ನಟ ಗಣೇಶ್ ಅವರ ‘ತ್ರಿಬಲ್ ರೈಡಿಂಗ್’ ಇಂದು (ನ.25). ಮಹೇಶ್ ಗೌಡ ನಿರ್ದೇಶಿಸಿ, ರಾಮ್‌ಗೋಪಾಲ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ಅದಿತಿಪ್ರಭುದೇವ, ರಚನಾ ಇಂದರ್, ಮೇಘಾ ಶೆಟ್ಟಿನಾಯಕಿರಾಗಿ ನಟಿಸಿದ್ದಾರೆ. ಸಿನಿಮಾ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಗಣೇಶ್ ಅವರ ಮಾತುಗಳು ಇಲ್ಲಿವೆ.
ಆರ್ ಕೇಶವಮೂರ್ತಿ
‘ತ್ರಿಬಲ್ ರೈಡಿಂಗ್’ ಸರಿನಾ, ತಪ್ಪಾ?
undefined
ಇದು ಆ ತ್ರಿಬಲ್ ರೈಡಿಂಗ್ ಅಲ್ಲ! ರೋಡ್ ರೂಲ್ಸ್ ಬ್ರೇಕ್ ಮಾಡೋ ತ್ರಿಬಲ್ ರೈಡಿಂಗ್ ಲಾ ಪ್ರಕಾರ ಸರಿ ಇಲ್ಲ. ಆದರೆ, ಮನರಂಜನೆ ಮೂಲಕ ಹಲವು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಧಾರಿಯ ರೈಡಿಂಗ್ ಪ್ರೇಕ್ಷಕರ ಪ್ರಕಾರ ಸರಿ. ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಹಾಗೆ ಹೀರೋ ಕೂಡ ಮೂರು ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಫನ್ ಇರಲಿ ಅಂತ ಚಿತ್ರಕ್ಕೆ ‘ತ್ರಿಬಲ್ ರೈಡಿಂಗ್’ ಎನ್ನುವ ಹೆಸರು ಇಟ್ಟಿದ್ದೇವೆ. ಕತೆಗೂ ಸೂಕ್ತ ಆಗುತ್ತದೆ.
ಮೂವರು ನಾಯಕಿಯರಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ? ಕೊನೆಗೆ ಯಾರ ಕೈ ಹಿಡಿಯುತ್ತೀರಿ?
ಮೂವರು ಒಳ್ಳೆಯವರೇ. ಮೂವರು ಇಷ್ಟ. ಯಾರ ಕೈ ಹಿಡಿಯುತ್ತೇನೆ ಎಂಬುದು ನೀವು ಸಿನಿಮಾ ನೋಡಬೇಕು. ಮೂರು ಜಡೆಗಳ ನಡುವೆ ನನ್ನ ಪಾಡನ್ನು ನೋಡಿ ಖುಷಿ ಆಗುತ್ತೀರಿ.
ಯಾವ ಹೀರೋ, ನಾಯಕಿ ಜತೆ ನೀವು ‘ತ್ರಿಬಲ್ ರೈಡಿಂಗ್’ ಹೋಗಲು ಇಷ್ಟ?
ಎಲ್ಲರ ಜತೆಗೆ ರೈಡಿಂಗ್ ಹೋಗುದು ನನಗೆ ಇಷ್ಟ. ಆದರೆ, ಅದು ಸೈಕಲ್, ಬೈಕು, ಕಾರಿನಲ್ಲಿ ಅಲ್ಲ. ಬಸ್‌ನಲ್ಲಿ! ಯಾಕೆಂದರೆ ನನಗೆ ಚಿತ್ರರಂಗದಲ್ಲಿ ಇರುವ ಎಲ್ಲರು ಆಪ್ತರೇ. ಎಲ್ಲರನ್ನೂ ರೈಡಿಂಗ್ ಕರೆದುಕೊಂಡು ಹೋಗಬೇಕು ಅಂದರೆ ಅದಕ್ಕೆ ಬಸ್ ಬೇಕು.
ಈ ಚಿತ್ರದ ಕತೆ ಏನು?
ಎಲ್ಲ ಕಲೆಗಳನ್ನು ಕರಗತ ಮಾಡಿಕೊಂಡಿರುವ ಸಕಲಕಲಾವಲ್ಲಭ ಮೂವರು ಹುಡುಗಿಯರ ಪ್ರೀತಿ- ಸ್ನೇಹದಲ್ಲಿ ಸಿಕ್ಕಿಕೊಳ್ಳುವುದು ಮತ್ತು ಅದರಿಂದ ಹೇಗೆæ ಆಚೆ ಬರುತ್ತಾನೆ ಎಂಬುದೇ ಚಿತ್ರಕಥೆ.
ನಿಮ್ಮ ಪಾತ್ರ ಏನು?
ಮೇಲ್ನೋಟಕ್ಕೆ ನಾನು ಡಾಕ್ಟರ್. ಆದರೆ, ಬೇರೆ ಕಲೆಗಳಲ್ಲೂ ಪ್ರವೀಣ. ಮಾರ್ಷಲ್ ಆರ್ಚ್ ಕಲಿಸುತ್ತೇನೆ. ಸಿನಿಮಾ ತರಬೇತಿ ಕೊಡುತ್ತೇನೆ.
Tribble Riding ಒಬ್ರು ಚೆನ್ನಾಗಿ ಕಾಣಬೇಕು ಅಂತ ಇನ್ನೊಬ್ರು ಹೇಳೋದು; 3 ನಟಿಯರ ಜೊತೆ ಗಣಿ!
ಗಣೇಶ್ ನಟನೆಯ ಚಿತ್ರಗಳೆಂದರೆ ದೊಡ್ಡ ತಾರಾಗಣ ಇರುತ್ತದಲ್ಲಾ?
ಆ ಎಲ್ಲ ಕಲಾವಿದರ ಜತೆಗೆ ನನ್ನ ನೋಡಕ್ಕೆ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಹೀಗಾಗಿ ನನ್ನ ಬಹುತೇಕ ಚಿತ್ರಗಳಲ್ಲಿ ರಂಗಾಯಣ ರಘು, ಅಚ್ಯುತ್ ಕುಮಾರ್, ಅನಂತ್‌ನಾಗ್, ಸಾಧು ಕೋಕಿಲಾ ಅವರೆಲ್ಲ ಇರುತ್ತಾರೆ. ಇವರ ಜತೆ ನಟಿಸುವುದಕ್ಕೆ ನನಗೂ ಇಷ್ಟ.
ನಿರ್ದೇಶಕ ಮಹೇಶ್ ಗೌಡ ಹಾಗೂ ನಿಮ್ಮ ನಡುವಿನ ನಂಟು ಹೇಗೆ?
‘ಮುಂಗಾರು ಮಳೆ’ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿ ಮಹೇಶ್ ಗೌಡ ಕೆಲಸ ಮಾಡಿದಾಗಿನಿಂದಲೂ ನನಗೆ ಗೊತ್ತು. ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇರುವ ವ್ಯಕ್ತಿ. ಕತೆ, ಸನ್ನಿವೇಶ, ಮೇಕಿಂಗ್ ಹೀಗೆ ಎಲ್ಲದರಲ್ಲೂ ಕ್ಲ್ಯಾರಿಟಿ ಇದೆ. ಕಂಪ್ಲೀಟ್ ಪ್ಯಾಕೇಜ್ ಇರುವ ಸಿನಿಮಾ ಕೊಡುತ್ತಾರೆಂಬ ನಂಬಿಕೆ ಇತ್ತು. ಅದು ‘ತ್ರಿಬಲ್ ರೈಡಿಂಗ್’ನಲ್ಲಿ ನಿಜವಾಗಿದೆ.
ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ಗೋಲ್ಡನ್ ಸ್ಟಾರ್‌ಗೆ ಪ್ಯಾನ್ ಇಂಡಿಯಾ ಕ್ರೇಜು ಇಲ್ಲವೇ?
ಕಾಲಕಾಲಕ್ಕೆ ಸಿನಿಮಾಗಳು ಪ್ಯಾನ್ ಇಂಡಿಯಾ ಆಗುತ್ತಲೇ ಬಂದಿವೆ. ಕೆಲವನ್ನು ನಾವೇ ಪ್ಯಾನ್ ಇಂಡಿಯಾ ಮಾಡಿದ್ದೇವೆ. ಕೆಲವು ಅವೇ ಪ್ಯಾನ್ ಇಂಡಿಯಾ ಆಗಿವೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಆಗಿದ್ದು ‘ಕಾಂತಾರ ’. ಇದು ಆರ್ಗಾನಿಕ್ ಪ್ಯಾನ್ ಇಂಡಿಯಾ ಸಕ್ಸಸ್ ಸಿನಿಮಾ. ಹಾಗೆ ‘ಮುಂಗಾರು ಮಳೆ’ ಕೂಡ ದೊಡ್ಡ ಮಟ್ಟದಲ್ಲಿ ಗೆದ್ದಿತ್ತು. ಆಗ ಪ್ಯಾನ್ ಇಂಡಿಯಾ ಎನ್ನುವ ಹೆಸರಿನ ಬ್ರಾಂಡ್ ಮಾರುಕಟ್ಟೆಯಲ್ಲಿ ಚಲಾವಣೆಗೆ ಬಂದಿರಲಿಲ್ಲ. ನಾವು ಸಿನಿಮಾ ಮಾಡುತ್ತಾ ಹೋಗಬೇಕು. ಅದು ಪ್ಯಾನ್ ಇಂಡಿಯಾ ಆಗೋದು ಪ್ರೇಕ್ಷಕರಿಗೆ ಬಿಡಬೇಕು.
ಬಿಡುವಿಲ್ಲದೆ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದೀರಲ್ಲ?
ನಾನು ಚಿತ್ರರಂಗಕ್ಕೆ ಬಂದು ಎರಡು ದಶಕ ಆಯಿತು. ಅಂದರೆ ಎರಡು ಹೆಜ್ಜೆ ಇಟ್ಟಿರುವೆ. ಕತೆಗಾರನ ಕತೆಯಲ್ಲಿ ನಾನು ಜೀವಿಸುವ ತನಕ, ನಿರ್ದೇಶಕನ ಕಲ್ಪನೆಯಲ್ಲಿ ನಾನು ಪಾತ್ರವಾಗುವ ತನಕ, ಪ್ರೇಕ್ಷಕನಿಗೆ ನಾನು ಮನರಂಜನೆ ಕೊಡುವ ಶಕ್ತಿ ಇರುವ ತನಕ ನಟಿಸುತ್ತಲೇ ಇರಬೇಕು. ನನಗೆ ಕತೆ ಬರೆಯುವುದು ತುಂಬಾ ಇಷ್ಟ. ನನ್ನ ಕೆರಿಯರ್‌ನಲ್ಲಿ ನಾಲ್ಕೈದು ಸಿನಿಮಾಗಳನ್ನಾದರೂ ನಿರ್ದೇಶಿಸಬೇಕು. ನನ್ನ ನಾನು ಹಿಂತಿರುಗಿ ನೋಡಿಕೊಂಡಾಗ ನನ್ನ ವೃತ್ತಿ ಪಯಣದ ತುಂಬಾ ಪಾತ್ರಗಳೇ ಇರಬೇಕು.