
ಆರ್ ಕೇಶವಮೂರ್ತಿ
ಓಂ ಚಿತ್ರದ ಕತೆ ಹುಟ್ಟಿಕೊಂಡಿದ್ದು ಹೇಗೆ?
ನನ್ನ ಅಣ್ಣನ ಸ್ನೇಹಿತ ಸತ್ಯ ಎನ್ನುವರ ನಿಜ ಕತೆಯೇ ಓಂ ಚಿತ್ರದ್ದು. ಅವರು ನಮ್ಮ ಅಣ್ಣನ ಜತೆ ಮನೆಗೂ ಬರುತ್ತಿದ್ದರು. ನನಗೂ ಗೆಳೆಯ ಆದ ಮೇಲೆ ತಮ್ಮ ಕತೆಯನ್ನು ಹೇಳಿಕೊಂಡಿದ್ದರು. ಕಾಲೇಜು ದಿನಗಳಲ್ಲೇ ಕೇಳಿದ್ದ ಆ ಕತೆಯನ್ನು ನಾನು ಬರೆದಿಟ್ಟುಕೊಂಡು ಮುಂದೆ ಸಿನಿಮಾ ಮಾಡಿದೆ. ಚಿತ್ರದಲ್ಲಿ ಹೀರೋ ಹೆಸರು ಕೂಡ ಸತ್ಯನೇ.
ರೀಲ್ ರೌಡಿಸಂ ಚಿತ್ರದಲ್ಲಿ ರಿಯಲ್ ರೌಡಿಗಳು ಯಾಕೆ ಬೇಕಿತ್ತು?
ಚಿತ್ರದಲ್ಲಿ ಇದ್ದ ಸಂದೇಶದ ಕಾರಣಕ್ಕೆ. ರೌಡಿಸಂ ಬೇಡ ಅಂತ ಯಾರೋ ಬಂದು ಪಾಠ ಮಾಡುವ ಬದಲು ಆಗ ರೌಡಿಗಳೇ ಆಗಿದ್ದವರೇ ಈ ರೌಡಿಸಂ ಸಾಹವಾಸ ಬೇಡ ಗುರು ಅಂತ ಹೇಳಬೇಕಿತ್ತು. ಅದನ್ನು ರೌಡಿಗಳೇ ಹೇಳಿದರೆ ಪರಿಣಾಮಕಾರಿ ಆಗಿರುತ್ತದೆ ಅಂದುಕೊಂಡೆ.
'ಓಂ' ಚಿತ್ರಕ್ಕೆ 25ರ ಸಂಭ್ರಮ; ಶಿವಣ್ಣ- ಉಪ್ಪಿ ಮಾತುಕತೆ!
ನೀವು ಹೋಗಿ ಕೇಳಿದ ಕೂಡಲೇ ಅವರು ಒಪ್ಪಿಕೊಂಡ್ರಾ?
ಒಪ್ಪೋದು ಇರಲಿ, ವಿಚಿತ್ರವಾಗಿ ನೋಡಿದರು. ಏಯ್ ಗುರು ಇವೆಲ್ಲ ನಮಗೆ ಆಗಿ ಬರಲ್ಲ, ನಾವ್ ಸಿನಿಮಾದಲ್ಲಿ ನಟನೆ ಮಾಡೋದು, ಕಾಮಿಡಿಯಲ್ಲ ಬೇಡ... ಹೀಗೆ ಅವರದ್ದೇ ದಾಟಿಯಲ್ಲಿ ರಿಯಾಕ್ಟ್ ಮಾಡಿದ್ರು. ನೀವು ನಟನೆ ಮಾಡೋದು ಬೇಕಿಲ್ಲ. ಈಗ ಹೇಗೆ ನನ್ನ ಜತೆ ಮಾತಾಡಿದ್ರೋ ಹಾಗೆ ಮಾತನಾಡಿ. ನಿಮಗೆ ಗೊತ್ತಿಲ್ಲದಂತೆ ನಾನೇ ಅದನ್ನು ಶೂಟ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ ಮೇಲೆ ಒಪ್ಪಿ ಶೂಟಿಂಗ್ ಸೆಟ್ ಗೆ ಬಂದ್ರು.
ಒಂದು ವೇಳೆ ಈ ಚಿತ್ರವನ್ನು ಶಿವಣ್ಣ ಮಾಡದೆ ಹೋಗಿದ್ದರೆ?
ಓಂ ನಮಃ ಶಿವಾಯ. ಶಿವಣ್ಣ ಮಾಡದೆ ಹೋಗಿದ್ದರೆ ಓಂ ಸಿನಿಮಾ ಬರ್ತಾ ಇರಲಿಲ್ಲ ಅಷ್ಟೆ.
ನಾಯಕನನ್ನ ಅಂಗಕವಿಕಲನ್ನಾಗಿ ತೋರಿಸಿದಾಗ ಯಾರು ಗಲಾಟೆ ಮಾಡಲಿಲ್ಲವೇ?
ಅದೇನೋ ನನಗೆ ಈಗಲೂ ಅರ್ಥ ಆಗುತ್ತಿಲ್ಲ, ಓಂ ಚಿತ್ರದ ಬಗ್ಗೆ ಒಂದೇ ಒಂದು ವಿವಾದ, ಭಿನ್ನಾಭಿಪ್ರಾಯ ಬರಲಿಲ್ಲ. ಶಿವಣ್ಣ ಅವರನ್ನ ನೆಗೆಟೀವ್ ದೃಶ್ಯದ ಮೂಲಕ ತೋರಿಸಿದ್ದು, ಒಬ್ಬ ಪೂಜಾರಿ ಮಗ ರೌಡಿ ಆಗ್ತಾನೆ ಅಂತ ಹೇಳಿದ್ದು, ಚಿತ್ರದಲ್ಲಿ ಶಿವಣ್ಣ ಅವರಿಗೆ ಬೈಯುವ ಡೈಲಾಗ್ ಯಾವುದರ ಬಗ್ಗೆಯೂ ಯಾರೂ ತಕರಾರು ತೆಗೆಯಲಿಲ್ಲ. ಆದರೆ, ನಾನು ಮೊದಲೇ ಹೇಳಿದ್ದೇ ಕತೆ ಬಗ್ಗೆ ಏನೇ ಭಿನ್ನಾಭಿಪ್ರಾಯಗಳು ಬಂದು ಬದಲಾವಣೆ ಮಾಡಬೇಕು ಅಂದರೆ ಡಾ ರಾಜ್ ಕುಮಾರ್ ಹಾಗೂ ವರದಪ್ಪ ಅವರು ಹೇಳಿದರೆ ಮಾತ್ರ ಮಾಡುತ್ತೇನೆ ಅಂದಿದ್ದೆ.
ಹೀರೋ ಪೂಜಾರಿ ಮಗ, ದೇವರ ಭಕ್ತ. ಆದರೂ ಎಲ್ಲೂ ಹೀರೋ ಹಣೆ ಮೇಲೆ ಬೊಟ್ಟು- ತಿಲಕ ಇಲ್ಲ ಯಾಕೆ?
ನೀವು ಚೆನ್ನಾಗಿ ಗಮನಿಸಿದ್ದೀರಿ. ನನಗೂ ಆ ಬಗ್ಗೆ ಬೇಸರ ಇದೆ. ಶೂಟಿಂಗ್ ಎಲ್ಲ ಮುಗಿದ ಮೇಲೆ ನಾನು ನೋಡಿದಾಗ ಏನಯ್ಯ, ಪೂಜಾರಿ ಮಗನ ಹಣೆ ಮೇಲೆ ಬೊಟ್ಟು ಇಲ್ಲ ಅಂತ ಅನಿಸಿತು. ತುಂಬಾ ಬೇಸರ ಆಯ್ತು. ಅಸಿಸ್ಟೆಂಟ್ ಡೈರೆಕ್ಟರ್ ಗಳು ಮರೆತಿದ್ರು. ಈ ಒಂದು ವಿಷಯಕ್ಕೆ ಓಂ ಚಿತ್ರ ನೋಡುವಾಗ ನನಗೆ ಬೇಸರ ಆಗುತ್ತದೆ.
ಮೇ 19ರಂದು ಓಂ ಚಿತ್ರದ 25 ವರ್ಷದ ಸಂಭ್ರಮಾಚರಣೆ!
ಈ ಚಿತ್ರ ನೋಡಿದ ಮೇಲೆ ಡಾ ರಾಜ್ ಕುಮಾರ್ ಅವರ ಮೊದಲ ಪ್ರತಿಕ್ರಿಯೆ ಹೇಗಿತ್ತು?
ನಮ್ ಉಪೇಂದ್ರ, ನಮ್ ಡೈರೆಕ್ಟ್ರು, ನಮ್ಮ ಕಂಪನಿಗೆ ಎಂಥ ಸಿನಿಮಾ ಮಾಡಿಕೊಟ್ರಿ ನೀವು ಎಂದು ನನ್ನ ಬಗ್ಗೆ ಹೆಮ್ಮೆಯಿಂದ ಮಾತನಾಡಿ ಹೆಗಲ ಮೇಲೆ ಕೈ ಹಾಕಿ ಅಭಿನಂದಿಸಿದ್ರು.
ಮತ್ತೆ ಓಂ ಮಾಡುವ ಅವಕಾಶ ಬಂದರೆ?
ಓಂ ರೀತಿ ಸಿನಿಮಾ ಒಂದೇ ಸಲ ಆಗೋದು. ಮತ್ತೆ ಮಾಡ್ತಿನಿ ಅಂದ್ರೆ ಆಗಲ್ಲ. ಅದು ಇನ್ನೊಂದು ಸಿನಿಮಾ, ಇನ್ನೊಂದು ರೀತಿಯ ಕತೆ ಆಗುತ್ತದೆ ಅಷ್ಟೆ. ಓಂ-2 ಮಾಡ್ತಿನಾ ಅಂದ್ರೆ ಈಗ ಏನೂ ಹೇಳಲ್ಲ. ಆ ರೀತಿಯ ಕತೆ ಸಿಗಲಿ ನೋಡೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.