹಿಸಿಕೊಳ್ಳುವ ಮನೋಭಾವ ಎಷ್ಟು ಮುಖ್ಯ ಎನ್ನುವುದು ಈ ಸಿನಿಮಾ ಟೀಮ್ ಜತೆಗಿದ್ದಾಗ ಗೊತ್ತಾಯಿತು. ನಟನೆಯಲ್ಲಿ  ಸಣ್ಣ ಸಣ್ಣ ಎಕ್ಸ್‌ಪ್ರೆಷನ್ ಕೂಡ ಎಷ್ಟು ಮುಖ್ಯ, ಪಾತ್ರದೊಳಗೆ ಇದ್ದಾಗ ಕಣ್ಣು ಮಿಟುಕಿಸುವುದಕ್ಕೂ ಕೂಡ ಎಷ್ಟು ಪ್ರಧಾನ್ಯತೆ ಇರುತ್ತೆ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವುದೆಂದರೆ ಹೇಗೆ ಎನ್ನುವ ಚಿಕ್ಕ ಚಿಕ್ಕ ಎಲಿಮೆಂಟ್ಸ್ ನನಗಿಲ್ಲಿ ಗೊತ್ತಾದವು.

ಫಸ್ಟ್‌ಟೈಮ್ ನಿಮ್ಮ ಪಾತ್ರಕ್ಕೆ ನೀವೇ ಡಬ್ಬಿಂಗ್ ಮಾಡಬೇಕೆನಿಸಿದ್ದು ಯಾಕೆ?

ಶೂಟಿಂಗ್ ಶುರುವಾಗಿ ಮೂರ್ನಾಲ್ಕು ದಿನಗಳಲ್ಲೇ ಇದನ್ನು ನಾನೇ ಡಿಸೈಡ್ ಮಾಡಿಕೊಂಡಿದ್ದೆ. ಯಾಕಂದ್ರೆ ಲಕ್ಷ್ಮಿ ಪಾತ್ರ ಇರೋದೇ ಹಾಗೆ. ನಾನಲ್ಲದೆ ಬೇರೆ ಯಾರೇ ವಾಯ್ಸ್  ಕೊಟ್ಟರೂ, ಅದಕ್ಕೆ ನ್ಯಾಯ ಸಿಗುತ್ತಿರಲಿಲ್ಲ ಎನಿಸಿತು. ಮೇಲಾಗಿ ಡಬ್ಬಿಂಗ್ ಮಾಡುವಷ್ಟು ಕನ್ನಡ ನನಗೇ ಗೊತ್ತಿರುವಾಗ ಇನ್ನೊಬ್ಬರಿಂದ ನನ್ನ ಪಾತ್ರಕ್ಕೆ ಡಬ್ಬಿಂಗ್ ಮಾಡಿಸಬೇಕೆನ್ನುವುದು ನನ್ನ  ಅಭಿಪ್ರಾಯ ಆಗಿತ್ತು. ಅದಕ್ಕೆ ಮನ್ನಣೆಯೂ ಸಿಕ್ಕಿತು. ಚಿತ್ರತಂಡ ಒಪ್ಪಿಕೊಂಡಿತು. ಅದರಿಂದಾಗಿ ಈ ಅವಕಾಶವೂ ಇಲ್ಲಿ ಸಿಕ್ಕಿದೆ. ನಾನೀಗ ಪೂರ್ಣ ಪ್ರಮಾಣದಲ್ಲಿ ಕನ್ನಡತಿ. ಅದಕ್ಕಾಗಿ ಹೆಮ್ಮೆ ಇದೆ.

ನಟ ರಕ್ಷಿತ್ ಶೆಟ್ಟಿ  ಜತೆಗಿನ ಅಭಿನಯದ ಅನುಭವ ಹೇಗಿತ್ತು?

ರಕ್ಷಿತ್ ಶೆಟ್ಟಿ ತುಂಬಾ ಸೆನ್ಸಿಬಲ್ ಪರ್ಸನ್. ಅಷ್ಟೇ ಒಳ್ಳೆಯ ಹ್ಯೂಮನ್ ಬೀಯಿಂಗ್. ಸೆಟ್‌ನಲ್ಲಿದ್ದಾಗ ಸದಾ ನಗಿಸುತ್ತಲೇ ಇರುತ್ತಿದ್ದರು. ತಟ್ಟಂಥ ಕ್ಯಾಮರಾ ಮುಂದೆ ನಿಂತಾಗ ಪಾತ್ರವೇ ಅವರಾಗಿ ಬಿಡುತ್ತಿದ್ದರು. ಒಂಥರ ನಂಗಿದು ಅಮೇಜಿಂಗ್ ಎನಿಸುತ್ತಿತ್ತು. ಅವರ ಸ್ಪೀಡ್‌ಗೆ, ಅವರ ಕಮಿಟ್‌ಮೆಂಟ್‌ಗೆ ನಾನು ಹೊಂದಿಕೊಳ್ಳುವುದೇ ಕಷ್ಟ ಎನಿಸುತ್ತಿತ್ತು. ಹಾಗಂತ ಯಾವತ್ತಿಗೂ ಅವರು ಬೇಸರ ಮಾಡಿಕೊಂಡಿಲ್ಲ. ಸದಾ ಫ್ರೆಂಡ್ ರೀತಿಯಲ್ಲೇ ಟ್ರೀಟ್ ಮಾಡುತ್ತಿದ್ದರು. ಫ್ರೆಂಡ್ ಆಗಿಯೇ ಅದು ಹಾಗಲ್ಲ, ಹೀಗೆ ಅಂತ ಹೇಳಿಕೊಡುತ್ತಿದ್ದರು. ಚೆನ್ನಾಗಿತ್ತು, ಆ ಜರ್ನಿ.

ಸಿನಿಮಾದ ಕತೆ ಮತ್ತು ಮೇಕಿಂಗ್ ಬಗ್ಗೆ ಏನ್ ಹೇಳ್ತೀರಾ?

ಪೂರ್ತಿ ಕತೆ ನಂಗೂ ಗೊತ್ತಿಲ್ಲ. ಅದು ಬಿಟ್ಟರೆ  ಮೇಕಿಂಗ್ ದೃಷ್ಟಿಯಲ್ಲಿ ಇದೊಂದು ಎಕ್ಸ್‌ಟ್ರಾರ್ಡಿನರಿ ಸಿನಿಮಾ. ಚಿತ್ರೀಕರಣದ ಅಷ್ಟು ದಿನಗಳ ನನ್ನ ಅನುಭವದಲ್ಲಿ ಕನ್ನಡಕ್ಕೆ ಇದೊಂದು ಅತ್ಯದ್ಭುತ ಕೊಡುಗೆ. ಅದು ಎಷ್ಟರ ಮಟ್ಟಿಗಿನ ನಂಬಿಕೆ ಎನ್ನುವುದಕ್ಕೆ ಈಗಾಗಲೇ ಲಾಂಚ್ ಆದ ಅದರ ಟ್ರೇಲರ್ ಸಾಕ್ಷಿ.

ನಿಮ್ಮ ಪ್ರಕಾರ ಈ ಸಿನಿಮಾ ಯಾಕೆ ಗೆಲ್ಲಬೇಕು ?

ರಕ್ಷಿತ್ ಶೆಟ್ಟಿ ಸೇರಿದಂತೆ ಇಲ್ಲಿರುವವರೆಲ್ಲ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದರೂ ಅಪರೂಪದ ಕತೆಯೊಂದಕ್ಕೆ ಇಷ್ಟು ದೊಡ್ಡ ಮಟ್ಟದ ಬಂಡವಾಳ ಹಾಕಿ  ಮಾಡಿರುವ ಸಿನಿಮಾ. ಹಾಗೆಯೇ ಮುಂದೆ ಮತ್ತಷ್ಟು ಪ್ರಯೋಗಗಳಿಗೆ ಇದು ನಾಂದಿ ಹಾಡುತ್ತೆ. ಸಿನಿಮಾವನ್ನೇ ನಂಬಿಕೊಂಡಿರುವ ಹಲವರ ಭವಿಷ್ಯವೂ ಇದರಲ್ಲಿದೆ. ಹಾಗೆಂದ ಮಾತ್ರಕ್ಕೆ ಜನ ಸಿನಿಮಾ ನೋಡಬೇಕು ಅಂತ ನಾನು ಹೇಳುತ್ತಿಲ್ಲ, ನೋಡಿ ಮೆಚ್ಚಿಕೊಳ್ಳುವ ಹಲವು ಹೊಸತಾದ ಅಂಶಗಳು ಇಲ್ಲಿವೆ. ಆ ಕಾರಣಕ್ಕೆ ಈ  ಸಿನಿಮಾ ಗೆಲ್ಲಬೇಕು. ಆ ನಿಟ್ಟಿನಲ್ಲಿ ನಮಗೆ ಪಾಸಿಟಿವ್ ವೈಬ್ರೇಷನ್ ಇದ್ದೇ ಇದೆ.

click me!